Sunday, October 28, 2012

ಲಿಂಗದೇವರು ಹಳೆಮನೆ ಅವರ ನಾಟಕ ಗಡಿಯಂಕ ಕುಡಿಮುದ್ದ


ಮೈಸೂರಿನ ರಂಗಾಯಣದ ನಿರ್ದೇಶಕರಾಗಿದ್ದ ಲಿಂಗದೇವರು ಹಳೆಮನೆ ಭಾಷಾ ಶಾಸ್ತ್ರಜ್ಞ ಮತ್ತುಬರಹಗಾರರು. ವಿಮರ್ಶಕ, ಸಂಶೋಧಕ, ನಾಟಕಕಾರರಾಗಿದ್ದ ಲಿಂಗದೇವರು ಹಳೇಮನೆ ಅವರು  ಕೇಂದ್ರೀಯ ಭಾಷಾ ಸಂಸ್ಥಾನದಲ್ಲಿ ಮೂರು ದಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ವಚನ ಸಾಹಿತ್ಯದ ವಿಭಿನ್ನ ದೃಷ್ಟಿಕೋನ, ಕನ್ನಡ ನಾಟಕಗಳಲ್ಲಿ ಭಾಷೆ, ಭಾರತದಲ್ಲಿ ಸ್ತ್ರೀ ಸಾಕ್ಷರತೆ, ಉದ್ಯಮವಾಗಿ ರಂಗಭೂಮಿ ಇಂತಹ ವಿಚಾರಗಳಲ್ಲಿ ಅವರು ಪ್ರಬಂಧಗಳನ್ನು ಮಂಡಿಸಿದ್ದಾರೆ. ನಾಟಕಕಾರರಾಗಿ ಹಳೆಮನೆಯವರು ಹೊರತಂದಿರುವ ಹಲವು ರಂಗಕೃತಿಗಳು ಕನ್ನಡ ರಂಗಭೂಮಿಯ ಆಸ್ತಿಯಾಗಿವೆ. ಹೈದರ್, ಚಿಕ್ಕದೇವ ಭೂಪ, ಧರ್ಮಪುರಿ ದೇವದಾಸ, ಬಿರುದಂತೆಂಬರ ಗಂಡ ಇವು ಹಳೆಮನೆಯವರ ಪ್ರಮುಖ ಕೃತಿಗಳು. ಬ್ರೆಕ್ಟ್‌ನ ಹಲವಾರು ನಾಟಕಗಳನ್ನು ಹಳೆಮನೆ ಕನ್ನಡಕ್ಕೆ ತಂದುಕೊಟ್ಟಿದ್ದಾರೆ. ಆಳವಾದ ಅಧ್ಯಯನದಿಂದ ಲಿಂಗದೇವರು ಹಳೆಮನೆ ರಂಗಭೂಮಿ ಜನತೆಯ ನೋವು ನಲಿವುಗಳಿಗೆ ಸ್ಪಂದಿಸುವ ವೇದಿಕೆಯಾಗಬೇಕು ಮತ್ತು ಜಾತ್ಯಾತೀತ ಮೌಲ್ಯಗಳು ಬಹು ಸಂಸ್ಕೃತಿ ದೇಶವಾದ ಭಾರತದ ಮುಖ್ಯವಾದ ಸಂಗತಿಗಳಾಗಬೇಕು ಎಂದು ನಂಬಿದ್ದವರು. 

ಗಡಿಯಂಕ ಕುಡಿಮುದ್ದ
ತನ್ನ ರಾಜ್ಯವನ್ನು ವಿಸ್ತಾರಗೊಳಿಸುತ್ತಿದ್ದ ಚಾಳುಕ್ಯರ ರಾಜ ಮಂಗಳೇಶನಿಗೆ ತನ್ನ ಅಣ್ಣನ ಮಗ ಇಮ್ಮಡಿ ಪುಲಿಕೇಶಿಯನ್ನು ಬಿಟ್ಟು ತನ್ನ ಮಗ ಆದಿತ್ಯನನ್ನು ಚಕ್ರಾಧಿಪತ್ಯದ ಪಟ್ಟವೇರಿಸುವ ಆಲೋಚನೆ ಬರುತ್ತದೆ. ಅದಕ್ಕನುಗುಣವಾಗಿ ಮಂತ್ರಿ ಅನಿವಾರಿತನು ಯುವರಾಜ ಇಮ್ಮಡಿ ಪುಲಿಕೇಶಿಯನ್ನು ಹತ್ಯೆಗೈಯಲು ಕೇತಮಲ್ಲ ಎಂಬ ಬಂಟನನ್ನು ನೇಮಿಸುತ್ತಾನೆ.
ಇತ್ತ ರಾಜಮಾತೆ ದುರ್ಲಭಾ ದೇವಿಯವರಿಗೆ ಯುವರಾಜ ಇಮ್ಮಡಿ ಪುಲಿಕೇಶಿಯ ಯೋಗಕ್ಷೇಮವು ಮುಖ್ಯ. ಅವರು ಯುವರಾಜನ ಬೆಂಗಾವಲಿಗೆ ಗಡಿಯಂಕನಾದ ಕುಡಿಮುದ್ದನನ್ನು ನೇಮಿಸುತ್ತಾರೆ. ಕುಡಿಮುದ್ದನು ರಾಜಮಾತೆಯ ಗೂಢಾಚಾರಿಣಿ ದೇವದಾಸಿ ಕೆಂಚಬ್ಬೆಯ ಮನೆಯಲ್ಲಿದ್ದು ತನ್ನ ಪ್ರಾಣ ಕೊಟ್ಟಾದರು ಯುವರಾಜನನ್ನು ಕಾಪಾಡುವ ಪಣವನ್ನು ತೊಡುತ್ತಾನೆ. ಅಲ್ಲಿ ಕುಡಿಮುದ್ದನಿಗೆ ಕೆಂಚಬ್ಬೆಯ ಮಗಳಾದ ಜಕ್ಕಬ್ಬೆಯ ಮೇಲೆ ಪ್ರೇಮಾಂಕುರವಾಗುತ್ತದೆ.

ಕುಡಿಮುದ್ದನು ಪುಲಿಕೇಶಿಯನ್ನು ಕೇತಮಲ್ಲನಿಂದ ರಕ್ಷಿಸುವ ಸಂದರ್ಭದಲ್ಲಿ ಮಂಗಳೇಶನ ಮಗ ಆದಿತ್ಯನು ಕುಡಿಮುದ್ದನ ಪ್ರೇಯಸಿ ಜಕ್ಕಬ್ಬೆಯ ಬಲಾತ್ಕಾರಕ್ಕೆ ಪ್ರಯತ್ನಿಸುವನು. ದೇವದಾಸಿ ಜಕ್ಕಬ್ಬೆ ಆದಿತ್ಯನಿಗೆ ಮೈ ಒಪ್ಪಿಸುವಳೇ? ಪುಲಿಕೇಶಿಯನ್ನು ಹತ್ಯೆಗೈಯಲು ಹೊರಟ ಕೇತಮಲ್ಲನಿಗೇನಾಯಿತು? ಚಕ್ರಾಧಿಪತ್ಯಕ್ಕಾಗಿ ನಡೆದ ಚಾಳುಕ್ಯ ಕುಟುಂಬಗಳ ಘರ್ಷಣೆಯಲ್ಲಿ ಅಮಾಯಕರಾದ ಗಡಿಯಂಕ, ದೇವದಾಸಿಯರ ನೋವು ದುರಂತಗಳಲ್ಲಿ ಅರಳಿದ ಲವಲವಿಕೆಯ ಪ್ರೇಮಚರಿತೆ ಮತ್ತು ಸಾಹಸಗಾಥೆಯನ್ನು ನಿರ್ಲಕ್ಷಿತ ಸಮುದಾಯದ ಜೋಗತಿಯರ ಮೂಲಕ ಪ್ರಸ್ತುತಪಡಿಸಲಾಗಿದೆ.
ರಂಗಭೂಮಿ, ಮಾಧ್ಯಮ ಮತ್ತು ಸಾಹಿತ್ಯಗಳಲ್ಲಿ ಆಸಕ್ತರಾಗಿರುವ ಬಾಲಕೃಷ್ಣ ನಾಯ್ಕ್ ಡಿ ಅವರು ಅಂತರ್ಜಾಲದಲ್ಲಿ ಕೆಂಪುಕೋಟೆ ಎಂಬ ಬ್ಲಾಗ್ ಮತ್ತು ನಾವು ದೆಹಲಿ ಕನ್ನಡಿಗರು ಎಂಬ ಯಾಹೂ ಗ್ರೂಪ್‌ಗಳ ಮೂಲಕ ದಹಲಿಯಲ್ಲಿ ಕನ್ನಡ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಹೆಜ್ಜೆಗೊಂದು ಬಲಿ ಮತ್ತು ಮೆಸೇಜ್ ಬಂತು ಅವರು ಬರೆದು ಪ್ರದರ್ಶಿಸಿ ಬಹುಮಾನ ಗಳಿಸಿದ ಏಕಾಂಕ ನಾಟಕಗಳು. ಅವರು ಲಿಂಗದೇವರು ಹಳೆಮನೆ ಅವರ ಗಡಿಯಂಕ ಕುಡಿಮುದ್ದ ನಾಟಕವನ್ನು ನಿರ್ದೇಶಿಸುತ್ತಿದ್ದಾರೆ. 
ಕೆಂಪುಕೋಟೆ ತಂಡ ದೆಹಲಿ ಮತ್ತು ಸುತ್ತುಮುತ್ತಲಿನ ಕನ್ನಡಿಗರಲ್ಲಿ ಅಂತರ್ಜಾಲ, ರಂಗಭೂಮಿ ಮುಂತಾದ ಮಾಧ್ಯಮಗಳ ಮೂಲಕ ಹೊಸತೊಂದು ಬೆಳಕನ್ನು ಕಾಣುವ ಪ್ರಯತ್ನ ಮಾಡುತ್ತಿದೆ.

ನಾಟಕದಲ್ಲಿ ಭಾಗವಹಿಸುವವರು:
ಅಶೋಕ, ಅನಿತಾ, ಅವನೀಂದ್ರ, ಭರತ್, ದಿವಿಜೇಶ್, ಗುರುರಾಜ್, ಲಿವ್ಯಾ, ಮನೀಷ್, ಮಾಣಿಕ್ಯ, ಮೇಘನಾ,  ಪವಿತ್ರಾ, ಪ್ರದೀಪ್, ಪ್ರಕಾಶ್, ರಾಕೇಶ್, ರಕ್ಷಾ, ಸೌಜನ್ಯ, ಸುಖೇಶ್, ವಂದನಾ, ವಿನಯ್ ...
ಬೆಳಕು:  ಶಿವಾನಂದ್, ರಂಗ ಸಜ್ಜಿಕೆ: ಮಹೇಶ್, ವೇಷಭೂಷಣ: ನಮಿತಾ
ಸಂಗೀತ: ರಕ್ಷಾ, ಚಿದಂಬರ, ರಮೇಶ್, ಸುಧೀರ್

No comments:

Post a Comment