Wednesday, January 19, 2011

ಎಲ್ಲ ಭಾಷೆಗಳಲ್ಲೂ ಉತ್ತಮ ಸಾಹಿತ್ಯ ಸೃಷ್ಠಿಯಾಗುತ್ತಿದೆ

ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರನ್ನು ಯುವ ಪತ್ರಕರ್ತ ರಾಕೇಶ್ ಎನ್.ಎಸ್. ಅವರು ಇತ್ತೀಚೆಗೆ ತಮ್ಮ ಪತ್ರಿಕೆ ದ ಸಂಡೇ ಇಂಡಿಯನ್‍  ಗೆ ಸಂದರ್ಶಿಸಿದರು. ರಾಕೇಶ್ ಅವರ ಪ್ರಶ್ನೆಗಳು ಈ  ಸಂದರ್ಶನವು ಭಾಷೆಯ ಕುರಿತು ಗಂಭೀರ ಚಿಂತನೆಯನ್ನು ಹೊರತರುವಲ್ಲಿ ಪರಿಣಾಮಕಾರಿಯಾಗಿವೆ. ಕೆಂಪುಕೋಟೆ ಓದುಗರಿಗಾಗಿ ಭಾಷೆ, ಸಾಹಿತ್ಯದ ಕುರಿತು ಈ ಸಂದರ್ಶನ.

ಇಂದು ಎಲ್ಲ ಭಾರತೀಯ ಭಾಷೆಗಳಲ್ಲೂ ಒಳ್ಳೆಯ ಬೆಳವಣಿಗೆ ಆಗುತ್ತಿದೆ
ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿ ತಾವು ಇಡೀ ದೇಶದ ಎಲ್ಲಾ ಭಾಷೆಗಳ ಸಾಹಿತ್ಯವನ್ನು ಹತ್ತಿರದಿಂದ ಗಮನಿಸುತ್ತಿದ್ದೀರಿ. ಒಟ್ಟಾರೆ ದೇಶದಲ್ಲಿನ ಸಾಹಿತ್ಯ ಸೃಷ್ಟಿ ಹೇಗಿದೆ?
ಅಗ್ರಹಾರ ಕೃಷ್ಣಮೂರ್ತಿ
ನಿಮಗೆ ಗೊತ್ತಿರುವಂತೆ ಭಾರತದಲ್ಲಿ ಬಹಳಷ್ಟು ಭಾಷೆಗಳಿವೆ. ಇವುಗಳಲ್ಲಿ ಅನೇಕ ಭಾಷೆಗಳು ಶ್ರಿಮಂತವಾಗಿ ಬೆಳೆದಿದ್ದು ಅದಕ್ಕೆ ದೀರ್ಘ ಸಾಹಿತ್ಯಿಕ ಪರಂಪರೆಯಿದೆ. ಉದಾಹರಣೆಗೆ ತಮಿಳು, ಕನ್ನಡ, ಬಂಗಾಳಿ ಹೀಗೆ. ಸ್ವಾತಂತ್ರ್ಯ ನಂತರದಲ್ಲಿ ಹೊಸ ಜಾಗ್ರತಿ ಮೂಡಿದ ಮೇಲೆ ಅನೇಕರು ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಕೂಡ ಅನೇಕ ಸಾಹಿತ್ಯ ಹೋರಾಟಗಳು ನಡೆದಿವೆ. ಇದಕ್ಕೆ ಭಕ್ತಿ ಚಳವಳಿ ಒಳ್ಳೆಯ ಉದಾಹರಣೆ. ಪರಂಪರೆ ಭಕ್ತಿಯ ಹಿನ್ನೆಲೆ ಹೊಂದಿದ್ದರೂ ಕೂಡ ಅದಕ್ಕೆ ಸಾಹಿತ್ಯಿಕ ಒಳ ಹರಿವು ಮತ್ತು ತಾತ್ವಿಕ ಹಿನ್ನೆಲೆ ಇದೆ.
ಕರ್ನಾಟಕದೊಳಗೆ ವಚನ ಪರಂಪರೆ, ತಮಿಳುನಾಡಿನ ಆಳ್ವರ್ ಪರಂಪರೆ, ಆಗ್ನೇಯ ಭಾರತದಲ್ಲಿ ಚೈತನ್ಯರ ಪರಂಪರೆ, ಉತ್ತರ ಭಾರತದಲ್ಲಿ ಕಬೀರ್ ಮುಂತಾದವರ ಪರಂಪರೆ ಹೀಗೆ ಸ್ವಾತಂತ್ರ್ಯ ಪೂರ್ವದಲ್ಲೂ ಕೂಡ ಒಟ್ಟಾರೆ ಸಾಹಿತ್ಯಿಕ ಹರಿವಿತ್ತು. ಸ್ವಾತಂತ್ರ್ಯ ನಂತರ ಇದಕ್ಕೊಂದು ಸಾಂಸ್ಥಿಕ ರೂಪ ಕೊಡಬೇಕು ಎಂದು ಅಕಾಡೆಮಿ ಸ್ಥಾಪನೆ ಆಯಿತು. ಆದರೆ ಈ ಸಂಘಟನೆಯಿಂದಲೇ ಸಾಹಿತ್ಯ ಸೃಷ್ಠಿಯಾಗುತ್ತಿದೆ ಎಂದು ಯಾರು ಭಾವಿಸಬಾರದು. ಇದೊಂದು ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡುತ್ತಿದೆ ಅಷ್ಟೆ. ಇಂದು ಎಲ್ಲ ಭಾರತೀಯ ಭಾಷೆಗಳಲ್ಲೂ ಒಳ್ಳೆಯ ಬೆಳವಣಿಗೆ ಆಗುತ್ತಿದೆ. ಅಂತಹದ್ದರಲ್ಲಿ ಇಲ್ಲಿ ಕಡಿಮೆ ಬೆಳವಣಿಗೆ ಆಗುತ್ತಿದೆ ಅಲ್ಲಿ ಜಾಸ್ತಿ ಬೆಳವಣಿಗೆ ಆಗುತ್ತಿದೆ ಎಂದು ಹೇಳುವುದು ಈ ಕಾಲಕ್ಕೆ ತಕ್ಕ ಮಾತಲ್ಲ. ಇವತ್ತು ಮಾಹಿತಿ ಕ್ರಾಂತಿ, ಅನುವಾದ ಬಹಳ ಅದ್ಭುತವಾಗಿ ನಡೆಯುತ್ತಿದೆ. ಅದ್ದರಿಂದ ಇಂದು ಸಾಹಿತ್ಯ ಒಂದು ಭಾಷೆಗೆ ಸೀಮಿತವಾಗಿಲ್ಲದೆ ಅದು ಇತರ ಭಾಷೆಗೂ ಬಹುಬೇಗ ಹಬ್ಬುತ್ತಿದೆ. ಅದ್ದರಿಂದ ಇಡೀ ದೇಶದಲ್ಲಿ ಬಹುದೊಡ್ಡ ಸಾಹಿತ್ಯ ಜಾಗೃತಿ ಆಗುತ್ತಿದೆ. ಒಬ್ಬ ಬರಹಗಾರ ಬರೆಯುತ್ತಾನೆ ಮತ್ತು ಅದು ಅನುವಾದ ವಾಗುತ್ತಿದೆ. ಈ ದೃಷ್ಟಿಯಿಂಲೇ ನಾವು ಇಂದಿನ ಸಾಹಿತ್ಯವನ್ನು ನೋಡಬೇಕು. ಭಾರತೀಯ ಸಾಹಿತ್ಯದಲ್ಲಿ ದೇಶದ ಹೊರಗಡೆ ಇಂಗ್ಲೀಷ್‌ನಲ್ಲಿ ಬರೆಯುವವರು ಬಹಳ ಪ್ರಖ್ಯಾತರಾಗಿದ್ದರೆ. ಅದರ ಬಗ್ಗೆ ಯಾವುದೇ ತಕರಾರಿಲ್ಲ. ಆದರೆ ಅವರಿಗೆ ಸಮನಾಗಿ ಭಾರತೀಯ ಭಾಷೆಗಳಲ್ಲೂ ಸಾಹಿತ್ಯ ಸೃಷ್ಠಿಯಾಗುತ್ತಿದೆ. ಪ್ರತಿ ಭಾಷೆಯಲ್ಲೂ ಸಾವಿರಾರು ಪುಸ್ತಕಗಳು ಪ್ರಕಟವಾಗುತ್ತಿದೆ. ಮಲಯಾಳಂನಲ್ಲಿ ೪ - ೫ ಸಾವಿರ, ಕನ್ನಡದಲ್ಲಿ ೩ ಸಾವಿರ ಮತ್ತು ಹಿಂದಿಯಲ್ಲಿ ಸುಮಾರು ೫- ೧೦ ಸಾವಿರದಷ್ಟು ಪುಸ್ತಕಗಳು ಪ್ರತಿವರ್ಷ ಪ್ರಕಟವಾಗುತ್ತಿವೆ.
ಓದುವಿಕೆ ಪ್ರಮಾಣ ಹೇಗಿದೆ?
ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಇದನ್ನು ತಿಳಿಯಲು ಯಾವುದಾದರೂ ಸಮೀಕ್ಷೆ ಮಾಡಬೇಕಷ್ಟೆ. ಅಥವಾ ಅಚ್ಚಾದ ಪುಸ್ತಕಗಳು ಖರ್ಚು ಆಗುತ್ತಿವೆಯಾ ಎಂದು ನೋಡಿದರೆ ಗೊತ್ತಾಗುತ್ತದೆ. ಕಳೆದ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿ ಸುಮಾರು ೮ - ೧೦ ಕೋಟಿ ರೂ ವಹಿವಾಟು ನಡೆಸಿದೆ. ನಾಲ್ಕು ವರ್ಷಗಳ ಹಿಂದೆ ೪ ಕೋಟಿ ರೂಗಳ ವಹಿವಾಟು ನಡೆಸುತ್ತಿತ್ತು. ಕೆಲವರು ಈ ಪುಸ್ತಕಗಳು ಗ್ರಂಥಾಲಯಕ್ಕೆ ಹೋಗುತ್ತಿದೆ ಎನ್ನಬಹುದು. ಇರಬಹುದು, ಇಲ್ಲಿ ಪುಸ್ತಕ ಒಬ್ಬ ಓದುಗನ ಕೈಗೆ ಸಿಗುವಾಗ ಒಂದು ದಿನ ತಡವಾಗಬಹುದು. ಆದರೆ  ಓದುಗನ ಕೈಗೆ ಸಿಕ್ಕೆ ಸಿಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಇಂದು ವಿಶ್ವದಲ್ಲಿ ಪುಸ್ತಕಗಳ ಉತ್ಪಾದನೆಯಲ್ಲಿ ಭಾರತ ಹಿಂದುಳಿದಿಲ್ಲ.
ಅಂದರೆ ಪುಸ್ತಕ ಉದ್ಯಮ ಕೂಡ ಲಾಭದಲ್ಲಿದೆ ಅಲ್ಲವೇ?
ಪುಸ್ತಕೋದ್ಯಮ ಅತ್ಯಂತ ಶ್ರೇಷ್ಠ ಉದ್ಯಮ. ಪುಸ್ತಕದ ಅಂಗಡಿ ಇಟ್ಟುಕೊಳ್ಳುವುದು ಗೌರವಯುತ ಕೆಲಸ. ಈಗ ಭಾರತದಲ್ಲಿ ವಿದೇಶಿ ಪ್ರಕಟಣ ಸಂಸ್ಥೆಗಳು ಕೂಡ ತಮ್ಮ ಚಟುವಟಿಕೆ ಮಾಡುತ್ತಿವೆ.
ಬೇರೆ ಭಾಷೆಗಳ ಸಾಹಿತ್ಯ ಕೃಷಿಯೊಂದಿಗೆ ತುಲನೆ ಮಾಡಿ ನೋಡಿದಾಗ ಪ್ರಸಕ್ತ ಕನ್ನಡ ಸಾಹಿತ್ಯ ಚಟುವಟಿಕೆಗಳು ಹೇಗಿವೆ?
ಕನ್ನಡದಲ್ಲಿ ತುಂಬ ಉತ್ತಮ ಸಾಹಿತ್ಯ ಕೃಷಿ ನಡೆಯುತ್ತಿದೆ. ಹೊಸ ತಲೆಮಾರಿನವರು ತುಂಬ ಪ್ರತಿಭಾವಂತರಿದ್ದಾರೆ. ಹಳೆ ತಲೆಮಾರಿನವರು ಕೂಡ ಬರೆಯದೇ ಕುಳಿತಿಲ್ಲ. ಚಂದ್ರಶೇಖರ ಕಂಬಾರ, ಅನಂತಮೂರ್ತಿ ಈಗಲೂ ಬರೆಯುತ್ತಿದ್ದಾರೆ. ಹೀಗೆ ಅನೇಕ ಮಂದಿ ಹಿರಿಯ ಲೇಖಕರು ಬರೆಯುತ್ತಿದ್ದಾರೆ. ಹೊಸ ತಲೆಮಾರಿನ ಆರೀಫ್, ಅಂಕುರ್ ಬೆಟಗೇರಿ, ವಿಮರ್ಶಕರಾದ ಎಮ್ ಎಸ್ ಅಶಾದೇವಿ, ಕಥೆಗಾರರಾದ ವಿವೇಕ ಶಾನ್‌ಭಾಗ್, ಸತ್ಯನಾರಾಯಣ ಮುಂತಾದವರು ಬಹಳ ಚೆನ್ನಾಗಿ ಬರೆಯುತ್ತಿದ್ದಾರೆ. ಅದ್ದರಿಂದ ಹೆದರುವ ಅಗತ್ಯವಿಲ್ಲ.
ಪ್ರಸ್ತುತವಾಗಿ ಯಾವ ಭಾರತೀಯ ಭಾಷೆಯಲ್ಲಿ ಉತ್ತಮ ಸಾಹಿತ್ಯ ಸೃಷ್ಟಿಯಾಗುತ್ತಿದೆ? 
ರಾಕೇಶ್ ಎನ್.ಎಸ್.
ದೇಶದ ಎಲ್ಲ ಭಾಷೆಗಳಲ್ಲೂ ಉತ್ತಮ ಸಾಹಿತ್ಯ ಸೃಷ್ಠಿಯಾಗುತ್ತಿದೆ.
ಒಟ್ಟಾರೆ ಎಲ್ಲಾ ಭಾಷೆಗಳ ಸಾಹಿತ್ಯ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಉತ್ತೇಜನ ನಿಮಗೆ ತೃಪ್ತಿ ತಂದಿದೆಯೆ?
ಕೇಂದ್ರ ಸರ್ಕಾರ ಎಲ್ಲಾ ಭಾಷೆಗಳ ಸಾಹಿತ್ಯ ಚಟುವಟಿಕೆಗಳಿಗೆ ಯಾವುದೇ ರೀತಿಯ ಕೊರತೆ ಉಂಟು ಮಾಡಿಲ್ಲ. ಆ ಪ್ರೋತ್ಸಾಹ ಕೂಡ ಒಳ್ಳೆಯ ರೀತಿಯಲ್ಲಿ ಬಳಕೆಯಾಗುತ್ತಿದೆ. ಆದರೆ ನಮ್ಮದು ಬಹುದೊಡ್ಡ ದೇಶ. ಇಲ್ಲಿ ಅನೇಕ ಭಾಷೆಗಳಿವೆ. ಇಲ್ಲಿ ಒಂದು ಅಕಾಡೆಮಿಯಿಂದ ನಡೆಯುವ ಕಾರ್ಯಕ್ರಮ ಎಲ್ಲೆಲ್ಲೂ ಸಾಕಾಗುವುದಿಲ್ಲ. ಇದು ೫ ರಿಂದ ೧೦ ಪಟ್ಟು ಹೆಚ್ಚಾಗಬೇಕು. ಆದರೆ ಹೆಚ್ಚು ಮಾಡುವ ಪ್ರಮಾಣ ಯೋಜಿತ ರೀತಿಯಲ್ಲಿ ಆಗಬೇಕು. ಇಲ್ಲವೆಂದಾದರೆ ಎಲ್ಲವೂ ಕೈ ತಪ್ಪುವ ಸಾಧ್ಯತೆ ಇದೆ. ಭಾರತದಲ್ಲಿ ಸಾಹಿತ್ಯ ಅಕಾಡೆಮಿ ಅಂಗೀಕಾರ ಗೊಳಿಸಿದ ೨೪ ಭಾಷೆಗಳಲ್ಲದೆ ಇನ್ನೂ ಅನೇಕ ಭಾಷೆಗಳಿವೆ. ಅದರ ಸಾಹಿತ್ಯಕ್ಕಾಗಿ ‘ಭಾಷಾ ಸಮ್ಮಾನ್’ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಮಕ್ಕಳ ಸಾಹಿತ್ಯ ರಚನೆಗಾಗಿ ೨೪ ಭಾಷೆಗಳಲ್ಲಿ ‘ಬಾಲ ಸಾಹಿತ್ಯ ಪುರಸ್ಕಾರ’ವನ್ನು ಈ ವರ್ಷ ಪ್ರಾರಂಭಿಸಲಾಗಿದೆ. ಇನ್ನೂ ಕೆಲವೇ ತಿಂಗಳಲ್ಲಿ ಹೊಸದಾಗಿ ಯುವ ಲೇಖಕರಿಗೆ ಅಂದರೆ ೩೦ ವರ್ಷದೊಳಗಿನವರ ಪ್ರಥಮ ಕೃತಿಗೆ ರೂ. ೫೦,೦೦೦ ಬಹುಮಾನ ನೀಡಲಾಗುವುದು. ಇತರ ಚಟುವಟಿಕೆಗಳಾದ ವಿಚಾರ ಸಂಕಿರಣಗಳನ್ನು ಹೆಚ್ಚಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ಯುವ ಸಾಹಿತಿಗಳಿಗೆ ನೀಡುವ ಪ್ರಶಸ್ತಿ ಯಾವ ಪ್ರಕಾರದ ಸಾಹಿತ್ಯಕ್ಕೆ ಸಲ್ಲಲಿದೆ?
ಈ ೨೪ ಭಾಷೆಗಳಲ್ಲಿ ಬರುವ ಯಾವುದೇ ಪ್ರಕಾರದ ಅತ್ಯುತ್ತಮ ಸಾಹಿತ್ಯಕ್ಕೆ ಪ್ರಶಸ್ತಿ ನೀಡಲಾಗುವುದು. ಆದರೆ ಇದು ಆತನ ಪ್ರಥಮ ಕೃತಿಯಾಗಿರಬೇಕು ಅಷ್ಟೆ.
ಇತ್ತೀಚಿನ ದಿನಗಳಲ್ಲಿ ಇಂಟರ್‌ನೆಟ್‌ನಲ್ಲಿ ಬ್ಲಾಗ್ ಸಾಹಿತ್ಯ ಹೆಚ್ಚಿನ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದೆ. ಈ ಬೆಳವಣಿಗೆಯನ್ನು ನೀವು ಹೇಗೆ ನೋಡುತ್ತೀರಿ?
ನಾನು ಇದನ್ನು ಒಳ್ಳೆಯದು ಮತ್ತು ಕೆಟ್ಟದು ಎಂಬ ಎರಡು ದೃಷ್ಟಿಯಿಂದ ನೋಡುತ್ತೇನೆ. ಒಳ್ಳೆಯದು ಹೇಗೆಂದರೆ ಒಳ್ಳೆಯ ಲೇಖಕರು ಕೂಡ ಬರೆಯುತ್ತಿದ್ದಾರೆ. ಆಸಕ್ತರು ಅದನ್ನು ಓದಬಹುದು. ಆದರೆ ಸಮಸ್ಯೆ ಏನೆಂದರೆ ಇಲ್ಲಿ ಮುಖರಹಿತ ಬರವಣಿಗೆಯಿದೆ. ಅದ್ದರಿಂದ ನೀವು ಏನು ಬೇಕಾದರೂ ಬರೆಯಬಹುದು, ಹೀನಾಮಾನವಾಗಿ ನಿಂದಿಸಬಹುದು, ಇದು ಒಬ್ಬ ಲೇಖಕನಿಗೆ ತಕ್ಕುದಲ್ಲ. ಲೇಖಕನಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನವಿದೆ. ಈ ಮುಖರಹಿತತೆ ಒಂದು ರಾಕ್ಷಸಿ ಗುಣ.ಆದರೆ ಇದರಿಂದ ಅಪಾಯವಿಲ್ಲ. ಅದೇನೇ ಇದ್ದರೂ ಇದು ಹೊಸ ತಂತ್ರದ ಜೊತೆ ಆಟ. ಹೊಸದೊಂದು ಬಂದಾಗ ಮನುಷ್ಯ ಅದರ ಜೊತೆ ಸ್ವಲ್ಪ ಸಮಯ ಆಡುವುದು ಸಾಮಾನ್ಯ.
ಸಾಹಿತ್ಯ ಆಕಾಡೆಮಿಯು ಭಾರತದ ೨೪ ಭಾಷೆಗಳನ್ನು ಮಾತ್ರ ಅಧಿಕೃತವಾಗಿ ಬೆಂಬಲಿಸುತ್ತದೆ. ಆದರೆ ತುಳು ಮತ್ತು ಗೊಂಡಿಗಳಂತಹ ಅನೇಕ ಭಾಷೆಗಳನ್ನು ಜನ ದೊಡ್ಡ ಪ್ರಮಾಣದಲ್ಲಿ ಆಡುತ್ತಿದ್ದಾರೆ ಹಾಗೂ ಆ ಭಾಷೆಯಲ್ಲಿ ಉತ್ತಮ ಸಾಹಿತ್ಯ ಸೃಷ್ಟಿಯೂ ಆಗುತ್ತಿದೆ. ಆದರೂ ಅವುಗಳನ್ನು ಅಕಾಡೆಮಿಯು ಹೊರಗಿಟ್ಟಿರುವುದು ಅನ್ಯಾಯವಲ್ಲವೆ? 
ಇಲ್ಲ, ಆ ಭಾಷೆಗಳಲ್ಲಿನ ಸಾಹಿತ್ಯಕ್ಕೆ ನಾವು ’ಭಾಷಾ ಸಮ್ಮಾನ್’ ಪ್ರಶಸ್ತಿ ನೀಡುತ್ತಿದ್ದೇವೆ. ಆ ಭಾಷೆಗಳಲ್ಲಿನ ಪರಿಣತರು ಕೃತಿಗಳ ಮೌಲ್ಯ ಮಾಪನ ಮಾಡಿ ಪ್ರಶಸ್ತಿಗೆ ಆರ್ಹವಾದ ಕೃತಿಯನ್ನು ಆಯ್ಕೆಮಾಡುತ್ತಾರೆ. ಈ ಹಿಂದೆ ಪ್ರತಿ ವರ್ಷ ೨ ’ಭಾಷಾ  ಸಮ್ಮಾನ್’ ಪ್ರಶಸ್ತಿ ನೀಡಲಾಗುತ್ತಿತ್ತು, ಈಗ ೬ ಭಾಷೆಗಳಿಗೆ ನೀಡುತ್ತಿದ್ದೇವೆ. ಮುಂದೆ ಇದು ಜಾಸ್ತಿಯಾಗಬಹುದು.
ಭವಿಷ್ಯದಲ್ಲಿ ಉಳಿದ ಭಾಷೆಗಳನ್ನು ಸೇರಿಸುವ ನಿರ್ದಿಷ್ಟ ಯೋಚನೆ ಮತ್ತು ಯೋಜನೆಗಳೇನಾದರೂ ಇವೆಯೆ?
ಸದ್ಯಕ್ಕೆ ಇಲ್ಲ. ಆದರೆ ಭಾಷೆಗಳ ವಿಷಯದಲ್ಲಿ ಅಕಾಡೆಮಿ ತುಂಬಾ ಉದಾರವಿದೆ.
ಸಾಹಿತ್ಯ ಅಕಾಡೆಮಿಯ ದ್ವಿಮಾಸಿಕ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಬರುತ್ತಿದೆ. ಇದೂ ಒಂದು ರೀತಿಯಲ್ಲಿ ಇತರ ಭಾಷೆಗಳ ಮೇಲೆ ಹಿಂದಿ-ಇಂಗ್ಲಿಷ್‌ನ ಆಧಿಪತ್ಯ ಅಲ್ಲವೆ? 
ನಮಗೆ ಇತರ ಭಾಷೆಗಳಲ್ಲಿ ಮಾಡಬಹುದು. ಆದರೆ ಅದನ್ನು ೨೪ ಭಾಷೆಗಳಲ್ಲಿ ಮಾಡಬೇಕಾಗುತ್ತದೆ. ಇಂಗ್ಲಿಷ್ ಮತ್ತು ಹಿಂದಿಗೆ ಭಾಷೆಗೆ ಸಮರ್ಥ ಸಂಪಾದಕರನ್ನು ಹುಡುಕುವುದೇ ನಮಗೆ ಕಷ್ಟವಾಗಿದೆ. ಈಗ ಇಂಗ್ಲೀಷ್ ಸಂಪರ್ಕ ಭಾಷೆಯಾಗುತ್ತಿದ್ದು ಹಿಂದಿ ಕೂಡ ತನ್ನ ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅದ್ದರಿಂದ ನಾವು ಈ ಎರಡು ಭಾಷೆಗಳಲ್ಲಿ ನಮ್ಮ ದ್ವಿಮಾಸಿಕವನ್ನು ಹೊರತರುತ್ತಿದ್ದೇವೆ.
ಬೆಂಗಳೂರಿನಲ್ಲಿ ಆಯೋಜನೆಗೊಳ್ಳುತ್ತಿರುವ ೭೭ನೇ ಸಾಹಿತ್ಯ ಸಮ್ಮೇಳನಕ್ಕೆ ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಆಯ್ಕೆ ಸರಿಯಾಗಿದೆ ಅನ್ನಿಸುತ್ತದೆಯೇ ಅಥವಾ ನಿರ್ದಿಷ್ಟವಾಗಿ ಇಂಥವರು ಆಗಬೇಕಿತ್ತು ಅಂತ ಏನಾದರೂ ಅನ್ನಿಸುತ್ತಿದೆಯೆ?
ಅದು ಅತ್ಯಂತ ಪ್ರತಿಷ್ಠಿತ ಸ್ಥಾನ. ಜಿ. ವೆಂಕಟಸುಬ್ಬಯ್ಯ ಕನ್ನಡಕ್ಕಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ, ಹಿರಿಯರಿದ್ದಾರೆ. ಅವರಿಗೆ ದೊರೆತ ಸ್ಥಾನಮಾನದ ಬಗ್ಗೆ ಕೊಂಕು ಮಾತನಾಡುವುದು ಅರಿಯಲ್ಲ.
ಈ ಸಮ್ಮೇಳನಗಳಿಂದ ಪ್ರಯೋಜನವಿದೆಯಾ?
ಪ್ರಯೋಜನವಾಗಬೇಕು ಎಂಬುದು ಸಂಘಟಕರ ಉದ್ದೇಶ. ಸಾಹಿತ್ಯ ಸಮ್ಮೇಳನದ ಆರಂಭದಲ್ಲಿ ಅಂದರೆ ಸುಮಾರು ೭೫ ವರ್ಷಗಳ ಹಿಂದೆ ಈ ಸಮ್ಮೇಳನದಿಂದ ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವುದು, ಕರ್ನಾಟಕದ ಏಕೀಕರಣ ಮಾಡುವ ಉದ್ದೇಶಹೊಂದಲಾಗಿತ್ತು, ಅದರೆ ಒಂದೊಂದು ಕಾಲಕ್ಕೂ ಯಾವುದೇ ಭಾಷೆಗೆ, ಸಂಸ್ಕೃತಿಗೆ ಆ ಕಾಲಕ್ಕೆ ತಕ್ಕ ಆಗತ್ಯವಿರುತ್ತದೆ. ಈಗ ಜಾಗತೀಕರಣದ ಸಂದರ್ಭದಲ್ಲಿ ಕನ್ನಡ ಮುಂದಿರುವ ಹೊಸ ಸವಾಲುಗಳೇನು, ಕಂಪ್ಯೂಟರ್‌ನಲ್ಲಿ ಕನ್ನಡದ ಬಳಕೆ ಹೇಗೆ, ಕನ್ನಡದಲ್ಲಿ ಸಂಪರ್ಕ ಕ್ರ್ರಾಂತಿಯ ಬಗ್ಗೆ ಚರ್ಚೆಯಾಗಬೇಕು. ಆ ನಿಟ್ಟಿನಲ್ಲಿ ಸಮ್ಮೇಳನವನ್ನು ಸಂಘಟಿಸಬೇಕು.  
ಅಗ್ರಹಾರ ಕೃಷ್ಣಮೂರ್ತಿ
ನಿಮ್ಮ ಮೇಲೆ ಅತ್ಯಂತ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿ/ಸಾಹಿತಿ ಯಾರು?
ನನ್ನ ಮೇಲೆ ಹಲವಾರು ಪ್ರಭಾವಗಳಾಗಿವೆ. ಒಂದು ಬಾಲ್ಯದಲ್ಲಿ ನಾನು ಓದುತ್ತಿದ್ದ ಕೃತಿಗಳು. ಅದರಲ್ಲೂ ವಯಸ್ಕರ ಶಿಕ್ಷಣ ಸಂಸ್ಥೆಯವರು ಹೊರತರುತ್ತಿದ್ದ ’ಬೆಳಕು’ ಎಂಬ ಮ್ಯಾಗಜೀನ್ ನನ್ನ ಮೇಲೆ ಪ್ರಭಾವ ಬೀರಿದೆ. ಅದರಲ್ಲಿ ಬರುತ್ತಿದ್ದ ಗೊರೂರು ರಾಮಸ್ವಾಮಿ ಆಯ್ಯಂಗರ್‌ರ ಬರಹ, ಇನ್ನೀತರ ಬರಹಗಳು ನನ್ನ ಮೇಲೆ ಪ್ರಭಾವ ಬೀರಿವೆ. ಕುವೆಂಪುರ ಬರಹಗಳು, ಜನಪದ ಸಾಹಿತ್ಯ, ಡಿವಿಜಿಯವರ ಕೃತಿ, ಕೆಎಸ್‌ನರ ’ಮೈಸೂರು ಮಲ್ಲಿಗೆ’ ನನ್ನ ಮೇಲೆ ಪ್ರಭಾವ ಬೀರಿದೆ. ನಾವು ಕಾಲೇಜ್‌ಗೆ ಬಂದಾಗ ನವ್ಯ ಸಾಹಿತ್ಯ ಅತ್ಯುನ್ನತ ಹಂತದಲ್ಲಿತ್ತು. ಆಗ ಗೋಪಾಲಕೃಷ್ಣ ಅಡಿಗ, ಲಂಕೇಶ್‌ರ ಪ್ರಭಾವ ಹಾಗಿದೆ.
ಈ ಕಾರ್ಯದರ್ಶಿ ಹುದ್ದೆಯಿಂದ ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಏನಾದರೂ ಪ್ರಯೋಜನ ಆಗಿದೆಯೆ?
ಇದು ಬಹಳ ಮುಖ್ಯವಾದ ಹುದ್ದೆ, ಅಪರೂಪದ ಹುದ್ದೆ. ಇದು ಸಿಕ್ಕಿದ್ದರಿಂದ ಕರ್ನಾಟಕದ ಮಟ್ಟಿಗಿದ್ದ ನಾನು ದೇಶದ ಅನೇಕ ಭಾಷೆಗಳ ಲೇಖಕರನ್ನು ಭೇಟಿಯಾಗುವಂತಾಯಿತು, ಅನೇಕ ಸ್ಥಳಗಳಿಗೆ ಹೋಗುವಂತಾಯಿತು. ಇದನ್ನು ನಾನು ಗಳಿಕೆ ಎಂದೇ ಭಾವಿಸುತ್ತೇನೆ.
ಭಾರತೀಯ ಭಾಷೆಗಳ ನಡುವಿನ ಕೊಡು ಕೊಳ್ಳುವಿಕೆಗೆ, ಅಂದರೆ ಒಳ್ಳೆಯ ಕೃತಿಗಳ ಭಾಷಾಂತರಕ್ಕೆ ಪ್ರೋತ್ಸಾಹ ನೀಡಲು ಅಕಾಡೆಮಿ ಏನಾದರೂ ಕ್ರಮ ಕೈಗೊಂಡಿದೆಯೇ?
ಭಾಷಾಂತರಕ್ಕೆ ಪ್ರೋತ್ಸಾಹ ನೀಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಆದರೆ ಇದು ಇನ್ನೂ ಹೆಚ್ಚಾಗಬೇಕು. ಅದು ಹೆಚ್ಚಾದಷ್ಟು ಒಳ್ಳೆಯದಿದೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಎಲ್ಲ ಕೃತಿಗಳು ದೇಶದ ಎಲ್ಲ ಭಾಷೆಗಳಿಗೂ ಅನುವಾದ ಆಗಬೇಕು. ಅದು ನಡೆಯುತ್ತಿದೆ. ಇಂದು ದೇಶದ ಅನೇಕ ಪ್ರಕಟನ ಸಂಸ್ಥೆಗಳು ಅನುವಾದದಲ್ಲಿ ತೊಡಗಿದೆ. ೬ನೇ ಪಂಚವಾರ್ಷಿಕ ಯೋಜನೆಯಲ್ಲಿ ಭಾಷಾಂತರವನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ’ಟ್ರಾನ್ಸ್‌ಲೇಷನ್ ಮಿಷನ್’ ಸ್ಥಾಪನೆಯಾಗಿದ್ದು ಅದಕ್ಕೆ ಸಾಕಷ್ಟು ಹಣ ಬಿಡುಗಡೆಯಾಗಿದೆ.
ಕರ್ನಾಟಕದ ಹದಗೆಟ್ಟ ರಾಜಕಾರಣವನ್ನು ನೋಡುತ್ತಿದ್ದೀರಿ. ಇದಕ್ಕೆ ಪರಿಹಾರ ಅಂತಿಲ್ಲವೆ? 
ಪ್ರಜಾಸತ್ತಾತ್ಮಕವಾಗಿ ಹೇಳುವುದಾದರೆ ಮುಂದಿನ ಚುನಾವಣೆಯೇ ಇದಕ್ಕೆ ಪರಿಹಾರ. ಪ್ರತಿ ಸರ್ಕಾರದಲ್ಲೂ ಯಾವುದೇ ವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಆಡಳಿತ ಪಕ್ಷಕ್ಕೆ ಎಷ್ಟಿರುತ್ತದೆಯೋ ಅದರ ೧೦ ಪಟ್ಟಿನಷ್ಟು ವಿರೋಧ ಪಕ್ಷಕ್ಕಿರುತ್ತದೆ. ರಾಜ್ಯದಲ್ಲಿ ಇಂಥಹ ಗೊಂದಲ ಸೃಷ್ಠಿಯಾಗಲೂ ವಿರೋಧ ಪಕ್ಷಗಳೇ ಕಾರಣ ಹಾಗೆಂದು ನಾನು ಆಡಳಿತ ಪಕ್ಷವನ್ನು ಬೆಂಬಲಿಸುತ್ತೇನೆ ಎಂದು ತಿಳಿದುಕೊಳ್ಳಬಾರದು.
ಆದರೆ ಈಗ ರಾಜ್ಯದಲ್ಲಿನ ಮೂರು ಪ್ರಮುಖ ಪಕ್ಷಗಳಲ್ಲೂ ಕೆಲ ಸ್ಥಾಪಿತ ಹಿತಾಸಕ್ತಿಗಳಿವೆ ಅದ್ದರಿಂದ ಮುಂದಿನ ಚುನಾವಣೆ ರಾಜ್ಯದ ಅರಾಜಕತೆಗೆ ಪರಿಹಾರವಾಗಬಹುದೇ? ಬೇರೆ ಪರ್ಯಾಯ ರಾಜಕೀಯ ಚೌಕಟ್ಟಿನ ಅವಶ್ಯಕತೆ ಇದೆ ಅನ್ನಿಸುತ್ತದೆಯೆ?
ಇದು ಹೊಸಕಾಲದ ರಾಜಕಾರಣವನ್ನು ಸೂಚಿಸುತ್ತದೆ. ನೀವು ಪಕ್ಷ ಸ್ಥಾಪಿಸಿ ೩ ಜನ ಶಾಸಕರನ್ನು ಇಟ್ಟುಕೊಂಡು ಅವರನ್ನು ಆಯಕಟ್ಟಿನ ಸಂದರ್ಭದಲ್ಲಿ ಬಳಸಿಕೊಂಡರೆ ಸಾಕು. ಜನರೇ ತಮ್ಮ ಅನುಭವದ ಮೂಲಕ ಇದಕ್ಕೆ ಪರಿಹಾರ ಸೂಚಿಸಬಲ್ಲರು ಎಂಬುದು ನನ್ನ ಅನಿಸಿಕೆ.
ಒಬಾಮಾರ ಭಾರತ ಭೇಟಿಯಿಂದ ದೇಶಕ್ಕೇನಾದರೂ ಲಾಭವಿದೆಯೇ?
ನಮ್ಮ ದೇಶ ಇಂದು ಅತ್ಯಂತ ಪ್ರಮುಖ ರಾಷ್ಟವಾಗಿದೆ. ಇಂತಹ ದೇಶವನ್ನು ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಆದರೆ ನಮ್ಮಲ್ಲಿ ಅನೇಕ ಸಮಸ್ಯೆಗಳಿವೆ. ಈ ಸಮಸ್ಯೆಗಳ ನಡುವೆ ಕೂಡ ನಾವು ಅರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದೇವೆ. ಇದು ಒಂದು ವೈರುಧ್ಯ. ಆದರೆ ಎಲ್ಲ ಅಭಿವೃಧಿ ಹೊಂದುತ್ತಿರುವ ರಾಷ್ಟರಗಳಲ್ಲಿ ಈ ಸಮಸ್ಯೆ ಇದೆ. ಒಬಾಮಾರ ಭಾರತ ಭೇಟಿ ನಮ್ಮ ದೇಶದ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.
ಕನ್ನಡ ’ಅನ್ನ ಕೊಡುವ ಭಾಷೆ’ಯಾಗಬಹುದೇ?
ಅನ್ನ ಕೊಡುವ ಭಾಷೆಯಾಗಬೇಕು ಎಂಬುದು ನಮ್ಮ ಅಶಯ. ಹಾಗೆ ಆದರೆ ಅದು ಮಾದರಿ ರಾಜ್ಯ. ಆದರೆ ವಾಸ್ತವ ಹಾಗಿಲ್ಲ. ಇದಕ್ಕೆ ಜಾಗತಿಕ ಪ್ರಭಾವ, ದೇಶದ ಪ್ರಭಾವ ಅಥವಾ ರಾಜಕಾರಣಿಗಳ ಸಂಕಲ್ಪ ಹೀನತೆ ಕಾರಣವಾಗಿರಬಹುದು. ನಾವು ತಮಿಳಿನಿಂದ ಪಾಠ ಕಲಿಯಬೇಕು. ತಮಿಳು ತನ್ನ ಅಸ್ಮಿತೆಯನ್ನು ಇನ್ನೂ ಬಿಟ್ಟುಕೊಟ್ಟಿಲ್ಲ, ಅದು ಭಾಷೆ, ಸಂಸ್ಕೃತಿ, ಮತ್ತು ರಾಷ್ಟ್ರರಾಜಕಾರಣದಲ್ಲಿ ತನ್ನತನವನ್ನು ಉಳಿಸಿಕೊಂಡಿದೆ. ಆದರೆ ನಮ್ಮಲ್ಲಿ ಅನೇಕರು ತಮಿಳನ್ನು ದ್ವೇಷಿಸುತ್ತಾರೆ, ತಮಿಳುನಾಡನ್ನು ಪರ ರಾಷ್ಟ್ರ ಎಂದು ಭಾವಿಸುತ್ತಾರೆ. ಆ ಭಾವನೆಯನ್ನು ನಾವು ಕಳೆದುಕೊಂಡದಷ್ಟು ಒಳ್ಳೆಯದು.

No comments:

Post a Comment