![]() |
ವೀರೇಶ್ ಹೊಗೆಸೊಪ್ಪಿನವರ |
ಓದಿಗಾಗಿ, ವ್ಯಾಪಾರಕ್ಕಾಗಿ, ರಾಜಕಾರಣಕ್ಕಾಗಿ, ಉದ್ಯೋಗಕ್ಕಾಗಿ ನಾವು ಮತ್ತು ನಮ್ಮ ಕುಟುಂಬಗಳು ದಿಲ್ಲಿಗೆ ಬಂದಿದ್ದೇವೆ.
ಹೀಗೆ ಬಂದವರು ಕೆಲವೊಮ್ಮೆ ಇಲ್ಲೇ ಬದುಕನ್ನು ಮುಂದುವರಿಸುತ್ತೇವೆ. ಕೆಲವರು ತಮ್ಮ ನಿವೃತ್ತಿಯ ನಂತರ ಹುಟ್ಟೂರಿಗೆ ಹೋಗುವ ಯೋಜನೆ ಹಾಕಿರುತ್ತೇವೆ. ಕೆಲವರು ಉದ್ಯೋಗ ಬದಲಿಸಿ ಅಥವಾ ಉದ್ಯೋಗದಲ್ಲಿ ವರ್ಗಾವಣೆಯ ಕಾರಣಕ್ಕಾಗಿ ದಿಲ್ಲಿ ಬಿಡುತ್ತೇವೆ.
ಹೀಗೆಯೇ ಸುಮಾರು ನಾಲ್ಕು ವರ್ಷದ ಹಿಂದೆ ದಿಲ್ಲಿಗೆ ಕನ್ನಡ ಪತ್ರಿಕೆಯೊಂದರಲ್ಲಿ ಕೆಲಸ ಮಾಡಲು ಬಂದ ವಿನ್ಯಾಸಕಾರ ವೀರೇಶ್ ಹೊಗೆಸೊಪ್ಪಿನವರ ಅವರು ತವರೂರಿಗೆ ಹೊರಟಿದ್ದಾರೆ.
ದಿಲ್ಲಿಯಲ್ಲಿ ಅವರ ಅನುಭವಗಳು ಅಪಾರ. ಕೆಂಪುಕೋಟೆಯ ಈ ಅಂತರ್ಜಾಲ ತಾಣದ ಮೂಲಕ ಅವರು ತಮ್ಮ ಅನುಭವಗಳನ್ನು ಕನ್ನಡ ಓದುಗರಿಗೆ ಹಂಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತಕ್ಷಣ ಓದಿಸಿಕೊಂಡು ಹೋಗುವ ಈ ಬರಹ ಈ ಭಾನುವಾರದ ವಿಶೇಷ ಓದಿಗಾಗಿ.
ಸವಿ ಸವಿ ನೆನಪು ಸಾವಿರ ನೆನಪು...ದಿಲ್ಲಿಯ ನೆನಪು...
ನಮ್ಮ ಬಾಲಣ್ಣ ಕೆಂಪುಕೋಟೆ ಕಟ್ಟಿದ್ರು; ಲೇಖನಗಳೂ ಬರೋಕೆ ಶುರು ಆದ್ವು. ನಾನೂ ಏನಾದ್ರೂ ಬರೀಬೇಕು ಅಂತ ಅನ್ನಿಸ್ತಿತ್ತು. ಏನ್ ಬರೀಬೇಕು ಅಂತನಾ ತೋಚ್ತಾನೇ ಇರ್ಲಿಲ್ಲ... ಹೂಂ ಸರಿ ಏನೋ ಬರಿಯೋಣ ಅಂತ ಕೂತು ಬರೀತಿದಿನಿ...
ದಿಲ್ಲಿ ಎಷ್ಟು ಚಂದ ಅಂದ್ರೆ ಅದನ್ನ ಮರೆಯೋಕೆ ಆಗೋಲ್ಲ... ಜೀವನ ಎಲ್ಲಾ ಕಲಿಸುತ್ತೆ ಅಂತಾರಲ್ಲ ಹಾಗೆ ನಾನ್ ದಿಲ್ಲಿಗೆ ಬಂದು ಬಹಳಷ್ಟು ಕಲಿತಿದ್ದೀನಿ. ಇನ್ನೂ ಕಲಿಯೋದು ಬಹಳ ಇದೆ.
ನಾನ್ ಮೊದಲಿಗೆ ದಿಲ್ಲಿಗೆ ಬರೋಕೂ ಮುಂಚೆ ತುಂಬಾ ಅಂಜಿಕೆ ಇತ್ತು. ಹೇಗಪ್ಪ ಬರೋದು? ಅಲ್ಲಿ ಭಾಷೆ ಬೇರೆ; ಜನ ಬೇರೆ ತರ ಇರ್ತಾರೆ. ಹೇಗಪ್ಪ ಹೊಂದಿಕೊಳ್ಳೊದು ಅಂತ.
ಅದಕ್ಕೆ ಮೊದಲೇ ಅನಂತ ಮತ್ತೆ ರಘುನಂದನ್ ಹತ್ರ ಒಂಚೂರು ಮಾಹಿತಿ ತಗೊಂಡೇ ಬಂದೆ ನೋಡಿ.
ಅಬ್ಬಬ್ಬ! ದಿಲ್ಲಿ ವಿಮಾನ ನಿಲ್ದಾಣ ಇಳಿತಿದ್ದಂಗೆ 37 ಡಿಗ್ರಿ ಉಷ್ಣಾಂಶ. ನಮ್ಮ ಬೆಂಗಳೂರಲ್ಲಿ ಇಷ್ಟೊಂದು ಸೆಕೆ ಇರ್ತಿರಲಿಲ್ಲ. ಬಂದೋನೇ ಸೀದಾ ನಮ್ ಹೊಸ ಆಫೀಸ್ಗೆ ಹೋಗಿ ರಿಪೋರ್ಟ್ ಮಾಡಿಕೊಂಡೆ.
ಮೊದಲನೇ ದಿನ ಏನೋ ನಮ್ ಆಫೀಸ್ನೋರೇ ಕಾರಲ್ಲಿ ಗೆಸ್ಟ್ ಹೌಸ್ ಗೆ ಕಳಿಸಿದ್ರು.
ಇನ್ನು ಮುಂದೆ ಬಸ್ಸು ಆಟೋದಲ್ಲಿ ಬರಬೇಕು. ಎಲ್ಲಿಂದ ಹೊರಡಬೇಕು ಎಲ್ಲಿ ಇಳಿಬೇಕು ಅಂತ ಆಫೀಸ್ನೋರೆ ಬರೆದುಕೊಟ್ರು.
ಸಹವರ್ತಿಗಳು |
ಮೊದಲನೇ ದಿನ 30 ರೂಪಾಯಿ ಕೊಟ್ಟು ಆಟೋದಲ್ಲಿ ಹೋದೆ. ಸಂಜೆ ಬರೋವಾಗ ಗೊತ್ತಾಯ್ತು ಬಸ್ಸಲ್ಲಿ ಬಂದರೆ ಬರಿ 3 ರೂಪಾಯಿ ಅಂತ ಅಮೇಲೆಲ್ಲ ಬರಿ ಬಸ್ಸಲ್ಲೇ ಪಯಣ...
ಗೆಸ್ಟ್ ಹೌಸ್ ಬಿಟ್ಟು ಒಂದು ಚಂದದ ಮನೆ ಹುಡುಕಿ ಅದಕ್ಕೆ ಸೇರಿಕೊಂಡದ್ದೂ ಆಯ್ತು ಮೊದಲ ದಿನ ಮಲಗೋಕೆ ಚಾಪೆ ಇಲ್ಲದಿದ್ದರೂ ಪೇಪರ್ ಹಾಸ್ಕೊಂಡು ಮಲಗಿದ್ವಿ... ಅವಾಗ ದಿಲ್ಲಿನಲ್ಲಿ ಇರ್ಬಹುದಪ್ಪ ಅಂತ ಅನ್ನಿಸ್ತು. ಅಲ್ಲಿಂದ ಶುರು ಆಯ್ತು ನನ್ ದಿಲ್ಲಿ ಜೀವನ...
ದೆಲ್ಲಿಲಿ ಇದ್ದ ಮೂರು ಮುಕ್ಕಾಲು ವರ್ಷ ಎಷ್ಟೆಲ್ಲ ಎಂಜಾಯ್ ಮಾಡಿದ್ದು ಅಂದ್ರೆ ಅಬ್ಬ ಅದೆಲ್ಲ ಮರೆಯದೇ ಇರೋ ಅಂತದ್ದು...
ಇಲ್ಲಿ ದಿಲ್ಲಿ ಜನರ ಬಾಯಲ್ಲಿ ನಮ್ಮ ಪ್ರಕಾಶ್ ಶೆಟ್ಟರು ‘ಪರಕಾಸ್’ ಆದದ್ದು, ನಮ್ಮ ರಾಘವ ಶರ್ಮ ‘ರಾಗಬ್ ಸರ್ಮ’, ಇನ್ನು ನನ್ನೇನ್ ಬಿಟ್ಟಿಲ್ಲ ವೀರೇಶ್ ಹೋಗಿ ‘ಬಿರೇಸ್’ ಆಗಿದ್ದು ಆಯ್ತು... ಒಟ್ನಲ್ಲಿ ಎಲ್ಲಾ ‘ಬ’ ಮಯ. ಇದರಲ್ಲಿ ಹಾಳಾಗದ ಹೆಸರು ಅಂದರೆ ನಮ್ಮ ನಾರಾಯಣಸ್ವಾಮಿ ಮತ್ತೆ ಸುನಿಲ್ ಕುಮಾರ್ ಮಾತ್ರ.
ನಾವು ಇಲ್ಲಿಗೆ ಬಂದು ಎಲ್ಲದಕ್ಕೂ ಈ ಬರಗೆಟ್ಟೋರು ಅಂತಾರಲ್ಲ ಹಂಗೆ ಆದಂಗೆ ಆಗಿ ಬಿಟ್ಟಿದ್ವಿ ಅನ್ನಿಸಿಬಿಟ್ಟಿತ್ತು.
ಎಲ್ಲಿ ಕನ್ನಡದವರು ಸಿಗ್ತಾರೋ ಅಲ್ಲೆಲ್ಲ ಖುಶಿಯಿಂದ ಮಾತಾಡಿ ಅವರ ಗೆಳೆತನ ಪಡ್ಕೊತಿದ್ವಿ. ಹಿಂಗೆ ನಮ್ಮ ಏರಿಯಾ ಸುತ್ತ ಯಾರು ಯಾರು ಕನ್ನಡದವರು ಇದಾರೋ ಅವರನೆಲ್ಲ ಪರಿಚಯ ಮಾಡಿಕೊಂಡು ಬಿಟ್ಟದ್ದು ಆಯ್ತು...
ಇದಕ್ಕೆ ಬಳಸಿದ್ದು ಒಂದೇ ಫಾರ್ಮುಲಾ. ಏನಿಲ್ಲ; ರಸ್ತೆಲಿ ಹೋಗೋವಾಗ, ಇಲ್ಲ ಅಂಗಡಿಗೆ ಹೋದಾಗ ಜೋರಾಗಿ ಕನ್ನಡದಲ್ಲೇ ಮಾತಾಡೋದು- ಹಿಂಗೆ ನಮಗೆ ಜೂಸ್ ಅಂಗಡಿಲಿ ಸಚಿನ್ ಸಾಗರ್ ಪರಿಚಯ ಆದ್ರು,
ವಿಶ್ವಾಸ್ ಮತ್ತೆ ರಾಥೋಡ್ ಪರಿಚಯ ಆದ್ರು, ನಮ್ ಮನೆ ಓಣಿನಲ್ಲೇ ಆಗಾಗ ಕನ್ನಡದ ಹಾಡು ಕೇಳ್ತಿತ್ತು... ಕೊನೆಗೂ ಅಲ್ಲಿ ಸಂತೋಶ್ ಪರಿಚಯ ಆದ್ರು.
![]() |
ಕುಡಿಕೆ ಚಹಾ ... ಅಹಾ.. |
ಹೀಗೇ ನಮ್ ಜೊತೆ ಕೃಷ್ಣನೂ ಬಂದ. ಮತ್ತೆ ಹಂಗೆ ಮೆಲ್ವಿನ್. ನಮ್ ಮನೆ ಕರ್ನಾಟಕದಿಂದ ಬರೋ ನಮ್ಮ ಗೆಳೆಯರಿಗೆ ಗೆಸ್ಟ್ ಹೌಸ್ ಆದಂಗೆ ಆಯ್ತು.
ಅಬ್ಬ ಅಂತೂ ನಾವ್ ಕರ್ನಾಟಕದಲ್ಲೇ ಇದಿವೇನೋ ಅಂತನಾ ಅನ್ನಿಸ್ತಿತ್ತು.
ನಾವು ಪರದಾಡಿದ್ದು ಅಂದರೆ ಇಲ್ಲಿನ ಊಟಕ್ಕೆ ಬೆಂಗಳೂರಲ್ಲಿ ಬೀದಿಗೆ ಒಂದು ಹೋಟೆಲ್, ಸಂಜೆ ಆದ್ರೆ ಮಸಲಾ, ಪಾನಿಪುರಿ, ದಿನಾ ಮನೆಲಿ ಮಾಡಿದ ಊಟ ತಿಂದುಂಡ ನಮಗೆ ಮೊದಲಿಗೆ ಉತ್ತರ ಭಾರತದ ಊಟದ ರುಚಿಯೇ ಹಿಡಿಸಲಿಲ್ಲ. ಅದಕ್ಕೆ ಕನ್ನಡದವರ ಮನೆಗೆ ಊಟಕ್ಕೆ ಹೋಗೋದ್ರಲ್ಲಿ ನಮ್ಮದು ಎತ್ತಿದ ಕೈ.
ಊಟದ ವಿಷಯ ಬಂದರೆ ನಮ್ಮ ಪ್ರೇಮಶೇಖರ ಮತ್ತೆ ವೀರಣ್ಣ ಮನೆ ಇನ್ನು ಅಲ್ಲಿ ಬಿಟ್ಟರೆ ಆಗಾಗ ಕರ್ನಾಟಕ ಫುಡ್ ಸೆಂಟರ್. ನಮ್ಮ ಆಫೀಸ್ ಹತ್ರ ನಮಗೆ ಹಿಡಿಸಿದ್ದ ಊಟ ಅಂದರೆ ಕರಣ್ ಹೋಟೆಲ್. ಇಲ್ಲೇ ನೋಡಿ ‘ದೋ ಮಿನಿಟ್ ಮೇ’ (ಇದು ದೆಲ್ಲಿಯ ಪೇಮಸ್ ಡೈಲಾಗ್) ಅನ್ನೋ ಡೈಲಾಗ್ ಪರಿಚಯ ಆದದ್ದು. ಜೊತೆಗೆ ಸಾಕೇತ್ನಲಿದ್ದ ‘ಓರಿಯಂಟರ್ ವಾಕ್’ ಚೈನೀಸ್ ಹೋಟೆಲ್.
ಸೆಖೆಗೆ ಹಾದಿಬದಿಯ ನೀರೇ ಗತಿ |
ನಾವೆಲ್ಲ ಗೆಳೆಯರು ಸೇರಿ ಎಲ್ಲಾದ್ರೂ ಟ್ರಿಪ್ ಹೋಗ್ಬೇಕು ಅಂತ ಹರಿದ್ವಾರ, ಹೃಷಿಕೇಷ, ಮಸೂರಿ, ಆಗ್ರಾ, ಮಥುರಾ, ಕಜುರಾಹೋ, ನೈನಿಥಾಲ್, ಜೈಪುರ ಹೀಗೆ ಎಷ್ಟೋ ಕಡೆ ಸುತ್ತಾಡಿ, ಇಷ್ಟಲ್ಲದೇ ದೆಲ್ಲಿ ಎಲ್ಲಾ ಸುತ್ತಾಡಿದ್ದಾಯ್ತು. ಪ್ರತಿಯೊಂದು ಕಡೆನೂ ಒಂದೊಂದು ಹೊಸ ತರದ ಅನುಭವ ಉತ್ತರ ಭಾರತದ ಪ್ರವಾಸ ಮಾಡ್ತಿರೊ ಖುಶಿ.
ಆಹಾ ದಿಲ್ಲಿ ಸೆಕೆ ಬಗ್ಗೆ ಹೇಳಿರೋನು ಚಳಿ ಬಗ್ಗೆ ಬಿಡ್ತೀನಾ...
ಅಬ್ಬ ಎಂಥ ಚಳಿ ಅಂದರೆ ಒಂದು ದಿನ 4ಗಂಟೆಗೆ ಎದ್ದು ಈ ಚಳಿನೂ ಬೇಡ, ಕೆಲಸನೂ ಬೇಡ ಬೆಳಿಗ್ಗೆ ಸೀದಾ ಊರಿಗೆ ಹೋಗ್ತೀನೀ ಅಂತ ಮೊದಲನೇ ಚಳಿಲೇ ಎದ್ದು ಕೂತಿದ್ದ ನನಗೆ ‘ಅಯ್ಯೋ ಸುಮ್ನಿರಪ್ಪ ಊರಿಗೆ ಹೋಗ್ತಾನಂತೆ ಮಲಕ್ಕೋಳೋ ಸಾಕು’ ಅಂತ ನಮ್ ಪ್ರಕಾಶ ಹೇಳಿ ಮಲಗಿಸಿದ್ರು.
![]() |
ಅದೇನ್ ಚಳಿಯಣ್ಣಾ ... |
ಆ ಚಳಿಗೆ ಸ್ವೆಟರ್, ಜರ್ಕೀನ್ ಅದೂ ಇದು ತರೋಣ ಅಂತ ಟಿಬೇಟಿಯನ್ ಮಾರ್ಕೇಟ್ ಹೋಗಿ ವ್ಯವಹರಿಸಿದ್ದೇ, ಚೌಕಾಸಿ ಮಾಡಿದ್ದೆ... ಮೊದಲೇ ನಾವ್ ಎಲ್ಲೋದ್ರೂ ಕನ್ನಡದಲ್ಲೇ ಮಾತಾಡ್ತಿದ್ವಿ ಅಲ್ಲೂ ಸಹ ಹಂಗೇ ಮಾತಾಡ್ತಿದ್ದಂಗೆ ಅಲ್ಲಿ ವ್ಯಾಪಾರಸ್ತರು ಸಹ ಕನ್ನಡದಲ್ಲೇ ಮಾತಾಡೋದಾ ಅದೂ ಅಲ್ಲದೇ ಏನಣ್ಣ ಒಂದು ೨೦೦-೩೦೦ ರೂಪಾಯಿ ಕೊಟ್ಟು ಕೊಳ್ಳೊಕೆ ಇಷ್ಟೊಂದು ಚೌಕಾಸಿ ಅನ್ನೋದೆ. ಅಬ್ಬ ಅಲ್ಲೇ ತಬ್ಬಿಬ್ಬಾದ್ವಿ ಆಮೇಲೇ ಕನ್ನಡದಲ್ಲಿ ಮಾತಾಡೋವಾಗ ಸ್ವಲ್ಪ ಹುಶಾರಾಗಿ ಮಾತಾಡೋಕೆ ಶುರು ಮಾಡಿದ್ವಿ.
ಇನ್ನು ದೆಹಲಿ ಕರ್ನಾಟಕ ಸಂಘಕ್ಕೆ ಬಂದ್ರಂತೂ ಎಲ್ಲೆಲ್ಲೂ ಕನ್ನಡಮಯ. ನಾವ್ ಮೊದಲಿಗೆ ಸಂಘಕ್ಕೆ ಬಂದಾಗ ಪುರುಷೋತ್ತಮ ಬಿಳಿಮಲೆಯವರು ಸಂಘದ ಅಧ್ಯಕ್ಷರಾಗಿದ್ರು... ‘ಯುವಕರು ನೀವು ನಿಮ್ಮಂತವರು ಬರಬೇಕು’ ಅಂತ ಮತ್ತೆ ಮತ್ತೆ ಹೇಳ್ತಿದ್ರು.
ದೆಹಲಿ ಕರ್ನಾಟಕ ಸಂಘ ನಮಗೆ ಒಂತರಾ ಮನೆ ಇದ್ದಂಗೆ ಇತ್ತು.
ದೇಶದ ರಾಜಧಾನಿಯಲ್ಲಿ ದೋಸೆ ಸ್ವಾಮಿ! |
ತಮ್ಮಂದಿರನ್ನ ಮಾತನಾಡಿಸೋ ತರ ಮಾತನಾಡಿಸ್ತಿದ್ದ ರೇಣುಕಾ ನಿಡುಗುಂದಿ, ಆತ್ಮೀಯತೆಯಿಂದ ಮಾತನಾಡಿಸ್ತಿದ್ದ ವಸಂತ ಶೆಟ್ಟಿ ಬೆಳ್ಳಾರೆ, ‘ಏ ಹುಡುಗ್ರಾ ನಮ್ ಅಭಿಮತಕ್ಕೆ ಏನಾದ್ರೂ ಬರೀರೋ’ ಅಂತ ಅವಾಗವಾಗ ಹೇಳ್ತಿದ್ದ ಉಷಾ ಭರತಾದ್ರಿ,
’ಗಣೇಶನ ಹಬ್ಬದಲ್ಲಿ ತಗೊಳ್ರೋ ಪಟಾಕಿ ಹಚ್ರಿ’ ಅಂತ ಕರೆದು ಗಣೇಶ ವಿಸರ್ಜನೆಗೆ ಕರ್ಕೊಂಡ ಹೋದ ಸಿ.ಎಂ. ನಾಗರಾಜು,
‘ಬರ್ರೋ ಸಂಘಕ್ಕೆ ತಿಂಗಳಿಗೆ ಒಂದು ಸಿನಿಮಾ ಹಾಕಿಸ್ತೀವಿ’ ಅಂತ ನಮ್ಮ ವೀರಣ್ಣ ಕಮ್ಮಾರ,
ಸಂಘಕ್ಕೆ ಹೋಗ್ತಿದ್ದಂತೆ ಭೀಮನಂತೆ (ನಾಟಕದಲ್ಲಿ ಭೀಮನ ಪಾತ್ರಕ್ಕೆ ಸೂಕ್ತ) ಪ್ರತ್ಯಕ್ಷ ಆಗ್ತಿದ್ದ ಮೈಲಾರಪ್ಪ,
‘ಜನಕಪುರಿ ಕನ್ನಡ ಕೂಟದಿಂದ ಸತ್ಯನಾರಾಯಣ ಪೂಜೆ ಇದೆ ಬರ್ರಪ್ಪ’ ಅಂತಿದ್ದ ನಮ್ಮ ಪೊಲೀಸಣ್ಣ ಶ್ರೀನಾಥ್,
‘ಅವು ಎಂಚ ಪಂಡ...’ ಅಂತ ಮಾತಾಡಿಸ್ತಿದ್ದ ಕೆ.ಎಸ್.ಜಿ. ಶೆಟ್ರು,
ದೆ.ಕ.ಸಂ. ನಲ್ಲಿ |
ಯಾವಾಗ್ಲೂ ಪ್ರೀತಿಯಿಂದ ಮಾತಾಡಿಸ್ತಿದ್ದ ಗುರುಗಳಾದ ಶಿವಾನಂದ ಇಂಗಳೇಶ್ವರ್, ನಮ್ ಸಂಗೀತದ ಮೇಷ್ಟು ರಮೇಶ್, (ನನ್ನ ಹೆಂಡತಿಗೆ ಹಾಡಲು ಅವಕಾಶ ಕೊಟ್ಟ ಸಂಘದ ಪದಾಧಿಕಾರಿಗಳು, ಮುಖ್ಯವಾಗಿ ರಮೇಶ್ ಅವರಿಗೆ ನನ್ನ ವಂದನೆಗಳು.)
‘ನೀವ್ ಬಿಡ್ರಿ ಮದುವೆಗೆ ಕರೆದ್ರೆ ಒಂದು ಊಟ ಜಾಸ್ತಿ ಖರ್ಚಾಗುತ್ತೆ ಅಂತ ನನ್ನ ಮದುವೆಗೆ ಕರೆದಿಲ್ವಾ’ ಅಂತ ಅಂದ ಶ್ರೀನಿವಾಸ ಮೂರ್ತಿ
(ಅದಕ್ಕೆ ಯೋಚಿಸಿದ್ದೀನಿ ನಾ ಇನ್ನೊಂದು ಮದುವೆ ಆದ್ರೆ ಅವರೇ ಅಡುಗೆ ಮನೆ ಇಂಚಾರ್ಜ್ ಅಂತ),
ಮೊದಮೊದಲಿಗೆ ವೇದಿಕೆ ಹಿಂದೆ ಕೇಳಿ ಬರ್ತಿದ್ದ ಆಕಾಶವಾಣಿ ದನಿಯ ಕೃಷ್ಣಭಟ್ಟರು, ಯಕ್ಷಗಾನದ ವಿದ್ಯಾ ಕೋಳ್ಯೂರು, ಯಾವಾಗ್ಲೂ ಬ್ರದರ್... ಬ್ರದರ್... ಅಂತಿದ್ದ ರೇಣುಕುಮಾರ್,
ನಾವ್ ಕಾಲ್ಕಾಜಿ ಅಂಟಿ ಅಂಕಲ್ ಅಂತಿದ್ದ ಹರಿಶ್ಚಂದ್ರ ಬಂಟ್ವಾಳ್ ದಂಪತಿಗಳು,
![]() |
ನಾಟ್ಕ .... |
ಯಾವಾಗ್ಲೂ ಮಾತಲ್ಲಿ ಹಾಸ್ಯಪ್ರಧಾನವೇ ಇರ್ತಿದ್ದ ಕೃಷ್ಣಮೂರ್ತಿ ಕಲುಮಂಗಿ ದಂಪತಿಗಳು,
ಕರ್ನಾಟಕ ಫುಡ್ ಸೆಂಟರ್ ಶರೀಫರು, ಕಲಾವಿದ ಸುಧೀರ್ ಫಡ್ನೀಸ್,
ಇನ್ನು ನಮ್ಮ ಅಭಿಮತದದಲ್ಲಿ ಒಳ್ಳೊಳ್ಳೆ ರೇಖಾ ಚಿತ್ರ ಬಿಡಿಸುತ್ತಿದ್ದ ಚೆನ್ನು ಎಸ್. ಮಠದ,
ಸಂಪಾದಕೀಯ ವಿಭಾಗದಲ್ಲಿ ಜೊತೆಯಲ್ಲಿದ್ದ ಬಾಲಕೃಷ್ಣ ನಾಯ್ಕ್, ಅವನೀಂದ್ರನಾಥ್ ರಾವ್, ಮಹಾಬಲೇಶ್ವರ ಭಟ್, ಸಂತೋಷ್ ಉಪಾಧ್ಯಾಯ, ಮುಖಪುಟ ವಿನ್ಯಾಸ ಮಾಡೋದಕ್ಕೆ ಪ್ರೇರಣೆ ನೀಡಿದ ಗುರು ಬಾಳಿಗ,
ಇನ್ನು ಗುರುಗಾಂವ್ ನಲ್ಲಿ ಏನಾದ್ರೂ ಕೇಳಬೇಕು ಅಂದರೆ ಮೊದಲು ನೆನಪಾಗ್ತಿದ್ದ ಸತೀಶ್,
ಹೀಗೇ ಎಂ. ವಿ. ವೆಂಕಟೇಶ್, ಶ್ಯಾಮ್ ಸುಂದರ್, ಅಂಬರೀಷ್, ಪಿ.ಸಿ. ಶ್ರೀನಿವಾಸ್, ಬಿರಾದಾರ್, ಅಹಲ್ಯಾ ಚಿಂತಾಮಣಿ, ಬಿ.ಎಸ್. ಮೇಟಿ, ಸರೋಜ-ಮಾಧವ್ ದಂಪತಿಗಳು, ಹೀಗೇ ಇನ್ನೂ ಎಷ್ಟೊಂದು ಜನ ದೆಹಲಿ ಕರ್ನಾಟಕ ಸಂಘದ ನೆನಪಲ್ಲಿ ಹಾದು ಬರೋ ನೆನಪುಗಳು.
ಇನ್ನು ಅಲ್ಲಿನ ನಾಟಕಗಳು, ನಾಟಕದ ನಂತರದ ಊಟಗಳು, ಸಂಗೀತ ಕಾರ್ಯಕ್ರಮಗಳು, ಯಕ್ಷಗಾನಗಳು,
ಗಣೇಶನ ಹಬ್ಬದ ಮೋಜುಗಳು, ಸಿನಿಮಾ ಶೋಗಳು, ಸಂವಾದಗಳು, (ಈ ಗಳು-ಗಳು ಎಲ್ಲಾ ಪಂಚರಂಗಿ ಎಫೆಕ್ಟ್) ಒಂದೇ ಒಂದು ಸಲದ ಪಿಕ್ನಿಕ್. ಕ್ರೀಡಾ ಕೂಟಗಳು,
ಜಟ್ಟಿ ಕಾಳಗ ...ಶೆಟ್ಟಿ ಕಾಳಗ?? |
ಇದೇ ಕ್ರೀಡಾಕೂಟದಲ್ಲಿ ಪತ್ರಕರ್ತರದೇ ತಂಡ ಅಂತ ನಮ್ಮ ರಾಘವನ ನೇತೃತ್ವದಲ್ಲಿ ವಿನಾಯಕ್ ಭಟ್ರು, ಶಿವಪ್ರಸಾದ್, ಪ್ರಶಾಂತ್ ನಾಥು, ಪ್ರದೀಪ, ಶ್ರೀನಿವಾಸ ಗೌಡ್ರು, ಮೆಲ್ವಿನ್, ಕೃಷ್ಣ, ಸುನಿಲ್, ವಿನಯ್, ನಮ್ ಸತೀಶ್ ಸರ್ ಹಿಂಗೆ ಟೀಮ್ ಕಟ್ಟಿ ಆಡಿದ್ದೂ ಮಜ ಇತ್ತು.
ಈಗ ಮತ್ತೆ ಅದೇ ತರದ ಟೀಮ್ ಕಟ್ಟಿ ಮ್ಯಾಚ್ ಆಡೋದ್ರಲ್ಲಿ ನಮ್ಮ ರಾಘವ ಮುಂದಾಗಿದಾನೆ ಆದ್ರೆ ಅದಕ್ಕೆ ನಾ ಇರೋಲ್ವೇ...
ತುಂಬಾ ಖುಶಿ ಕೊಟ್ಟಿದ್ದು ಅಂದ್ರೆ ನಾವ್ ಬಂದ ಹೊಸದ್ರಲ್ಲಿ ನಡೆದ ಜಾನಪದ ಜಾತ್ರೆ ಹಬ್ಬ.
ಆ ಮೂರು ದಿನಗಳಂತೂ ಕನ್ನಡದ ಹಬ್ಬವೇ ಆಗಿತ್ತು. ಹಂಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ನನ್ ಫೋಟೋ ತೆಗಿಬಾ’ ಅಂತ ಕರೆದ ನಮ್ ಗುರುಗಳು, ‘ನಿನ್ನ ಗಡ್ಡ ನೋಡಿದ್ರೆ ಈ ಪಾತ್ರಕ್ಕೆ ನೀನೂ ಸೂಕ್ತ ಆಗ್ತಿಯಾ’ ಅಂತ ಪಾರ್ಟು ಕೊಟ್ರು...
ಇನ್ನು ಡಿಕೆಎಸ್ ಅಂದ್ರೆ ನೆನಪಾಗೋದು ನಮ್ಮ ದೇವಯ್ಯ, ಶೇಖರ್, ಬಾಲಚಂದ್ರ ಮತ್ತು ರಾಘವೇಂದ್ರ ಇವರೆಲ್ಲ...
ಇನ್ನೂ ಅತೀ ಹೆಚ್ಚು ಉತ್ಸಾಹದಿಂದ ನಡೆಯೋದು ದೆಹಲಿ ಕರ್ನಾಟಕ ಸಂಘದ ಚುನಾವಣೆ. ಆವಾಗಂತ್ಲೂ ಗೊತ್ತಿರೋರು, ಗೊತ್ತಿಲ್ದೋರು ಎಲ್ಲರೂ ಎಲ್ಲಿ ಕಂಡರೂ “ನಮಸ್ತೆ, ಹೇಗಿದಿರ? ಮನೆಕಡೆ ಚೆನ್ನಾಗಿದಾರ” ಅನ್ನೋದು ಹಾಸ್ಯಾಸ್ಪದವಾಗಿರುತ್ತಿತ್ತು.
ಕೆಲವು ದಿಲ್ಲಿಯ ಪವರ್ ಫುಲ್ ನೆನಪುಗಳು:
ಪ್ರೇಮಶೇಖರ್ ಮತ್ತು ವೀರಣ್ಣ ಮನೆ ಊಟ
‘ದೋ ಮಿನಿಟ್ ಮೇ...’ ಅನ್ನೋ ಡೈಲಾಗ್
![]() |
ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ...ನೀವು ......ಅಲ್ಲ ನಾವು.... |
ಊಟಕ್ಕಾಗಿ ತಡಕಾಡಿದ್ದು...
ದೆಲ್ಲಿ ಮೆಟ್ರೊ
ಕಾಮನ್ ವೆಲ್ತ್ ಗೇಮ್ಸ್
ಓಸಿಯಾನ ಫಿಲ್ಮ್ ಫೆಸ್ಟ್
ಚೌಕಾಸಿಗೆ ಹೆಸರುವಾಸಿಯಾದ ಕನ್ನಾಟ್ ಪ್ಲೇಸ್
ನಮ್ಮ ಅಲಾಕನಂದ ಏರಿಯಾ
ಸೆಲೆಕ್ಟ್ ಸಿಟಿ ವಾಕ್
ದೆಲ್ಲಿಯ ‘ಸುಖ’ವಿಲ್ಲದ ಮನೆಗಳು
ದೆಹಲಿ ಪ್ಲೈ ಓವರ‍್ಸ್
‘ಗೊತ್ತಾಯ್ತಾ ತಿಳ್ಕೋಳಿ...’
ದಿಲ್ಲಿ ಬಿಟ್ಟು ನೋಯ್ಡಾ ಕಡೆ ಬರ್ತಿದ್ದಂಗೆ ಇಲ್ಲಿಯದೊಂತರ ಹೊಸ ಜೀವನ...
ದಿಲ್ಲಿ ತರ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೋಗದಿದ್ರೂ ಮನೆಲೇ ಎಲ್ಲಾ ಗೆಳೆಯರ ಜೊತೆ ಮೋಜು ಮಾಡಿದ್ದೋ ಮಾಡಿದ್ದು.
ಹೀಗೇ ನನ್ನ ಕೆಲಸ, ನನ್ನ ಆಫೀಸು ಇದೆಲ್ಲ ಹೆಚ್ಚು ಖುಶಿ ಕೊಟ್ಟವು.
ನೋಯ್ಡಾದಲ್ಲಿ ನಾವು ಅಂದರೆ ಪ್ರಕಾಶ್, ರಾಘವ್, ಸುನೀಲ್, ಸತೀಶ್ ಚಪ್ಪರಿಕೆ, ಪ್ರವೀಣ್ ಕುಮಾರ್, ಶಾಂತ, ಗಂಗೂ, ಹೇಮಂತ್, ಸತೀಶ್ ಗಾರು, ಸುಧೀರ್, ರಾಕೇಶ್, ವಾಟ್ಸ್ ಅಪ್ ಮ್ಯಾನ್ ಮಂಜುನಾಥ್... ಇದೆಲ್ಲ ನನ್ನ ಬ್ಯಾಚುಲರ್ ಲೈಫು..
‘ಗಜಿಬಿಜಿ ಕಿಜಿಬಿಜಿ ಕೊಪ್ಪೊಪ್ಪೋ...
![]() |
ತರಕಾರಿ ... ಹಣ್ಣು ...ಖರೀದಿ |
ಕಿರಿಕಿರಿ ಕಯ ಕಯ ಕೊಕ್ಕೊಕ್ಕೋ ಲೈಫು ಇಷ್ಟೇನೇ.. ತರರಂಪೋ.. ತರರಂಪೋ.. ಲೈಫು ಇಷ್ಟೇನೇ..’
ಇನ್ನು ನನ್ ಮ್ಯಾರೀಡ್ ಲೈಫು...
ಮತ್ತದೇ ಹೊಸ ಮನೆಗಳು, ಮನೆ ಸಾಮಾನುಗಳು, ಪ್ರತಿವಾರ ಶಾಂಪಿಂಗ್ ಗಳು, ಮನೆಗೆ ಬರ್ತಾ ತರಕಾರಿ ಹಾಲು-ಮೊಸರುಗಳು,
ಹೀಗೇ ಸಾಗ್ತು ಜೀವನ.
ನನ್ನಾಕೆಗೆ ಇಲ್ಲಿ ವಾತಾವರಣ ಅಷ್ಟೊಂದು ಹಿಡಿಸದಿದ್ರೂ ಹೊಸ ಕಂಪ್ಯೂಟರ್, ಅದರಲ್ಲೇ ಟಿವಿ,
ಪಕ್ಕದ ಮನೆಯ ಅಭಿನಂದನ್-ಶ್ವೇತಾ, ಕೆಳಗಿನ ಮನೆ ತಲೆತಿನ್ನೋ ಆಂಟೀ,
ಯಾವಾಗೂ ಬರದ ಮಳೆ ಥೋ... ಅಂತ ಸುರಿದ ಮಳೆ,
ಆಗಾಗ ದೆಹಲಿ ಕರ್ನಾಟಕ ಸಂಘದ ಕಾರ್ಯಕ್ರಮ,
ಫ್ರೆಂಡ್ಸ್ ಜೊತೆ ಟ್ರಿಪ್ಪು, ಕಾಮನ್ ವೆಲ್ತ್ ಗೇಮ್ಸ್ ಹೀಗೇ ಸುತ್ತಾಡ್ತಾ ಆಕೆಗೂ ನೋಯ್ಡಾ ಜೀವನ ಆಷ್ಟೇನೂ ಬೇಸರ ತರ್ಲಿಲ್ಲ. ಆಗಾಗ ನಮ್ಮ ಮಂಜು ಡೈಲಾಗ್ ‘ಗೊತ್ತಾಯ್ತಾ ತಿಳ್ಕೋಳಿ’ ಅನ್ನೋದನ್ನ ನಮ್ ರಾಕೇಶ ಪದೇ ಪದೇ ಹೇಳಿ ಪ್ರತಿದಿನ ಗೊತ್ತಾಯ್ತಾ ತಿಳ್ಕೋಳಿ ಅನ್ನೋದ್ರಲ್ಲೂ ಮಜ ಇರೋದು.
ಸರಿಯಾಗಿ ಬಸ್ಸು, ಆಟೋ ಸಿಗೋದೇ ಕಷ್ಟ ಇತ್ತು
ಸಕ್ಕತ್ ಚಳಿಲಿ ರಸ್ತೆ ಸರಿಯಾಗಿ ಕಾಣದ ದಪ್ಪವಾಗಿ ಕವಿದ ಮಂಜಿನಲ್ಲಿ ಅವರು ನಮ್ಮನ್ನು ಮನೆ ಸೇರಿಸಿದ್ದು ಎಂದೂ ಮರೆಯೋಕೆ ಆಗೊಲ್ಲ.
ಇಂಥ ಸವಿ ನೆನಪುಗಳ ಮೂಟೆ ಕಟ್ಟಿಕೊಂಡು ಎಲ್ಲರನ್ನೂ ಬಿಟ್ಟು ಹೋಗ್ಬೇಕಲ್ಲ ಅನ್ನೋದೇ ಬೇಜಾರು.
ಆದ್ರೆ ಏನ್ ಮಾಡೋದು? ‘ಅಲ್ಲಿದೆ ನಮ್ ಮನೆ ಇಲ್ಲಿ ಬಂದೆ ಸುಮ್ಮನೆ’ ಅಂತ ನಮ್ಮ ತಾಯ್ನಾಡಿಗೆ ಹೋಗೋಣ ಅಂತ ಹೊರಡ್ತಿದೀನಿ...
ನಿಮ್ಮೆಲ್ಲ ಹಾರೈಕೆ ನನಗಿರಲಿ. ಇನ್ನೂ ಹೇಳೋಕೆ ಹೋದ್ರೆ ತುಂಬಾ ಇದೆ.. ಆದ್ರೆ ಏನ್ ಮಾಡೋದು ನನ್ಗೆ ಬರೆಯೋ ಹವ್ಯಾಸ ಅಷ್ಟೊಂದು ಇಲ್ಲ.
ಇದೇನಪ್ಪ ಬರೀ ಹೆಸರುಗಳಿಂದಲೇ ತುಂಬಿಸಿದಾನೆ ಅಂತಿರಾ ಅದೇ.. ಏನೋ ಮನಸಿಗೆ ತೋಚಿದ್ದು ಬರ್ದಿದೀನಿ...
ಏನಪ್ಪ ಇಷ್ಟೊತ್ತು ಹಿಂಗೆ ಕುಯ್ದಾ ಅಂದ್ಕೊಂಡ್ರಾ ಏನೋ ಕ್ಷಮಿಸಿ ಬುದ್ದಿ..
ಒಟ್ನಲ್ಲಿ ಇದೆಲ್ಲ ನನ್ನ ದೆಹಲಿಯ ಸವಿ ಸವಿ ನೆನಪು ಸಾವಿರ ನೆನಪು...
ನಿಮ್ಮ
ವೀರೇಶ ಹೊಗೆಸೊಪ್ಪಿನವರ
ವೀರೇಶ್ ವಾಪಸ್ ಹೋಗ್ತಾ ಇದ್ದಾನಂತೆ- ಅಂತ ಸುದ್ದಿ ಗೊತ್ತಾಗಿತ್ತು. ಆದ್ರೆ ಇವತ್ತು ನಿಮ್ಮ ಆಪ್ತವಾದ ಬರಹ ಓದಿ ಅಂತಃಕರಣವೇ ಕಲುಕಿದಂತಾಯಿತು.ನಿಮ್ಮ ಲೇಖನ ಓದಿ ಮುಗಿಸುವಾಗ ಕಣ್ಣು ಹನಿಗೂಡಿತ್ತು. ಬಂದ ಒಬ್ಬ ತಮ್ಮ ಊರಿಗೆ ಹೊರಟು ಹೋಗ್ತಾನೆಂಬ ಹಳಹಳಿಕೆ ಆವರಿಸಿಕೊಂಡು ಬಿಟ್ಟಿತು. ನಾವೆಲ್ಲ ಹೀಗೆ ವೃತ್ತಿನಿಮಿತ್ತ ಬಂದವರು. ಕೆಲವರು ಇಲ್ಲಿಯೇ ನೆಲೆಸಿದರೂ ಮಾನಸ ಬದುಕಿನಲ್ಲಿ ಇಲ್ಲಿಯವರಾಗೇ ಉಳಿಯದೇ ಅಲ್ಲಿ ಹೋಗಿ ಬದುಕಲೂ ಒಲ್ಲದೇ, ಸಲ್ಲದೇ ಇಲ್ಲೇ ಒಂಥರಾ ತ್ರಿಶಂಕುಗಳಾಗಿ ಬಿಡ್ತೀವೇನೋ ಎಂಬ ಭಯ ಕಾಡತೊಡಗಿತು. ಪ್ರಕಾಶ ಶೆಟ್ಟಿ, ವೀರೇಶ್ ಎಲ್ಲ ದೆಹಲಿಗೆ ಬರುವ ಮೊದಲೇ ಅಂತರ್ಜಾಲ ಪತ್ರಿಕೆ,’ಬರಹ’ ವಾಸು ಅವರ ತಂತ್ರಜ್ಝಾನಕ್ಕೆ ಸಂಬಂಧಪಟ್ಟ ಬರಹ,ಚರ್ಚೆಗಳ ಮೂಲಕ ಪರಿಚಿತರು. ಇಲ್ಲಿಗೆ ಬಂದ ಲವಲವಿಕೆಯ ಯುವ ಅಲೆಯೇ ನಮಗೆಲ್ಲ ಸ್ಪೂರ್ತಿ ನೀಡುತ್ತಿತ್ತು. ದೆಹಲಿಕನ್ನಡಿಗರ ಮುಖವಾಣಿ ’ಅಭಿಮತ’ಕ್ಕೆ ನಾವೆಲ್ಲ ಹೊಸದಾಗಿ ಸೇರ್ಪಡೆಯಾದಾಗ ಹೊಸದೇನನ್ನೋ ಮಾಡುವ, ಕಾಣುವ ಹುರುಪಿನ ಬಳಗವನ್ನು ಮರೆಯುವಂತಿಲ್ಲ. ಹೀಗೇ ಹೊರನಾಡಿನಲ್ಲಿ ಕನ್ನಡನಾಡಿನ ವಾತಾವರಣವನ್ನು ಕಟ್ಟಿಕೊಳ್ಳುತ್ತ ಬದುಕನ್ನು ಸವಿಯುವವರು ನಾವು. ನಿಮಗೆ ಒಳ್ಳೆಯದಾಗಲಿ, ಎಲ್ಲೇ ಹೋದರೂ ಕನ್ನಡಪ್ರೇಮ -ಕನ್ನಡಿಗರ ಸ್ನೇಹ ಹೀಗೇ ಇರುತ್ತೆ. ನೀವು ನಮ್ಮ ನೆನಪಲ್ಲಿರುತ್ತೀರಿ. ಜೀಮೇಲ್ ಚಾಟ್ ನಲ್ಲಿ ಸಿಕ್ಕೇ ಸಿಗ್ತೀವಿ - ಶುಭಹಾರೈಕೆಗಳೊಂದಿಗೆ ರೇಣುಕಾ ನಿಡಗುಂದಿ.
ReplyDeleteRenuku avru helodu sari. Navu elli hodru, gmail chat namma sambandha kadidu kolladante nodikollutte. Heegagi namma Veeresha endigu miss agalla...
ReplyDeletehaa naanu MISS agoke saddhyane illa yakendare nan MR.
ReplyDeletethanks for wishes
Heart touching writeup. Virtually he has remmbered almost everyone whom he came across. Writeup is lively and lovely. Best wishes to Veeresh and Jyothi Veeresh.
ReplyDeleteKM Kalumangi