Friday, November 11, 2011

ಕೆಂಪುಕೋಟೆ ತಂಡದಿಂದ ದೆಹಲಿಯಲ್ಲಿ "ಮೆಸೇಜ್ ಬಂತು" ರಂಗ ಪ್ರಯೋಗ

ಕೆಂಪುಕೋಟೆ ತಂಡವು ದೆಹಲಿಯಲ್ಲಿ ಇದೇ ನವಂಬರ್ 13ರ ಭಾನುವಾರ ಸಂಜೆ ಆರೂವರೆ ಗಂಟೆಗೆ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ "ಮೆಸೇಜ್ ಬಂತು" ಎಂಬ ರಂಗ ಪ್ರಯೋಗವನ್ನು ಮಾಡಲಿದೆ.

ಹಳ್ಳಿಯ ಯುವಕನೊಬ್ಬನಿಗೆ ಸ್ನೇಹ ಪ್ರೀತಿ ತುಂಬಿದ ಮೊಬೈಲ್ ಮೆಸೇಜ್‌ಗಳು ಬರುತ್ತಿರುತ್ತವೆ. ಊರಿನ ಹುಡುಗರಿಗೆ ಅದೊಂದು ಮೋಜಿನ ವಿಷಯವಾದರೆ ಆ ಯುವಕನು ಮೆಸೇಜ್‌ಗಳ ಮೂಲಕ ಪ್ರೇಮಲೋಕದ ಕನಸನ್ನು ನೇಯುತ್ತಾನೆ. ಅದೇ ಹಳ್ಳಿಯಲ್ಲಿ ಉದ್ಯಮಿಯೊಬ್ಬ ಒಂದು ಬೃಹತ್ ಫ್ಯಾಕ್ಟರಿಯನ್ನು ಸ್ಥಾಪಿಸಲು ಯೋಚಿಸುತ್ತಾನೆ. ಫ್ಯಾಕ್ಟರಿ ಬಂದರೆ ವಿದ್ಯೆ ಕಲಿತ ಯುವಕರಿಗೆ ಅದೇ ಹಳ್ಳಿಯಲ್ಲಿ ಕೆಲಸ ದೊರೆತು ಅವರು ಅಲ್ಲಿಯೇ ನೆಲೆಸಬಹುದು ಎಂಬ ಆಸೆ ಒಂದೆಡೆ. ಆ ಊರಿನ ಫಲವತ್ತಾದ ಕೃಷಿ ಭೂಮಿ ನಾಶವಾಗುವುದೋ ಎಂಬ ಆತಂಕ ಇನ್ನೊಂದೆಡೆ. ಇತ್ತ ಹಳ್ಳಿಯ ಯುವಕನು ತನಗೆ ಮೆಸೇಜ್ ಕಳುಹಿಸಿದ ಕನಸಿನ ಕನ್ಯೆಯನ್ನು ಭೇಟಿಯಾಗುವ ಸಂಭ್ರಮದಲ್ಲಿದ್ದರೆ ಊರವರು ತಮ್ಮೂರಿಗೆ ಕವಿದ ಕಾರ್ಮೋಡ ಹೇಗೆ ಮಳೆಯಾಗಿ ಹರಿಯುವುದು ಎಂಬುದನ್ನು ಕಾಯುತ್ತಾರೆ.

ಜನವರಿ 2011 ರಲ್ಲಿ ಆರಂಭವಾದ ಕೆಂಪುಕೋಟೆ ಬ್ಲಾಗ್ ದೆಹಲಿಯಲ್ಲಿ ನಡೆಯುತ್ತಿರುವ ಕನ್ನಡದ ಕ್ರಿಯಾಶೀಲತೆಯನ್ನು ಅಂತರ್ಜಾಲ ಲೋಕದಲ್ಲಿ ಪರಿಚಯಿಸುವ ಕೆಲಸ ಮಾಡುತ್ತಿದೆ. "ಮೆಸೇಜ್ ಬಂತು" ಕೆಂಪುಕೋಟೆ ತಂಡದ ಮೊದಲ ರಂಗ ಪ್ರಯೋಗವಾಗಿದೆ.

ಅನಿತಾ, ಅವನೀಂದ್ರನಾಥ್ ರಾವ್, ಗುರುರಾಜ ಚೆಂಡೂರ್, ಪ್ರವೀಣ್ ಕುಮಾರ್, ಪ್ರಕಾಶ್ ಶೆಟ್ಟಿ ಉಳೆಪಾಡಿ, ಪುರುಷೋತ್ತಮ ಬಿಳಿಮಲೆ, ರಾಘವೇಂದ್ರ ಗುಡಿ, ರಾಕೇಶ್ ಎನ್.ಎಸ್., ಸ್ವಾತಿ, ಸಾಮ್ರಾಟ್ ಗೌಡ ಮೊದಲಾದವರು ಅಭಿನಯಿಸುವ ಈ ಪ್ರಯೋಗವನ್ನು ಬಾಲಕೃಷ್ಣ ನಾಯ್ಕ್ ಡಿ. ಅವರು ಬರೆದು ನಿರ್ದೇಶಿಸುತ್ತಾರೆ.

No comments:

Post a Comment