Thursday, February 10, 2011

ಬಾನಾಡಿ ನೆನಪು - ಎದೆಯೊಳಗೆ ಕಾಡುತ್ತಿರುವ ಎಂ.ಪಿ.ಪ್ರಕಾಶ್


ಎಂ.ಪಿ. ಪ್ರಕಾಶ್ ಬಹಳಷ್ಟು ಅಭಿಮಾನಿಗಳ ರಾಜಕಾರಣಿ. ಅವರು ನಿನ್ನೆ ಇನ್ನಿಲ್ಲವಾದರು. ಅವರಿಗೆ ಶ್ರದ್ಧಾಂಜಲಿಯಾಗಿ ಬಾನಾಡಿ ಬ್ಲಾಗಿನ ಒಂದು ನೆನಪಿನ ಬರಹ ಕೆಂಪುಕೋಟೆ ಓದುಗರಿಗಾಗಿ.



ಕರ್ನಾಟಕದಲ್ಲಿ ಜನತಾ ಪಕ್ಷದ ಆಡಳಿತ. 1988-89. ಮಂಗಳೂರಿನ ಪುರಭನದಲ್ಲೊಂದು ಸಮಾರಂಭ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ನಾವೆಲ್ಲಾ ಸಮಾರಂಭದ ವ್ಯವಸ್ಥೆಯನ್ನು ನೋಡಿಕೊಳ್ಳಲು ಓಡಾಡುತ್ತಿದ್ದ ಹುಡುಗರು. ಕರ್ನಾಟಕದ ಪ್ರವಾಸೋದ್ಯಮ, ಸಂಸ್ಕೃತಿ, ವಾರ್ತಾ ಮತ್ತು ಪ್ರಚಾರ ಇಲಾಖೆಯ ಮಂತ್ರಿಗಳು ಮುಖ್ಯ ಅತಿಥಿ.
ಆಗಿನ ರಾಜಕೀಯ ಮುತ್ಸದ್ಧಿಗಳಾಗಿದ್ದ ರಾಮಕೃಷ್ಣ ಹೆಗಡೆ, ಎಸ್. ಬಂಗಾರಪ್ಪ, ಜನಾರ್ದನ ಪೂಜಾರಿಯವರ ಅಪ್ಪಟ ರಾಜಕೀಯ ಭಾಷಣ ಕೇಳಿ ಕೇಳಿ ನಮಗೆ ಮಂತ್ರಿಗಳ ಭಾಷಣದ ಕುರಿತು ಹೆಚ್ಚಿನದೇನೂ ಆಸಕ್ತಿ ಇರಲಿಲ್ಲ. ಮಂತ್ರಿಗಳು ಸಮಾರಂಭಕ್ಕೆ ಬಂದ ಮೇಲೆ ನಮ್ಮ ಕೆಲಸವೂ ಅಷ್ಟೇನು ಇರಲಿಲ್ಲ.

ದೆಹಲಿಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭ

ಮಂಗಳೂರಿನ ಬೇಸಿಗೆಯ ಬಿಸಿಲಿಗೆ ಹೊರಗೆ ತಿರುಗಾಡುವುದೂ ನಮಗೆ ಒಳ್ಳೆಯ ಆಯ್ಕೆಯಾಗಿರಲಿಲ್ಲ. ಹಾಗಾಗಿ ಪುರಭವನದೊಳಗಿನ ಫ್ಯಾನ್ ಕೆಳಗೆ ಕುಳಿತು ನಿದ್ದೆ ಹೊಡೆಯಬಹುದೆಂದು ಸಮಾರಂಭ ನಡೆಯುತ್ತಿದ್ದ ಹಾಲ್ ನಲ್ಲಿಯೇ ಕುಳಿತೆವು. ಕಾರ್ಯಕ್ರಮ ಆರಂಭವಾಗಿ ವೇದಿಕೆಯಿಂದ ಒಂದರ ಮೇಲೊಂದು ಭಾಷಣಗಳು ಬರತೊಡಗಿದವು. ಕೊನೆಗೆ ಮುಖ್ಯ ಅತಿಥಿಗಳ ಭಾಷಣ. ನಿಧಾನವಾಗಿ ಆರಂಭಗೊಂಡ ಭಾಷಣ ಮುಂದುವರಿಯುತ್ತಲೇ ಇತ್ತು. ಅದೇನು ವಿಚಾರಗಳ ಮಂಥನ. ವಿಶ್ವವಿದ್ಯಾಲಯಗಳ ಹಿರಿಯ ಪ್ರೊಫೆಸರ್ ಗಳು ಕೂಡ ಇಷ್ಟೊಂದು ನಿರರ್ಗಳವಾಗಿ ಇಷ್ಟೊಂದು ಮಹತ್ತರವಾದ ವಿಚಾರವಂತ ಭಾಷಣವನ್ನು ಕೊಟ್ಟಿರಲಿಲ್ಲ. ನಾವೆಲ್ಲಾ ಮಾಮೂಲಿ ರಾಜಕೀಯ ಭಾಷಣವನ್ನು ನಿರೀಕ್ಷೆಮಾಡುತ್ತಿದ್ದರೆ ನಮಗೆ ಕಣ್ಣು ತೆರೆಸುವ, ಯುವ ಮನಸ್ಸುಗಳಿಗೆ ಒಂದು ದಿಕ್ಕು ತೋರಿಸುವ ಮಾತಾಗಿತ್ತು ಅದು. ಕಾರ್ಯಕ್ರಮ ಮುಗಿದ ಮೇಲೂ ಅವರ ಮಾತುಗಳು ನಮ್ಮ ಎದೆಯೊಳಗೆ ಹೂತು ಮಿದುಳನ್ನು ಚಿಂತಿಸುವಂತೆ ಮಾಡುತ್ತಿತ್ತು. ರಾಜಕಾರಣಿ ಕುರಿತು ಅಲ್ಪ ಅಭಿಪ್ರಾಯವಿದ್ದ ನಮಗೆ ಈ ರಾಜಕಾರಣಿಯ ಎಲ್ಲಾ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿ ನಮಗೆ ಉಪಯೋಗವಾಗುವುದು ಇಲ್ಲಿದೆ ಎಂಬ ಮನೋಭಾವನೆ ಉಂಟಾಯಿತು. ಆ ರಾಜಕಾರಣಿ ನಿನ್ನೆ ಇನ್ನಿಲ್ಲವಾದ ಎಂ.ಪಿ.ಪ್ರಕಾಶ್. ಅವರಂತಹ ರಾಜಕಾರಣಿಯೊಬ್ಬನನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಗದ ನಮ್ಮ ರಾಜಕೀಯ ವ್ಯವಸ್ಥೆ ಅವರನ್ನು ಎಂದೋ ಕಳೆದುಕೊಂಡಿತ್ತು. ರಾಜಕೀಯ ವ್ಯವಸ್ಥೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ತಳಹದಿಯ ಅಗತ್ಯವನ್ನು ಎತ್ತಿಹಿಡಿದು ಬದುಕಿನಲ್ಲಿ ಅದನ್ನೇ ಅನುಸರಿಸಿದವರು ಅವರು.
ಸುಮಾರು ಇಪ್ಪತ್ತು ವರ್ಷಗಳ ನಂತರದ ಮತ್ತೊಂದು ನೆನಪು, ಅನುಭವ. 2008ರ ಆಗಸ್ಟ್ ತಿಂಗಳಲ್ಲಿ ದೆಹಲಿಯಲ್ಲಿ ಕವಿ, ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ಅವರ ಮಬ್ಬಿನ ಹಾಗೆ ಕಣಿವೆಯಾಸಿಯನ್ನು ಬಿಡುಗಡೆಗೊಳಿಸುತ್ತಾ ಅಲ್ಲಿನ ಮರಿಕವಿಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲೂ ಅವರಿದ್ದರು. ಭಾಷಣಗಳನ್ನು ಕೇಳಿ ಮರೆಯುವವ ಅವರು ಒಂದು ಮಾತನ್ನು ಮಾತ್ರ ಬಹಳ ದಿನಗಳಿಂದ ನೆನಪಲ್ಲಿರಿಸಿದ್ದೇನೆ.
ಧಾರ್ಮಿಕರಲ್ಲದ ಮಹಮ್ಮದಾಲಿ ಜಿನ್ನಾ ಪಾಕಿಸ್ಥಾನವೆಂಬ ಇಸ್ಲಾಮ್ ರಾಷ್ಟ್ರದ ನಿರ್ಮಾಣಕ್ಕೆ ಕಾರಣರಾದರೆ ಭಗವದ್ಗೀತೆ, ಭಜನ್ ಗಳ ಮೂಲಕ ವೈಯಕ್ತಿಕವಾಗಿ ಅತ್ಯಂತ ಧಾರ್ಮಿಕ ಮನೋಧರ್ಮ ಹೊಂದಿದ್ದ ಮಹಾತ್ಮಾ ಗಾಂಧಿಯವರು ಭಾರತವು ಒಂದು ಧರ್ಮ ನಿರಪೇಕ್ಷ ರಾಷ್ಟ್ರವಾಗುವಲ್ಲಿ ಪ್ರಯತ್ನ ಪಟ್ಟರು. ಧಾರ್ಮಿಕರಾದರೂ ಧರ್ಮವನ್ನು ಮೀರುವ ಪ್ರಯತ್ನವನ್ನು ನಾವು ಮಾಡಬೇಕು.
ಆಗಾಗ ತಟ್ಟುವ ಈ ವಿಚಾರ ಎಂ.ಪಿ. ಪ್ರಕಾಶ್ ಅವರಿಲ್ಲದ ದಿನಗಳಲ್ಲಿ ನಮ್ಮನ್ನು ಇಂದಿನ ಸಂಜೆಯ ನಂತರ ನಾಳೆಯ ಮುಂಜಾನೆಗೆ ಕಾಯುವಂತೆ ಮಾಡುತ್ತಿದೆ. ಬಹಳ ದಿನ ಕಾಡುವಿರಿ ಪ್ರಕಾಶ್ ಅವರೇ.
ಒಲವಿನಿಂದ
ಬಾನಾಡಿ

1 comment:

  1. ನಿಜ, ಎಂ ಪಿ ಪ್ರಕಾಶ್ ಬಹಳ ಕಾಲ ನೆನಪಲ್ಲಿ ಉಳಿಯುವ ವ್ಯಕ್ತಿತ್ವ ಉಳ್ಳವರು. ಕಳೆದ ಸುಮಾರು ೨೦ ವರ್ಷಗಳಿಂದ ನಾನು ಅವರನ್ನು ಗಮನಿಸುತ್ತ ಬಂದಿದ್ದೇನೆ. ಅತ್ಯಂತ ಸಂವೇದನ ಶೀಲ ರಾಜಕಾರಣಿ ಆಗಿದ್ದ ಅವರು ಕರ್ನಾಟಕದ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದರು, ಆದರೆ ಸಜ್ಜನ ರಾಜಕಾರಣಕ್ಕೆ ಬೆಲೆಕೊಡದ ರಾಜ್ಯ ಅದನ್ನು ಮಾಡಲಿಲ್ಲ. ಪ್ರಕಾಶ್ ಅವರ ಮಗಳು ವೀಣಾ ಜನಪದ ವಾಸ್ತು ಶಿಲ್ಪದಮೇಲೆ ಸಂಶೋಧನೆ ಮಾಡಿದ್ದರು. ಕವಿ, ನಾಟಕಕಾರ, ಚಿಂತಕ, ವಿಚಾರವಾದಿ ಪ್ರಕಾಶ ಅವರ ನಿಧಾನಕ್ಕೆ ನನ್ನ ಸಂತಾಪಗಳು.

    ReplyDelete