ರಾಕೇಶ್ ಎನ್.ಎಸ್. ಅವರು ಪ್ರೇಮದ ಅಮಲನ್ನು ಕೆಂಪುಕೋಟೆಯ ಓದುಗರೊಂದಿಗೆ ಹಂಚುತ್ತಿದ್ದಾರೆ. ವ್ಯಾಲೆಂಟೇನ್ಸ್ ದಿನದ ಶುಭಾಶಯಗಳು!!


ಪ್ರೇಮಿಗಳ ದಿನಾಚರಣೆಗೆ ಧಿಕ್ಕಾರ.....! ಇದು ಭಾರತದಲ್ಲಿ ಈ ದಿನಾಚರಣೆಯ ಒಟ್ಟೊಟ್ಟಿಗೆ ಬೆಳೆದು ಬಂದ ಒಂದು ಘೋಷಣೆ ಮತ್ತು ಕ್ರಿಯೆ. ಇಲ್ಲಿ ವಿರೋಧ ಮತ್ತು ಪರ ಒಟ್ಟೊಟ್ಟಿಗೆಯೇ ಸಾಗಿದೆ, ಸಾಗುತ್ತಿದೆ ಮತ್ತು ಮುಂದೆಯೂ ಸಾಗಬಹುದು. ವಿಪರ್ಯಾಸವೆಂದರೆ ಧಿಕ್ಕಾರದ ಕೂಗು ಜೋರಾದಂತೆ ಸ್ವೀಕಾರದ ಬಯಕೆ ಕೂಡ ಏರುತ್ತಿದೆ. ಅದು ಹಾಗೆಯೇ, ಮುಚ್ಚಿಟ್ಟಿರುವುದರ ಬಗೆಗೆ ಹೆಚ್ಚು ಕುತೂಹಲ. ಇದು ಮಾನವನ ಸಹಜ ಸಂಸ್ಕ್ರತಿ. ಕಾಲದ ಹರಿವು ಮುಂದೆ ಮುಂದೆ.... ಹಿಂದೆಯಲ್ಲ, ಅನ್ನುವುದು ’ಹೀಗೂ ಒಂದು ದಿನ’ ಬೇಕು ಎಂಬುವವರ ಅಂಬೋಣ. ಆದರೆ ಯಾವುದು ಮುಂದೆ, ಯಾವುದು ಹಿಂದೆ ಎಂಬುದು ನಿರ್ದಿಷ್ಟ ವ್ಯಾಖ್ಯೆಯಿಲ್ಲದ ’ಕಾಲಗುಣ’. ಒಟ್ಟಿನಲ್ಲಿ ನನ್ನಂಥವರ ಸದ್ಯದ ಸ್ಥಿತಿ, ಮೂರು ಮಾರ್ಗದ ಮಧ್ಯೆ ಮದ್ಯ ಕುಡಿದು ತೂರಾಡುವವನಂತಾಗಿದೆ!
***

ಈಗ ಆಯ್ಕೆ ಪ್ರೀತಿಯದ್ದು. ನನ್ನ ಪ್ರೀತಿ ಯಾರ ಕಡೆಗೆ? ಯಾವುದು ನೈಜ ಪ್ರೀತಿ? ಅಷ್ಟರಲ್ಲಿ ಆಕೆಯ ಮಿಸ್‌ಡ್ ಕಾಲ್! ಕೊಳಲು ಬೇಡ! ಹುಸೇನ್‌ನ್ನು ಬೇಡ!
***
ಅವಳದ್ದು ಕಲ್ಲು ಹೃದಯ, ಅವಳೂ ಹಾಗೆ ಹೇಳಿಕೊಳ್ಳುತ್ತಿದ್ದಳು, ಅವಳಿಗಾಗಿ ಹಪಹಪಿಸಿದವರೂ ಕೂಡ! ಒಂದು ದಿನ ’ಪರಾರಿ’ ಸುದ್ದಿಯಡಿಯಲ್ಲಿ ಅವಳ ಹೆಸರು! ಅವನ್ಯಾರೋ ಚಿರಪರಿಚಿತ ಟಪೋರಿ! ಅದು ಕಲ್ಲು ಕರಗುವ ಸಮಯ! ’ಪ್ರೀತಿಗೆ ಕಣ್ಣಿಲ್ಲ’ ಎನ್ನುವವರಿಗೆ ಸಿಕ್ಕ ಉದಾಹರಣೆ. ಪ್ರೀತಿಗೆ ಕಣ್ಣು ಬೇಡ ಬಿಡಿ, ಕೊನೆಗೊಂದಿಷ್ಟು ಮಣ್ಣಾದರೂ ಬೇಡವೇ? ಇದು ಅವಳ ತಂದೆ ತಾಯಿಯ ಅಳಲು, ಕೊನೆಗೊಂದು ದಿನ ಅವಳದ್ದು ಕೂಡ!
***
ಪ್ರೀತಿಯಿಂದ ಬಿತ್ತಿದರೆ ಅಕ್ಕಿಯಿಂದ ಭತ್ತ ಬೆಳೆಯಬಹುದು, ಪ್ರೀತಿಯಿದ್ದರೆ ಗಾಳಿಯನ್ನು ಕೂಡ ಮುಷ್ಟಿಯಲ್ಲಿ ಹಿಡಿದು ತೋರಿಸಬಹುದು, ಒಣ ಮರಳಲ್ಲಿ ಆಳೆತ್ತರದ ಗೋಡೆ ಕಟ್ಟಬಹುದು, ಹೀಗೆ ಪ್ರೀತಿಯಿದ್ದಲ್ಲಿ ಎಲ್ಲ ಬಹುದುಗಳೇ! ಪ್ರೀತಿಯೆಂದರೆ
ಏನು? ನಾವು ಪ್ರೀತಿಗೆ ಬೀಳುವುದಾ? ಅಥವಾ ಪ್ರೀತಿ ನಮ್ಮನ್ನು ಎಬ್ಬಿಸುವುದಾ? ಪ್ರೀತಿಯಲ್ಲಿ ನೈತಿಕ ಮತ್ತು ಅನೈತಿಕ ಎಂಬ ವಿಧ ಇದೆಯಾ? ಅದು ವರ್ತನೆಯಲ್ಲಿ ಮಾತ್ರ ಅಲ್ವಾ?
ನಾ ಮುಗ್ದ ಮುಖವಿಟ್ಟುಕೊಂಡು, ಪಿಳಿಪಿಳಿ ಕಣ್ಣು ಬಿಡುತ್ತಾ ನಿಮ್ಮನ್ನು ಕೇಳುತ್ತಿದ್ದೇನೆ..... ಒಂದೋ ಉತ್ತರ ಕೊಡಿ. ಇಲ್ಲ, ಒಂದಿಷ್ಟು ಪ್ರೀತಿ......!
" ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ
ReplyDeleteಬರುವ ಕಂಪಿನ ಹೆಸರು ಪ್ರೇಮವೆಂದು
ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ
ಕಣ್ಣಸನ್ನೆಯ ಹೆಸರು ಪ್ರೇಮವೆಂದು
ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳ
ದೂರದಿಂಪಿನ ಹೆಸರು ಪ್ರೇಮವೆಂದು
ಮಾಲಗಣ್ಣಿನ ಹೆಣ್ಣೆ ನಿನ್ನ ತುಟಿಯಿಕ್ಕೆಲದಿ
ಮಂದಹಾಸದ ಹೆಸರು ಪ್ರೇಮವೆಂದು "
ಕೆ.ಎಸ್.ನರಸಿಂಹಸ್ವಾಮಿಯವರ ಈ ಹಾಡು ನಿಮ್ಮ ಪ್ರಶ್ನೆಗೆ ಉತ್ತರ.
ಪ್ರೀತಿ ಮುಗ್ಧವಾಗಿದ್ದರೇನೇ ಅದು ಪ್ರೀತಿಯೆನಿಸಿಕೊಳ್ಳುತ್ತದೆ. ಇಲ್ಲಾಂದರೆ ಬರೀ ವ್ಯವಹಾರವಷ್ಟೇ. ಚೆಂದದ ಲೇಖನ.ಬರೆಯುತ್ತೀರಿ....
ರೇಣುಕಾ