Sunday, May 8, 2011

ಅಮೇರಿಕಾದಲ್ಲಿ ಡಾ. ಪುರುಷೋತ್ತಮ ಬಿಳಿಮಲೆ


ಅಮೇರಿಕಾದಲ್ಲಿ ನಾಲ್ಕು ಉಪನ್ಯಾಸಗಳು
ಡಾ. ಪುರುಷೋತ್ತಮ ಬಿಳಿಮಲೆ
ಅಮೇರಿಕಾದ ಪ್ರತಿಷ್ಠಿತ ’ಸಾಗರೋತ್ತರ ಅಧ್ಯಯನ ಕೇಂದ್ರಗಳ ಒಕ್ಕೂಟ’ವು ಅಮೇರಿಕಾದ ಮೂರು ವಿಶ್ವವಿದ್ಯಾಲಯಗಳಲ್ಲಿ ನನ್ನ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಿರುವ ಬಗ್ಗೆ ನನಗೆ ೨೦೧೦ರ ಜನವರಿ ತಿಂಗಳಿನಲ್ಲಿಯೇ ತಿಳಿಸಿದ್ದರು. ಆ ಪತ್ರ ಬಂದಾಗ ನನ್ನ ಆರೋಗ್ಯ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಕಳೆದ ಸುಮಾರು ೨೫ವರ್ಷಗಳಿಂದ ನನ್ನ ಜೊತೆಗಾರನಾಗಿ, ಬೆಂಬಿಡದೆ ಕಾಡುತ್ತ ಬಂದಿದ್ದ ನಕ್ಷತ್ರಿಕ ಡಯಾಬೆಟಿಸ್ ನನ್ನ ಎಡದ ಕಣ್ಣನ್ನು ಮುಂದವಾಗಿಸಿತ್ತಲ್ಲದೆ, ಅದರಲ್ಲಿ ಸಣ್ಣನೆಯ ರಕ್ತಸ್ರಾವ ಆಗುವಂತೆ ಮಾಡಿತ್ತು. ಕಾರಣ ಈ ಆಹ್ವಾನವನ್ನು ಒಂದು ವರುಷ ಮುಂದೂಡಲು ಕೋರಿಕೊಂಡಿದ್ದೆ. ನನ್ನ ಕೋರಿಕೆಯನ್ನು ಮನ್ನಿಸಿ ಒಕ್ಕೂಟದ ಕಾರ್ಯಕ್ರಮ ನಿರ್ದೇಶಕಿ ಹೈಡಿ ಮಸಾರೋ ೨೦೧೧ರ ಮಾರ್ಚ್ ತಿಂಗಳೊಳಗೆ ಆಹ್ವಾನವನ್ನು ಸ್ವೀಕರಿಸುವಂತೆ ತಿಳಿಸಿದ್ದರು. ಈ ನಡುವೆ ’ಏಷಿಯಾ ಸಂಶೋಧಕರ ಕೇಂದ್ರ’ವು ೨೦೧೦-೧೧ನೇ ಸಾಲಿನ ವಾರ್ಷಿಕ ಸಮ್ಮೇಳನವನ್ನು ಜಗತ್ತಿನ ಅತ್ಯಂತ ಸುಂದರ ದ್ವೀಪವಾದ ಹವಾಯಿಯಲ್ಲಿ ನಡೆಸಲು ನಿರ್ಧರಿಸಿ, ಅಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಬೇಬೇಕೆಂಬ ಕರೆಯೋಲೆಯನ್ನು ಕಳಿಸಿಕೊಟ್ಟಿತ್ತು. ಈ ಅವಕಾಶವನ್ನು ಕಳೆದುಕೊಳ್ಳಲು ನಾನು ಸಿದ್ಧನಿರಲಿಲ್ಲ. ಜೊತೆಗಾರ ಡಯಾಬೆಟಿಸ್‌ಗೆ ಸ್ವಲ್ಪ ಕಾಲ ಸುಮ್ಮನಿರಲು ಹೇಳಿ ಪಯಣಕ್ಕೆ ಸಿದ್ಧನಾದೆ.


ಸಾಗರೋತ್ತರ ಅಧ್ಯಯನ ಕೇಂದ್ರಗಳ ಒಕ್ಕೂಟದ ಗೆಳೆಯ, ಹಿರಿಯ ಅಧಿಕಾರಿ ಮೈಕೆಲ್  ಹಲ್ವಾಚಸ್ ನಾನು ಕೋರಿಕೊಂಡ ರೀತಿಯಲ್ಲಿಯೇ ಪ್ರಯಾಣಕ್ಕೆ ಬೇಕಾದ ಟಿಕೆಟ್‌ಗಳನ್ನು ಖರೀದಿಸಿ ಕಳುಹಿಸಿಕೊಟ್ಟಿದ್ದ. ಎಲ್ಲ ವಿಮಾನ ನಿಲ್ದಾಣದಲ್ಲಿಯೂ ನನ್ನನ್ನು ಕರೆದೊಯ್ಯಲು ಯಾರು ಬರುತ್ತಾರೆ? ನನ್ನ ವಸತಿ ವ್ಯವಸ್ಥೆ ಎಲ್ಲಿ ಮಾಡಲಾಗಿದೆ? ಎಂಬಿತ್ಯಾದಿ ವಿವರಗಳನ್ನು ಅಚ್ಚುಕಟ್ಟಾಗಿ ತಿಳಿಸಿದ್ದರಿಂದ ನಾನು ಯಾವ ಆತಂಕಕ್ಕೂ ಒಳಗಾಗಿರಲಿಲ್ಲ (ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ನಾನು ಪೇಚಾಡಿದ್ದರ ಬಗ್ಗೆ ಬರೆದು ಕನ್ನಡಿಗರಿಗೆ ನಾನು ಬೇಸರ ಉಂಟು ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿಕೊಂಡಿದ್ದೇನೆ).

ನಿಗದಿಪಡಿಸಿದ ಪ್ರಕಾರ ಮಾರ್ಚ್ ೨೬ರಂದು ನಾನು ಅಮೆರಿಕಾದ ಕಾಂಟಿನೆಂಟಲ್ ಏರ್‌ಲೈನ್ಸ್‌ನಲ್ಲಿ ಕುಳಿತು ನ್ಯೂಯಾರ್ಕ್‌ಗೆ ಪಯಣ ಬೆಳೆಸಿದೆ. ದೆಹಲಿಯಿಂದ ಪಯಣ ಆರಂಭಿಸಿದಾಗ ರಾತ್ರಿ ೧೧ಗಂಟೆ. ನ್ಯೂಯಾರ್ಕ್ ತಲುಪಿದಾಗ ಅಲ್ಲಿ ಬೆಳಗಿನ ಜಾವ ೬ಗಂಟೆ. ಹೀಗೆ ನೋಡಿದರೆ ಒಟ್ಟು ಏಳು ಗಂಟೆಗಳ ಪಯಣ. ಆದರೆ ವಾಸ್ತವವಾಗಿ ದೆಹಲಿ ಬಿಟ್ಟು ನ್ಯೂಯಾರ್ಕ್ ತಲುಪಲು ೧೬ ಗಂಟೆಗಳು ಬೇಕು ಈ ನಡುವೆ ಸುಮಾರು ೯ ಗಂಟೆಗಳನ್ನು ಅಟ್ಲಾಂಟಿಕ್ ಸಮುದ್ರದ ಮೇಲಣ ನೀಲಾಕಾಶ ನಿರ್ದಯವಾಗಿ ನುಂಗಿ ಹಾಕಿತ್ತು.

ನ್ಯೂಯಾರ್ಕ್ ತಲುಪಿದಾಗ ಚುಮು ಚುಮು ಬೆಳಗು. ನನ್ನ ಹೆಸರು ಬರೆದು ಹಿಡಿದುಕೊಂಡಿದ್ದ ಜಾನ್ ’ಹಲೋ ಬಿಲಿ ಮಾಲ್’ ಎಂದು ತನ್ನ ಪರಿಚಯ ತಿಳಿಸಿ ಗುರುತು ಪತ್ರ ತೋರಿಸಿ, ನನ್ನನ್ನೂ ಎಳೆದುಕೊಂಡು  ಬ್ರಾಡ್‌ವೇಯತ್ತ ಕಾರು ತಿರುಗಿಸಿದ.

ಹೊರಗೆ ತುಂಬಾ ಚಳಿಯಿತ್ತು. ಈ ಚಳಿಗೆ ನಾನು ತಯಾರಾಗಿರಲಿಲ್ಲ. ಕಾರಣ ನ್ಯೂಯಾರ್ಕ್‌ನಲ್ಲಿದ್ದ ಗೆಳೆಯ ರಾಕೇಶ್ ’ಇಲ್ಲಿನ ಹವಾಮಾನ ತುಂಬಾ ಚೆನ್ನಾಗಿದೆ’ ಎಂದು ನನಗೆ ದೆಹಲಿಗೆ ತಿಳಿಸಿದ್ದ. ಒಂದೆರಡು ಡಿಗ್ರಿ ಸೆಂಟಿಗ್ರೇಡ್‌ನ ಹವಾಮಾನ ಆತನಿಗೇನೋ ಹಿತಕರವಾಗಿತ್ತು, ಯಾಕೆಂದರೆ ಆತ ಆಗಲೇ ಮೈನಸ್ ನಿಂದ ಪ್ಲಸ್ ಗೆ ಬಂದ ಖುಷಿಯಲ್ಲಿದ್ದ. ಆದರೆ ನನಗೋ ಅದು ವಿಪರೀತ ಚಳಿ. ಹೀಗೆ ಜಾನ್ ನೊಡನೆ ಹರಟುತ್ತಿದ್ದಾಗ ನಾನು ತಂಗಲು ವ್ಯವಸ್ಥೆ ಮಾಡಿದ್ದ ’ಹೋಟೆಲ್ ಮರಕೇಶ್’ ತಲುಪಿದ್ದೆವು. ಸುಮಾರು ೧೦ಗಂಟೆಗೆ ಮತ್ತೆ ಬರುವೆನೆಂದು ಹೇಳಿ, ಜಾನ್ ಥಟ್ಟನೆ ಮರೆಯಾದ.

೧೬ಗಂಟೆಯ ಪಯಣದ ಆಯಾಸವನ್ನು ಕಡಿಮೆ ಮಾಡಿಕೊಳ್ಳಲು ನೀರು ಕುಡಿಯೋಣ ಎಂದು ಯೋಚಿಸಿ ನೀರಿಗಾಗಿ ಹುಡುಕಿದರೆ ರೂಮಲ್ಲಿ ನೀರೆಲ್ಲೂ ದೊರಕಲಿಲ್ಲ. ಹೋಟೆಲಿನ ಸ್ವಾಗತ ಕಛೇರಿಯನ್ನು ವಿಚಾರಿಸಿದಾಗ, ’ಇಲ್ಲಿ ಹಾಗೆ ನೀರಿಡುವ ವ್ಯವಸ್ಥೆ ಇಲ್ಲವೆಂದೂ, ಬಾತ್‌ರೂಮಿನ ನೀರು ಕುಡಿಯಲು ಯೋಗ್ಯವಾದುದೆಂದೂ’ ಆತ ತಿಳಿಸಿದ. ಆತನ ಸಲಹೆ ನನಗೆ ಸಮ್ಮತವಾಗದಿದ್ದರೂ ಬೇರೆ ಉಪಾಯವಿಲ್ಲದೆ ಬಾತ್‌ರೂಮಿನ ನೀರು ಕುಡಿಯಲು ಅಭ್ಯಾಸ ಮಾಡಿಕೊಂಡೆ. ಅಮೆರಿಕನ್ನರು ದೆಹಲಿಗೆ ಬಂದಾಗ ಅವರಿಗೂ ಹಾಗೆ ಮಾಡಬೇಕೆಂದು ಒಂದು ಕ್ಷಣ ಅಂದುಕೊಂಡರೂ ನಮ್ಮ ಬಾತ್ ರೂಮಿನ ನೀರು ಕುಡಿದರೆ ಅದರಿಂದ ಉಂಟಾಗಬಹುದಾದ ಅಪಾಯಗಳನ್ನು ಊಹಿಸಿ ಆ ಯೋಚನೆಯನ್ನು ಅಲ್ಲಿಯೇ ಕೈಬಿಟ್ಟೆ.

೧೦ಗಂಟೆಗೆ ಸರಿಯಾಗಿ ಜಾನ್ ಮತ್ತು ರಾಕೇಶ್ ರೂಮು ತಲುಪಿದಾಗ ನಾನು ಪಯಣದಲ್ಲಿ ರಾತ್ರಿ ಮತ್ತು ಹಗಲುಗಳನ್ನು ಕಳಕೊಂಡ ಗಲಬಿಲಿಯಲ್ಲಿದ್ದೆ. ರಾಕೇಶ್ ಬೆಚ್ಚನೆಯ ಓವರ್ ಕೋಟೊಂದನ್ನು ಕೊಟ್ಟಾಗ ನನಗೂ ನಿವಾಳವೆನಿಸಿತು. ಹಾಗೂ ಹೀಗೂ ಸುಧಾರಿಸಿಕೊಂಡು ಅವರೊಡನೆ ಹೆಜ್ಜೆ ಹಾಕಿದೆ. ಬ್ರಾಡ್‌ವೇ ಸರಳ ಸುಂದರವಾಗಿ, ಮುಂಜಾವದ ಬೆಳಕಿಗೆ ತಣ್ಣಗೆ ತೆರೆದುಕೊಂಡಿತ್ತು. ಗೆಳೆಯ ರಾಕೇಶ್ ತನ್ನ ಮನೆಗೂ , ಇತರ ಅನೇಕ ಗೆಳೆಯರ ಮನೆಗೂ ಕರೆದೊಯ್ದ. ತಾನು ಕೆಲಸ ಮಾಡುತ್ತಿದ್ದ ಪ್ರಖ್ಯಾತ ಕೊಲಂಬಿಯಾ ವಿಶ್ವ ವಿದ್ಯಾಲಯವನ್ನು ಹೊರಗಿನಿಂದಲೇ ಪರಿಚಯಿಸಿದೆ. ನಾನು ಬೇಗ ಬೇಗ ನೋಡುವ ಕೆಲಸ ಮುಗಿಸಿ, ರೂಮಿಗೆ ಹಿಂದಿರುಗಿ ಮರುದಿನದ ಉಪನ್ಯಾಸಕ್ಕೆ ಮರು ಸಿದ್ಧತೆ ಮಾಡಿಕೊಳ್ಳಲು ಆರಂಭಿಸಿದೆ.

೨೮.೦೩.೨೦೧೧ರ ಪೂರ್ವಾಹ್ನ ೧೧.೩೦ಕ್ಕೆ ಕೊಲಂಬಿಯಾ ವಿಶ್ವವಿದ್ಯಾಲಯದ ಗ್ರಂಥಾಲಯದ ಪಕ್ಕದಲ್ಲಿರು ’ಏಷಿಯಾ ಅಧ್ಯಯನ ಕೇಂದ್ರ’ದಲ್ಲಿ ನನ್ನ ಉಪನ್ಯಾಸ ಏರ್ಪಾಟಾಗಿತ್ತು. ’ಮೌಖಿಕ ಚರಿತ್ರೆಯ ಮರು ನಿರೂಪಣೆ’ ಎಂಬುದು ನನ್ನ ಉಪನ್ಯಾಸದ ವಿಷಯ. ಹೇರಳವಾಗಿ ಲಭ್ಯವಿರುವ ಮೌಖಿಕ ನಿರೂಪಣೆಗಳನ್ನು ಆಧರಿಸಿ ದಕ್ಷಿಣ ಭಾರತದ ಚರಿತ್ರೆಯನ್ನು ಬರೆದರೆ. ಆ ಚರಿತ್ರೆಯ ಸ್ವರೂಪ ಹೇಗಿರುತ್ತದೆ, ಅಂಥ ಚರಿತ್ರೆಯನ್ನು ಬರೆಯಲು ನಾವು ಅನುಸರಿಸಬೇಕಾದ ವಿಧಾನಗಳೇನು? ಮತ್ತು ಈ ವಿಧಾನಗಳು ಹೇಗೆ ನಮ್ಮನ್ನು ನಿರ್ವಸಾಹತೀಕರಣದ ಕqಗೆ ಕೊಂಡೊಯ್ಯಬಲ್ಲವು’ ಎಂಬುದನ್ನು ನಾನು ವಿಶೇಷವಾಗಿ ಕುಮಾರರಾಮನ ಸುತ್ತ ಹುಟ್ಟಿಕೊಂಡ ನಿರೂಪಣೆಗಳನ್ನು ಆಧರಿಸಿ ವಾದಿಸಿದೆ. ದಕ್ಷಿಣ ಏಷಿಯಾದ ಬಗ್ಗೆ ಕೆಲಸ ಮಾಡುತ್ತಿದ್ದ ಸುಮಾರು ೯೦ಜನ ವಿದ್ವಾಂಸರಿದ್ದ ಆ ಸಭೆಯಲ್ಲಿ ವಿಷಯ ಮಂಡನೆಯಾದ ಆನಂತರ ಒಳ್ಳೆಯ ಚರ್ಚೆ ನಡೆಯಿತು. ೨೦೦೬ರ ನೋಬೆಲ್ ಪ್ರಶಸ್ತಿ ವಿಜೇತ ಒರಾನ್ ಪಮುಖ್ (ಅವರ ಕೃತಿ : ನನ್ನ ಹೆಸರು ಕೆಂಪು) ಸಭೆಯಲ್ಲಿ ಉಪಸ್ಥಿತರಿದ್ದು, ಆನಂತರ ಚರ್ಚೆಯಲ್ಲಿ ಪಾಲ್ಗೊಂಡಿದ್ದು ನನಗೆ ವಿಶೇಷ ಸಂತೋಷ ಕೊಟ್ಟಿತ್ತು. ಇಸ್ತಾಂಬುಲ್ ಮೂಲದ ಪಮುಖ್ ಅವರು ಭಾರತದ ಬಗ್ಗೆ ಒಳ್ಳೆಯ ತಿಳುವಳಿಕೆ ಹೊಂದಿರುವ ವಿದ್ವಾಂಸರಾಗಿದ್ದರು. ಉಪನ್ಯಾಸದ ಆನಂತರ ನಡೆದ ಔತಣ ಕೂಟದಲ್ಲಿ ಅನೇಕ ವಿದ್ವಾಂಸರ ಪರಿಚಯವಾಗಿತ್ತು.

ಆ ದಿನದ ಅಪರಾಹ್ನದ ಸಮಯವನ್ನು ಕೊಲಂಬಿಯಾ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಕಳೆದೆ. ಅಲ್ಲಿನ ದಕ್ಷಿಣ ಏಷಿಯಾ ವಿಭಾಗದಲ್ಲಿ ಭಾರತದ ಬಗ್ಗೆ ಅನೇಕ ಗೃಂಥಗಳಿದ್ದುವು. ತುಳುನಾಡಿನ ಬಗೆಗೂ ಕೆಲವು ಪುಸ್ತಕಗಳಿರುವುದನ್ನು ನೋಡಿ ಸಂತಸ ಪಟ್ಟೆ.

ಮರುದಿನ ಅಂದರೆ ೨೯.೦೩.೨೦೧೧ರ ಉಪನ್ಯಾಸವನ್ನು ನ್ಯೂಯಾರ್ಕ್ ವಿಶ್ವವಿದ್ಯಾಲಯದ ’ಪೂರ್ವ ಮತ್ತು ಮಧ್ಯ ಪ್ರಾಚ್ಯ ದೇಶಗಳ ಅಧ್ಯಯನ ವಿಭಾಗ’ದಲ್ಲಿ ಏರ್ಪಡಿಸಲಾಗಿತ್ತು. ಕೊಲಂಬಿಯಾದಲ್ಲಿದ್ದಂತೆ ಇಲ್ಲಿ ಭಾರತವನ್ನು ಚೆನ್ನಾಗಿ ತಿಳಿದಿದ್ದವರ ಸಂಖ್ಯೆ ಹೆಚ್ಚಿರಲಿಲ್ಲ. ಅಲ್ಲಿನ ಕಾರ್ಯಕ್ರಮದ ಸಂಯೋಜಕಿ ಡಾ. ಗೇಬ್ರಿಯಲಾ ಅವರು ಭಾರತದ ಬಗ್ಗೆ ಪೀಠಿಕಾ ರೂಪದ ಮಾತುಗಳನ್ನು ಸಂಕ್ಷಿಪ್ತವಾಗಿ ಹೇಳಿದ ಆನಂತರ ನಾನು ಉಪನ್ಯಾಸ ಆರಂಭಿಸಿದೆ. ’ಭಾರತದ ಜನಪರ ಧರ್ಮ’ ನನ್ನ ಉಪನ್ಯಾಸದ ವಿಷಯವಾಗಿತ್ತು. ’ಮೈಲಾರಲಿಂಗನಂಥ ದೈವವನ್ನು ಕೇಂದ್ರದಲ್ಲಿರಿಸಿ ನಾವು ನಡೆಸುವ ಚರ್ಚೆಗಳು ಭಾರತದ ಧಾರ್ಮಿಕ ವ್ಯವಸ್ಥೆಯ ಸಂಕೀರ್ಣತೆಯನ್ನು ಮತ್ತು ವೈವಿಧ್ಯವನ್ನು ಹೇಗೆ ಪ್ರತೀತಗೊಳಿಸಬಲ್ಲವು’ ಎಂಬುದನ್ನು ನಾನು ವಿವರಿಸಿ ಹೇಳಲು ಪ್ರಯತ್ನಿಸಿದೆ. ನಾನು ತೋರಿಸಿದ ವಿಡಿಯೋ ತುಣುಕುಗಳು ಅಲ್ಲಿನ ವಿದ್ವಾಂಸರಿಗೆ ತುಂಬ ಇಷ್ಟವಾದಂತಿತ್ತು. ವೆಸ್ಲಿಯಸ್ ವಿಶ್ವವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಪೀಟರ್ ಗೊಟ್ಚಾಕ್‌ರು ಚರ್ಚೆಯನ್ನು ತುಂಬ ಎತ್ತರಕ್ಕೆ ಕೊಂಡೊಯ್ದರು.

ಉಪನ್ಯಾಸ  ಮುಗಿಯುತ್ತಿದ್ದಂತೆ ಡಾ. ಗೇಬ್ರಿಯಲಾ ನಾನೂ ಸೇರಿದಂತೆ ಹತ್ತಾರು ಜನರನ್ನು ಭಾರತೀಯ ಹೋಟೆಲೊಂದಕ್ಕೆ ಕರೆದೊಯ್ದು ಒಳ್ಳೆಯ ಊಟ ಕೊಡಿಸಿದಳು. ಆನಂತರ ಒಂದು ನಿಮಿಷವೂ ವ್ಯರ್ಥ ಮಾಡದೆ ಸಬ್‌ವೇಯ ಮೂಲಕ ನ್ಯೂಯಾರ್ಕ್‌ನ ಪ್ರಖ್ಯಾತ ’ಮೆಟ್ರೋ ಪಾಲಿಟನ್ ಮ್ಯೂಸಿಯಂ’ಗೆ ಕರೆದೊಯ್ದಳು. ಬೃಹದಾಕಾರದ ಆ ಮ್ಯೂಸಿಯಂನಲ್ಲಿ ನನಗೆ  ಫ್ರೆಂಚ್ ಕಲಾಕೃತಿಗಳನ್ನು ಮತ್ತು ಆಫ್ರೀಕಾದ ಜನಪದ ದೈವಗಳ ವಿಭಾಗವನ್ನು ಮಾತ್ರ ನೋಡಲು ಸಾಧ್ಯವಾಯಿತು. ವಾಸ್ತವತಾವಾದಿಂದ ಅತಿವಾಸ್ತತಾವಾದದ ಕಡೆಗೆ ನಿಧಾನವಾಗಿ ಚಲಿಸಿದ ಫ್ರೆಂಚ್ ಕಲಾಕೃತಿಗಳನ್ನು ನೋಡುವುದು ಒಂದು ವಿಸ್ಮಯಕಾರೀ ಅನುಭವ.

ಮೂರನೇ ದಿನ ಅಂದರೆ ದಿನಾಂಕ ೩೦.೦೩.೨೦೧೧ರಂದು ನ್ಯೂಯಾರ್ಕ್ ಕೆಲವು ಪ್ರಮುಖ ಪ್ರದೇಶಗಳನ್ನು ನೋಡಲು ನನಗೆ ಸಾಧ್ಯವಾಯಿತು. ಅದರಲ್ಲಿ ಪ್ರಖ್ಯಾತವಾದ ಟೈಂ ಸ್ಕ್ವೇರ್, ಬ್ರೂಕ್‌ಲಿನ್ ಬ್ರಿಡ್ಜ್, ಲಿಬರ್ಟಿ ಸ್ಟ್ಯಾಚ್ಯೂ ಮತ್ತು ಒಸಾಮಾಬಿನ್ ಲಾಡೆನ್ ಕೆಡವಿದ ’ವಿಶ್ವ ವ್ಯಾಪಾರ ಕೇಂದ್ರ’ದ ಪಳಿಯುಳಿಕೆಗಳು ಬೇರೆ ಬೇರೆ ಕಾರಣಕ್ಕೆ ನನಗೆ ಮುಖ್ಯವೆಂಬಂತೆ ತೋರಿತು.

ಹವಾಯಿಯಲ್ಲಿ ನಾಲ್ಕು ದಿನ :

ದಿನಾಂಕ ೩೦ರ ರಾತ್ರಿ ನಾನು ನ್ಯೂಯೋರ್ಕನಿಂದ ಹವಾಯಿಗೆ ಹೊರಟೆ. ಮತ್ತೆ ಸುಮಾರು ೧೨ ಗಂಟೆಗಳ ಪಯಣದ ಆನಂತರ ಹೊನುಲುಲು ವಿಮಾನ ನಿಲ್ದಾಣದಲ್ಲಿ ಇಳಿದಾಗ ಇಡೀ ವಾತಾವರಣವೇ ಬದಲಾಗಿತ್ತು. ಚಳಿ ಕರಗಿ, ಹಿತವಾದ ವಾತಾವರಣ ಮೂಡಿತ್ತು. ಅಲ್ಲಿ ನನಗಾಗಿ ಕಾದು ನಿಂತಿದ್ದ ಫ್ರ್ಯಾಂಕ್ ಮತ್ತೆ  ’ಬಿಳಿ ಮಾಲ್’ ಎಂದು ಕೈಕುಲುಕಿ ಅಲ್ಲಿನ ಪ್ರಖ್ಯಾತ ’ಅಲ್ ಮೋನಾ’ ಹೋಟೆಲಿಗೆ ಕರೆದೊಯ್ದ. ಶಾಂತಸಾಗರದ ನಡುವೆ ಪ್ರಶಾಂತವಾಗಿರುವ ಹವಾಯಿ ದ್ವೀಪದ ಹೊನುಲುಲುವನ್ನು ಭೂಲೋಕದ ಸ್ವರ್ಗ ಎಂದೇ ಕರೆಯಬಹುದು. ಅಷ್ಟು ಸುಂದರವಾದ ಜಾಗವನ್ನು ನಾನು ಮತ್ತೆಲ್ಲೂ ನೋಡಿಲ್ಲ.

ಏಷಿಯಾದಲ್ಲಿ ಸಂಶೋಧನೆ ನಡೆಸುತ್ತಿರುವ ಸುಮಾರು ೧೫೦೦ಕ್ಕೂ ಹೆಚ್ಚು ವಿದ್ವಾಂಸರು ಹೊನುಲುಲುವಿನ ಪ್ರಖ್ಯಾತವಾದ ’ಹವಾಯಿ ಸೆಂಟರ್’ನಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಸಮಾವೇಶಕ್ಕಾಗಿ  ಒಟ್ಟು ಸೇರಿದ್ದರು. ಅದರಲ್ಲಿ ಬಹುತೇಕ ವಿದ್ವಾಂಸರು ಚೀನಾ, ಜಪಾನ್ ಮತ್ತು ಕೊರಿಯಾದ ಮೇಲೆ ಕೆಲಸ ಮಾಡುತ್ತಿರುವವರು. ದಕ್ಷಿಣ ಏಷಿಯಾದ ಮೇಲೆ ಕೆಲಸ ಮಾಡುತ್ತಿರುವವರ ಸಂಖ್ಯೆ ಬಹಳ ಕಡಿಮೆ ಇತ್ತು. ಅಯೋವಾ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಫಿಲಿಫ್ ಲುಟ್ಜೆಂಡಾರ್ಪ್ ಎಂಬವರ ಅಧ್ಯಕ್ಷತೆಯಲ್ಲಿ ನಡೆದ ಭಾರತ ಕುರಿತ ಗೋಷ್ಠಿಯುಲ್ಲಿ ನಾನು ಭಾಗವಹಿಸಬೇಕಾಗಿತ್ತು. ಅನೇಕ ಪಠ್ಯಗಳ ಆಧಾರದಿಂದ ಒಂದು ಅಧಿಕೃತ ಪಠ್ಯವನ್ನು ಕಟ್ಟುವ ಕಲೋನಿಯಲ್ ವಿಧಾನಗಳಿಂದ ಭಿನ್ನವಾಗಿ, ಒಂದು ಪಠ್ಯವು ಹಲವು ಪಠ್ಯಗಳಾಗಿ ಭಾರತದಲ್ಲಿ ಏಕೆ ಮರುಸೃಷ್ಟಿಯಾಗುತ್ತವೆ ಮತ್ತು ಇಡೀ ಭಾರತೀಯ ಸಮಾಜವೇ ಒಂದು ಪಠ್ಯವನ್ನು ಕಾಲಕಾಲಕ್ಕೆ ಹೇಗೆ ಬರೆದುಕೊಳ್ಳುತ್ತದೆ’  ಎಂದು ವಿವರಿಸಲು ನಾನು ಬಹಳ ಶ್ರಮಪಟ್ಟೆ. ಸುಮಾರು ಇಂಥದ್ದೇ ಚೌಕಟ್ಟಿನಲ್ಲಿ ಮಾತಾಡಿದ ಫಿಲಿಫ್ ಅವರು ಹನುಮಂತನ ಒಂದು ನೂರು ಚಿತ್ರಗಳನ್ನು ಪ್ರದರ್ಶಿಸಿಸಿ ಹನುಮಂತನ ವಿರಾಟ್ ಸ್ವರೂಪದ ಬಗ್ಗೆ ನಮಗೆಲ್ಲಾ ಮನಗಾಣಿಸಿದರು. ಸುಮಾರು ೨೫ ವರ್ಷಗಳ ಹಿಂದೆ ಉಡುಪಿಯಲ್ಲಿ ನಾನು ಕಂಡಿದ್ದ ಫ್ರಾಂಕ್ ಕೊರೋಮ್ ಮತ್ತೆ ಹೊನಲುಲುವಿನಲ್ಲಿ ಕಂಡಾಗ ತುಂಬಾ ಖುಷಿಯಾಗಿತ್ತು. ಉಡುಪಿ ಬಗ್ಗೆ ಮಾತಾಡಿದಾಗ ಕು.ಶಿ. ಹರಿದಾಸ ಭಟ್ಟರ ನೆನಪು ಅನೇಕ ಸಲ ಬಂದು ಹೋಯಿತು.

ಹೀಗೆ ಏಷಿಯಾ ಸಂಶೋಧಕರ  ಸಮಾವೇಶದಲ್ಲಿ ಭಾಗವಹಿಸುತ್ತಾ, ಆಗೀಗ ಅಲ್ಲಿಂದ ಹೊರಬಂದು ಹೊನುಲುಲು ಸುತ್ತುತ್ತಿದ್ದೆ. ಅದೊಂದು ಸುಂದರ ದ್ವೀಪ. ಅಲ್ಲಿ ನಾನು ನೋಡಿದ ಮುಖ್ಯ ಸ್ಥಳವೆಂದರೆ ’ಪರ್ಲ ಹಾರ್ಬರ್’.  ಎರಡನೇ ಮಹಾಯುದ್ಧದಲ್ಲಿ ಜಪಾನೀಯರು ನಾಶ ಮಾಡಿದ ಈ ಬಂದರಿನಲ್ಲಿ ಭಯಾನಕ ಯುದ್ಧದ ಅನೇಕ ನೆನಪುಗಳಿವೆ. ಉಳಿದಂತೆ ಇಲ್ಲಿದ್ದ ನಾಲ್ಕು ದಿನಗಳು ನಿಜಕ್ಕೂ ನನಗೆ ಅಗತ್ಯಬೇಕಾಗಿದ್ದ ವಿಶ್ರಾಂತಿ ನೀಡಿತ್ತು.

ಹೊನುಲುಲುವಿನಿಂದ ಟೆಕ್ಸಾಸ್‌ಗೆ ನಾನು ಹೋಗಬೇಕಾಗಿತ್ತು. ಆದರೆ ಅಲ್ಲಿಗೆ ನೇರ ವಿಮಾನ ಇರಲಿಲಲ್ಲವೆಂದು ತೋರುತ್ತದೆ. ಹಾಗಾಗಿ ಹ್ಯೂಸ್ಟನ್‌ಗೆ ಬಂದು, ಅಲ್ಲಿ ನಾಲ್ಕಾರು ಗಂಟೆ ಕಳೆದು ಟೆಕ್ಸಾಸ್ ತಲುಪಿದೆ. ’ಟೆಕ್ಸಾಸ್‌ನಲ್ಲಿ ಏಷಿಯನ್ನರಿಗೆ ಮರ್ಯಾದೆ ಕೊಡುವುದಿಲ್ಲ’ ಎಂದು ಯಾರೋ ಹೇಳಿದ್ದರಿಂದ ಸ್ವಲ್ಪ ಎಚ್ಚರದಿಂದಲೇ ಇದ್ದೆ. ಆದರೆ ನನ್ನ ಊಹೆಗೆ ವಿರುದ್ಧವಾಗಿ ದಿನಾಂಕ ೦೫.೦೪.೨೦೧೧ರಂದು ಟೆಕ್ಸಾಸ್ ವಿಮಾನ ನಿಲ್ದಾಣದಲ್ಲಿ ಇಳಿದಾಗ ನನ್ನನ್ನು ಕರೆದೊಯ್ಯಲು ಟೆಕ್ಸಾಸ್ ವಿವಿಯ ಪ್ರಾಧ್ಯಾಪಕ ಪ್ರೊ. ರೂಪರ್ಟ್‌ಸ್ನೆಲ್ ಮತ್ತು ಅವರ ಸಹೋದ್ಯೋಗಿ ಸಾರಾ ಗ್ರೀನ್ ಸ್ವತಃ ಬಂದಿದ್ದದು. ಅವರು ನನ್ನನ್ನು ಉಳಿಸಿದ ಹೋಟೆಲ್‌ನ ಹೆಸರು ’ಡಬಲ್‌ಟ್ರೀ’, ಅತ್ಯಾಧುನಿಕವಾದ ಆ ಹೋಟೆಲ್‌ನಲ್ಲಿ ಎಲ್ಲ ಸೌಕರ್ಯಗಳಿದ್ದುವು, ಕುಡಿಯುವ ನೀರಿನ ಹೊರತಾಗಿ. ಅಲ್ಲಿಯೂ ಬಾತ್‌ರೂಂ ನೀರು ಕುಡಿಯದೆ ಬೇರೆ ಹಾದಿಯಿರಲಿಲ್ಲ !

’ಯುಟಿ’ ಎಂದೇ ಪ್ರಖ್ಯಾತವಾದ ಯೂನಿವರ್ಸಿಟಿ ಆಫ್ ಟೆಕ್ಸಾಸ್‌ನಲ್ಲಿ ಅತ್ಯಂತ ಪ್ರಬಲವಾದ ದಕ್ಷಿಣ ಏಷಿಯಾ ಅಧ್ಯಯನ ವಿಭಾಗವಿದೆ. ದೇವನೂರು ಮಹಾದೇವ ಅವರ ಕುಸುಮಬಾಲೆಯನ್ನು ಇಂಗ್ಲಿಷಿಗೆ ಅನುವಾದಿಸಿದ ಜುಡಿತ್ ಕ್ರಾಲ್, ತಮಿಳು ಕಾವ್ಯಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ, ಈಗ ಆಧುನಿಕ ತಮಿಳು ಕತೆಗಳನ್ನು ಇಂಗ್ಲಿಷಿಗೆ ಅನುವಾದಿಸುತ್ತಿರುವ ಮಾರ್ತಾ ಸೆಲ್ಬೀ,  ಹಿಂದಿ ಪಠ್ಯ ಪುಸ್ತಕ ಬರೆದ ರೂಪರ್ಟ್ ಸ್ನೆಲ್, ಏಷಿಯಾದ ಕಲಾಚರಿತ್ರೆಯ ಬಗ್ಗೆ ಅಧಿಕೃತವಾಗಿ ಮಾತಾಡಬಲ್ಲ ಪ್ರೊ. ಜೆನಿಸ್ ಲಿಯೋಸ್ಕಿ ಮೊದಲಾದವರು ಅಲ್ಲಿರುವುದು ನನಗೆ ಗೊತ್ತಿತ್ತು. ಹಾಗಾಗಿ ಅಲ್ಲಿನ ಉಪನ್ಯಾಸಕ್ಕೆ ನಾನು ವಿಶೇಷ ತಯಾರಿ ಮಾಡಿಕೊಂಡಿದ್ದೆ. ದಿನಾಂಕ ೦೬.೦೪.೨೦೧೧ರಂದು ಅಪರಾಹ್ನ ೩ ಗಂಟೆಗೆ ನಿಗದಿಯಾದ ನನ್ನ ಉಪನ್ಯಾಸದ ವಿಷಯ ಕನ್ನಡ ಸಾಹಿತ್ಯದಲ್ಲಿ ರಾಮಾಯಣ ಪರಂಪರೆ.  ಜೈನ ರಾಮಾಯಣಗಳಿಂದ ಆರಂಭವಾದ ಕನ್ನಡ ರಾಮಾಯಣಗಳ ಪಠ್ಯ ಕೇಂದ್ರಿತ ಪರಂಪರೆಯು ( ಓದುಗರನ್ನು ಗಮನಿಸಿ ಬರೆಯಲಾದ) ಮಧ್ಯಕಾಲೀನ ಕರ್ನಾಟಕದಲ್ಲಿ ’ತೊರವೆ ರಾಮಾಯಣ’ ದಂತಹ ಕೃತಿಗಳ  ’ಗಮಕಪರಂಪರೆ”ಗೆ ( ಕೇಳುಗ ಕೇಂದ್ರಿತ ಬರೆಹಗಳು) ತಿರುಗಿಕೊಂಡು ಮುಂದೆ ೧೮-೧೯ನೇ ಶತಮಾನದಲ್ಲಿ ಪಾರ್ತಿಸುಬ್ಬನಂತಹ ಪ್ರತಿಭಾನ್ವಿತ ಕವಿಯ ಮೂಲಕ ಯಕ್ಷಗಾನದಂತಹ ಪ್ರದರ್ಶನ ಪರಂಪರೆಗೆ ( ನೋಡುಗ ಕೇಂದ್ರಿತ)  ಒಲಿದುಕೊಂಡು ಕಾಲ ಕಾಲಕ್ಕೆ ವಿಸ್ತಾರವಾಗಿ ಬೆಳೆದು ಬಂದ ಪರಿಯನ್ನು ನಾನು ಸೂಕ್ಷ್ಮವಾಗಿ ವಿವರಿಸಿದೆ. ಗಮಕದ ಒಂದು ಮಾದರಿಯನ್ನು ಕೇಳಿಸಿದೆ. ಪಂಚವಟಿ ಪ್ರಸಂಗದ ಒಂದು ಭಾಗವನ್ನು (ವಿಡಿಯೋ) ತೋರಿಸಿದೆ. ಸೇರಿದ ಸುಮಾರು ೧೫೦ಜನ ವಿದ್ವಾಂಸರು ವಿಶೇಷ ಆಸಕ್ತಿಯಿಂದ ನಾನು ಹೇಳಿದ್ದನ್ನು ಕೇಳಿಸಿಕೊಂಡದ್ದು ನನಗೂ ತೃಪ್ತಿ ನೀಡಿತು. ಉಪನ್ಯಾಸದ ದಿನದ ರಾತ್ರಿ ಊಟವನ್ನು ಯುಟಿಯ ದಕ್ಷಿಣ ಏಷಿಯಾ ವಿಭಾಗದವರು ಆಯೋಜಿಸಿದ್ದರು. ರಾತ್ರಿ ಊಟ ಅನೇಕರನ್ನು ಪರಿಚಯಿಸಿತು, ಹತ್ತಿರಕ್ಕೆ ತಂದಿತು.

ಮರುದಿನ ಅಂದರೆ ೦೮.೦೪.೨೦೧೧ರಂದು ಪೂರ್ವಾಹ್ನವನ್ನು ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಕಳೆದೆ. ಈ ಗ್ರಂಥಾಲಯದಲ್ಲಿ ನನ್ನ ’ಕರಾವಳಿ ಜಾನಪದ’ವೂ ಸೇರಿದಂತೆ ಅನೇಕ ಕನ್ನಡ ಕೃತಿಗಳಿವೆ, ಶಿವರಾಮ ಕಾರಂತರ ಎಲ್ಲ ಕಾದಂಬರಿಗಳಿವೆ. ಆ ದಿನ ಅಪರಾಹ್ನ ಅಲ್ಲಿನ ಗೆಳೆಯರೊಂದಿಗೆ ಟೆಕ್ಸಾಸ್ ಸುತ್ತಿದೆ. ಸುಮಾರಾಗಿ ನಮ್ಮ ಮೈಸೂರಿನಂತಿರುವ ಟೆಕ್ಸಾಸ್ ನನಗೆ ತುಂಬಾ ಹಿಡಿಸಿತು. ಇಲ್ಲಿನ ಜನ ವಿದ್ವತ್ ಪ್ರಿಯರು ಮತ್ತು ಸ್ನೇಹಶೀಲರು.

ಪೂರ್ವಯೋಜನೆಯಂತೆ, ದಿನಾಂಕ ೦೯.೦೪.೨೦೧೧ರಂದು ಟೆಕ್ಸಾಸ್ ಬಿಟ್ಟು, ನ್ಯೂಯೋರ್ಕ ಮೂಲಕ ಪಯಣಿಸಿ, ಮರುದಿನ ರಾತ್ರಿ ದೆಹಲಿ ತಲುಪಿದಾಗ ಆಯಾಸಗೊಂಡಿದ್ದೆ. ಆದರೆ ಈ ಶೈಕ್ಷಣಿಕ ಪ್ರವಾಸ ಆಂತರಿಕವಾಗಿ ಒಂದು ಬಗೆಯ ಸಂತೋಷವನ್ನು ಕೊಟ್ಟಿತ್ತು. ಇದಾವುದರ ಪರಿವೆಯೇ ಇಲ್ಲದ ನನ್ನ ನಿಡುಗಾಲದ ಸ್ನೇಹಿತ ಡಯಾಬೆಟಿಸ್, ತನ್ನ ಇರವನ್ನು ತೋರಿಸಲು ಕಾತರದಿಂದ ಸಜ್ಜಾಗಿದ್ದ. ಕೆಲಕಾಲ ಆತನನ್ನು ಬೇಕೆಂತಲೇ ಮರೆತುಬಿಟ್ಟಿದ್ದ ನಾನು ಕೂಡಾ ಎಚ್ಚರಗೊಂಡೆ.