Showing posts with label Poem. Show all posts
Showing posts with label Poem. Show all posts

Tuesday, March 19, 2013

ದಾರಿಗಳು


ದಾರಿಗಳು

           ಹೆಜ್ಜೆ ಹಾಕುತ್ತಿದ್ದೆ 
           ಅದೇ ದಾರಿಹೋಕರೊಂದಿಗೆ 
           ಅದು ಅಂದು ತಿಳಿದಿದ್ದ 
           ನೇರ ದಾರಿ                          
     
          ದಾರಿಹೋಕರ ಒಂದು ದಂಡು                      
          ಬೇರೆ ದಾರಿ ಹಿಡಿದಿತ್ತು 
          ತಡವಾದರೂ ತಲುಪುವ 
          ಡೊಂಕಾದ ದಾರಿ 

          ನೇರ ದಾರಿಯಿಂದ ಬೇರ್ಪಟ್ಟು 
          ಜಾಣರು ಕೆಲವರು 
          ಕಂಡಿದ್ದು ಕಿರಿದಾದ 
          ಒಳ ದಾರಿ 

          ನೇರ ದಾರಿ 
          ಡೊಂಕಾದ ದಾರಿ 
          ಒಳ ದಾರಿ 
          ಈ ಎಲ್ಲವ ಬಿಟ್ಟು 
          ಮಾಡಿಕೊಂಡೆ 
          ಹೊಸ ದಾರಿ 

        ಅಬ್ಬಾ ...!
        ನಾ ಹಿಡಿದ ದಾರಿಯ ತುಂಬಾ 
        ಬೆಂಬೆತ್ತಿ ಬಂದಿದೆ 
        ಜೈಕಾರವ ಕೂಗಿ ದಂಡು 

        ಸರಿದು ಬದಿಗೆ ನಿಲ್ಲಲೇ 
        ಮುಂದೆ ನಡೆ ನಡೆದು 
        ನಿನ್ನ ಕದವ ತಟ್ಟಲೇ ?

                              - ಅವನೀಂದ್ರನಾಥ್ ರಾವ್  

Friday, December 21, 2012

ಎಚ್. ಎಸ್. ಶಿವಪ್ರಕಾಶ್ ಅವರ ಕವನ ಸಂಕಲನ ’ಮಬ್ಬಿನ ಹಾಗೆ ಕಣಿವೆಯಾಸಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ


ಕನ್ನಡದ ಹೆಸರಾಂತ ಕವಿ ನಾಟಕಕಾರ ಚಿಂತಕ ಎಚ್.ಎಸ್.ಶಿವಪ್ರಕಾಶ್ ಅವರ 'ಮಬ್ಬಿನ ಹಾಗೆ ಕಣಿವೆಯಾಸೆ' ಕಾವ್ಯ ಕೃತಿಗೆ 2012ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಎಚ್.ಎಸ್.ಶಿವಪ್ರಕಾಶ್

ಈ ಬಾರಿ ಅಕಾಡೆಮಿಯ ಪ್ರಶಸ್ತಿ ಗಳಿಸಿರುವ ಕೃತಿಗಳ ಪೈಕಿ ಹನ್ನೆರಡು ಕಾವ್ಯ ಕೃತಿಗಳು, ಆರು ಸಣ್ಣ ಕಥಾ ಸಂಕಲನಗಳು, ನಾಲ್ಕು ಕಾದಂಬರಿಗಳು, ಒಂದು ಆತ್ಮಕತೆ, ಒಂದು ವಿಮರ್ಶನಾ ಕೃತಿ ಸೇರಿದೆ. 2008ರ ಜನವರಿ ಮತ್ತು 2010ರ ಡಿಸೆಂಬರ್ 31ರ ಮೂರು ವರ್ಷಗಳ ಅವಧಿಯಲ್ಲಿ ಪ್ರಥಮ ಬಾರಿಗೆ ಪ್ರಕಟವಾದ ಕತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.
ತಾಮ್ರಪತ್ರ, ಶಾಲು ಹಾಗೂ ಒಂದು ಲಕ್ಷ ರುಪಾಯಿ ಮೊತ್ತದ ಚೆಕ್‌ನ್ನು ಒಳಗೊಂಡ ಪ್ರಶಸ್ತಿಗಳನ್ನು ಮುಂಬರುವ ಫೆಬ್ರವರಿ 18ರಂದು ಇಲ್ಲಿ ನಡೆಯಲಿರುವ ಸಾಹಿತ್ಯಅಕಾಡೆಮಿಯ ಅಕ್ಷರ ಹಬ್ಬದ ಸಂದರ್ಭದಲ್ಲಿ ನೀಡಲಾಗುವುದು.
ಇದೇ ಸಾಲಿನ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರವನ್ನು ಗಳಿಸಿರುವ ಕನ್ನಡದ ಮತ್ತೊಂದು ಕವಿತಾ ಸಂಗ್ರಹ ಆರಿಫ್ ರಾಜಾ ಅವರ 'ಜಂಗಮ ಫಕೀರನ ಜೋಳಿಗೆ' ತಕಳಿ ಶಿವಶಂಕರ ಪಿಳ್ಳೆ ಅವರ ಪ್ರಸಿದ್ಧ ಮಲೆಯಾಳಂ ಕಾದಂಬರಿ 'ಕಯರ್'ನ ಕನ್ನಡ ಅನುವಾದ 'ಹಗ್ಗ' ಕತಿ 2012ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪಾತ್ರವಾಗಿದೆ.

Friday, November 2, 2012

ಮಿ೦ಚ್ಚುಳಿಯ ಹೆಮ್ಮೆ

ನಾನೊ೦ದು ಮಿ೦ಚ್ಚುಳಿ ನನ್ನ ಮೈಬಣ್ಣ ಬಲು ಅ೦ದ!

ಮೀನ ಬೇಟೆಯಲಿ, ಮಿ೦ಚಿನ ವೇಗ ಮೀರಿಸಿದವರಿಲ್ಲ
ನನ್ನ ಹಿರಿಮೆಗೆ ಸಾಟಿ ಇನ್ಯಾರು ಇಲ್ಲ!!

ಸುತ್ತ ಮುತ್ತ ಸುಡು ಬೆಟ್ಟ ಬೋಳು-ಬೋಳು
ನೀರೊಳಗೆ ನೋಡಲು ನನ್ನ ಬೆದರುವವು ಮೀನುಗಳು..

ಬಣ್ಣ ಬಣ್ಣ ಎಷ್ಟೊ೦ದು ಬಣ್ಣ,
ನೀಲ,ಪಚ್ಚೆ ಹಳದಿ ಎಲ್ಲವೂ ನನ್ನ ಮೈಬಣ್ಣ.

ಅರಗಿಣಿಯದೇನು೦ಟು ಎಲೆಗಳದೆ ಬಣ್ಣ.
ಕೊ೦ಕು ಮೂಗಿಗೊ೦ದು ಕೆ೦ಪು ಸುಣ್ಣ!!

ನದಿ ಬೆಟ್ಟ ಬಯಲ ಸುತ್ತರುಳುವ ಹೂ ನನ ಮೇಲ್ಹೋದಿಕೆ,
ನಲಿಯದವರು೦ಟೆ ನನ್ನ ಕ೦ಡು!

ಹಸಿವಾಯಿತೆನಗೆ ಹದಿಹಾದೇನು
ಕೆರೆಯೊಳಕ್ಕೆ ದುಮ್ಮುಕ್ಕಿ
ಕ೦ದೆನೊ೦ದು ಮೀನ!

ಥಳ-ಥಳ ಹೊಳೆಯುವ ಹವಳದ ಬಣ್ಣ
ಅದರ ಸುತ್ತ ಹರಿಯುವ ನೀರೆಲ್ಲಾ ಚಿನ್ನ
ನುಸುಳಿ, ನೀರೊಳಗೆ ಮಾಯಾವಾಯಿತು ನಾಚಿಸುವ೦ತೆ ನನ್ನ!!

ಮೇಲ್ಲೆದು ಬ೦ದೆ, ಮೀನಿಲ್ಲದೆ ನಾ
ಸುತ್ತೆಲ್ಲ ನೋಡಿದೆ, ಇತ್ತಲ್ಲಿ ಅದೇ ಬೋಳು ಗುಡ್ಡೆ..
ಮೀನಾಗ ಬಾರದಿತ್ತೆ ಎ೦ದೆನುತ್ತಾ ನಾ ಮರುಕ ಪಟ್ಟೆ!

ಆದರೂ ಹಸಿವೆಯ ನ೦ದಿಸಲಿಲ್ಲ , ನನ್ನ ಬೆಸರದ ಬವಣೆ,
ಇನ್ನೇನ ಮಾಡಲಿ ಮೀನಾಗಲಾರೆ! ಎ೦ದೆನುತ್ತಾ,
ಸವಿದೆ ನಾ ಹಿಡಿದು ತ೦ದು ಬೆಳ್ಳಿಯಾ ಮೀನ..

ನಾನೊ೦ದು ಮಿ೦ಚ್ಚುಳಿ ನನ್ನ ಮೈಬಣ್ಣವೇ ಚ೦ದ!

- ಲಿವ್ಯಾ ಕುಕುನೂರು

Saturday, September 1, 2012

Pratibha Nanda Kumar, Avanindranath Rao. at Bharatiya Kavita Bimb

Hindi Academy, Delhi under the aegis of Department of Art, Culture and Languages, Delhi Government is organising Bharatiya Kavita Bimb at Bharatiya Vidya Bhavan, New Delhi on September 6 and 7, 2012. 
Nand Bharadwaj will inaugurate the programme. Dr. Vimalesh Kanti Verma, Vice Chairman of Hindi Academy will preside over. 
Poets from Hindi, English, Urdu, Telugu, Punjabi, Bengali Rajasthani, Nepali, Kannada, Gujarati, Tamil, Marati, Sindhi, Odiya, Kashmiri and Malayalam languages will participate in the poet meet.
Kannada is represented by Pratibha Nanda Kumar and Avanindranath Rao. 



Wednesday, August 15, 2012

ಕವನ: ವಾಸ್ತವ


ರೆಕ್ಕೆ ಬಿಚ್ಚಿದೆ ಎನ ಮನದ ಹಕ್ಕಿ
ಹಾರುತ್ತಿದೆ ಕನಸಿನ ಲೋಕದಲ್ಲಿ

ತ೦ಗಾಳಿ ತ೦ಪಲ್ಲಿ
ತಾಪವಿಲ್ಲದ ತಾಣದಲಿ
ತಲ್ಲಣಪಡಿಸದ ಎಳೆ ಬಿಸಿಲಿನಲಿ
ಹಾರಿದೆ ಎನ ಮನಸ್ಸಿನ ಹಕ್ಕಿ ರೆಕ್ಕೆ ಬಲಿಯುತ್ತಿದ್ದ ಹಕ್ಕಿ

ನೀಲಿಬೆಟ್ಟಗಳ ದಾಟುತ್ತಾ
ನೀಲಿ ಕಡಲ ಮೇಲೆ ಹಾರುತ್ತಾ
ಗಗನವ ಮುಟ್ಟುತ್ತಾ
ಹಾರಿದೆ ಎನ ಮನದ ಹಕ್ಕಿ
ಎನ ಮನದ ಹಕ್ಕಿ ರೆಕ್ಕೆ ಬಲಿಯುತ್ತಿದ್ದ ಹಕ್ಕಿ

ಕಡಲದಕ್ಕೆ ಕೆರೆಯಾಯಿತು
ಬೆಟ್ಟ ಮ೦ದಿರದ೦ತೆ ಭಾಸವಾಯಿತು
ಗಗನ ಆ ಪುಟ್ಟ ಮ೦ದಿರದ ಉಪ್ಪರಿಗೆಯಾಯಿತು
ಹೀಗೆ ಸ೦ತಸದಿ ಹಾರಿದೆ
ಎನ ಮನದ ಹಕ್ಕಿ ರೆಕ್ಕೆ ಬಲಿಯುತ್ತಿದ್ದ ಹಕ್ಕಿ

ಜೀವನಾಮೃತವ ತೊರೆದು
ಅಮೃತವನ್ನೆ ಕುದಿಯಿತು
ತನಗಾರು ಸಾಟಿ ಎ೦ದು ಮೆರೆಯಿತು, ಮುನ್ನುಗ್ಗಿತು
ಎನ ಮನದ ಹಕ್ಕಿ
ಎನ ಮನದ ಹಕ್ಕಿ ರೆಕ್ಕೆ ಬಲಿತ ಹಕ್ಕಿ

ಜವ್ವನ ಕಳೆಯಿತು
ಜೀವನದ ವಾಸ್ತವಕ್ಕೆ ಮತ್ತೆ ಬರಲು ಇಚ್ಚಿಸಿತು
ಆಯಿತು ಎಲ್ಲಾ ಅದಲು ಬದಲು
ಮರುಗಿತು ಎನ ಮನದ ಹಕ್ಕಿ
ಎನ ಮನದ ಹಕ್ಕಿ ರೆಕ್ಕೆ ಬಲಿತ ಹಕ್ಕಿ

ತ೦ಗಾಳಿ ಬಿರುಗಾಳಿಯಾಯಿತು
ಎಳೆ ಬಿಸಿಲು ನಡುಮಧ್ಯಾಹ್ನದ ಬಿಸಿಲಾಯಿತು
ತಾಪದಲ್ಲಿ ತಲ್ಲಣಪಟ್ಟಿತು
ಕನಸ್ಸಿನ ಲೋಕವ ನೆನೆದು ಮರುಗಿತು
ಎನ ಮನದ ಹಕ್ಕಿ ಮುದಿಯ ಹಕ್ಕಿ
ಪುಟ್ಟ ಪುಟ್ಟ ನೀಲಿ ಬೆಟ್ಟ ಬೆಳೆದು ಹಸಿರಾಯಿತು
ಕೆರೆ ದಾಟಲಾಗದ ಕದಲಾಯಿತು
ಗಗನ ಮುಟ್ಟಲಾಗದ ಪರದೆಯಾಯಿತು
ಹೀಗೆ ಚಿ೦ತೆಯಲಿ ಬೆ೦ದಿತು
ಎನ ಮನದ ಹಕ್ಕಿ ಮುದಿಯ ಹಕ್ಕಿ

ಜೀವನಾಮೃತವ ತ್ಯಜಿಸಿದ ಹಕ್ಕಿಗೆ 
ಮತ್ತೆ ಅದು ಬೇಕೆನಿಸಿದಾಗ ಸಿಗದೆ ಹೋಯಿತು
ಹೀಗೆ ಮರುಗಿ ಮರುಗಿ ಮತ್ತಷ್ಟು ಮುದಿಯಾಯಿತು
ಎನ ಮನದ ಹಕ್ಕಿ
ಎನ ಮನದ ಹಕ್ಕಿ ವಾಸ್ತವ ಅರಿತ ಹಕ್ಕಿ


ಲಿವ್ಯಾ ಕುಕುನೂರು

Thursday, March 29, 2012

ಹಾಲು ಮತ್ತು ಬಿಳಿಯ ನೀರು


ಕಹಿ ಸತ್ಯಗಳು ಕಹಿಯೇ
ಸಿಹಿಯ ಜೇನಲ್ಲ
ಬರಬಹುದು ಬೇರೆ ಹೆಸರಲ್ಲಿ
ಒಪ್ಪಿಕೊಳಲು ಅಂಜಿಕೆಯೇ

ಅವಳ ಅರ್ಥಹೀನ
ಪ್ರಲಾಪಗಳ ಗುನುಗುನಿಸುವ
ನಿನ್ನ ಅವತಾರಗಳ ಕಂಡು...

ಎಲೇ ಮೊಹಿತನೇ
ಇಲ್ಲಿ ನಿನ್ನ ಸದ್ಗುಣಗಳ ಬಲ್ಲ
ಗೆಳೆಯರು ಬಗೆ ನೂರಾಗಿ
ನಗುತಿಹರು

ಬಿಳಿಯಿರುವ ನೀರೆಲ್ಲ
ಹಾಲಲ್ಲ ಹುಡುಗ
ಬಿಳಿಚಿಕೊಂಡ ಮುಖದಲ್ಲಿ
ಬರಿಯ ಮೇಕಪ್ಪು
 
-ವೈ.ಅವನೀಂದ್ರನಾಥ್ ರಾವ್

Tuesday, November 1, 2011

ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು


ಬಳಸಿ ಬಂದೆನು ಸುತ್ತ ಕನ್ನಡದ ನಾಡುಗಳ ಸಿರಿಯ ನೋಡುತ್ತ,
ತಾಯಡಿಯ ಹುಡಿಯ ತಲೆಗಾನುತ್ತ, ಹರಕೆಯ ಪವಿತ್ರ ಯಾತ್ರೆಯಲಿ
ಏನು ಚೆಲಿವಿನ ನಾಡು! ಚೆಲುವು ಚೆಲ್ಲುವ ನಾಡು! ಕನ್ನಡದ ನಾಡು
ಏನು ಚಿನ್ನದ ನಾಡು! ನಮ್ಮೊಲುಮೆಯಾ ನಾಡು! ನಮ್ಮಿನಿಯ ನಾಡು!
ಕಾವೇರಿಯಿಂದಮಾ ಗೋದಾವರಿಯ ವರೆಗೆ ಚಾಚಿರುವ ನಾಡು!
ಬಳಸಿದೆನು, ಸುತ್ತಿದೆನು,ಕಣ್ದಣಿಯೆ ನೋಡಿದೆನು, ಕುಣಿದು ಹಾಡಿದೆನು:
 - ಬಿಎಂಶ್ರೀ ಅವರ ಕನ್ನಡ ತಾಯ ನೋಟ ಕವನದಿಂದ

ವಿಶ್ವದೆಲ್ಲೆಡೆ ಹಬ್ಬಿರುವ ಕನ್ನಡದ ಮನಸ್ಸುಗಳಿಗೆ ಕರ್ನಾಟಕ ರಾಜ್ಯೋತ್ಸವದ 
ಹಾರ್ದಿಕ ಶುಭಾಶಯಗಳು.

Sunday, February 13, 2011

ರಾಧೆಯ ಸ್ವಗತ

ವ್ಯಾಲೆಂಟೈನ್ಸ್ ದಿನದ ಪ್ರೇಮಿಗಳ ಹಬ್ಬಕ್ಕೆ ಮುನ್ನುಡಿಯಾಗಿ ಈ ದಿನ ಬೆಳಕಿನ ಪಾದ ಕವನ ಸಂಕಲನದಿಂದ ಎರಡು ಕವನಗಳು. ಕೆಂಪುಕೋಟೆಯಲ್ಲಿ  ಅತ್ಯಂತ ಪ್ರೇಮಮಯ ಬರಹಕ್ಕಾಗಿ  ವ್ಯಾಲೆಂಟೈನ್ಸ್ ದಿನಕ್ಕೆ ಕಾಯೋಣ. 












ರಾಧೆಯ ಸ್ವಗತ


ರಾಧೆ ನಾನು
ಕಾಯುತ್ತಿದ್ದೇನೆ
ಯಮುನೆಯ ದಂಡೆಯಲ್ಲಿ
ಕೃಷ್ಣ ಬರುವನೆಂದು


ಮುಸ್ಸಂಜೆಯ ಮಂಜಿಗೆ
ಬಿರಿದ ಮಲ್ಲಿಗೆಯಾಗಿ
ಕೊಳಲಿನ ಇಂಚರದ
ಸವಿಯ ಮೆಲ್ಲಲು


ಅವನ ನೆನಪು
ತುಂಬಿ ಕೊಂಡಿದೆ
ಬಿಗಿದುಕೊಂಡ
ನನ್ನೆದೆಯೊಳಗೆ


ಕಾದಿದ್ದೇನೆ ಅವನಿಗಾಗಿ
ಬೆಣ್ಣೆಯಂತೆ ಕರಗಲು
ಎಲ್ಲಿ ಅಡಗಿದ
ಕಳ್ಳ ಅವನು


ಬಾನಿನಲ್ಲಿ ಬೆಳ್ಳಿ ಚುಕ್ಕಿ
ಕಣ್ಣಿನಲ್ಲಿ ಕಾತರ
ಬಂದೇ ಬರುವನು
ಯಾಕೆ ಆತುರ


ಅಂದಾಗಲೇ ಬಂದನಿಲ್ಲಿ
ಕತ್ತಲೊಳಗಿಂದ
ಕನಸಿನ ಲೋಕದಿಂದ
ನನ್ನ ಶ್ಯಾಮ, ನನ್ನ ಕೃಷ್ಣ.


ಕಾಮ ರತಿ


ನನ್ನ ಬತ್ತಳಿಕೆಯಲ್ಲಿರುವುದು
ಹೂವಿನ ಬಾಣ
ನಾನು ಮನ್ಮಥ, ಕಾಮ
ನೀನು ರತಿ


ನಿನ್ನ ಗರ್ಭದೊಳಗೆ
ನನ್ನ ಹೂವಿನ ಮೊಗ್ಗು
ಅರಳಿ ಬಿರಿಯಲಿ
ಕಾಮರತಿಯ ಸುಖವನ್ನುಂಡು


ನನ್ನೆದೆಯೊಳಗಿರುವುದು
ನೀನೊಬ್ಬಳಿಗೇ ಕಾಯ್ದಿರಿಸಿದ
ಪ್ರೀತಿ, ಪ್ರೇಮ, ಮೋಹ
ಬಯಕೆ, ಕಾಮ


ಎಲ್ಲವನ್ನುಂಡು ತೇಗು ಬಾ
ನನ್ನ ರತಿ
ಬರಿದಾಗದಿರಲಿ ನನ್ನ
ಹೂಬಾಣದ ಬತ್ತಳಿಕೆ.

ಕೆಂಪುಕೋಟೆ

Tuesday, February 8, 2011

ತೆಲುಗಿನ ಎರಡು ಕವನಗಳು ಕನ್ನಡದಲ್ಲಿ

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ವಿಜೇತ ಪ್ರೊ. ಎನ್. ಗೋಪಿ (1948) ತೆಲುಗಿನ ಅತಿ ಮಹತ್ವದ ಹಾಗೂ ಪ್ರಭಾವಶಾಲಿ ಕವಿಗಳಲ್ಲೊಬ್ಬರು. ಕವನ ಸಂಕಲನಗಳೊಂದಿಗೆ ಅವರು ವಿಮರ್ಶೆ, ಪ್ರವಾಸ ಕಥನ, ಸಂಶೋಧನೆ ಮತ್ತು ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ಶ್ರೀ ಪೊಟ್ಟಿ ರಾಮುಲು ತೆಲುಗು ವಿಶ್ವವಿದ್ಯಾಲಯ ಹೈದರಾಬಾದ್, ಕಾಕತೀಯ ವಿಶ್ವವಿದ್ಯಾಲಯ ವಾರಂಗಲ್, ದ್ರಾವಿಡ ವಿಶ್ವವಿದ್ಯಾಲಯ ಕುಪ್ಪಂ ಗಳ ಉಪಕುಲಪತಿಯಾಗಿ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದ ಆರ್ಟ್ ಫ್ಯಾಕಲ್ಟಿಯ ಡೀನ್ ಆಗಿಯೂ ಕಾರ್ಯನಿರ್ವಹಿಸಿರುವರು.
ಪ್ರೊ  ಗೋಪಿಯವರ ಅಕ್ಷರಾಲ್ಲೋ ದಗ್ದಮೈ ... ಕವನ ಸಂಕಲನದ ಕವನಗಳನ್ನು ಕನ್ನಡಕ್ಕೆ ತರುವ ಕಾರ್ಯವನ್ನು ಕೃಷ್ಣಮೂರ್ತಿ ಕಲುಮಂಗಿ ಅವರು ಮಾಡುತ್ತಿದ್ದಾರೆ. ಅನುವಾದಗೊಂಡ ಎರಡು ಕವನಗಳು ಕೆಂಪುಕೋಟೆಯ ಓದುಗರಿಗೆ.

ಸ್ವಂತ

ಚಿಗುರೇ
ನೀ ಕುಡಿಯೊಡೆದರೆ
ಮರವು ನಿನದಾಗುವುದು


ಹೂವೇ
ನೀ ಬಿರಿದಾಗ
ತೋಟವು ನಿನದಾಗುವುದು


ಹನಿಯೇ
ನೀ ಸುರಿದಾಗ
ಮಣ್ಣು ನಿನದಾಗುವುದು


ಎಷ್ಟು ಸಾರಿ ದೃಷ್ಟಿಸಿದರೂ
ಆಗಸವು ಕಿರಿದಾಗದು
ಎಷ್ಟು ಬಾರಿ ಉತ್ತಿದರೂ
ಭೂಮಿಯು ಬರಿದಾಗದು


ಮುಖವೇ
ನೀ ನಕ್ಕಾಗ
ಕಾಂತಿಯು ನಿನದಾಗುವುದು


ಮನುಜನೇ
ನೀ ಕೊಟ್ಟಾಗ
ಶಾಂತಿಯು ನಿನದಾಗುವುದು



ಸೃಷ್ಟಿ

ಬಿಡಿಸಬೇಕು ಚಕ್ಕೆಯಲಿ ಬಂಧಿಯಾಗಿರುವ ಪೆನ್ಸಿಲನು
ಥಳ ಥಳಿಸುವ ಸಾವಿರಾರು ಕಪ್ಪು
ಅಕ್ಷರಗಳನು ಅಡಗಿಸಿಕೊಂಡಿರುವ ಕಡ್ಡಿಯನು
ಮೊನಚುಗೊಳಿಸಿ ಬಿಡಬೇಕು

ಪೆನ್ಸಿಲನು ಹೊರಗೆ ತರ ಬೇಕೆಂದರೆ
ಚಕ್ಕೆಯನು ಗಾಯಗೊಳಿಸಬೇಕು
ಸಿಪ್ಪೆ ಸಿಪ್ಪೆಗಳಾಗಿ ಹೆರೆದು
ಬಾಧೆ ಪಡಿಸಬೇಕು

ಅಥವಾ ಶಾರ್ಪನರ್ ಎಂಬ ಸುರಂಗದೊಳಗೆ
ಚಿತ್ರಹಿಂಸೆಗೀಡು ಮಾಡಬೇಕು
ಮರೆತಿರುವೆಯೇನು?
ಇದಿಷ್ಟು ದಿನ ಪೆನ್ಸಿಲನು
ಹೊಟ್ಟೆಯಲಿಟ್ಟು  ಕಾಪಾಡಿದ್ದು ಚಕ್ಕೆ ತಾನೆ!

ತಪ್ಪದು
ನನಗೆ ಬರೆಯಲು ಪೆನ್ಸಿಲ್ ಬೇಕು
ಅದರ ಎದೆಯೊಳಗಿಂದ ಹೂವುಗಳ ಚೆಲ್ಲಬೇಕು
ಚಕ್ಕೆಯನು ಹಿಂಸಿಸುತಿರುವೆನೆಂದು ಅನಿಸದಿರಿ

ಪೆನ್ಸಿಲೂ ಸವೆದು ಹೋಗುವುದು
ಚಕ್ಕೆಯೂ ನವೆದು ಹೋಗುವುದು

ಎರಡೂ ನಾಮರೂಪ ಕಳೆದು
ಹೊಸ ಸೃಷ್ಟಿಯನು ಬೆಳಗಿಸುವುದು
ರಕ್ತ ಸಿಕ್ತವಾದ ಸೃಜನೆ
ಸೂರ್ಯನಿಗೆ ಕೆಂಪನು ಪ್ರಸಾದಿಸುವುದು.

ಕೆಂಪುಕೋಟೆ

Saturday, January 29, 2011

ದೆಹಲಿಯೆಂಬ ನಗರ ಮತ್ತು ಯಮುನೆ

ರೇಣುಕಾ ನಿಡಗುಂದಿ

ದೆಹಲಿಯೆಂಬ ಮಹಾನಗರ. ಅದರೊಡನೆ ಹರಿಯುವ ಯಮುನಾ ನದಿ. 
ದೆಹಲಿಯ ಕವಯತ್ರಿ ರೇಣುಕಾ ನಿಡಗುಂದಿಯವರಿಗೆ ಕಾವ್ಯಲೋಕವನ್ನೇ ತೆರೆದು ಕೊಟ್ಟಿದೆ.
ಕನ್ನಡದ ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ ತಮ್ಮ ಕವನಗಳ ಮೂಲಕ ಪರಿಚಿತ
ರೇಣುಕಾ ಅವರ ಮೊದಲ ಸಂಕಲನ ಕಣ್ಣ ಕಣಿವೆ (2008).
ಕೆಂಪುಕೋಟೆ ಓದುಗರಿಗೆ ಈ ವಾರಾಂತ್ಯಕ್ಕೊಂದು ದೆಹಲಿಯದೇ ಕವನ.

ಈ ನಗರದ ತುಂಬ..
ಹಳೇ ಪಾಳುಬಿದ್ದ ಗುಮ್ಮಟಗಳು
ಮಂಕುಹಿಡಿದ ಮೀನಾರುಗಳು
ಮುರುಕು ಗೋಡೆಗಳ
ಒಡಕು ಬಿರುಕುಗಳಲ್ಲಿ
ಬಿಳಿ ನವಿಲಿನ ವೈಯ್ಯಾರ
ಜಾಲಿ ಪೊದೆಗೆ ಸಿಕ್ಕುಹಾಕಿಕೊಂಡಿದೆ.

ಸಾವಿರ ರಂಗಿನ ಕಾಮನಬಿಲ್ಲು
ಹಾಳು ಗೋಡೆಯ ಮೇಲೆ ಚಿತ್ರ ಬಿಡಿಸಿದೆ.
ಮಸಣದ ಕರಕು ವಾಸನೆ ಹಿಡಿದ
ತಲೆಹಿಡುಕರ ತಾಣ ಈ ಕೆಂಪುಕಲ್ಲಿನ ಗುಡಾಣ
ಮಹಾನಗರ ದೆಹಲಿ

ಕಲ್ಲು ಗೋಡೆಗಳ ಒಳನಾಡಿಗಳು
ಹೊಸೆದು - ಮಸೆದು ಜೀರ್ಣಿಸಿಕೊಂಡ
ಇತಿಹಾಸವೀಗ ಮರುಗುತ್ತಿದೆ
ಇಂದು
ಅಂದು
ಮೂಲೆ ಮೂಲೆಗೂ ಹಾಸಿ ಹೊದೆದ
ಅಮೃತಶಿಲೆಯ ಕುಸುರಿನಲ್ಲಿ
ಮೊಗಲ್ ಸಾಮ್ರಾಜ್ಯದ ಅಟಾಟೋಪ
ಗೋರಿಗಳ ಸುತ್ತ ಮೆಹಂದಿ ಚಿಗುರು
ನಡುಬಿಸಿಲಿಗೇರಿದ ಕಡುಗೆಂಪು ರಂಗು !

ತಣ್ಣಗೆ ಮುಲುಕಾಡುವ
ಕಲುಷಿತ ಯಮುನೆ
ಶೋಭಿತಳು ಪರಮ ಪೂಜಿತಳು
ಎಂದೋ,
ಇಂದು
ಕೊಳೆತು ನಾರುವ ನೀರಿನಲ್ಲಿ
ಹೂತ ವಸಂತಗಳು
ಹಸಿರು ಪಾಚಿಗಟ್ಟಿದ ನಡುಗಡ್ಡೆಗಳು
ಹರಿವೇ ಇಲ್ಲದ ಯಮುನೆಯಲ್ಲಿ ತುಂಡು ಚಂದ್ರ.

ಊರ ತುಂಬ ಮೊಂಡು ಹಿಡಿದ ಗಟಾರಗಳು
ಕೊಳಕು ನಾಲಾಗಳು
ಝುಗ್ಗಿ ಜೋಪಡಿಗಳು
ಕಮಲದ  ಬೇರಿನ ತರಕಾರಿ
ಪಾತಾಳಗಡ ಹಾಕಿ ಜಾಲಾಡುವ
ಮೀನುಗಾರರ ಹಿಂಡು
ಹೊಟ್ಟೆ ಪಾತಾಳ
ಬೆನ್ನು ತಾಮ್ರ
ಕಣ್ಣು ಕ್ಷಿತಿಜ
ಇಂಡಿಯಾ ಗೇಟ್
ದೇಹ ನೆಲ ಕಚ್ಚಿದ ದೋಣಿ
ಬದುಕು ಗಾಳ ಹಾಕುತ್ತಲೇ ಇದೆ
ಮೀನು ಹುಡುಕುತ್ತಲೇ ಇದೆ.
ನಿತ್ಯ ಬದುಕು ಗೋಲಿ ಗುಂಡಿನಂತೆ
ಉರುಳಾಡುತ್ತಿದೆ
ನಗರದ ತುಂಬ ಭೀತಿ
ಹಬೆಯಾಡುತ್ತಿದೆ !!

ಅದೇ
ಗಂಗೇಚ , ಯಮುನೇಚ ?.ಶ್ಲೋಕ
ಬಚ್ಚಲು ಮನೆಯಲ್ಲಿ
ಬೆಳಗಿನ ಸೂರ‍್ಯನ ಕೆಂಪು ಓಕುಳಿ
ತಾಯಿ ಯಮುನೆಗೆ ನಿತ್ಯದಾರತಿ !


ರೇಣುಕಾ ನಿಡಗುಂದಿ
ಕೆಂಪುಕೋಟೆ

Thursday, January 20, 2011

ಕೊಂಕಣಿ ಕವನಗಳು ಕನ್ನಡದಲ್ಲಿ

ಕೊಂಕಣಿಯು ಭಾರತದ ಪಶ್ಚಿಮ ಕರಾವಳಿಯ ಮಹಾರಾಷ್ಟ್ರದ ಒಂದು ಭಾಗ, ಗೋವಾ ರಾಜ್ಯ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಮತ್ತು ಕೇರಳದ ಕಾಸರಗೋಡು, ಕಣ್ಣನ್ನೂರು, ಆಳಪುಯ, ಕೊಟ್ಟಾಯಂ, ಎರ್ನಾಕುಲಂ, ತಿರುವನಂತಪುರಂ ನ ಕೆಲವು ಭಾಗಗಳಲ್ಲಿ ಮನೆಮಾತಾಗಿದೆ. ಕೊಂಕಣಿಗರು ಇಂದು ಜಗತ್ತಿನಾದ್ಯಂತ ಹಬ್ಬಿಕೊಂಡಿರುವುದರಿಂದ ಅವರು ನೆಲೆಸಿರುವೆಡೆಯೆಲ್ಲ ಕೊಂಕಣಿ ಇದೆ ಎನ್ನಬಹುದು. ಮಂಗಳೂರಿನ ವರ್ಲ್ಡ್ ಕೊಂಕಣಿ ಸೆಂಟರ್  ನಲ್ಲಿರುವ, ಕೆಲ ವರ್ಷ ದೆಹಲಿ ನಿವಾಸಿಯಾಗಿದ್ದ ಕ್ರಿಯಾಶೀಲ ಪ್ರತಿಭಾವಂತ ಗುರು ಬಾಳಿಗ ಅವರು ಕೆಲವು ಕೊಂಕಣಿ ಕವನಗಳನ್ನು ಕನ್ನಡಕ್ಕೆ ತಂದಿದ್ದಾರೆ. ಕೆಂಪುಕೋಟೆ ಓದುಗರಿಗೆ ಎರಡು ಕವಿತೆಗಳು.

ಸೆಗಣಿ
ಊರೊಳಗೆ ಕಾಲಿಡಲು ಜಾಗವಿಲ್ಲ
ಗುರು ಬಾಳಿಗ
ಎಲ್ಲಿ ನೋಡಿದರಲ್ಲಿ ಸೆಗಣಿ..

ಗಲ್ಲಿಗಲ್ಲಿಯಲ್ಲಿ,
ಹೆಜ್ಜೆ ಹೆಜ್ಜೆಗೂ,
ಬೀದಿಯಲ್ಲಿ, ಬಾಗಿಲಲ್ಲಿ,

ಚಪ್ಪಲಿ ಕೊಳೆಯಾದೀತೆಂದು
ಬರಿಗಾಲಲ್ಲಿ ನಡೆಯುತ್ತಿದ್ದರು ಜನರು
ನಾನೂ ಮೊದಲ ಬಾರಿಗೆ
ಬರಿಗಾಲಲ್ಲಿ, ಭಿಕಾರಿಯೆಂದಲ್ಲ.
ಕೊನೆಗೊಮ್ಮೆ ತುಳಿದೇ ಬಿಟ್ಟೆ!

ಎಷ್ಟೆಂದು ಹಾರಿ ಎಗರಲಿ ನಾನು,
ಎಷ್ಟೆಂದು ಟೊಂಕ ಹಾಕಲಿ,
ಎಷ್ಟೆಂದು ಆಡಲಿ ಕುಂಟಾಬಿಲ್ಲೆ,
ನೀರರಸಿ ನಡೆದಾಗ
ಬಳಿಯಲ್ಲೇ ಇತ್ತು ಇಗರ್ಜಿ

ಅಲ್ಲಿ, ಅಂತಿಮ
ಗುರುವಾರದ ಪೂಜೆ,
ಸೆಗಣಿ
ಪಾದರಿ ಆಪೋಸ್ತಲರ
ಕಾಲು ತೊಳೆಯುತ್ತಿದ್ದರು
ಕಿಟಕಿಯಿಂದ ಇಣುಕುತ್ತಾ ನಿಂತೆ

ಈ ಕೊಳೆ ತೊಳೆಯಲು
ಆ ’ಟೀಸ್ಪೂನ್’ ನೀರು ಎಲ್ಲಿ ಸಾಕು?
ಈ ಕಾಲು ಒರಸಲು
ಅವರ, ತುಣುಕು ಅಂಗೈಬಟ್ಟೆ ಎಲ್ಲಿ ಸಾಕು?

ಆ ಕ್ಷಣಕ್ಕೆ,
ಗುಡುಗು ಮಿಂಚು,
ಮಳೆ ಸುರಿದೇ ಸುರಿಯಿತು
ಸೂರಿನ ಅಂಚಿನಿಂದ ಸುರಿಯುತ್ತಿರುವ
ನೀರಧಾರೆಗೆ ಕಾಲೊಡ್ಡಿದೆ.
ಕೊಳೆಯೆಲ್ಲಾ ತೊಳೆದು ಹೋಯಿತು
ಅಂಟಿರುವ ಕೊಳೆತೊಳೆದು ಪುನೀತನಾಗಲು
ಒಳಗೆ ಹೋಗಬೇಕೆಂದೇನೂ ಇಲ್ಲ.
ಹೊರಗೆ ನಿಂತರೂ ಸಾಕು
ಮೈಲಿಗೆಯ ಅಂಜಿಕೆಯೂ ಇಲ್ಲ.

ಕೊಂಕಣಿ ಮೂಲ: ಮೆಲ್ವಿನ್ ರೊಡ್ರಿಗಸ್
ಕನ್ನಡಕ್ಕೆ: ಗುರು ಬಾಳಿಗಾ


ಕಿಟಕಿ

ಕಿಟಕಿಯ ಗಾತ್ರ, ಮನೆಬಾಗಿಲಷ್ಟು
ಹಿರಿದೇನೂ ಅಲ್ಲ, ಆದರೆ..

ಬಾಗಿಲಿನಿಂದ ಕಾಣದ್ದನ್ನು
ಕಿಟಕಿಯಿಂದ ನೋಡಬಹುದು
ಬಾಗಿಲಿನಿಂದ ಒಳಬರಲಾಗದವರು
ಕಿಟಕಿಯಿಂದ ಒಳನೂರಬಹುದು
ಕಿಟಿಕಿ

ಬಾಗಿಲು ನೆಂಟರಿಷ್ಟರಿಗೆ
ಕಿಟಕಿ ಕಳ್ಳಕಾಕರಿಗೆ
ಆದರೂ ಬಾಗಿಲಲ್ಲಿ ಕಚ್ಚುವ ನಾಯಿ
ಕಿಟಕಿಯ ಮೇಲೆ ಮುದ್ದಾದ ಬೆಕ್ಕು
ಬಾಗಿಲು ಗಂಡನದು
ಕಿಟಕಿ ಪ್ರೇಮಿಯದು
ಅದಕ್ಕೇ ಸ್ವಾಮೀ..

ಒಂದು ಮನೆಗೆ ಬಾಗಿಲೊಂದೇ,
ಕಿಟಕಿಗಳು ಮಾತ್ರ ಹಲವಾರು

ಕೊಂಕಣಿ ಮೂಲ - ಎಚ್ಚೆಮ್ ಪೆರ್ನಾಲ್
ಕನ್ನಡಕ್ಕೆ- ಗುರು ಬಾಳಿಗಾ