ರೋಗಿಯ ಆತ್ಮಕತೆ
-ಬೊಳುವಾರು
http://10thyearmagazine.vbepaper.com/annual/Home.aspx
ಟೈಪ್-೧
ಅವನಿಗೆ ನಂಬಿಕೆಯೇ ಆಗಿದ್ದಿರಲಿಲ್ಲ!
ಅದುವರೆಗೆ ಶೋಭನಾ ಯಾವುದಕ್ಕೂ ಕಾಡಿಸಿದವಳಲ್ಲ. ಪೀಡಿಸಿದವಳಲ್ಲ. ಮದುವೆಯಾಗಿ ಜೊತೆಯಲ್ಲಿ ಕಳೆದ ೨೫ ವರ್ಷಗಳಲ್ಲಿ ಹೊಸದೊಂದು ಸೀರೆ ತಂದು ಕೊಡು ಎಂದು ಬೇಡಿಕೆಯಿಟ್ಟವಳಲ್ಲ. ಬಂಗಾರದ ನೆಕ್ಲೆಸ್ ಬೇಕು ಎಂದು ತಮಾಷೆಗಾದರೂ ಹೇಳಿದವಳಲ್ಲ. ನಾಟಕ, ಯಕ್ಷಗಾನ, ಸೆಮಿನಾರುಗಳೆಂದು ಊರೂರು ಅಲೆಯುತ್ತಾ ನಡು ರಾತ್ರಿಯಲ್ಲಿ ಬಂದು ಬಾಗಿಲು ಬಡಿದಾಗಲೂ ಮುಖ ಸಿಂಡರಿಸಿಕೊಂಳವಳಲ್ಲ. ಅಂಥವಳಿಗೆ ಈಗ ಏನಾಯಿತು? ಯಾರ ಚಿತಾವಣೆಯಿಂದ ಹೀಗೆ ಮಾಡುತ್ತಿದ್ದಾಳೆ!? ಯಾವುದಕ್ಕೂ ಹಟ ಹಿಡಿಯದ ಇವಳು ಈಗೇಕೆ, ಹೀಗೇಕೆ ಹಿಂಸಿಸಿ ಕೊಲ್ಲುತ್ತಿದ್ದಾಳೆ!!?
ಅವನು ಹುಚ್ಚನಂತಾಗಿದ್ದ.
ಅವನನ್ನು ತಯಾರು ಮಾಡಿದ ದೇವರು ಸ್ರ್ತೀ ಪುರುಷೋತ್ತಮರಿಗೆಲ್ಲ ಜೋಡಿಸುವಂತೆ ಎಲ್ಲ ಅಂಗಾಂಗಗಳನ್ನೂ ಸರಿಯಾಗಿಯೇ ಅಂಟಿಸಿ, ಚೆನ್ನಾಗಿ ಜೀವಿಸು ಎಂದು ಹೇಳಿಯೇ, ಹಿಂದೂಸ್ತಾನದ ಪಶ್ಚಿಮ ಘಟ್ಟದ ತಪ್ಪಲಿನ ಕರಿಮಲೆಯ ಬುಡದಲ್ಲಿನ ಬಿಳಿಮಲೆ ಎಂಬ ಆರೇಳು ಮನೆಗಳ ಊರಿಗೆ ಟಿಕೇಟು ಕೊಟ್ಟು ಕಳಿಸಿದ್ದ. ಆದರೆ ಜೀವನವೆಂದರೆ ಏನೆಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದುಕೊಳ್ಳುವಷ್ಟರಲ್ಲಿ ಬದುಕಿನ ಬಹುಭಾಗವನ್ನು ಸಾಹಿತಿಗಳ, ಬುದ್ಧಿ ಜೀವಿಗಳ ನಡುವೆಯೇ ಕಳೆದುಕೊಂಡುಬಿಟ್ಟಿದ್ದ.
ಎಂಬತ್ತರ ದಶಕದ ಆರಂಭದ ದಿನಗಳಲ್ಲಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದಾಗಲೇ ನಾಲ್ಕೂ ದಿಕ್ಕಿನಲ್ಲಿ ಕಾಣಿಸುತ್ತಿದ್ದ ಹಚ್ಚ ಹಸಿರಿನ ನಡುವೆ ಕೆಂಪು ಕಾಣುವ ಬಯಕೆ ಅವನೊಳಗಿತ್ತು. ಕೆಲವು ಸಮಾನ ಮನಸ್ಕ ಗೆಳೆಯರನ್ನು (ಐ. ಕೆ. ಬೊಳುವಾರು, ಮೋಹನ ಸೋನ, ಸುದೇಶ ಮಹಾನ, ಹಿಮಕರ, ಎಂ.ಜಿ. ಕಜೆ ಮೊದಲಾದವರು) ಜೊತೆಗೇರಿಸಿಕೊಂಡು ಬಗೆ ಬಗೆಯ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಸಂಘಟನೆಗಳನ್ನು ಕಟ್ಟಿಕೊಂಡು ಅಲೆಯುತ್ತಿದ್ದ. ಅಭಿನಯ ನಾಟಕ ತಂಡ, ಸ್ವಂತಿಕಾ ಪ್ರಕಾಶನಗಳನ್ನು ಹುಟ್ಟುಹಾಕಿದ್ದ. ಬಂಡಾಯ ಸಾಹಿತ್ಯ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. ಆಗಷ್ಟೇ ಜನಪ್ರಿಯವಾಗುತ್ತಿದ್ದ ದಲಿತ ಚಳುವಳಿಯೂ ಅವನಿಗೆ ಆಪ್ತವಾಗಿತ್ತು. ಲಿಂಗ ಬೇಧ, ಜಾತಿಯ ಅಸಮಾನತೆ, ಅಲ್ಪ ಸಂಖ್ಯಾಕರ ಶೋಷಣೆ, ಸಾಮಾಜಿಕ ಅಸಮಾನತೆಗಳ ವಿರುದ್ಧ ಸಂಘಟಿತ ಹೋರಾಟಗಳು ಅಂದಿನ ಅವನ ಅಗತ್ಯಗಳು.
ಸಾಮಾಜಿಕ ಬದಲಾವಣೆಗೆ ಅವನೊಬ್ಬ ಕಾರಣಕರ್ತನಾಗದಿದ್ದರೆ ಚರಿತ್ರೆ ಅವನನ್ನು ಕ್ಷಮಿಸಲಾರದು ಎಂದು ಗಟ್ಟಿಯಾಗಿ ನಂಬಿಕೊಂಡಿದ್ದ. ನಾಳೆ ಬೆಳಗ್ಗೆ ಹನ್ನೊಂದುವರೆಯೊಳಗೆ ಕ್ರಾಂತಿಯಾಗುತ್ತದೆ ಎಂದು ಪ್ರಾಮಾಣಿಕವಾಗಿ ನಂಬಿದ್ದ.
ಈ ನಂಬಿಕೆಗಳಿಗೆ ಪೂರಕವಾದ ಓದು ಅವನ ಅಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿತ್ತು. ಆಗಷ್ಟೇ ದಲಿತ ಕವಿ ಸಿದ್ಧಲಿಂಗಯ್ಯನವರ ಹೊಲೆಮಾದಿಗರ ಹಾಡು ಅವನಿಗೆ ಮತ್ತು ಅವನಂತಹ ಹಲವರಿಗೆ ಹುಚ್ಚು ಹಿಡಿಸಿತ್ತು. ಸುಳ್ಯದವರೇ ಆದ ಕುಳುಕುಂದ ಶಿವರಾಯ ಅಥವಾ ನಿರಂಜನರ ಕೆಯ್ಯೂರು ಕ್ರಾಂತಿಯ ಚಿರಸ್ಮರಣೆ ಅವನಲ್ಲಿ ಕ್ರಾಂತಿಯ ಕನಸನ್ನು ಬಿತ್ತಿತ್ತು. ಇವುಗಳ ಜೊತೆಗೆ ಪಾಬ್ಲೋ ನೆರುದಾನ ನೋಡಿ ರಕ್ತವಿದೆ ಬೀದಿಯ ಮೇಲೆ, ಬೀದಿಯ ಮೇಲೆ ರಕ್ತವಿದೆ ಸಾಲು, ಅದಾಗಲೇ ಗಾರ್ಕಿಯ ಮದರ್ ಕಾದಂಬರಿಯ ಸಾಲುಗಳಿಂದ ತುಂಬಿದ್ದ ಅವನ ದಿನಚರಿಯ ಪುಟಗಳ ನಡುವೆ ಸೇರಿಕೊಂದಿತ್ತು. ಚಿಲಿಯ ಕ್ರಾಂತಿಕಾರಿ ಹೋರಾಟಗಾರ ಚೆಗವಾರ ಬರೆದ ಪ್ರೇಮ ಪತ್ರದ ಸಾಲುಗಳನ್ನು ಬಾಯಿಪಾಠ ಮಾಡಿಕೊಂಡಿದ್ದ. ಅಮೇರಿಕಾದ ಸೈನಿಕರು ಚೆ ಗವಾರನನ್ನು ಗುಂಡಿಕ್ಕಿ ಸಾಯಿಸಿ, ಆತನ ದೇಹವನ್ನು ತಪಾಸಣೆ ಮಾಡಿದಾಗ ಅವರಿಗೆ ಸಿಕ್ಕಿದ್ದು ನೆರೂದಾನ ಕಾವ್ಯ ಮತ್ತು ಒಂದು ಮದ್ದು ಗುಂಡು ಎಂಬುದನ್ನು ಓದಿಕೊಂಡು ಪುಳಕಿತನಾಗಿದ್ದ. ಟಾಲ್ಸಟಾಯ್ ಕಾದಂಬರಿಗಳು, ಬೋದಿಲೇರನ ಪಾಪದ ಹೂಗಳು, ಶಿವರಾಮ ಕಾರಂತರ ಚೋಮನ ದುಡಿ, ಬೊಳುವಾರರ ಕತೆಗಳು, ಲಂಕೇಶ್ ಪತ್ರಿಕೆ, ಶೂದ್ರ, ಸಂಕ್ರಮಣ, ಹೀಗೆ ಹತ್ತು ಹಲವು ಸಂಗತಿಗಳ ಬಗ್ಗೆ ಸಂಗಾತಿಗಳೊಂದಿಗೆ ಚರ್ಚೆ ನಡೆಸುತ್ತಿದ್ದ.
ಅವನು ಮತ್ತು ಅವನ ಸಂಗಾತಿಗಳು ಬಹಳ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದುದರಿಂದ ಬಹಳ ಜನ ಚಿಂತಕರು, ಬುದ್ಧಿಜೀವಿಗಳು ತಾವಾಗಿಯೇ ಸುಳ್ಯದ ಕಡೆ ಬಂದು ಅವರನ್ನು ಮಾತಾಡಿಸುತ್ತಿದ್ದರು. ಮಂಗಳೂರಿನಿಂದ ರಾಮಚಂದ್ರ ರಾವ್, ಕಾಸರಗೋಡು ಕಡೆಯಿಂದ ಬಿ. ವಿ. ಕಕ್ಕಿಲ್ಲಾಯ ಮತ್ತಿತರರು ಸುಳ್ಯದಲ್ಲಿ ಕಾಣಿಸಿಕೊಂಡರು. ಈ ಸಂಗಾತಿಗಳು ವಾರಾಂತ್ಯಗಳಲ್ಲಿ ಮನೆ ಮನೆಗಳಲ್ಲಿ ನಡೆಸುತ್ತಿದ್ದ ಅಧ್ಯಯನ ವೇದಿಕೆಗಳಲ್ಲಿ ಕಾರ್ಲ ಮಾರ್ಕ್ಸ, ಎಂಗೆಲ್ಸ್, ಲೆನಿನ್, ಸಾಮ್ರಾಜ್ಯಶಾಹಿ, ಬಂಡವಾಳಶಾಹಿ, ದ್ವಂದ್ವ ಮಾನ ಭೌತಿಕವಾದ, ಬಡತನ, ಬಿಡುಗಡೆ, ವಿಮೋಚನೆ, ಹೋರಾಟ, ರಷ್ಯಾ ಕ್ರಾಂತಿ ಮತ್ತಿತರ ವಿಷಯಗಳೆಲ್ಲ ಸದ್ದು ಮಾಡತೊಡಗಿದ್ದವು. ಸಿದ್ಧಲಿಂಗಯ್ಯ, ಕೋವೂರ್, ಶೂದ್ರ ಪತ್ರಿಕೆ, ಸಮುದಾಯ ಜಾಥಾ, ಚಂಪಾ, ಬರಗೂರು, ಅತ್ರಿ ಅಶೋಕವರ್ಧನ ಮೊದಲಾದವರ ಪ್ರೇರಣೆಯಿಂದ ಹೊಸ ಯೋಚನೆಗಳು, ಯೋಜನೆಗಳು ರೂಪುಗೊಳ್ಳುತ್ತಿದ್ದುವು. ದೇವಮಾನವರ ವಿರುದ್ಧ ಹೋರಾಟ, ಜಾತಕಕ್ಕೆ ಬೆಂಕಿ, ಸಾಮಾಜಿಕ ಬದಲಾವಣೆಗಾಗಿ ಬೀದಿ ನಾಟಕ, ಕುವೆಂಪು ಪ್ರೇರಣೆಯಿಂದ ಶೂದ್ರತ್ವದ ಬಗೆಗೆ ಹೊಸ ತಿಳುವಳಿಕೆ, ಜಾತಿವಿನಾಶ ಚಳುವಳಿ- ಹೀಗೆ ಗೆಳೆಯರ ಚಟುವಟಿಕೆಗಳಿಗೆ ಹಲವು ಮುಖಗಳಿದ್ದುವು. ವಿದ್ಯಾರ್ಥಿಗಳ ಒಂದು ಗುಂಪು ಈ ಗುಂಪಿನ ಜೊತೆಗೆ ಕ್ರಾಂತಿ ಗೀತೆ ಹಾಡುತ್ತಿತ್ತು.
ಕ್ರಾಂತಿಗೆ ಕಡಿದ ಸೊಳ್ಳೆ:
ಕ್ರಾಂತಿಕಾರಿಗಳಿಗೆ ಸೊಳ್ಳೆ ಕಚ್ಚಬಾರದೆಂದೇನೂ ಇಲ್ಲವಲ್ಲ.
೧೯೮೨ರ ಜುಲಾಯಿ ತಿಂಗಳಿನ ಮಳೆಗಾಲದ ಒಂದು ಸಂಜೆ ಈ ಕ್ರಾಂತಿಕಾರಿಯ ಮೊಣಕಾಲ ಕೆಳಗೆ ಸೊಳ್ಳೆಯೊಂದು ಕಚ್ಚಿಬಿಟ್ಟಿತ್ತು.
ಎಲ್ಲರ ಹಾಗೆ ಇವನೂ ಸೊಳ್ಳೆ ಕಡಿದ ಜಾಗವನ್ನು ಸಹಜವಾಗಿ ಕೆರೆದುಕೊಂಡ. ಚರ್ಮ ಎದ್ದು ಬಂತು, ಉರಿ ಶಮನವಾಯಿತು. ಮರುದಿನ ಕೆರೆದುಕೊಂಡ ಜಾಗ ಕೆಂಪಾಗಿತ್ತು. ಒಂದೆರಡು ದಿನಗಳಲ್ಲಿ ಅದು ಎಂದಿನಂತೆ ಒಣಗದೆ, ಆ ಜಾಗದಲ್ಲಿ ಪಾವಲಿಯಷ್ಟು ಅಗಲವಾದ ಸ್ಥಳ ಕಲ್ಲಿನಂತೆ ಗಟ್ಟಿಗೊಂಡು, ಅಸಾಧ್ಯ ನೋವು ಕಾಣಿಸಿಕೊಂಡಿತು. ನೋವುನಿವಾರಕ ಮಾತ್ರೆಗಳಿಂದ ಪ್ರಯೋಜನವಾಗಲಿಲ್ಲ. ಯಾವುದೋ ಗೆಳೆಯನ ಸಲಹೆಯಂತೆ ಮಂಗಳೂರಿಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಂಡ. ಸಕ್ಕರೆಯ ಮಟ್ಟ ೨೫೬ಕ್ಕೆ ತಲುಪಿತ್ತು. ಹಂಪನಕಟ್ಟೆಯ ಡಾಕ್ಟರ್ ವರ್ಗೀಸ್ ವರದಿ ಹೇಳಿದ್ದರು, ಆರೋಗ್ಯವಂತ ದೇಹದಲ್ಲಿ ಸಕ್ಕರೆಯ ಮಟ್ಟ ೭೦-೧೨೦ ಇರಬೇಕು. ನಿಮ್ಮದು ಇಮ್ಮಡಿ ಆಗಿದೆ, ದುರ್ದೈವದಿಂದ ನಿಮಗೆ ಸಣ್ಣ ವಯಸ್ಸಿಗೆ ಮಧುಮೇಹ ಬಂದಿದೆ. ತುಂಬಾ ಜಾಗೃತೆಯಾಗಿರಿ. ಹಾಗೆ ಹೇಳಿದವರು ಯೂಗ್ಲೋಕೋನ್ ಎಂಬ ಮಾತ್ರೆ ಸೇವಿಸಲು ಹೇಳಿದರು. ಅವನು ತಣ್ಣನೆ ಯಾವುದೋ ಬಸ್ ಹಿಡಿದು ಮರುದಿನದ ಕ್ರಾಂತಿಕಾರೀ ಚಟುವಟಿಕೆಗಳ ಬಗ್ಗೆ ಯೋಚಿಸುತ್ತಾ ಮಧ್ಯರಾತ್ರಿ ಸುಳ್ಯಕ್ಕೆ ಹಿಂದಿರುಗಿ, ಹಳೆಯ ಚಾಪೆಯಲ್ಲಿ ಒರಗಿಕೊಂಡು ನಿದ್ದೆಯಿಲ್ಲದ ರಾತ್ರಿ ಕಳೆದ.
ಈ ನಡುವೆ ಕಾಲಿನ ಹುಣ್ಣು ಗುಣವಾದರೂ, ಗಡ್ಡ ತೆಗೆಯುವಾಗ ಗಲ್ಲದಲ್ಲಾದ ಸಣ್ಣದೊಂದು ಗಾಯವು ತಿಂಗಳಾನುಗಟ್ಟಲೆ ಗುಣವಾಗದೆ ಹಿಂಸೆ ನೀಡಿತ್ತು.
ಅಗಿನ್ನೂ ಮದುವೆಯಾಗಿರಲಿಲ್ಲ.
ಹುಡುಗಿಯರಿಗೆ ಗಲ್ಲದ ವಿನ್ಯಾಸ ಗೊತ್ತಾಗಬಾರದೆಂದು ಗಡ್ಡಬೆಳೆಸಿದ.
ಆತನ ಕುರುಚಲು ಕೂದಲು ಮತ್ತು ಕರ್ರಗಿನ ಗಡ್ಡ ಆ ಕಾಲದ ಅವನ ಕ್ರಾಂತಿಕಾರೀ ಚಟುವಟಿಕೆಗಳಿಗೆ ಪೂರಕವೆ ಆಗಿ ಹೋಯಿತು.
ಒಂದು ದಿನ ಸಿಕ್ಕಾಗ ನನ್ನಲ್ಲಿ ಅವಹಾಲು ತೋಡಿಕೊಂಡಿದ್ದ. ನಾನು ಡಯಾಬೆಟಿಕ್ ಅಂತ ಗೊತ್ತಾದಾಗ ನನಗೆ ೨೭ ವರ್ಷ. ಅಂದರೆ ಅದಕ್ಕೂ ನಾಲ್ಕಾರು ವರ್ಷಗಳ ಮೊದಲೇ ನಾನು ಡಯಾಬೆಟಿಕ್ ಆಗಿದ್ದಿರಬೇಕು. ನಿಜ ಯಾರಿಗೆ ಗೊತ್ತು? ನಾನು ಕುಡುಕನಲ್ಲ. ಸಿಗರೇಟು ಸೇದುತ್ತಿರಲಿಲ್ಲ, ಹೇಳುವಂತಹ ಕೆಟ್ಟ ಚಟಗಳು ಯಾವುದೂ ಇರಲಿಲ್ಲ, ಆದರೂ ಈ ಮಹಾಮಾರಿ ನನ್ನನ್ನೇ ಯಾಕೆ ಆರಿಸಿಕೊಂಡಿತು?
ಹಾಗೆಂದು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ವಿಶೇಷ ಪ್ರಯತ್ನವನ್ನೇನೂ ಅವನು ಮಾಡಲಿಲ್ಲ.
ಬದುಕನ್ನು ಅದು ಬಂದ ಹಾಗೆಯೇ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡಿದ್ದುರಿಂದ ಅವನು ಕಂಗೆಡಲಿಲ್ಲ. ಅವನ ಎಲ್ಲಾ ಕ್ರಾಂತಿಕಾರೀ ಚಟುವಟಿಗೆಗಳೂ ಹಾಗೆಯೇ ಮುಂದುವರಿದವು.
ಗೆಳೆಯರ ಜೊತೆಗೆ ಖಾಯಿಲೆಯನ್ನೂ ಮುಚ್ಚಿಡಲಿಲ್ಲ. ಸಕ್ಕರೆಯ ನೇರ ಸೇವನೆಗೆ ತಿಲಾಂಜಲಿ ಕೊಟ್ಟ.
ಆದರೆ, ಡಯಾಬೆಟಿಸ್‌ನ್ನು ನಿಯಂತ್ರಿಸಲು ಬೇಕಾದ ಅಗತ್ಯ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವಲ್ಲಿ ಬಹುತೇಕ ವಿಫಲನಾಗಿದ್ದ.ಅನ್ನ ಬಿಡಲಾಗಲಿಲ್ಲ.
ಮಧುಮೇಹದ ದೂರಗಾಮೀ ಪರಿಣಾಮಗಳನ್ನು ಊಹಿಸಲಿಲ್ಲ.
ಸುಳ್ಯದಿಂದ ಮಂಗಳೂರುವರೆಗೆ ಹೋಗಿ ನಿಯತವಾಗಿ ಪರೀಕ್ಷೆಮಾಡಿಸಿಕೊಳ್ಳಲು ಬೇಕಾದ ಆರ್ಥಿಕ ಶಕ್ತಿಯೂಅವನಿಗಿರಲಿಲ್ಲ.
ಮುಂದೊಮ್ಮೆ ಪುತ್ತೂರು ಬಸ್ ನಿಲ್ದಾಣದಲ್ಲಿ ಸಿಕ್ಕಾಗ ನಗುತ್ತಲೇ ಹೇಳಿದ್ದ, ನನ್ನದೇನು ಮಹಾ? ಅನೇಕ ಕ್ರಾಂತಿಕಾರಿಗಳು ಸಣ್ಣ ದೊಡ್ಡ ಖಾಯಿಲೆಗಳಿಂದ ನರಳುತ್ತಿರಲಿಲ್ಲವಾ? ಈ ಖಾಯಿಲೆ ಸಾಮಾಜಿಕ ಬದಲಾವಣೆಗೆ ನಾನು ನಡೆಸುವ ಕೆಲಸಗಳಿಗೆ ಪೂರಕವಾಗಿದೆ. ಏನು ಹೇಳ್ತಿ?
ನಾನೇನೂ ಹೇಳಿದ್ದಿರಲಿಲ್ಲ. ಆದರೆ ನಕ್ಕಿರಲಿಲ್ಲವೆಂದು ನೆನಪು.
ಈ ನಡುವೆ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪಿ.ಎಚ್.ಡಿ ಪದವಿಗಾಗಿ ಡಾ. ವಿವೇಕ ರೈ ಅವರ ಮಾರ್ಗ ದರ್ಶನದಲ್ಲಿ ಹೆಸರು ನೋಂದಣೆ ಮಾಡಿಸಿಕೊಂಡ. ಇದಕ್ಕಾಗಿ ಸುಳ್ಯ ತಾಲೂಕಿನ ಎಲ್ಲ ೪೨ ಗ್ರಾಮಗಳನ್ನು ಹಗಲೂ ರಾತ್ರಿ ಸುತ್ತಿದ. ವಿಷಯ ಸಂಗ್ರಹ ಮಾಡಿದ. ಈ ಹಂತದಲ್ಲಿ ಆಹಾರ, ನಿದ್ರೆ, ಇತ್ಯಾದಿಗಳ ಬಗ್ಗೆ ಗಮನವನ್ನೇ ಹರಿಸಲಿಲ್ಲ. ಮುಂದೆ ಪಿ.ಎಚ್.ಡಿ ಪದವಿಯೇನೋ ದೊರೆತಿತು.
ಆದರೆ ಅಷ್ಟರಲ್ಲೇ ಮಧುಮೇಹ ಅವನನ್ನುಸದ್ದಿಲ್ಲದೆ ಕೊಲ್ಲಲು ಆರಂಭಿಸಿತ್ತು.
ಮುಂದೆ ಅವನು ಮಂಗಳೂರು ವಿಶ್ವವಿದ್ಯಾಲಯ ಸೇರಿದ. ಅಲ್ಲಿ ಪಾಠ ಮಾಡುವುದರ ಜೊತೆಗೆ, ಬಂಡಾಯ ಚಳುವಳಿಯ ಜಿಲ್ಲಾ ಸಂಚಾಲಕನಾಗಿ ಕೆಲಸ ಮಾಡಿದ. ದಲಿತ ಚಳುವಳಿಯಲ್ಲಿ ತೊಡಗಿಸಿಕೊಂಡ. ನಡುವೆ ಯಕ್ಷಗಾನದ ಹುಚ್ಚು ಕೂಡಾ ಅಂಟಿಕೊಂಡಿತು. ಇವೆಲ್ಲದರ ಜೊತೆಗೆ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕವಾಗಿ ಬೆಳೆಯಲೇಬೇಕಾಗಿತ್ತಾದ್ದರಿಂದ, ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳನ್ನೂ ಮುಂದುವರಿಸಿಕೊಂಡು ಬಂದ. ಅನೇಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ. ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ. ಮುಂದೆ ಅವನಿಗೆ ಬಹಳ ಖ್ಯಾತಿ ತಂದು ಕೊಟ್ಟ ಕರಾವಳಿ ಜಾನಪದ ಕೃತಿಯೂ ಪ್ರಕಟವಾಯಿತು. ಈ ಎಲ್ಲಾ ಕೆಲಸಗಳು ಅವನಿಗೆ ಸಾಕಷ್ಟು ಪ್ರಸಿದ್ಧಿಯ ಸಿಹಿಯನ್ನೂ, ದೇಹದ ತುಂಬೆಲ್ಲ ಸಕ್ಕರೆಯ ಕಹಿಯನ್ನೂ ತಂದಿದ್ದವು.
ಇಂಥ ಸ್ಥಿತಿಯಲ್ಲೇ ಅವನು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕನಾಗಿ ಆಹ್ವಾನದ ಮೇಲೆ ಸೇರಿಕೊಂಡ.
ಆಗ ಕಂಬಾರರು ಹಂಪಿಗೆ ಕುಲಪತಿಗಳು.
ಎಳೆಯ ವಯಸ್ಸಿನಲ್ಲಿ ಪ್ರಾಧ್ಯಾಪಕ ಹುದ್ದೆ ನೀಡಿದ ಕಂಬಾರರ ಋಣ ತೀರಿಸಲು ಇವನು ಅಗತ್ಯಕ್ಕಿಂತ ಹೆಚ್ಚು ದುಡಿದ. ಒಂದೆಡೆ ಕಟ್ಟಡದ ಕೆಲಸಗಳು, ಇನ್ನೊಂದೆಡೆ ಶೈಕ್ಷಣಿಕ ಕೆಲಸಗಳು, ಹೀಗೆ ದುಡಿಯುವಾಗ ಮಧುಮೇಹದ ಕುರಿತು ಚಿಂತಿಸಲು ಸಮಯವೇ ದೊರಕಲಿಲ್ಲ. ಆದರೆ ವಿಶ್ವವಿದ್ಯಾಲಯ ಮೇಲೆ ಬರುತ್ತಿದ್ದಂತೆ ಕಂಬಾರರೂ ಸೇರಿದಂತೆ ಹಲವರಿಗೆ, ಇವನನ್ನೂ ಒಳಗೊಂಡಂತೆ ಇನ್ನೂ ಕೆಲವರು ಬೇಡವಾದರು. ಕಂಬಾರ ಮತ್ತು ಅವರೊಡನೆ ಇದ್ದ ಕೆಲವರಿಗೆ ಬೇಕಾದದ್ದು ಇವನಲ್ಲಿರಲಿಲ್ಲ. ಇವನಲ್ಲಿದ್ದದ್ದು ಅವರಿಗೆ ಬೇಕಾಗಿರಲಿಲ್ಲ. ಪ್ರಕಾಶ್ ಕಂಬತ್ತಳ್ಳಿಯವರನ್ನು ಹೊರಗೆ ಅಟ್ಟಲಾಯಿತು. ಚಿ. ಶ್ರಿನಿವಾಸ ರಾಜು, ಎಚ್.ಎಸ್. ರಾಘವೇಂದ್ರ ರಾವ್, ಓ.ಏಲ್. ನಾಗಭೂಷಣ ಸ್ವಾಮಿ ಹೀಗೆ ಹಲವರು ಒಬ್ಬೊಬ್ಬರಾಗಿ ತಮ್ಮ ತಮ್ಮ ಮಾತೃ ಸಂಸ್ಥೆಗೆ ಹಿಂದಿರುಗಿದರು. ಆದರೆ ಇವನಿಗೆ ಬೇರೆ ಗತಿ ಇಲ್ಲ. ನಿಧಾನವಾಗಿ ಇರುವಲ್ಲಿಯೇ ಒಂಟಿಯಾಗತೊಡಗಿದ.
೧೯೯೭ರ ನವಂಬರದ ಹೊತ್ತಿಗೆ ಇವನ ಜೊತೆಗಿದ್ದದ್ದು ಹಂಪಿಯ ಸುಮಾರು ೬೦೦ ವರ್ಷಗಳ ಇತಿಹಾಸವಿರುವ ವಿರೂಪಾಕ್ಷ ಮತ್ತು ೪೭೫ರ ಇತಿಹಾಸ ನಿರ್ಮಿಸಿದ್ದಇವನ ಸಕ್ಕರೆಯ ಮಟ್ಟ ಮಾತ್ರ.
ಕು.ಶಿ.ಕೊಟ್ಟ ಅಮೇರಿಕಾದ ಇನ್ಸುಲಿನ್
ಆ ಸಂದರ್ಭದಲ್ಲಿ ಒಂದು ದಿನ ಉಡುಪಿಯಿಂದ ಕು.ಶಿ. ಹರಿದಾಸ ಭಟ್ಟರು ಇವನು ಕೆಲಸ ಮಾಡುತ್ತಿದ್ದ ಹಂಪಿಯ ಜಾನಪದ ವಿಭಾಗಕ್ಕೆ ನಗು ನಗುತ್ತಾ ಬಂದಿದ್ದಾಗ ಇವನು ಅಳು ಅಳುತ್ತಲೇ ತನ್ನ ಕತೆ ಹೇಳಿದ. ಒಂದು ವಾರದಲ್ಲಿ ಅವರು ಉಡುಪಿಯಿಂದ ಫೋನ್ ಮಾಡಿ ದೆಹಲಿಯಲ್ಲಿ ಕೆಲಸ ಮಾಡಲು ತಯಾರಿದ್ದೀಯಾ ಅಂತ ಕೇಳಿದರು. ಬಗೆ ಬಗೆಯ ಹಿಂಸೆಗೆ ಒಳಗಾಗಿ ಜರ್ಝರಿತನಾಗಿದ್ದ ಅವನುಹೂಂ ಎಂದ.
೧೯೯೮ರ ದಶಂಬರದಲ್ಲಿ ಇವನು ಹಂಪಿ ಬಿಟ್ಟು ದೆಹಲಿ ಸೇರಿದ.
ದೆಹಲಿ ಇವನ ಆಯ್ಕೆಯಾಗಿರಲಿಲ್ಲ, ಆದರೆ ಇವನಿಗೆ ಬೇರೆ ಆಯ್ಕೆಗಳಿರಲಿಲ್ಲ.
ಇವನು ದೆಹಲಿಯಲ್ಲಿ ಕೆಲಸಕ್ಕೆ ಸೇರಿದ ಸಂಸ್ಥೆಯ ಹೆಸರು - ಭಾರತೀಯ ಅಧ್ಯಯನಗಳ ಅಮೇರಿಕಾ ಸಂಸ್ಥೆ.
ಅಮೇರಿಕಾದ ೬೦ ವಿಶ್ವವಿದ್ಯಾಯಗಳು ಒಟ್ಟು ಸೇರಿ ಸುರು ಮಾಡಿದ ಈ ಸಂಸ್ಥೆಯು ೧೯೪೫ರಿಂದಲೂ ಭಾರತದಲ್ಲಿ ಕೆಲಸ ಮಾಡುತ್ತಿತ್ತು. ವಿದೇಶೀಯರಿಗೆ ಭಾರತೀಯ ಭಾಷೆಗಳನ್ನು ಹೇಳಿಕೊಡುವುದು, ಭಾರತೀಯ ಅಧ್ಯಯನಗಳಿಗೆ ಶಿಷ್ಯ ವೇತನ ನೀಡುವುದು, ಎರಡು ಉನ್ನತ ಸಂಶೋಧನಾ ಕೇಂದ್ರಗಳನ್ನು ನಡೆಸುವುದು ಮತ್ತು ಸಂಶೋಧನಾ ಕೃತಿಗಳ ಪ್ರಕಟಣೆ - ಈ ಸಂಸ್ಥೆಯ ಮುಖ್ಯ ಕೆಲಸಗಳು. ಇಲ್ಲಿ ಆತ ಉಪನಿರ್ದೇಶಕನಾಗಿ ೧೯೯೮ರ ಜನವರಿ ತಿಂಗಳಲ್ಲಿ ಸೇರಿಕೊಂಡಿದ್ದ.
ದೆಹಲಿಯಲ್ಲಿ ಸಿಕ್ಕಾಗಲೊಮ್ಮೆ ಬಹಳ ದೊಡ್ಡ ಪಾಪ ಮಾಡಿದವನಂತೆ ನಾಚಿಕೆಯಿಂದಲೇ ಹೇಳಿದ್ದ, ಅಲ್ಲಿ ಜೋಯ್ನಿಂಗ್ ರಿಪೋರ್ಟ್ ಬರೆಯುತ್ತಿದ್ದಾಗ ನನಗೆ ನೆನಪಾಗಿದ್ದದ್ದು ಅಮೆರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್ ಅಲ್ಲ, ಮಂಡ್ಯದ ಸಕ್ಕರೆ ಕಾರ್ಖಾನೆಗಳೂ ಅಲ್ಲ; ಅದೇ ಅಮೇರಿಕಾದ ಯಾವುದೋ ವಿಶ್ವವಿದ್ಯಾಲದಲ್ಲಿದ್ದ ಕಾಮ್ರೇಡ್ ಎಂ.ಕೆ. ಭಟ್ಟರು, ಹಿಂದೂಸ್ತಾನದಲ್ಲಿ ಕ್ರಾಂತಿ ಮಾಡಲೆಂದು ಸುಳ್ಯಕ್ಕೆ ಬಂದಿದ್ದ ದಿನಗಳಲ್ಲಿ ಅವರ ಜೊತೆಗೆ ಅನುಭವಿಸಿದ್ದ ರೋಮಾಂಚನದ ಕ್ಷಣಗಳು.
ತ್ರಿಪತಿಗಳ ಕರುಣೆ
ಆ ಅಮೇರಿಕಾದ ಸಂಸ್ಥೆಯೇನೋ ಚೆನ್ನಾಗಿತ್ತು. ಆದರೆ ಇವನ ಭಾಷಾಜ್ಞಾನ ಅಲ್ಲಿಗೆ ಸಾಕಾಗುತ್ತಿರಲಿಲ್ಲ. ಅಲ್ಲಿಗೆ ಬರುತ್ತಿದ್ದವರೆಲ್ಲ ಖ್ಯಾತ ವಿದೇಶೀ ವಿದ್ವಾಂಸರೇ ಆಗಿದ್ದರು. ಅವರೊಡನೆ ಸಂವಾದಿಸಲು ಇಂಗ್ಲಿಷ್ ಬೇಕೇ ಬೇಕು. ಸರೀಕರೊಡನೆ ಮಾತಾಡಲು ಹಿಂದಿ ಬೇಕು. ಈ ಎರಡೂ ಭಾಷೆಗಳು ಕನ್ನಡದಲ್ಲಿ ಎಂ.ಎ. ಮಾಡಿದ ಅವನಿಗೆ ಫ್ರೆಂಚ್ ಆಗಿದ್ದವು. ಪ್ರತಿವಾರದ ಕೊನೆಗೆ ವಿವರವಾದ ಪ್ರಗತಿ ವರದಿಯನ್ನು ಇಂಗ್ಲಿಷ್‌ನಲ್ಲಿ ಬರೆದು ಇ-ಮೇಲ್ ಮಾಡಬೇಕು. ಇವನು ಅದುವರೆಗೆ ಕಂಪ್ಯೂಟರ್ ಮುಟ್ಟಿದವನಲ್ಲ. ಅವನೊಳಗಿದ್ದ ಪಂಪ, ರನ್ನ, ಕುಮಾರವ್ಯಾಸ, ಬೇಂದ್ರೆ ಕುವೆಂಪು ಅಲ್ಲಿ ಯಾರಿಗೂ ಬೇಕಾಗಿರಲಿಲ್ಲ. ಜೊತೆಗೆ ದೆಹಲಿಯಂಥಾ ಮಹಾನಗರದಲ್ಲಿ ವಾಸ.
ಹಾಗೆ ನೋಡಿದರೆ ಆತ ಆತನ ಎಳವೆಯನ್ನು ಕಳೆದದ್ದು ವಾಟೆಕಜೆ ಎಂಬ ಪ್ರದೇಶದಲ್ಲಿ. ಬಂಟಮಲೆ ಕಾಡಿನ ನಡುವೆ ಇರುವ ಈ ಪ್ರದೇಶದಲ್ಲಿ ಅವನದ್ದು ಒಂದೇ ಮನೆ. ಆ ಮನೆಗೆ ಎರಡೇ ಮಾಡು. ಮಣ್ಣಿನ ಗೋಡೆಯ ಮೇಲೆ ಬಿದಿರು ಇರಿಸಿ, ಅದರ ಮೇಲೆ ಎಲ್ಲಿಂದಲೋ ಕಾಡಿ ಬೇಡಿ ತಂದ ಅಡಿಕೆ ಮರದ ಸೋಗೆ ಹಾಸಿ ಕಟ್ಟಿದ ಮನೆಯದು. ಅಪ್ಪ ಮನೆಯಿಂದ ದೂರವೇ ಇರುತ್ತಿದ್ದರು. ಅಮ್ಮ ಸೊಪ್ಪು ಸೌದೆ ತರಲು ಕಾಡಿನೊಳಕ್ಕೆ ಹೋಗುವಾಗ ಈತನನ್ನು ಮನೆಯೊಳಕ್ಕೆ ಇರಲು ಹೇಳಿ ಹೊರಗಿನಿಂದ ಬಾಗಿಲು ಮುಚ್ಚುತ್ತಿದ್ದರು. ಆ ಕತ್ತಲು ಕೋಣೆಯೊಳಗೆ ಆತ ಏಕಾಂಗಿಯೇನೂ ಅಲ್ಲ.
ಮನೆಯೆ ಒಡೆದ ಗೋಡೆಯ ತುಂಬಾ ವಾಸಮಾಡುತ್ತಿದ್ದ ಇಲಿಗಳು ಆತನ ಅಮ್ಮ ಬಾಗಿಲು ಮುಚ್ಚಿದ ತಕ್ಷಣ ಕ್ರಿಯಾಶೀಲವಾಗುತ್ತಿದ್ದವು. ಗೋಡೆಯ ಸಂದುಗೊಂದುಗಳಿಂದ ಸರಕ್ಕನೆ ಇಳಿದು ನೆಲದ ಮೇಲೆ ಓಡಾಡುವ ಚಿಕ್ಕ ದೊಡ್ಡ ಇಲಿಗಳನ್ನು ಕಂಡು ಅವನು ದಿಗಿಲಿನ ಜೊತೆಗೆ ಖುಷಿಗೊಳ್ಳುತ್ತಿದ್ದ. ಅವುಗಳನ್ನು ಮುಟ್ಟಲು ಪ್ರಯತ್ನಿಸುತ್ತಿದ್ದ. ಅವುಗಳ ಹಿಂದೆ ಓಡುತ್ತಿದ್ದ. ಕೈಗೆ ಸಿಗದ ಅವುಗಳ ಚುರುಕುತನಕ್ಕೆ ಅಸೂಯೆ ಪಡುತ್ತಿದ್ದ. ಜೊತೆಗೆ ಅನೇಕ ಬಾರಿ ಇಲಿಗಳೊಡನೆ ಮಾತಾಡಲೂ ಪ್ರಯತ್ನಿಸಿದ್ದುಂಟು. ಇಲಿಗಳು ಆತನನ್ನು ಎಂದೂ ಗಂಭೀರವಾಗಿ ಪರಿಗಣಿಸಲೇ ಇಲ್ಲ.
ಅವನಿಗೆ ಪ್ರಿಯವಾಗಿದ್ದ ಇಲಿಗಳ ಸಹವಾಸ ಭಯಾನಕವಾಗುತ್ತಿದ್ದುದು ಅವುಗಳನ್ನು ಹಿಡಿಯಲು ಹಾವುಗಳು ಬರುತ್ತಿದ್ದಾಗ. ಮನೆಯ ಮಣ್ಣಿನ ಗೋಡೆ ಒರಟಾಗಿದ್ದುದು ಮಾತ್ರವಲ್ಲ ಅದರ ತುಂಬಾ ಬಿರುಕುಗಳಿದ್ದುದರಿಂದ ಹಾವುಗಳು ಸುಲಭವಾಗಿ ಅದರ ಮೂಲಕ ಮನೆಯ ಮಾಡನ್ನೇರುತ್ತಿದ್ದುವು. ಹಾವುಗಳಲ್ಲಿ ಕೇರೆ ಹಾವು ಎಂಬ ಪ್ರಭೇದವೊಂದಿದ್ದು ಅವುಗಳಿಗೆ ಇಲಿ ಅಂದರೆ ಪ್ರಾಣ. ಇಲಿಗಳನ್ನು ಕಂಡೊಡನೆ ಅವುಗಳನ್ನು ವೇಗವಾಗಿ ಅಟ್ಟಿಸಿಕೊಂಡು ಹೋಗಿ, ಹಿಡಿದು ನುಂಗಿ ಬಿಡುವ ಕೇರೆ ಹಾವುಗಳು ಮನುಷ್ಯರ ಮಟ್ಟಿಗೆ ನಿರಪಯಕಾರಿ. ಅಮ್ಮ ಮನೆಯೊಳಕ್ಕೆ ಇವನನ್ನು ಬಿಟ್ಟು ಹೋಗುವಾಗ ಎಷ್ಟೋ ಬಾರಿ ಈ ಕೇರೆ ಹಾವುಗಳು ಮಣ್ಣಿನ ಗೋಡೆಯನ್ನೇರಿ ಮೆಲ್ಲನೆ ಮನೆಯೊಳಕ್ಕೆ ಇಣುಕುತ್ತಿದ್ದವು. ಹಾವುಗಳ ಆಗಮನದ ಸೂಚನೆ ದೊರೆತ ಇಲಿಗಳು ಅಡ್ಡಾದಿಡ್ಡಿಯಾಗಿ ಓಡುವಾಗ ಈತನಿಗೂ ಅಪಾಯದ ಅರಿವುಂಟಾಗುತ್ತಿತ್ತು. ಒಮ್ಮೊಮ್ಮೆ ಈ ಕೇರೆ ಹಾವುಗಳು ಆಯತಪ್ಪಿ ಮಾಡಿನಿಂದ ಧೊಪ್ಪನೆ ನೆಲದ ಮೇಲೆ ಬಿದ್ದು ಬಿಡುತ್ತಿದ್ದುವು. ಬಿದ್ದು ಸ್ವಲ್ಪ ಹೊತ್ತು ಸುಮ್ಮನಿರುತ್ತಿದ್ದುವು. ಹೊರಗೆ ಹೋಗಲಾಗದ ಆತ ಮುದುರಿ ಕುಳಿತುಕೊಂಡು, ಹಾವನ್ನು ಹೊರಗೆ ಹೋಗಲು ಬೇಡಿಕೊಳ್ಳುತ್ತಿದ್ದ. ಜಾರಿಬಿದ್ದ ಕಾರಣ ನಾಚಿಕೊಂಡಿತೋ ಎಂಬಂತೆ ಸ್ವಲ್ಪ ಹೊತ್ತಿನ ಆನಂತರ ಕೇರೆ ಹಾವು ಮೆಲ್ಲಗೆ ಹರಿದು, ಗೋಡೆಯ ಬಿರುಕಿನ ಮೂಲಕ ಹೊರಗೆ ಹೋಗುತ್ತಿತ್ತು. ಹಾವಿನ ಬಾಲ ಗೋಡೆಯ ಬಿರುಕಿನಿಂದ ಮಾಯವಾಗುತ್ತಲೇ ಆತ ಇಲಿಗಳನ್ನು ಮತ್ತೆ ಹೊರಗೆ ಕರೆಯುತ್ತಿದ್ದ. ಬಂಟಮಲೆಯಲ್ಲಿ ಕಾಳಿಂಗ ಸರ್ಪ, ನಾಗರ ಹಾವು ಸೇರಿದಂತೆ ಅನೇಕ ಬಗೆಯ ಭಯಾನಕ ವಿಷದ ಹಾವುಗಳಿದ್ದುವು ಆದರೆ ಅವು ಮನೆಯ ಅಂಗಳದವರೆಗೆ ಬರುತ್ತಿದ್ದರೂ ಮನೆಯೊಳಕ್ಕೆ ಬರುತ್ತಿರಲಿಲ್ಲ, ಬರುತ್ತಿದ್ದರೆ ಇವನ್ನೆಲ್ಲಾ ಹೇಳಲು ಅವನು ನಮ್ಮೊಡನೆ ಇರುತ್ತಿರಲಿಲ್ಲ.
ಆತ ಸ್ವಲ್ಪ ದೊಡ್ಡದಾದಾಗ ಮನೆಯೊಳಕ್ಕೆ ಇರಲು ಒಪ್ಪದೆ ಅಮ್ಮನೊಡನೆ ಸೊಪ್ಪು ಸೌದೆ ತರಲು ಕಾಡಿನೊಳಕ್ಕೆ ಬರುವುದಾಗಿ ಹಠ ಹಿಡಿಯತೊಡಗಿದ್ದ.
ನಿಗೂಢವಾದ ಕಾಡು ಆತನಿಗೊಂದು ಕುತೂಹಲ. ಮಳೆಗಾಲದಲ್ಲಿ ಬೀಸುವ ಭಯಾನಕ ಗಾಳಿಗೆ ನಡುರಾತ್ರಿಯಲ್ಲಿ ಧರೆಗೊರಗುವ ಮರಗಳ ಸದ್ದಿಗೆ ಮನೆಯೊಳಗೆ ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಿದ್ದ ಅವನು ಬೆಚ್ಚಿ ಬೀಳುತ್ತಿದ್ದ. ಆ ಮರಗಳು ನೆಲಕ್ಕೊರಗುವಾಗ ತನ್ನೊಡನೆ ಇತರ ಮರಗಳನ್ನೂ ನೆಲಕ್ಕೊರಗಿಸುತ್ತವೆ. ಮರಗಳನ್ನು ಗಾಢವಾಗಿ ಅಪ್ಪಿಕೊಂಡಿರುವ ಬಳ್ಳಿಗಳಿಗೂ ಉಳಿಗಾಲವಿಲ್ಲ. ಒಂದು ಮರವನ್ನು ಅಪ್ಪಿಕೊಂಡು ಮೇಲೇರುವ ಬೃಹತ್ ಬಳ್ಳಿಗಳು ಮೇಲೇರುತ್ತಲೇ ಇನ್ನೊಂದು ಮರದ ಕಡೆಗೆ ಚಾಚಿಕೊಂಡು ವಿಸ್ತಾರವಾಗಿ ಬೆಳೆಯುತ್ತವೆ. ಹೀಗಾಗಿ ಒಂದು ಮರ ಬಿದ್ದರೆ ಈ ಬಳ್ಳಿಗಳು ಇನ್ನೊಂದನ್ನು ಬರಸೆಳೆದು ಬೀಳಿಸುತ್ತವೆ. ಹೀಗೆ ಬೀಳುವಾಗ ಮರದ ಮೇಲೆ ಆಶ್ರಯ ಪಡೆದಿದ್ದ ಕೆಲವು ಹಕ್ಕಿಗಳು ಮತ್ತು ಪ್ರಾಣಿಗಳು ನಡುರಾತ್ರಿಯಲ್ಲಿ ಕಿರುಚಿಕೊಂಡು ಅತ್ಯಂತ ಭಯಾನಕ ವಾತಾವರಣವೊಂದು ನಿರ್ಮಾಣವಾಗುತ್ತಿತ್ತು. ಆದರೂ ಸಾಮಾನ್ಯವಾಗಿ ಮಳೆಗಾಲದಲ್ಲಿ ಬೀಳುವ ಈ ಮರಗಳನ್ನು ನೋಡಲು ಕಾಡಿನೊಳಕ್ಕೆ ಹೋಗಬೇಕೆಂದು ಆಸೆ ಮಾತ್ರ ಅವನಲ್ಲಿ ಮುರುಟುತ್ತಿರಲಿಲ್ಲ.
ಕೊನೆಗೆ ಒಂದು ಬೇಸಗೆಯಲ್ಲಿ ಆವನ ಹಠಕ್ಕೆ ಒಪ್ಪಿ ಕಾಡಿಗೆ ಕರೆದೊಯ್ಯಲು ಅತನ ಅಮ್ಮ ಒಪ್ಪಿದ್ದರು.
ಕೈಯಲ್ಲಿ ಒಂದು ಪುಟ್ಟ ಕತ್ತಿ ಹಿಡಿದು ಅವನು ಅಮ್ಮನನ್ನು ಹಿಂಬಾಲಿಸಿದ.
ಅಮ್ಮ ನೇರವಾಗಿ ಬಿದಿರು ಹಿಂಡಿಲುಗಳಿರುವ ಸಮತಟ್ಟಾದ ಪ್ರದೇಶವೊಂದಕ್ಕೆ ಹೋಗಿ ಬಿದಿರಕ್ಕಿಯನ್ನು ಹೆಕ್ಕಲು ಆರಂಭಿಸಿದರು. ಈ ಬಿದಿರಕ್ಕಿಗೆ ರಾಜನಕ್ಕಿ ಎಂಬ ಹೆಸರೂ ಇತ್ತು. ಸಣ್ಣ ಆಕಾರದ ಈ ಬಿದಿರಿನ ಭತ್ತವನ್ನು ಮನೆಗೆ ತಂದು ಅದರ ಸಿಪ್ಪೆಯನ್ನು ತೆಗೆದು ಗಂಜಿ ಮಾಡಿ ಉಣ್ಣುವುದು ಅವರ ನಿತ್ಯದ ಕೆಲಸ. ತರಗೆಲೆಗಳ ನಡುವೆ ಅಡಗಿಹೋಗುವ ಆ ಅತಿ ಸಣ್ಣ ಭತ್ತದಂತಿರುವ ಬಿದಿರಕ್ಕಿಯನ್ನು ಹೆಕ್ಕಲು ತುಂಬಾ ತಾಳ್ಮೆ ಬೇಕು. ಅವನಿಗೋ ಕಾಡಿನೊಳಕ್ಕೆ ಮತ್ತಷ್ಟು ನುಗ್ಗುವ ತವಕ. ಮೆಲ್ಲನೆ ಅಮ್ಮನ ಕಣ್ಣು ತಪ್ಪಿಸಿ ಆಚೀಚೆ ನಡೆದು, ಕಾಡಿನೊಳಕ್ಕೆ ನೀಳವಾಗಿ, ಅನಾಥವಾಗಿ, ಎಲ್ಲವನ್ನು ಕಡಿದುಕೊಂಡು ಬಿದ್ದಿರುವ ಬೃಹತ್ ಮರಗಳ ಬಳಿ ಸುಳಿದಾಡುತ್ತಿದ್ದ. ಆ ಬಿದ್ದ ಮರಗಳ ಒಂದು ಬದಿಯಲ್ಲಿ ನಿಂತರೆ ಮತ್ತೊಂದು ಬದಿ ಕಾಣುತ್ತಿರಲಿಲ್ಲ. ಬಿದ್ದ ಮರದ ಬೇರುಗಳು ಅಕರಾಳ ವಿಕರಾಳವಾಗಿ ಆಕಾಶದೆತ್ತರಕ್ಕೆ ಚಾಚಿಕೊಂಡಿರುತ್ತಿದ್ದುವು. ಮಳೆಗಾಲದಲ್ಲಿ ಬಿದ್ದ ಈ ಮರಗಳ ತೊಗಟೆಯು ಬಂಟಮಲೆಯ ತೇವಾಂಶದಲ್ಲಿ ನಿಧಾನವಾಗಿ ಕರಗುತ್ತಿದ್ದವು. ಹಾಗೆ ಕರಗುತ್ತಿದ್ದಂತೆ ತೊಗಟೆಯ ಒಳಗಿನಿಂದ ಬಗೆ ಬಗೆಯ ಹುಳುಗಳು ಹೊರಬರುತ್ತಿದ್ದವು. ಹಲವು ಬಣ್ಣಗಳ, ವಿವಿಧ ಆಕಾರಗಳ ಆ ಹುಳುಗಳನ್ನು ನೋಡಿ ಆರಂಭದಲ್ಲಿ ಅವನು ಹೆದರಿದನಾದರೂ ನಿಧಾನವಾಗಿ ಅವುಗಳೊಡನೆಯೂ ಗೆಳೆತನ ಬೆಳೆಸಿದ. ಪ್ರೀತಿಯಿಂದ ಕೈಯಲ್ಲಿ ಸಣ್ಣ ಕೋಲು ಹಿಡಿದು ಆ ಹುಳುಗಳನ್ನು ಕೆಣಕುತ್ತಿದ್ದ. ಆಗೆಲ್ಲ ತಮ್ಮ ಪುಟ್ಟ ಹೆಡೆಬಿಚ್ಚಿ ಪ್ರತಿಭಟನೆ ತೋರುವ ಅವು ತೆವಳುತ್ತಾ ಮತ್ತೆ ಮರೆಗೆ ಸರಿಯುತ್ತಿದ್ದುವು. ಆ ಹುಳುಗಳಿಗೆ ಆತ ಬಗೆ ಬಗೆಯ ಹೆಸರಿಟ್ಟ. ಆ ಹೆಸರಿಂದ ಅವುಗಳನ್ನು ಕರೆಯುವಾಗ ಅವು ತಲೆಯಾಡಿಸುತ್ತಿರುವಂತೆ ಆತನಿಗಂತೂ ಅನ್ನಿಸುತ್ತಿತ್ತು. ಹುಳುಗಳ ಜೊತೆಗಣ ಆತನ ಸಂಭಾಷಣೆಗಳಿಂದ ಅವನ ಅಮ್ಮನಿಗೆ ಸಮಾಧಾನವಾಗುತ್ತಿತ್ತು. ಯಾಕೆಂzರೆ ಬಿದಿರಕ್ಕಿ ಹೆಕ್ಕುತ್ತಿದ್ದ ಆಕಗೆ ಪಕ್ಕದೆಲ್ಲೆಲ್ಲೋ ಮಗ ಕ್ಷೇಮವಾಗಿರುವ ಬಗ್ಗೆ ಸೂಚನೆ ದೊರೆಯುತ್ತಿತ್ತು.
ಇದೆಲ್ಲ ಕಳೆದು ಅರ್ಧ ಶತಮಾನ ಕಳೆದಿದೆ. ಆ ಹುಡುಗ ಈಗ ಅಮೇರಿಕಾ ಸಂಸ್ಥೆಗೆ ಹೊದಿಕೊಳ್ಳಬೇಕಾಗಿದೆ.
ಅವನು ಸೋಲೊಪ್ಪಿಕೊಳ್ಳಲು ಸಿದ್ದನಿದ್ದವನಲ್ಲ.
ಹಿಂದೊಮ್ಮೆ ಉಡುಪಿಯಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಜಾನಪದ ಸೆಮಿನಾರಿನಲ್ಲಿ ಯು ಕ್ಯಾನ್ ಅಂಡರ್ ಸ್ಟಾಂಡ್ ಮೈ ಕನ್ನಡ ಬೆಟರ್ ದೇನ್ ಮ್ಯ್ ಇಂಗ್ಲಿಷ್ ಎನ್ನುತ್ತಲೇ, ಎದುರಿಗೆ ಕಣ್ ಕಣ್ ಬಿಟ್ಟು ನೋಡುತ್ತಿದ್ದ ಪರದೇಶೀ ವಿದ್ವಾಂಸರನ್ನೆಲ್ಲ ಕಂಗಾಲುಗೊಳಿಸುವಷ್ಟು ವಿದ್ವತ್ ಮೆರೆದವನೀತ. ಈಸಬೇಕು ಇದ್ದು ಜೈಸಬೇಕು ಎಂಬ ದಾಸರ ವಾಣಿಯನ್ನು ನೂರಕ್ಕೆ ನೂರು ಪಾಲಿಸಿದವನೀತ; ಪಾಲಿಸಿದ.
ಮತ್ತ್ತೊಮ್ಮೆ ಮಗುವಾಗಿ ೪೩ ನೇ ವಯಸ್ಸಿನಲ್ಲಿ ಎಲ್ಲವನ್ನೂ ಕಲಿಯತೊಡಗಿದ.
ಕಂಪ್ಯೂಟರ್, ಇಂಗ್ಲಿಷ್, ಹಿಂದಿ, ಕೆಟಲಾಗಿಂಗ್, ಡಾಟಾ ಬೇಸ್, ಇ-ಮೇಲ್, ಒರೇಕಲ್, ಪವರ್ ಪಾಯಿಂಟ್, ಪಾಶ್ಚಾತ್ಯ ಸಂಸ್ಥೆಯ ಕೆಲಸದ ಸಂಸ್ಕೃತಿ ಇತ್ಯಾದಿ. ಅದೇನೂ ಬಂಟಮಲೆಯಲ್ಲಿ ಹುಳುಗಳೊಡನೆ ಮಾತಾಡಿದಂತಲ್ಲ. ತುಂಬಾ ಒದ್ದಾಡಬೇಕಾಗಿತ್ತು. ಸಹೋದ್ಯೋಗಿಗಳಿಗಿಂತ ಇವನು ಇಮ್ಮಡಿ ಶ್ರಮ ಹಾಕಲೇ ಬೇಕಾಗಿತ್ತು. ಕೆಲವು ಬಾರಿ ಸೋಲಿನ ಅವಮಾನವನ್ನೂ ನುಂಗಿಕೊಳ್ಳಬೇಕಾಯಿತು. ಒಂದು ಸಣ್ಣ ದೀಪದ ಬೆಳಕನ್ನು ಅಡಗಿಸುವಷ್ಟು ಕತ್ತಲು ಈ ಲೋಕದಲ್ಲಿ ಇಲ್ಲ ಎಂದು ದೃಢವಾಗಿ ನಂಬಿದವನೀತ. ಸಿಡಿಲು ಹೊಡೆದೊಡೆ ಹಿಡಿದ ಕೊಡೆ ಕಾವುದೇ ಎಂಬ ಹರಿಶ್ಚಂದ್ರ ಕಾವ್ಯದ ಮಾತನ್ನು ಸಾರಾಸಗಟಾಗಿ ನಿರಾಕರಿಸುವ ಆಶಾವಾದಿ. ಹತಾಶೆಯನ್ನು ಮೀರುವ ಕಲೆಯನ್ನು ಕಷ್ಟ ಪಟ್ಟು ರೂಢಿಸಿಕೊಂಡ. ಹಗಲೂ ರಾತ್ರಿ ಅಧ್ಯಯನ ನಡೆಸಿದ.
ಅವನ ಕಲಿಕೆಯ ಹಠವನ್ನು ತಡೆಯುವ ಶಕ್ತಿ ಅಲ್ಲಿ ಯಾರಿಗೂ ಇರಲಿಲ್ಲ. ಅವನ ಪ್ರಾಮಾಣಿಕ ನಿಷ್ಠೆ ಮತ್ತು ಬದ್ಧತೆಯನ್ನು ಗುರುತಿದ ಆ ಅಮೇರಿಕಾದ ಸಂಸ್ಥೆ, ನಾಲ್ಕೇ ವರ್ಷಗಳಲ್ಲಿ ಇವನನ್ನು ಸಂಸ್ಥೆಯ ನಿರ್ದೆಶಕನಾಗಿ ನೇಮಿಸಿ ಮನ್ನಣೆ ನೀಡಿತು. ಇವನ ಜವಾಬ್ದಾರಿ ಏರಿತು. ಹಾಗಾಗಿ ಸಕ್ಕರೆಯ ಮಟ್ಟ ೫೦೦ ರಹತ್ತಿರ ತಲುಪಿತು.
ಆರೋಗ್ಯವಂತ ದೇಹದೊಳಗೆ ಅಂತರ್ಗತವಾಗಿರುವ ರೋಗ ನಿರೋಧಕ ಶಕ್ತಿ ಇವನೊಳಗೆ ಮಾಯವಾಗತೊಡಗಿತು.
ದೆಹಲಿಯ ಮೈಕೊರೆಯುವ ಛಳಿಯನ್ನು ತಡೆದುಕೊಳ್ಳುವುದು ಸುಲಭವಲ್ಲ. ಸೆಖೆಗೆ ಮೂಗಿನಿಂದ ರಕ್ತ ಒಸರುತ್ತಿತ್ತು. ಯಾರೋ ಹೇಳಿದರು ಅಂತ ಆಯುರ್ವೇದದ ಮೊರೆ ಹೋದ. ಒಂದಕ್ಕೆರಡಾಯಿತು. ಕಹಿ ಕಷಾಯ ಕುಡಿದಾಗ ಸಕ್ಕರೆಯ ಮಟ್ಟವೇನೋ ಕಡಿಮೆಯಾಗುತ್ತಿತ್ತು. ಆದರೆ ನಿರಂತರ ಕಹಿ ಕುಡಿದು ಪರಿಣಮವಾಗಿ ಲಿವರ್ ದುರ್ಬಲವಾಯಿತು. ಇದರ ಮುಂದಿನ ಹಂತವಾಗಿ ಜಾಂಡಿಸ್ ಕಾಣಿಸಿಕೊಂಡಿತು, ಜೊತೆಜೊತೆಗೆ ಕಾಲಲ್ಲಿ ಟಿ.ಬಿ. ಕಾಣಿಸಿಕೊಂಡಿತು. ಸಾವು ಹತ್ತಿರದಲ್ಲಿ ಎಲ್ಲೋ ಸುಳಿದಾಡುತ್ತಿದ್ದಂತೆ ಅನ್ನಿಸತೊಡಗಿತು. ನಿರ್ಲಕ್ಷಿಸಿದರೆ ಹೆಚ್ಚು ಕಾಲ ಬದುಕುವುದಿಲ್ಲ ಅಂತ ಖಚಿತವಾಗತೊಡಗಿತು.
೨೦೦೪ರ ಜನವರಿ ತಿಂಗಳಲ್ಲಿ ಅವನು ದೆಹಲಿಯ ಪ್ರಖ್ಯಾತವಾದ ಅಪೋಲೋ ಆಸ್ಪತ್ರೆಯ ಅತ್ಯಾಧುನಿಕ ಎಂಡೋಕ್ರಿನೋಲೊಜಿಗೆ ಹೋದ. ಈ ವಿಭಾಗದ ಮುಖ್ಯಸ್ಥರು ಡಾ.ಅಂಬರೀಶ್ ಮಿತ್ತಲ್. ಒಳ್ಳೆಯ ಬರೆಹಗಾರು ಕೂಡ.
ಡಾಕ್ಟರರ ಷಾಪಿಗೆ ಹೋದವರಿಗೆಲ್ಲ ಒಂದು ಅನುಭವವಾಗಿರುತ್ತದೆ; ಒಂದಲ್ಲ ಎರಡು ಮೂರು ಬಗೆಯದು. ಯಾವುದೇ ಡಾಕ್ಟರರ ಷಾಪಿಗೆ ಹೋದರೆ, ಡಾಕ್ಟರು ನಾಡಿ ಹಿಡಿಯುವ ಮೊದಲು ಪೆನ್ನು ಹಿಡಿಯುತ್ತಾರೆ. ಯಾವುದಾದರೊಂದು ಟೆಸ್ಟ್‌ಗೆಚೀಟಿ ಕೊಡುತ್ತಾರೆ.ವಾರದ ಹಿಂದೆ ಮತ್ತೊಬ್ಬ ಡಾಕ್ಟರು ಅದೇ ಪರೀಕ್ಷೆ ಮಾಡಿಸಿ ಬರೆದು ಕೊಟ್ಟಿರುವ ರಿಪೋರ್ಟ್ ಕಣ್ಣೆದುರು ಹಿಡಿದರೂ ಕಣ್ಣು ಮುಚ್ಚಿಕೊಳ್ಳುತ್ತಾರೆ. ಉಪಾಯವಿಲ್ಲದೆ ಹೊಸ ಲ್ಯಾಬ್‌ನಲ್ಲಿ ಮತ್ತೊಂದು ಬಾರಿ ಟೆಸ್ಟ್ ಮಾಡಿಸಿ ರಿಪೋರ್ಟ್ ತಂದುತೋರಿಸುತ್ತಿರುವಾಗ, ಅಲ್ಲೊಂದು ಕೋಟ್ಯಾಧಿಪತಿಸೀನ್ ಕ್ರಿಯೇಟ್ ಆಗುತ್ತದೆ. ತಾನು ನೀಡಿದ ಉತ್ತರ ಸರಿಯೇ ತಪ್ಪೇ ಎಂದು ಕುತೂಹಲದಿಂದ ಕಾಯುವವನನ್ನು ಸತಾಯಿಸುವವ ನಿರೂಪಕನಂತೆ, ಡಾಕ್ಟರು ಎದುರು ಕೂತ ರೋಗಿ ಮತ್ತು ರೋಗಿಯ ಕಡೆಯವರನ್ನು ಒಮ್ಮೆ ಅನುಕಂಪದಿಂದ ದಿಟ್ಟಿಸಿ, ರಿಪೋರ್ಟಿನತ್ತ ಕಣ್ಣುಹಾಯಿಸುತ್ತಾರೆ. ಜೋರಾಗಿ ಉಸಿರೆಳೆದುಕೊಂಡು ಒಮ್ಮೆ ಹುಬ್ಬು ಏರಿಸುತ್ತಾರೆ. ಮತ್ತೊಮ್ಮೆ ತುಟಿ ಕೊಂಕಿಸಿ ಏನೋ ಅನಾಹುತದ ಮುನ್ಸೂಚನೆ ಕಾಣುತ್ತಿರುವವರಂತೆ ಮುಖ ಮುದುಡಿಸುತ್ತಾರೆ.ಬಳಿಕ ರಿಪೋರ್ಟನ್ನು ಬದಿಗೆ ಸರಿಸಿ,ತನ್ನ ಮಾತಿಗಾಗಿ ಕಾತರಿಸಿ ಕುಳಿತವರತ್ತ ನೋಡಿ, ನೋ ಪ್ರಾಬ್ಲೆಮ್, ಎಲ್ಲ ನಾರ್ಮಲ್ ಇದೆ ಎಂದುಬಿಡುತ್ತಾರೆ. ಅಗ, ಆದಾಗಲೇ ಎರಡೆರಡು ಬಾರಿ ದುಬಾರಿ ಬೆಲೆ ತೆತ್ತು ಪರೀಕ್ಷೆ ಮಾಡಿಸಿಕೊಂಡು ಬಂದವನಿಗೆ ತಾನು ಕೇಳುತ್ತಿರುವುದು ಸಂತಸದ ಸಂಗತಿಯೇ ಅಥವಾ ದು:ಖದಸಂಗತಿಯೇ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಸಂತಸದ ಸಂಗತಿಯಾಗಿದ್ದರೆ, ಪರೀಕ್ಷೆಗೆಂದು ಕೊಟ್ಟ ದುಡ್ಡು ದಂಡವೆಂದು ಭಾಸವಾಗುತ್ತದೆ. ಖರ್ಚು ಮಾಡಿದ ದುಡ್ಡು ಸದುಪಯಾಗಿದೆಯೆಂಬ ಸುಖ ಅನುಭವಿಸಬೇಕಾಗಿದ್ದರೆ ಡಾಕ್ಟರಿಂದ ಎಲ್ಲವೂ ಅಬ್‌ನಾರ್ಮಲ್ ಎಂಬ ಮತು ಕೇಳಬೇಕಾಗುತ್ತದೆ. ಆದರೆ, ನಮ್ಮ ಬಿಳಿಮಲೆಗೆ ಇದು ಯಾವುದೂ ಆಗಲಿಲ್ಲ. ಪರೀಕ್ಷೆಗೆಂದು ಖರ್ಚು ಮಾಡಿದ್ದ ದುಡ್ಡು ವ್ಯರ್ಥವಾಗಲಿಲ್ಲ ಎಂಬ ತೃಪ್ತಿ ಮತ್ತು ಸುಖ ಎರಡನ್ನೂ ಬಹಳ ವರ್ಷಗಳಿಂದಲೇ ಹಲವು ಬಾರಿ ಅನುಭವಿಸಿದ್ದ.
ಇವನ ದೇಹವನ್ನು ಬಗೆ ಬಗೆಯಾಗಿ ಪರೀಕ್ಷೆ ಮಾಡಿದ ಮಿತ್ತಲ್ ಸಾಹೇಬರು,ಬಹುಕಾಲದ ಮಧುಮೇಹದ ಪರಿಣಾಮ ಹಾಗೂ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಕಾರಣದಿಂದಈ ಕ್ರಾಂತಿಕಾರಿಯನ್ನುಮೂರು ಇಂಗ್ಲಿಷ್ ರೋಗಗಳು- ಡಯಾಬೆಟಿಕ್ ರೆಟಿನೋಪತಿ, ಡಯಾಬೆಟಿಕ್ ನ್ಯೂರೋಪತಿ ಮತ್ತು ಡಯಾಬೆಟಿಕ್ ನೆಫ್ರೋಪತಿ -ಪ್ರೀತಿಸುತ್ತಿದ್ದು ಹಂತ ಹಂತವಾಗಿ ಕೊಲ್ಲುತ್ತಿದೆಯೆಂಬ ವರದಿ ನೀಡಿದರು. ಕೊನೆಗೊಂದು ಸಲಹೆಯನ್ನೂ ಕೊಟ್ಟಿದ್ದರು, ತ್ರಿಪತಿಗಳ ಕರುಣಿಗೆ ಪಾತ್ರನಾಗಿರುವವನನ್ನುತಿರುಪತಿ ತಿಮ್ಮಪ್ಪನಿಂದಲೂ ಕಾಪಾಡುವುದು ಸಾಧ್ಯವಿಲ್ಲ. ಆದರೆ ನಾನು ಹೇಳಿದಂತೆ ಕೇಳಿದರೆ ಸ್ವಲ್ಪ ಹೆಚ್ಚು ದಿನ ಬದುಕಬಹುದು.
ಡಾಕ್ಟರು ಹಾಗೆಲ್ಲ ಹೇಳಿದಾಗ ಅವನಿಗೆ ನೆನಪಾದದ್ದು, ಹಿಂದೊಮ್ಮೆ ಪಾಠ ಮಾಡುತ್ತಿದ್ದ ಆವ ಕಾಲವನಾದೊಡೆ ಮೀರಿ ಬಪ್ಪುದು ಸಾವ ಕಾಲ ಮೀರಬಹುದೇ? ಎನ್ನುವ ಮೋಹನ ತರಂಗಿಣಿಯ ಮಾತು.ಆ ಮಾತನ್ನು ಸುಳ್ಳು ಮಾಡುವ ಹಟ ಇವನಿಗೂ ಇರಲಿಲ್ಲ. ಹೇಳಿ ಕೇಳಿ ತಾನೊಬ್ಬ ಕ್ರಾಂತಿಕಾರಿ ಎಂದು ನಂಬಿದವನು.ಕ್ರಾಂತಿಕಾರಿಗಳು ಸಾವಿಗೆ ಹೆದರಬಾರದಲ್ಲ?
ಅದರೂ ಮರಣಕ್ಕೆ ಮದ್ದುಗಳಿಲ್ಲ ಎಂದಿದ್ದ ಸರ್ವಜ್ಞನನ್ನು ಸ್ವಲ್ಪ ಮರೆತು, ಅಂಬರೀಶ ಹೇಳಿದಂತೆ ತ್ರಿಪತಿಯ ಒಡೆಯ ಇನ್ಸುಲಿನ್‌ಗೆ ಶರಣಾದ.
ಶರಣೆನೆ ಮರಣವಿಲ್ಲ
ತನಗೆ ತಾನೇ ಸಮಾಧಾನ ಮಾಡಿಕೊಳ್ಳಲು ಕೆಲವು ಸಂಗತಿಗಳನ್ನು ಸಂಶೋಧನೆ ಮಾಡಿದ. ತನಗೆ ಅನ್ನ ನೀರು ಕೊಡುತ್ತಿರುವ ದೆಹಲಿಯ ಐದು ಜನರಲ್ಲಿ ಮೂವರು ಮಧುಮೇಹಿಗಳಾಗಿರುವುದರಿಂತ ಉತ್ತೇಜಿತನಾದ. ಹೋಟೆಲುಗಳಲ್ಲಿ ಚಹ ಕುಡಿಯುವಾಗ, ಊಟ ಮಾಡುವಾಗ ನಾಲ್ಕೂ ದಿಕ್ಕು ಕಿವಿಯಾಗತೊಡಗಿದ.ಸಕ್ಕರೆ ರಹಿತ ಚಹ ಬೇಡುವವರನ್ನು ಹತ್ತಿರದ ಬಂಧುಗಳಂತೆ ಆತ್ಮೀಯವಾಗಿ ದಿಟ್ಟಿಸತೊಡಗಿದ.ಐಸ್ ಕ್ರೀಮ್ ಪಾರ್ಲರ್‌ಗಳು ಸಾವಿನಂಗಡಿಗಳಂತೆ ಕಾಣಲಾರಂಭಿಸಿದವು. ಇವನಂಥವರಿಗಾಗಿಯೇ ಸುಗರ್‌ಲೆಸ್ ಸಿಹಿತಿನಿಸು ಮಾರುವ ಅಂಗಡಿಗಳಿದ್ದವು. ಡಯಾಬೆಟಿಕ್ ರೋಗಿಗಳಿಗಾಗಿಯೇ ಆಹಾರ ತಯಾರಿಸುವ ಅಂತರಾಷ್ಟ್ರೀಯ ಕಾರ್ಖಾನೆಗಳೂ ಇದ್ದವು. ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ, ನ್ಯೂಯೋರ್ಕ ವಿಶ್ವವಿದ್ಯಾಲಯ, ಟೆಕ್ಸಾಸ್ ವಿಶ್ವವಿದ್ಯಾಲಯ(ಆಸ್ಟಿನ್) ಮತ್ತು ಹವಾಯಿ ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಉಪನ್ಯಾಸಕ್ಕಾಗಿ ಹೋಗಬೇಕಾದ ಸಂದರ್ಭಗಳಲ್ಲಿ ತಾನೊಬ್ಬ ಮಧುಮೇಹಿ ಎಂಬುದನ್ನು ವಿಮಾನದ ಪರಿಚಾರಿಕೆಗೆ ಮೊದಲೇ ತಿಳಿಸಿಕಡಿಮೆ ಕೊಬ್ಬಿನ, ಸಕ್ಕರೆ ರಹಿತ ಊಟವನ್ನು ಪಡೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡ.
ಇನ್ಸುಲಿನ್ ಸಹವಾಸ ಸುಲಭವಲ್ಲ.
ಸಿಡಿಲು ಹೊಡೆಯುತ್ತಿರುವಾಗ ಕೊಡೆ ಹಿಡಿದುಕೊಂಡು ನೂಲ ಮೇಲೆ ನಡೆದಂತೆ ಅದು.
ದೇಹದಲ್ಲಿನ ಸಕ್ಕರೆಯ ಅಂಶವನ್ನು ಪರಿಗಣಿಸಿಕೊಂಡು ಎಷ್ಟು ಬೇಕೋ ಅಷ್ಟು ಇನ್ಸುಲಿನ್ ತೆಗೆದುಕೊಳ್ಳಬೇಕು.
ಸ್ವಲ್ಪ ಜಾಸ್ತಿ ಆದರೆ ಸಕ್ಕರೆಯ ಪ್ರಮಾಣ ಕಡಿಮೆ ಆಗಿ,ತಲೆತಿರುಗಿಬೀಳಬಹುದು.
ಹಾಗಾದಾಗ ದೇಹದಲ್ಲಿರುವ ರಕ್ತ ಕಣಗಳು ಗಮನಾರ್ಹವಾಗಿ ಕಡಿಮೆಯಾಗಿಬಿಡಬಹುದು.
ಅಗ ಹಿಮೋಗ್ಲೋಬಿನ್ ಮಟ್ಟವೂ ಕಡಿಮೆಯಾಗುತ್ತದೆ.
ಹಾಗಂತ ಕಡಿಮೆ ಇನ್ಸುಲಿನ್ ತಗೊಂಡರೆ ಸಕ್ಕರೆಯ ಅಂಶ ಹೆಚ್ಚಾಗಬಹುದು.
ಆದ ಕಾರಣ ಅಳೆದು ಯೋಚಿಸಿ ಇನ್ಸುಲೆನ್ ತೆಗೆದುಕೊಳ್ಳಬೇಕು.
ಅದು ಅಲಗಿನಂತೆ ಹೋಗುತ್ತಲೂ ಕೊಯ್ಯುವುದು, ಬರುತ್ತಲೂ ಕೊಯ್ಯುವುದು
ಬಿಟ್ಟು ಬಿಡದ ಹುಟ್ಟು ಗುಣ:
ಹೀಗೇ ಸ್ವಲ್ಪ ತಡವಾಗಿಯಾದರೂ ಆರೋಗ್ಯದ ಬಗ್ಗೆ ಯೋಚಿಸತೊಡಗುವ ಸಂದರ್ಭದಲ್ಲಿಯೇ ದೆಹಲಿ ಕರ್ನಾಟಕ ಸಂಘದ ಚುನಾವಣೆ ಘೋಷಿತವಾಯಿತು.ಗೆಳೆಯರನೇಕರು ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸುವಂತೆ ಒತ್ತಾಯಿಸಿದರು. ಕನ್ನಡ ವಿಶ್ವವಿದ್ಯಾಲಯದ ಕೆಟ್ಟ ಅನುಭವದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಇಂಥ ಕಡೆ ಸಿಕ್ಕಿಕೊಳ್ಳಬೇಕೆಂಬ ಮನಸಿರಲಿಲ್ಲ. ಅದರೂ ಹುಟ್ಟು ಗುಣ ಕೈ ಕೊಟ್ಟಿತು.
ಗೆಳೆಯರ ಒತ್ತಾಯಕ್ಕೆ ಮಣಿದು, ರಾಜಧಾನಿಯಲ್ಲಿ ಕರ್ನಾಟಕದ ಧ್ವನಿಯನ್ನು ಗಟ್ಟಿಗೊಳಿಸಲು ಸಾಧ್ಯವಾದರೆ, ಕನ್ನಡದ ಋಣ ತೀರಿಸಲೊಂದು ಅವಕಾಶ ಅಂತ ಭಾವಿಸಿಕೊಂಡು ಚುನಾವಣಾ ಕಣಕ್ಕಿಳಿದ.ಗೆದ್ದ.ಆದರೆ ಈ ಜಯವು ಸಾಕಷ್ಟು ಸವಾಲುಗಳನ್ನು ಮುಂದೆ ತಂದಿರಿಸಿತ್ತು.ಚದುರಿ ಹೋಗಿದ್ದ ದೆಹಲಿ ಕನ್ನಡಿಗರನ್ನು ಒಂದೆಡೆಗೆ ತರಬೇಕಿತ್ತು, ಅಗಲೇ ಮೇಲೇಳುತ್ತಿದ್ದ ಹೊಸ ಕಟ್ಟಡದ ಕೆಲಸಗಳನ್ನು ಪೂರೈಸಲು ಹಣ ಸಂಗ್ರಹ ಆಗಬೇಕಿತ್ತು, ಮತ್ತು ರಾಜಧಾನಿಯಲ್ಲಿ ದುರ್ಬಲವಾಗಿರುವ ಕರ್ನಾಟಕದ ಧ್ವನಿಯನ್ನು ಕರ್ನಾಟಕ ಸಂಘದ ಮೂಲಕ ಬಲಗೊಳಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿತ್ತು.ಕಾರ್ಯಕಾರೀ ಸಮಿತಿಯ ಸೂಕ್ತ ಮಾರ್ಗದರ್ಶನದಲ್ಲಿ ಮೇಲಿನ ಯೋಜನೆಗಳನ್ನು ಕಾರ್ಯಗತಗೊಳಿಸಲು ಶಕ್ತಿಮೀರಿ ದುಡಿಯತೊಡಗಿದ.
ಬೆಳಿಗ್ಗೆ ೮ ಗಂಟೆಗೆ ಗುರ್ಗಾಂವ್ ನಲ್ಲಿರುವ ಕಛೇರಿಗೆ ಹೋಗುವವನುಸಂಜೆ ಆರು ಗಂಟೆಗೆ ಮೋತಿ ಭಾಗ್ ನಲ್ಲಿರುವ ದೆಹಲಿ ಕರ್ನಾಟಕ ಸಂಘಕ್ಕೆ ಧಾವಿಸುತ್ತಿದ್ದ.ರಾತ್ರಿ ೧೧ ಗಂಟೆ ವರೆಗೆ ಅಲ್ಲಿ ಕೆಲಸ ಮಾಡುವುದು ದಿನ ನಿತ್ಯದ ಕಾರ್ಯವಾಗಿತ್ತು.ಶನಿವಾರ-ಆದಿತ್ಯವಾರಗಳೆಲ್ಲ ಸಂಘದ ಕೆಲಸಗಳಿಗೆ, ಕನಾಟಕದಿಂದ ಆಗಮಿಸಿದ ಕನ್ನಡಿಗರಿಗೆ ಸಹಾಯ ಮಾಡುವ ಕೆಲಸಗಳಿಗೆ ಸೀಮಿತವಾಗಿತ್ತು. ಎರಡು ಅವಧಿಗೆ ಅಂದರೆ ಒಟ್ಟು ನಾಲ್ಕು ವರ್ಷಗಳ ಕಾಲ ನಿರಂತರ ಅಧ್ಯಕ್ಷನಾಗಿ ಕೆಲಸ ಮಾಡಿದ ಇವನುಬಿತ್ತಿದ ಬೀಜ ಫಲ ನೀಡಿತ್ತು. ದೆಹಲಿ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿ ಸಂಘದ ಕಡೆ ಬರತೊಡಗಿದ್ದರು. ಸಂಘವು ನಡೆಸುತ್ತಿದ್ದ ವಿಚಾರ ಸಂಕಿರಣ ಮತ್ತಿತರ ಕಾರ್ಯಕ್ರಮಗಳಿಂದ ಸಂಘಕ್ಕೆ ವಿಶ್ವವಿದ್ಯಾಲಯವೊಂದರ ಆಯಾಮ ಬರತೊಡಗಿತ್ತು. ಆದರೆ ಈ ಅವಧಿಯಲ್ಲಿ ಅವನ ಶೈಕ್ಷಣಿಕ ಕೆಲಸಗಳೆಲ್ಲ ಹಿಂದೆ ಸರಿದುಬಿಟ್ಟವು. ಕನ್ನಡಕ್ಕಾಗಿ ಕಟ್ಟಡವೊಂದನ್ನು ಕಟ್ಟುವುದು ಕೂಡಾ ಮುಖ್ಯ ಕೆಲಸ ಅಂದುಕೊಂಡು ಸಮಾಧಾನ ಪಟ್ಟುಕೊಂಡ.
ಇಂಥ ದಣಿವರಿಯದ ದುಡಿತದಿಂದ ಸಂಘದ ಸುಂದರ ಕಟ್ಟಡವು ಇವನ ಶುಗರ್ ಲೆವೆಲಿನಂತೆ ಮೇಲೆ ಮೇಲೆ ಏರತೊಡಗಿತು.
ಪರಿಣಾಮ ಹೊಸದಾಗಿ ಸೇರ್ಪಡೆಕೊಂಡ ಖಾಯಿಲೆ- ರಕ್ತದೊತ್ತಡ.
ಮಧುಮೇಹ ಮತ್ತು ರಕ್ತದೊತ್ತಡದ ಜಂಟೀ ಪರಿಣಾಮವೆಂದರೆ ಪಾರ್ಶ್ವವಾಯು ಮತ್ತು ಹೃದಯಾಘಾತ.
ಸತ್ಯದರ್ಶನ
ಇಂಥಹ ಜಾನ್‌ಲೇನಾ ಖಾಯಿಲೆಗಳು ಒಂದು ತರಹದ ಗುಪ್ತರೋಗದಂತೆ. ಅವುಗಳು ಮುನ್ಸೂಚನೆ ನೀಡಿ ಬರುವುದಿಲ್ಲ. ಸೂಚನೆ ಸಿಕ್ಕಾಗ ದೇಹದ ಸ್ಥಿತಿ ಸಿಕ್ಕುಸಿಕ್ಕಾಗಿರುತ್ತದೆ; ಅಪಾಯ ಸಂಭವಿಸಿ ಬಹು ಕಾಲ ಆಗಿರುತ್ತದೆ. ಅದಕ್ಕೆ ಇವನದ್ದೇ ಒಂದೆರಡು ಉದಾಹರಣೆಗಳುಂಟು.
೨೦೧೦ರ ಅಕ್ಟೋಬರದ ಒಂದು ದಿನ ಬೆಳಗ್ಗೆ ಎದ್ದು ಕನ್ನಡಿ ನೋಡಿದಾಗ ಎಡಗಣ್ಣಿನ ಒಳತಳದಲ್ಲಿ ರಕ್ತ ಸೋರಿ ಅರ್ಧ ಕಣ್ಣು ಕಾಣಿಸದಾಯಿತು. ಭಯದಿಂದ ತಕ್ಷಣ ಆಸ್ಪತ್ರೆಗೆ ಓಡಿದ.ಲೇಸರ್ ಕಿರಣಗಳನ್ನು ಉಪಯೋಗಿಸಿ, ಕಣ್ಣೊಳಗಿನ ರಕ್ತದ ಕಲೆಗಳನ್ನು ತೆಗೆದು ಹಾಕಲಾಯಿತು. ಹಾಗೆಯೇ ಕಣ್ಣೊಳಗೆ ಒಡೆದು ಹೋದ ನಾಳಗಳನ್ನು ಅಲ್ಲಿಯೇ ಬತ್ತಿಸಿ ಮತ್ತೆ ರಕ್ತ ಒಸರದಂತೆ ಮಾಡಲಾಯಿತು. ಸುಮಾರು ಮೂರು ತಿಂಗಳುಗಳ ಕಾಲ ನಡೆದ ಈ ಟ್ರೀಟ್‌ಮೆಂಟ್‌ನ ಆನಂತರ ಕಣ್ಣು ಮೊದಲಿನಂತಾಗದಿದ್ದರೂ ಓದಲು ಬರೆಯಲು ಅಡ್ಡಿಯಿಲ್ಲದಂತಾಯಿತು.
ಒಂದು ಅಮೇರಿಕಾ ಪ್ರವಾಸದಲ್ಲಿ ಇದ್ದಕ್ಕಿದ್ದಂತೆ ಆತನ ಎರಡೂ ಪಾದಗಳು ತೀಕ್ಷ್ಣವಾಗಿ ಊದಿಕೊಳ್ಳಲು ಆರಂಭವಾದುವು.ಸುದೀರ್ಘವಾದ ವಿಮಾನ ಪ್ರಯಾಣದಿಂದ ಹಾಗಾಗಿರಬೇಕು ಅಂದುಕೊಂಡಿದ್ದ. ಆದರೆ ನಾಲ್ಕಾರು ದಿನಗಳ ಆನಂತರವೂ ಊತ ಕಡಿಮೆಯಾಗಲಿಲ್ಲ. ಹೇಗೋ ಸುಧಾರಿಸಿಕೊಂಡು ಹಿಂದೂಸ್ತಾನಕ್ಕೆ ಮರಳಿದ. ೨೦೧೧ರ ಎಪ್ರಿಲ್ ತಿಂಗಳ ಕೊನೆಯಲ್ಲಿ, ಸಂಸ್ಥೆಯ ವೈದ್ಯರ ಸಲಹೆಯ ಮೇರೆಗೆ, ದೆಹಲಿಯ ಫೋರ್ಟಿಸ್ ಆಸ್ಪತ್ರೆಗೆ ಹೋಗಿ ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡಿಸಿಕೊಂಡ. ಫಲಿತಾಂಶ ಆಘಾತಕಾರಿಯಾಗಿತ್ತು.
ಯೂರಿನ್ ಕ್ರಿಯೇಟಿನೈನ್ (ಮೂತ್ರ ಉತ್ಪಾದೆನೆಯ ಮಟ್ಟ) ೨.೬ಕ್ಕೆ ಏರಿತ್ತು.
ಆರೋಗ್ಯವಂತರ ದೇಹದಲ್ಲಿ ಅದು ೦.೬ ರಿಂದ ೧.೦೦ ಇರಬೇಕು.
ಥೇಟ್‌ಸಂತನ ಹಾಗೆ ಕಾಣಿಸುತ್ತಿದ್ದ ಡಾ. ಸಂಜೀವ್ ಗುಲಾಟಿ ಹೇಳಿದ್ದರಂತೆ, ನಿಮ್ಮ ಕಿಡ್ನಿಯ ಶೇಕಡಾ ೬೦ ಭಾಗ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಇದು ಡಯಾಬೆಟಿಕ್‌ನ ಪರಿಣಾಮವಾದ್ದರಿಂದ ಇದರ ಅಧ:ಪತನವನ್ನು ಇನ್ನುತಡೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇದು ಏರುತ್ತಾ ಹೋಗಲಿದೆ. ಕಾಲಿನ ನೀರು ದೇಹದಾದ್ಯಂತ ವ್ಯಾಪಿಸಲಿದೆ. ಹೆಚ್ಚೆಂದರೆ ಆರು ತಿಂಗಳುಗಳೊಳಗೆ ನಿಮಗೆ ಡಯಾಲಿಸಿಸ್ ಆರಂಭಿಸಲೇಬೇಕಾಗುತ್ತದೆ.
ಬದುಕುವ ಆಸೆ ಬಿಟ್ಟು ಮನೆಗೆ ಮರಳಿದ್ದ ಈತ ತಿಂಗಳಿಡೀ ಮೌನವಾಗಿದ್ದ.
ದೇಹದಲ್ಲಿ ಎರಡು ಕಿಡ್ನಿಗಳಿರುತ್ತವೆ.
ತಿಂದ ಆಹಾರದಲ್ಲಿ ದೇಹಕ್ಕೆ ಬೇಕಾದ್ದನ್ನು ಉಳಿಸಿ, ಬೇಡವಾದ್ದನ್ನು ಮೂತ್ರದ ಮೂಲಕ ಹೊರ ಹಾಕುವ ಕೆಲಸವನ್ನು ಕಿಡ್ನಿಗಳು ನಿರಂತರವಾಗಿ ಮಾಡುತ್ತಿರುತ್ತವೆ.
ಗೇರು ಬೀಜದ ಆಕ್ರತಿಯಲ್ಲಿರುವ ಕಿಡ್ನಿಯ ಒಳ ಭಾಗದಲ್ಲಿ ನೆಫ್ರೋ (ಕಿಡ್ನಿ ಅಧ್ಯಯನ ಶಾಸ್ತ್ರ -ನೆಫ್ರೋಲೊಜಿ) ಎಂಬ ಹೆಸರಿನ ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಪುಟ್ಟ ಪುಟ್ಟ ಕಣಗಳಿರುತ್ತವೆ.
ಈ ನೆಫ್ರೋಗಳು ತಿಂದ ಆಹಾರದಲ್ಲಿರುವ ಸೋಡಿಯಂ, ಪೊಟಾಷಿಯಂ ಮತ್ತಿತರವುಗಳನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಿ, ಆಯಾ ದೇಹಕ್ಕೆ ಅಗತ್ಯವಿರುವಷ್ಟನ್ನು ರಕ್ತಕ್ಕೆ ದಾಟಿಸುತ್ತದೆ.ಅನಗತ್ಯವಾದ್ದನ್ನು ಮೂತ್ರದ ಮೂಲಕ ಹೊರಹಾಕುತ್ತವೆ.
ಡಯಾಬೆಟಿಸ್ ಮತ್ತಿತರ ಖಾಯಿಲೆಗೆಳು ಈ ಎಲ್ಲ ನೆಫ್ರೋಗಳನ್ನು ನಿಧಾನವಾಗಿ ಸಾಯಿಸುತ್ತವೆ, ಇಲ್ಲವೇ ಶಕ್ತಿಹೀನಗೊಳಿಸುತ್ತವೆ. ಆಗ ದೇಹಕ್ಕೆ ಅನಗತ್ಯವಾಗ ಅಂಶಗಳು ಮೂತ್ರದ ಮೂಲಕ ಹೊರಹೋಗದೆ, ರಕ್ತಕ್ಕೆ ಸೇರಿಕೊಂಡು ದೇಹ ಅಸ್ತವ್ಯಸ್ತಗೊಳ್ಳುತ್ತದೆ.
ಸತ್ತು ಹೋದ ನೆಫ್ರೋಗಳನ್ನು ಮತ್ತೆ ಬದುಕಿಸಲು ಮನುಷ್ಯ ಕಲಿತಿಲ್ಲ.
ತಪಸ್ಸು ಮಾಡದೆಯೇ ತಾನೇನು ಎಂಬುದನ್ನು ಕಂಡುಕೊಂಡುಬಿಟ್ಟಿದ್ದ.
ಹೆಂಡತಿ ಶೋಬಾನಾಳಿಗಾಗಲೀ ಮಗ ಅನನ್ಯನಿಗಾಗಲೀ ಇದನ್ನು ಹೇಳುವ ಧೈರ್ಯ ಇವನಿಗಿರಲಿಲ್ಲ.
ಆದರೆ ದಿನೇ ದಿನೇ ಏರುತ್ತಿರುವ ಇವನ ಕಾಲಿನ ಊತ ಮೊಣಕಾಲಿನವರೆಗೆ ಆವರಿಸಿಕೊಂಡದ್ದನ್ನು ಗಮನಿಸಿದ ಅವರಿಬ್ಬರೂ ಮೌನವಾಗಿ ದು:ಖಿಸುತ್ತಿರುವುದು ಇವನಿಗೂ ಗೊತ್ತಾಗಿತ್ತು.
ಈ ನಡುವೆ ಹೇಗಿದ್ದೀಯಾ ಮಗಾ.. ಎಂದು ಅಕ್ಕರೆಯಿಂದ ವಿಚಾರಿಸುವ ಮತ್ತೊಬ್ಬರೂ ಕಡಿಮೆಯಾಗಿಬಿಟ್ಟರು. ೨೦೧೧ರ ಜೂನ್‌ನಲ್ಲಿತಂದೆ ತೀರಿಕೊಂಡರು. ಇವನು ಹದಿನೈದು ದಿನಗಳ ರಜ ಹಾಕಿ ಊರಿಗೆ ಹೋಗಿದ್ದ. ಕಂಡವರೆಲ್ಲರೂ ಸ್ವಲ್ಪ ಊದಿಕೊಂಡಂತಿದ್ದ ಅವನ ದೇಹದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಮುಖ್ಯವಾಗಿ ಕಣ್ಣುಗಳ ಕೆಳಭಾಗದಲ್ಲಿ ರೆಪ್ಪೆಗಳಡಿಯಲ್ಲಿ ನೀರು ಕಾಣಿಸಿಕೊಂಡಿತ್ತು. ಮೂತ್ರ ಪಿಂಡಗಳು ದೇಹದಲ್ಲಿನ ಅನಗತ್ಯ ನೀರನ್ನು ಹೊರಹಾಕುವಲ್ಲಿ ವಿಫಲವಾದ್ದರಿಂದ ನೀರು ದೇಹದಲ್ಲಿಯೇ ಉಳಿದು ಎಲ್ಲೆಂದರಲ್ಲಿ ಅದು ಶೇಖರವಾಗತೊಡಗಿತ್ತು. ಅವನೀಗ ಉರುಟು ಉರುಟಾಗಿ ಕಾಣಿಸತೊಡಗಿದ್ದ. ಕೇಳಿದವರಿಗೆಲ್ಲರಿಗೂ ಕಿಡ್ನಿ ಸಮಸ್ಯೆಯಿದೆ ಎಂದಷ್ಟೇ ಹೇಳಿದ್ದ.
ಜುಲೈ ತಿಂಗಳಿಗಾಗುವಾಗ ಕಿಡ್ನಿಯ ಕಾರ್ಯಕ್ಷಮತೆ ಶೇಕಡಾ ಮೂವತ್ತಕ್ಕೆ ಇಳಿದಿತ್ತು.
ಅವನು ಡಯಾಲಿಸಿಸ್‌ಗೆ ಮಾನಸಿಕವಾಗಿ ಸಿದ್ಧನಾಗತೊಡಗಿದ್ದ. ಆದರೂ ಕಛೇರಿಯ ಕೆಲಸಗಳನ್ನು ನಿರ್ಲಕ್ಷಿಸಲಿಲ್ಲ. ದೇಹ ಕುಸಿಯುತ್ತಿದ್ದಂತೆ ಹೆಚ್ಚು ಹೆಚ್ಚು ಕೆಲಸ ಮಾಡಲು ಆರಂಭಿಸಿದ.ಗೆಳೆಯ ಉಮಾಪತಿಯ ಒತ್ತಾಯಕ್ಕೆ ಮಣಿದು ವಿಜಯ ಕರ್ನಾಟಕ ಪತ್ರಿಕೆಗೆ ಕಾಲಂ ಬರೆಯಲೂ ಒಪ್ಪಿಕೊಂಡ. ಸಾವಿಗೇ ಸವಾಲು ಹಾಕುವವನಂತೆ.
ನವಂಬರ ತಿಂಗಳಲ್ಲಿ ಹೆಂಡತಿಗೆ ಎಲ್ಲವನ್ನೂ ವಿವರಿಸಿದ.
ಎಲ್ಲವನ್ನೂ ಕೇಳಿಸಿಕೊಂಡ ಆಕೆ, ಡಯಾಲಿಸಿಸ್ ನಿಜಕ್ಕೂ ಪರಿಹಾರವಲ್ಲ. ಜೊತೆಗೆ ಅದನ್ನು ನಿರಂತರವಾಗಿ ಮಾಡುತ್ತಲೇ ಇರಬೇಕು.ಅಂತಿಮವಾಗಿ ದಿನಕ್ಕೆ ಮೂರು ಬಾರಿ ಮಾಡಿಸಿಕೊಳ್ಳಬೇಕು, ಕಾರಣ ಕಿಡ್ನಿ ಕಸಿ (ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್) ಮಾಡಿಸಿಕೊಳ್ಳುವುದೇ ಒಳ್ಳೆಯದು ಅಂತ ಸಲಹೆ ನೀಡಿದಳು.
ಇವನು ಸರಿ ಎಂದು ತಲೆಯಾಡಿಸಿದ.
ಆದರೆ ಕಿಡ್ನಿ ತಪಾಸಣೆಗೆ ಹೊರಟವನಿಗೆ ಬಲುಬೇಗ ಸತ್ಯದರ್ಶನವಾಗಿತ್ತು.
ಸರಕಾರೀ ಕಿಂಡಿಯ ಮೂಲಕವೇ ಕಿಡ್ನಿಗೆ ಬೇಡಿಕೆ ಸಲ್ಲಿಸಿ, ಅದು ಸಿಗುವವರೆಗೆ ವರ್ಷಾನುಗಟ್ಲೆ ತೆಪ್ಪಗೆ ಕಾಯಬೇಕು.
ಅದಕ್ಕೆ ಇರಬೇಕು ಪ್ರಭುದೇವ, ಸಾವನ್ನಕ್ಕರ ಸಾಧನೆ ಮಾಡಿದೊಡೆ ಕಾದುವ ದಿನವಾವುದು ಎಂದು ಪರಿತಪಿಸಿದ್ದು.
ಎಷ್ಟೋ ವರ್ಷಗಳ ನಿರೀಕ್ಷೆಯ ಬಳಿಕ ಸಿಗುವ ಕಿಡ್ನಿಯ ಕಂಡಿಷನ್ ಹೇಗಿರುತ್ತದೆ ಅಂತ ಊಹಿಸುವುದೂ ಕಷ್ಟ.
೬೦ ವರ್ಷ ದಾಟಿದವರ ಕಿಡ್ನಿಯಿಂದ ಹೆಚ್ಚು ಪ್ರಯೋಜನವಿಲ್ಲ.
ಯಾವುದೋ ಅಫಘಾತದಲ್ಲಿ ಆಕಸ್ಮಿಕ ಮರಣ ಹೊಂದಿದ
ತರುಣರ ಕಿಡ್ನಿ ಸಿಕ್ಕರೆ, ಅದು ನಿಮ್ಮ ದೇಹಕ್ಕೆ ಒಪ್ಪಿಗೆಯಾದರೆ ನೀವು ಲಕ್ಷದಲ್ಲಿ ಒಬ್ಬರು,
ಅದು ನಿಮ್ಮ ಪುಣ್ಯ.
ಭಾರತ ದೇಶದಲ್ಲಿ ಸತ್ತಮೇಲೆ ದೇಹದಾನ ಮಾಡುವುದು ಇನ್ನೂ ಜನಪ್ರಿಯವಾಗಿಲ್ಲ.
ಸತ್ತ ಮೇಲಾದರೂ ದೇಶ ಸೇವೆ ಮಾಡಲು ನಮಗೆ ತಿಳಿದಿಲ್ಲ,
ಸತ್ತವರನ್ನು ಸುಟ್ಟು ಹಾಕುವುದೇ ಇಲ್ಲಿ ಜಾಸ್ತಿ.
ಹೀಗಾಗಿ ಕಿಡ್ನಿ ದೊರೆಯುವುದು ಸುಲಭವಲ್ಲ.
ಅವನು ಡಯಾಲಿಸಿಸ್‌ಗೆ ಮಾನಸಿಕವಾಗಿ ಮತ್ತೊಮ್ಮೆ ಸಿದ್ಧನಾಗತೊಡಗಿದ್ದ.
ಟೈಪ್-೨
ನನ್ನ ಬ್ಲಡ್ ಗ್ರೂಪ್ ಮತ್ತು ನಿಮ್ಮದು ಒಂದೇ ಅಲ್ವಾ? ಅಲ್ಲಿ ಇಲ್ಲಿ ಹುಡುಕುವುದು ಯಾಕೇ? ನನ್ನದೆ ಒಂದು ಕಿಡ್ನಿ ತೆಗೆದುಕೊಳ್ಳಿ. ಕಿಡ್ನಿ ದಾನ ಮಾಡಿದವರಿಗೆ ಏನೂ ತೊಂದರೆಯಾಗುವುದಿಲ್ಲ ಅಂತಲ್ಲಾ? ಸುಮಾರು ೨೫ ವರ್ಷಗಳ ಹಿಂದೆ ಹೃದಯವನ್ನು ಕೊಟ್ಟಿದ್ದವಳು ಈಗ ಕಿಡ್ನಿ ತೆಗೆದುಕೋ’ ಎನ್ನುತಿದ್ದಾಳೆ.ಅದೂ ಅತ್ಯಂತ ನಿರ್ಮಲ ಚಿತ್ತದಲ್ಲಿ, ಆತಂಕ ರಹಿತ ಧ್ವನಿಯಲ್ಲಿ.ಆದರೆ ನಿರ್ಣಾಯಕ ವಾಣಿಯಲ್ಲಿ. ದುಷ್ಟ ವ್ಯಾಘ್ರನೆದುರು ಖಂಡವಿದೆ ಕೋ, ಮಾಂಸವಿದೆ ಕೋ ಎಂದಿದ್ದ ಪುಣ್ಯ ಕೋಟಿಯ ಕತೆ ನೆನಪಾಗಿ ಗಳಗಳನೆ ಅಳಲು ಶುರುಮಾಡಿದ್ದ.
ಇವನವಳ ಗಂಡ ಇರಬಹುದು.ಆದರೆ ಅತ್ಯಂತ ಆರೋಗ್ಯವಂತಳಾಗಿರುವ ಅವಳ ಕಿಡ್ನಿ ಕತ್ತರಿಸುವ ಅಧಿಕಾರ ಇವನಿಗೆಲ್ಲಿದೇ? ಲಿಂಗ ಅಸಮಾನತೆಯ ವಿರುದ್ಧ ಇಷ್ಟು ವರ್ಷ ಹೋರಾಡಿದ್ದರ ಅಂತಿಮ ಪರಿಣಾಮ ಇದುವೆಯೇ? ಕೊನೆಯಿಲ್ಲದ ಅಸಂಖ್ಯ ಪ್ರಶ್ನೆಗಳ ಕಡಲಲ್ಲಿ ಮುಳುಗುತ್ತಲೇ ಮತ್ತೂ ಒಂದು ತಿಂಗಳು ಕಳೆದ.
ಕಿಡ್ನಿ ಕಸಿಯ ಆಸೆ ಬಿಟ್ಟ ಇವನು ಡಯಾಲಿಸಿಸ್‌ಗೆ ಸಜ್ಜಾಗತೊಡಗಿದ.
೨೦೧೨ ರ ಜನವರಿ ತಿಂಗಳಿಗಾಗುವಾಗ ಯೂರಿನ್ ಕ್ರಿಯೇಟಿನೈನ್ ೬ಕ್ಕೆ ತಲುಪಿತ್ತು.
ಅದು ಹಿಮ್ಮುಖವಾಗಿ ಚಲಿಸಬಹುದೇ ಎಂಬ ಅವನ ಆಸೆ
ನಿಧಾನವಾಗಿ ಸುಳ್ಳಾಗಲಾರಂಭಿಸಿತ್ತು.
ದೇಹವಿಡೀ ನೀರೇರುತ್ತಿತ್ತು.
ಕಫ ಕಾಣಿಸಿಕೊಂಡಿತು.
ಮೂಗು ಕಟ್ಟಿಕೊಳ್ಳತೊಡಗಿತು
ರಾತ್ರಿ ನಿದ್ರಿಸುವುದು ಕಷ್ಟವಾಗತೊಡಗಿತು.
ಕೈ ಬೆರಳುಗಳು ಬಾಗಲಾರದಾದುವು.
ಚರ್ಮದ ಮೇಲೆ ತುರಿಕೆ ಕಾಣಿಸಿಕೊಂಡು
ದೆಹಲಿಯ ಛಳಿಯಲ್ಲೂ ಬಟ್ಟೆ ಹಾಕಲಾಗದ ಅಸಹನೀಯ ಪರಿಸ್ಥಿತಿ ನಿರ್ಮಾಣಗೊಂಡಿತು.
ಯೂರಿನ್ ಕ್ರಿಯೇಟಿನೈನ್ ೭ಕ್ಕೆ ತಲುಪಿತ್ತು.
ಈ ನಡುವೆ ಅಣ್ಣನ ಮಗಳ ಮದುವೆಗೆಂದು ಊರಿಗೆ ಹೋದವನು ತಂಗಿ ಗುಲಾಬಿ ಬಿಳಿಮಲೆಯ ಒತ್ತಾಯದಿಂದ
ಮಂಗಳೂರಿನಕಿಡ್ನಿ ಡಾಕ್ಟರರೊಬ್ಬರನ್ನು ಭೇಟಿ ಮಾಡಿದ. ಅವರು ಎಲ್ಲ ಪರೀಕ್ಷೆ ಮಾಡಿ ಸದ್ಯ ನಿಮ್ಮ ಕಿಡ್ನಿಯ ೮೯ ಭಾಗ ಕೆಲಸ ಮಾಡ್ತಾ ಇಲ್ಲ. ಸರಿಯಾದ ದಾನಿಗಳು ದೊರೆತು ಕಿಡ್ನಿ ಕಸಿ ಮಾಡಿಸಿಕೊಂಡರೆ ಮಾತ್ರ ಮುಂದಕ್ಕೆ ಕನಿಷ್ಠ ೨೦ ವರ್ಷಕ್ಕೆ ಮೋಸವಿಲ್ಲ ಅಂತ ಹೇಳಿಬಿಟ್ಟರು. ಇವನು ಹಗುರವಾದ ಕಿಡ್ನಿಯೊಂದಿಗೆ ದೆಹಲಿಗೆ ಹಿಂತಿರುಗಿದ.ಒಲವು ಗೆಳೆಯರಿಗೆ ತನ್ನ ಆತಂಕವನ್ನು ಹೇಳಿಕೊಂಡಾಗ, ಕಿಡ್ನಿ ಕಸಿ ಮಾಡಿಸಿಕೊಳ್ಳುವ ಮತ್ತು ಮಾಡಿಸಿಕೊಂಡವರ ಬಗ್ಗೆ ಹಲವು ಮಾಹಿತಿಗಳು ದೊರಕಿದವು.
ಇವನು ಮತ್ತೊಮ್ಮೆ ಕಿಡ್ನಿ ಕಸಿಗೆ ಮಾನಸಿಕವಾಗಿ ಸಿದ್ಧನಾಗತೊಡಗಿದ್ದ! ಇದಕ್ಕೆ ಹೆಂಡತಿಯ ನಿಷ್ಟುರ ಮಾತುಗಳೇ ಕಾರಣ!
ಮುತ್ತೈದೆ ಸಾವು ಇತ್ಯಾದಿ ಬಯಸಿದವಳಲ್ಲ ಶೋಭನಾ. ಇಷ್ಟು ವರ್ಷಗಳ ಕಾಲ ತನ್ನ ಜೊತೆಗಾರನಾಗಿದ್ದವನು ಮತ್ತೊಂದಷ್ಟು ವರ್ಷಗಳ ಕಾಲ ಜೊತೆಯಲ್ಲಿರಲಿ ಎಂಬ ಸಣ್ಣ [?] ಸ್ವಾರ್ಥ ಇದ್ದಿರಲೂಬಹುದು. ಆಕೆಯ ಪುಟ್ಟ ಲೋಕದಲ್ಲಿ ಗಂಡ ಮತ್ತು ಮಗ ಬಿಟ್ಟರೆ ಬೇರಾರೂ ಇದ್ದಂತಿಲ್ಲ. ಗಂಡನನ್ನು ಹೀಗೇ ಉಳಿಸಿಕೊಳ್ಳಲು ಅವಳೆದುರು ಬೇರೆ ದಾರಿ ಯಾವುದೂ ಉಳಿದಿರಲಿಲ್ಲ ಎಂಬುದಂತೂ ಸತ್ಯ. ಮಿತ ಮಾತಿನ, ಆದರೆ ಮಾತಾಡಿದಾಗಲೆಲ್ಲ ನಿರ್ಣಾಯಕವಾಗಿ ಮಾತಾಡುವ ಆಕೆಗೆದುರಾಗಿ ಆತನೆಂದೂ ವಾದಿಸಿರಲಿಲ್ಲ.
ಒಟ್ಟಿನಲ್ಲಿ ಕೊಡುಗೆ ಕೊಡಲು ಅವಳಿಗೆ ಕಾರಣಗಳಿದ್ದವು.
ಆದರೆ ಹೆಂಡತಿಯ ಕೊಡುಗೆ ಸ್ವೀಕರಿಸಲು ಇವನಿಗೆ ಕಾರಣಗಳಿರಲಿಲ್ಲ.
ಕಾರಣಗಳನ್ನು ಹುಟ್ಟಿಸಿಕೊಂಡು ತನ್ನದೇ ಹೃದಯವನ್ನು ಒಪ್ಪಿಸಬೇಕಾಗಿತ್ತು; ಒಪ್ಪಿಸತೊಡಗಿದ್ದ.
ಓ.., ನನ್ನ ಪ್ರಿಯ ಹೃದಯವೇ..
ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು.
ಆದರೆ ನನ್ನ ಹೋರಾಟಕ್ಕೆ ಉಳಿದಿರುವುದು ಒಂದೇ ಹಾದಿ..
ಮೇಲಾಗಿ ಅವಳು ನೀನು ಪ್ರೀತಿಸಿದ್ದ, ಪ್ರೀತಿಸುತ್ತಿರುವ ನನ್ನ ಪ್ರೀತಿಯ ಹೆಂಡತಿ.
ಅವಳಾಗಿಯೇ ನೀಡಿದ ಸಲಹೆ ಇದು. ನಾನವಳ ಆರೋಗ್ಯವನ್ನು ಕಿತ್ತುಕೊಳ್ಳಲು ಹೊರಟಿಲ್ಲ.
ಈ ಕುರಿತು ಆಕೆಯಲ್ಲೂ ಯಾವುದೇ ಗೊಂದಲಗಳಿದ್ದಂತೆ ನನಗಂತೂ ಕಾಣಿಸುವುದಿಲ್ಲ.
ಮೇಲಾಗಿ ಅವಳೇ ನನ್ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಪಾಪ ಪ್ರಜ್ಞೆಯನ್ನು ಕಡಿಮೆ ಮಾಡುತ್ತಿದ್ದದ್ದು ನಿನಗೂ ಗೊತ್ತಿದೆ.
ಅವಳೇ ದೂರವಾಣಿಯ ಮೂಲಕ ಆಕೆಯ ತಂದೆ-ತಾಯಿ, ತಮ್ಮ ಮತ್ತು ತಂಗಿಯರಿಗೆ ಅದನ್ನು ಹೇಳಿದ್ದಳು. ನನಗೆ ತೊಂದರೆಯಾಗದೆ ಅವರಿಗೆ ಉಪಕಾರವಾಗುವುದಿದ್ದರೆ ಯಾಕೆ ಮಾಡಬಾರದು? ಈ ಹಂತದಲ್ಲಿ ನಾನವರಿಗೆ ಬೆಂಬಲವಾಗಿ ನಿಲ್ಲದೆ ಬೇರಾರು ನಿಲ್ಲಬೇಕು? ಎಂದೆಲ್ಲಾ ಆಕೆ ಹೇಳುತ್ತಿದ್ದುದನ್ನು ನೀನೂ ಕೇಳಿದ್ದೀಯಾ.
ಅವಳ ಉದಾತ್ತ ವ್ಯಕ್ತಿತ್ವ, ಉದಾರ ಮನಸು, ಗಟ್ಟಿ ನಿರ್ಧಾರಗಳ ಬಗ್ಗೆ ನಿನಗೆ ಗೊತ್ತಿದೆ.ಅವಳದ್ದು ಭಾಷೆ ಮೀರಿದ ಭಾವ. ನನ್ನ ಮುಂದೆ ಹೆಚ್ಚು ಆಯ್ಕೆಗಳಿಲ್ಲದೇ ಇದ್ದಾಗ ಬೇರೇನು ಮಾಡಲು ನನ್ನಿಂದ ಸಾಧ್ಯ?
ಸಾಮಾನ್ಯವಾಗಿ ಆಸ್ಪತ್ರೆಯ ನಿಯಮಾನುಸಾರ ಬಂಧುಗಳು ಕಿಡ್ನಿ ಕೊಡಬೇಕು. ಅಣ್ಣ, ತಮ್ಮ, ತಂಗಿಹೀಗೆ ರಕ್ತ ಸಂಬಂಧಿಗಳ ನಡುವೆಯೇ ಕಿಡ್ನಿ ಕಸಿ ಯಶಸ್ವಿಯಾಗುತ್ತದಂತೆ.
ಆದರೆ ನನ್ನ ಅಣ್ಣಂದಿರಿಬ್ಬರೂ ಮಧುಮೇಹಿಗಳು. ಅವರು ಕಿಡ್ನಿ ಕೊಟ್ಟರೂ ವೈದ್ಯರು ತೆಗೆದುಕೊಳ್ಳಲಾರರು. ನನ್ನ ತಂಗಿ ಗುಲಾಬಿ ಬಿಳಿಮಲೆಯ ಗಂಡ ಶ್ರೀನಿವಾಸ್ ಕಾರ್ಕಳ ಬೆನ್ನು ಮೂಳೆಯ ತೊಂದರೆಗೆ ಒಳಗಾಗಿ, ಎರಡೂ ಕಾಲುಗಳನ್ನು ಕಳೆದುಕೊಂಡು, ಕಳೆದ ೧೨ ವರ್ಷಗಳಿಂದ ಮನೆ ಬಿಟ್ಟು ಹೊರಬಾರದೇ ಉಳಿದಿರುವಾಗ ತಂಗಿಯನ್ನು ನಾನು ಕೇಳುವುದಾದರೂ ಹೇಗೆ?
ನಾನು ಕೆಲಸ ಮಾಡುವ ಕಛೇರಿಯ ಕ್ಯಾಂಟೀನ್‌ನಲ್ಲಿದ್ದ ಸುಮಾರು ೪೦ ವರ್ಷದ ರಮೇಶ್ ಒಂದಿನ ನನ್ನ ಕಛೇರಿಗೆ ಬಂದು ದೇವರಿಗೆ ಬಾಯಿಗೆ ಬಂದ ಹಾಗೇ ಬೈದು, ನಿಮ್ಮಂತಹವರಿಗೆ ಹೀಗಾಗ ಬಾರದಿತ್ತು, ತಗೊಳ್ಳಿ ನನ್ನ ಕಿಡ್ನಿನಾ ಅಂತ ವೀರಾವೇಶದಿಂದ ಹೇಳಿದ್ದನ್ನು ನೀನೂ ಕೇಳಿದ್ದೀಯಾ. ಅವನಿಗೆ ನಾನೇ ಸಮಾಧಾನ ಹೇಳಿದ್ದಿರಲಿಲ್ಲವೇ?
ಬದುಕಿನ ಇಕ್ಕಟ್ಟಿನ ಘಳಿಗೆಗಳಲ್ಲಿ ಜೊತೆ ನಿಲ್ಲುವ ಹೆಂಡತಿಯ ಮುಂದೆ ಯಾವ ದೈವ? ಯಾವ ದೇವರು?
೨೫ ವರ್ಷಗಳ ಹಿಂದೆ ನೀನು ಅವಳನ್ನು ಪ್ರೀತಿಸಿದ್ದರಿಂದಲ್ಲವೇ ನಾನು ಮದುವೆಯಾದದ್ದು?
ನಮ್ಮ ಮದುವೆಗೆ ಜಾತಿ ಅಡ್ಡ ಬಂದುದರಿಂದ ಸುಮಾರು ಏಳು ವರ್ಷಗಳ ಕಾಲ ನಾವು ಮೌನವಾಗಿ, ತಾಳ್ಮೆಯಿಂದ ಕಾಯಲಿಲ್ಲವೇ? ಕೊನೆಗೂ ನಿನ್ನ ಪ್ರೀತಿಯೇ ಗೆಲ್ಲಲಿಲ್ಲವೇ? ತಂದೆ ತಾಯಿ, ಬಂಧುಗಳನ್ನು ತೊರೆದು ನನ್ನೊಡನೆ ಬಂದ ಆಕೆ ನನ್ನ ಉಸಿರಾದಳು. ನಮ್ಮ ಪ್ರೀತಿ ನನ್ನ ಮನೆಯವರನ್ನೂ, ಆಕೆಯ ಮನೆಯವರನ್ನೂ ಬಹಳ ಬೇಗ ಹತ್ತಿರ ಮಾಡಿತು.
ಜಾತಿ ನಮಗೆಂದೂ ಗೋಡೆಯಾಗಲಿಲ್ಲ. ಜಾತಕದ ಮೇಲೆ ತುಂಬಾ ವಿಶ್ವಾಸವಿರುವ ನನ್ನ ತಂದೆ ಬಿಳಿಮಲೆಗೆ ಹೋದಾಗಲೆಲ್ಲ ನಿನ್ನೆದುರೇ ಹೇಳಲಿಲ್ಲವೇ? ಶೋಭಾಳ ಜಾತಕ ಚೆನ್ನಾಗಿದೆ, ನಿನ್ನದು ಸಾಲದು.ಅವಳ ಜಾತಕದ ಫಲದಿಂದ ನಿನ್ನ ಜಾತಕ ನಡೆಯತ್ತಿದೆ, ಅವಳನ್ನು ಚೆನ್ನಾಗಿ ನೋಡಿಕೋ ಅಂತ?
ಮಹಾರೋಗದ ಮಜ
ದೆಹಲಿ ಕರ್ನಾಟಕ ಸಂಘದಲ್ಲಿ ಇವನೇ ಅಧ್ಯಕ್ಷನಾಗಿದ್ದಾಗ ಮೆನೇಜರ್ ಆಗಿ ಕೆಲಸ ಮಾಡುತ್ತಿದ್ದ ಬಾಲಚಂದ್ರರ ಹೆಂಡತಿ, ತನ್ನ ತಂಗಿಯಿಂದ ಕಿಡ್ನಿ ದಾನ ಪಡೆದು ಕಸಿ ಮಾಡಿಸಿಕೊಂಡಿದ್ದರು. ಇವನ ದೂರದ ನೆಂಟ ಪುತ್ತೂರಿನ ಶ್ರೀ ಸಿ.ಪಿ ಜಯರಾಮರಿಗೆ ಅವರ ಹೆಂಡತಿಯೇ ಕಿಡ್ನಿ ದಾನ ಮಾಡಿದ್ದರು. ಇವನು ನೇರವಾಗಿ ಅವರನ್ನೇ ಮಾತನಾಡಿಸಿದಾಗ ಅವರೂ ಧೈರ್ಯ ಹೇಳಿದ್ದರು. ನಾನು ಒಂದು ಕಿಡ್ನಿಯನ್ನು ಅವರಿಗೆ ಕೊಟ್ಟಿದ್ದೇನೆ. ಅದರಿಂದ ನನಗೇನೂ ತೊಂದರೆಯಾಗಿಲ್ಲ. ಮೇಲಾಗಿ ನಾವೆಲ್ಲ ಹಳ್ಳಿಯಲ್ಲಿ ಇರುವವರು, ಬೇರೆ ಬೇರೆ ಕೆಲಸ ಮಾಡಬೇಕಾಗುತ್ತದೆ, ನೀವು ಪೇಟೆಯಲ್ಲಿ ಇರುವವರು, ಏನೋ ತೊಂದರೆ ಆಗಲಾರದು ಎಂಬ ಅವರ ಮಾತು ಇವನಿಗೆ ವಿಶೇಷ ಬಲ ನೀಡಿತ್ತು.
ಕಿಡ್ನಿ ತೊಂದರೆಯ ಅಂತಿಮ ಹಂತದಲ್ಲಿ ಕಸಿ ಚಿಕಿತ್ಸೆ ಅನಿವಾರ್ಯ. ಕಿಡ್ನಿ ಚಿಕಿತ್ಸೆಯಂತೆಯೇ ಅದಕ್ಕಾಗಿ ನಡೆಸಬೇಕಾದ ತಯಾರಿಯೂ ಅಷ್ಟೆ ಕಾಂಪ್ಲೆಕ್ಸ್. ದಾನ ಮಾಡುವವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಗಟ್ಟಿ ಇರಬೇಕಾಗುತ್ತದೆ. ಅದಕ್ಕಾಗಿ ನಡೆಸಲಾಗುವ ಎಲ್ಲ ಪರೀಕ್ಷೆಗಳಲ್ಲೂ ಪಾಸ್ ಆಗಬೇಕಾಗುತ್ತದೆ.ಐವತ್ತು ವರ್ಷ ವಯಸ್ಸು ದಾಟಿದವರು, ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಇವೆರಡರ ಫ್ಯಾಮಿಲಿ ಹಿಸ್ಟರಿ ಇರುವವರು, ಧೂಮಪಾನಿಗಳು, ಅಧಿಕ ತೂಕವಿರುವವರು ಕನಿಷ್ಟ ವರ್ಷಕೊಮ್ಮೆಯಾದರೂ ತಮ್ಮ ಕಿಡ್ನಿ ಯನ್ನು ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು.
ಎಲ್ಲಿ ಕಸಿ ಮಾಡಿಸಿಕೊಳ್ಳುವುದು?
ಮೈಸೂರು, ಬೆಂಗಳೂರು ಮತ್ತು ಮಣಿಪಾಲಗಳಿಂದ ಮಾಹಿತಿ ತರಿಸಿಕೊಂಡ.ಕೊನೆಗೆ ದೆಹಲಿಯೇ ಒಳಿತೆಂಬ ನಿರ್ಣಯಕ್ಕೆ ಬಂದ.
ದೆಹಲಿಯಲ್ಲಿ ಹತ್ತಾರು ಒಳ್ಳೆಯ ಆಸ್ಪತ್ರೆಗಳಿವೆ. ಅದರಲ್ಲಿ ಇವನು ಆಯ್ದುಕೊಂಡದ್ದು ಮ್ಯಾಕ್ಸ್ ಆಸ್ಪತ್ರೆ. ಇದಕ್ಕೆ ಕಾರಣವಿಲ್ಲದೆ ಇಲ್ಲ. ಮ್ಯಾಕ್ಸ್ ಆಸ್ಪತ್ರೆಯ ನಿರ್ದೇಶಕರ ಕಾರ್ಯದರ್ಶಿಯಾಗಿರುವ ಶ್ರೀಮತಿ ಅನುರಾಧಾ ರಾವ್ ಅವರು ಮೂಲತಹ ಆಂಧ್ರ ಪ್ರದೇಶದವರು ಮತ್ತು ಅವರ ಗಂಡ ಇವನ ಒಳ್ಳೆ ಸ್ನೇಹಿತರು. ಶ್ರೀಮತಿ ಅನುರಾಧ ಅವರು ಇವನ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಒಂದು ಸೂಚನೆ ನೀಡಿ ಇವನಿಗೆ ವಿ.ಐ.ಪಿ ಸ್ಥಾನ ಮಾನ ನೀಡಲು ಕಾರಣರಾಗಿದ್ದರು. ಇದರಿಂದಾಗಿ ವೈದ್ಯರಿಂದ ಆರಂಭವಾಗಿ ದಾದಿಗಳವರಗೆ ಇವನಿಗೆ ಎಲ್ಲಿಯೂ ಯಾವ ಬಗೆಯಲ್ಲೂ ತೊಂದರೆಯಾಗಲಿಲ್ಲ. ಎಲ್ಲಿಯೂ ಕ್ಯೂ ನಿಲ್ಲುವ ಪ್ರಸಂಗ ಬರಲಿಲ್ಲ. ಇವನ ಕಾರಿನ ನಂಬರ್ ಕಂಡ ತಕ್ಷಣ ಒಳಗೆ ಸುದ್ದಿ ರವಾನೆಯಾಗುತ್ತದೆ. ಗಗನ ಸಖಿಯಂತಿರುವ ಚೆಲುವೆಯೊಬ್ಬಳು ಅವನ ಸಹಾಯಕ್ಕೆ ಬರುತ್ತಾಳೆ. ಇವನಿಗೆ ಅಲ್ಲಿಯೂ ರಾಘವಾಂಕನ ನೆನಪು-ರೋಗ ರುಜೆಯಡಸಿಕೊಂಬಲ್ಲಿ ರಂಭೆ ದೊರಕೊಂಡಲ್ಲಿ ಫಲವೇನು?. ಏನಿದ್ದರೂ ಒಂದು ಮಹಾರೋಗದ ನಡುವೆಯೇ ಅವನು ಸ್ವಲ್ಪ ಮಜ ತಗೊಂಡದ್ದು ಮಾತ್ರ ನಿಜವಂತೆ. ಅವನ ಊರಾದ ಪಂಜದ ಸರಕಾರೀ ಆಸ್ಪತ್ರೆಯೆಲ್ಲಿ? ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯೆಲ್ಲಿ? ಒಂದೇ ದೇಶದಲ್ಲಿ ಎಷ್ಟೊಂದು ತಾರತಮ್ಯ?
ಆಸ್ಪತ್ರೆಗೆ ಸೇರುವ ಹಿಂದಿನ ದಿನ ನಿನಗೆ ಭಯವಾಗಿದ್ದಿರಲಿಲ್ಲವೇ ಎಂದು ಪ್ರಶ್ನಿಸಿದರೆ ಅವನ ಉತ್ತರ ನಂಬುವಂತಿತ್ತು. ಅವನು ಅದಾಗಲೇ ಅಂತರ್ಜಾಲವನ್ನು ಪೂರ್ತಿ ಜಾಲಾಡಿಸಿ ಸಾಕಷ್ಟು ಮಾಹಿತಿ ಸಂಗ್ರಹಿಸಿ ಗೆಳೆಯರಿಗೆ, ಕುಟುಂಬದವರಿಗೆ ವಿವರಿಸಿದ್ದ.ಅವನು ಮೊದಲು ತಿಳಿದುಕೊಂಡದ್ದು ಅವನ ಎರಡು ಕಿಡ್ನಿಗಳಲ್ಲಿ ಒಂದನ್ನು ತೆಗೆದು, ಹೊಸದನ್ನು ಅದಕ್ಕೆ ಜೋಡಿಸುವುದು ಅಂತ.
ಆದರೆ ಅದು ಹಾಗಲ್ಲ.
ಕಿಡ್ನಿ ಕಸಿ ಆದ ನಂತರವೂ ಕಸಿ ಮಾಡಿಸಿಕೊಂಡವನ ಎರಡೂ ಕಿಡ್ನಿಗಳು ಹಾಗೆಯೇ ಇರುತ್ತವೆ. ಈ ಕಿಡ್ನಿಗಳಿಂದ ಮೂತ್ರವನ್ನು ಮೂತ್ರ ಕೋಶಕ್ಕೆ ಒಯ್ಯುವ ಎರಡು ನಾಳಗಳಲ್ಲಿ ಒಂದಕ್ಕೆ ಹೊಸ ಕಿಡ್ನಿಯನ್ನು ಜೋಡಿಸುವುದು ತಂತ್ರ.ಅಂದರೆ ಕಸಿಯ ಬಳಿಕ ಒಟ್ಟು ಮೂರು ಕಿಡ್ನಿಗಳು ದೇಹದಲ್ಲಿರುತ್ತವೆ.
ಈ ಬಗ್ಗೆ ಇವನು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಏನಿದ್ದರೂ ಈ ಕೆಲಸ ಮಾಡುವವರು ವೈದ್ಯರು, ದೇಹವನ್ನು ಅವರಿಗೆ ಒಪ್ಪಿಸಿದರೆ ಆಯಿತು.ಹಾಗೆಂದುಕೊಂಡುಇವನು ನಿಶ್ಚಿಂತನಾಗಿದ್ದ; ಆಸ್ಪತ್ರೆಗೆ ಸೇರುವ ಹಿಂದಿನ ದಿನವೂ ಕಛೇರಿಯಲ್ಲಿ ತಡರಾತ್ರಿವರೆಗೂ ಕೆಲಸ ಮಾಡಿದ್ದ.
ಆಸ್ಪತ್ರೆಯ ಡಾಕ್ಟರರುಗಳು ಎಲ್ಲವನ್ನೂ ಸಾವಧಾನದಿಂದ ಮೊದಲೇ ವಿವರಿಸಿದ್ದರು. ವೈದ್ಯರಾದ ಡಾ.ಮೋಹಿತ್ ಕಿರ‍್ಬತ್ ಅತ್ಯಂತ ತಾಳ್ಮೆಯಿಂದ ಬಿಡಿ ಬಿಡಿಯಾಗಿ ಎಲ್ಲವನ್ನೂ ವಿವರಿಸಿ ಒಟ್ಟು ಸುಮಾರು ಆರೂವರೆ ಲಕ್ಷ ರೂಪಾಯಿಗಳ ಖರ್ಚಿನ ಬಗ್ಗೆ ಮಾಹಿತಿಯನ್ನೂ ನೀಡಿದರು.ಅದರಲ್ಲಿ ಸರ್ಜರಿಗೆ ಮುನ್ನ ಮತ್ತು ಸರ್ಜರಿಯ ಆನಂತರ ಕೊಡಬಹುದಾದ ಎರಡು ಇಂಜಕ್ಷನ್‌ಗಳ ಬೆಲೆಯೇ ಒಂದು ಲಕ್ಷದ ನಲುವತ್ತು ಸಾವಿರರೂಪಾಯಿಗಳಾಗಿತ್ತು. ಈ ಇಂಜಕ್ಷನ್‌ಗಳು ಹಳೆ ದೇಹವು ಹೊಸ ಕಿಡ್ನಿಯನ್ನು ತಿರಸ್ಕರಿಸಬಹುದಾದ ಸಾಧ್ಯತೆಗಳನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.ಹೇಗೋ ಹಣ ಜೋಡಿಸಿಕೊಂಡ. ಗೆಳೆಯರು ಚಾಚಿದ ಸಹಾಯ ಹಸ್ತವನ್ನು ಮುಕ್ತವಾಗಿರಿಸಿಕೊಂಡ.
ದೇವರೇ ಮಾಡಿದ ಜೋಡಿಯಿದು
ಕಿಡ್ನಿ ಕಸಿಯ ಬಗ್ಗೆ ಇವನು ಅಂತಿಮ ನಿರ್ಧಾರ ತೆಗೆದುಕೊಂಡದ್ದು ೨೦೧೨ರ ಎಪ್ರಿಲ್ ಮೊದಲ ವಾರದಲ್ಲಿ. ಆನಂತರ ದಂಪತಿಗಳಿಗೆ ಬಗೆಬಗೆಯ ಪರೀಕ್ಷೆಗಳು. ಮೇ ೧೫ರ ಹೊತ್ತಿಗೆ ಸುಮಾರು ೬೦ ಬಗೆಯ ಪರೀಕ್ಷೆಗಳನ್ನು ಮುಗಿಸಿದ್ದರು. ಅದರಲ್ಲಿ ಮುಖ್ಯವಾಗಿ ಇಬ್ಬರ ರಕ್ತದ ಗ್ರೂಪ್ ಒಂದೇ ಆಗಿರಬೇಕು. ಇಬ್ಬರ ರಕ್ತವನ್ನು ಮಿಶ್ರ ಮಾಡಿ ಪರೀಕ್ಷಿಸಿದಾಗ, ಅದು ನಿರೀಕ್ಷಿತ ಪರಿಣಾಮವನ್ನು ಬೀರಬೇಕು. ಜೊತೆಗೆ ಹೃದಯ, ಕಿಡ್ನಿಗಳು ಕೆಲಸ ಮಾಡುವ ಬಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ಕಿಡ್ನಿಯನ್ನು ದೇಹದ ಇತರ ಭಾಗಗಳಿಗೆ ಜೋಡಿಸಿದ ರಕ್ತನಾಳಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಯಾವ ನಾಳವನ್ನು ಕತ್ತರಿಸಬಹುದು ಎಂಬ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಹೀಗೇ ಹತ್ತು ಹಲವು ಸಂಗತಿಗಳು. ಆ ೬೦ ಪರೀಕ್ಷೆಗಳಲ್ಲೂಅವರಿಬ್ಬರೂ ಯಾವ ತೊದರೆಯಿಲ್ಲದೆ ಪ್ಫಸ್ಟ್ ಕ್ಲಾಸಿನಲ್ಲಿ ಪಾಸಾದರು.
ಡಾ. ಮೋಹಿತ್ ಹೇಳಿದ್ದರು-ದೇವರೇ ಮಾಡಿದ ಜೋಡಿಯಿದು.
ಹೀಗೇ ಬಗೆ ಬಗೆಯ ಪರೀಕ್ಷೆಗಳಿಗೆ ಒಳಪಡುತ್ತಲೇ ಕಾನೂನಿನ ಅಗತ್ಯಗಳನ್ನೂ ಪೂರೈಸಿಕೊಳ್ಳಬೇಕಾಗುತ್ತಿತ್ತು.ಮುಖ್ಯವಾಗಿ ಯಾವ ಒತ್ತಡವೂ ಇಲ್ಲದೆ ಸ್ವ ಇಚ್ಛಯಿಂದ ಕಿಡ್ನಿಯನ್ನು ಕೊಡುತ್ತಿದ್ದೇನೆ ಅಂತ ದಾನಿ ಅಫಿದವಿತ್ ಮಾಡಬೇಕು. ಅದಕ್ಕೆ ನೋಟರಿಯ ಸಹಿ ಬೇಕು. ದಾನಿಯ ಹತ್ತಿರದ ಸಂಬಂಧಿಯ (ಇಲ್ಲಿ ಇವರಿಬ್ಬರ ಮಗ ಅನನ್ಯ) ಒಪ್ಪಿಗೆ ಬೇಕು. ಮನಶ್ಯಾಸ್ತ್ರಜ್ಞರ ಟಿಪ್ಪಣಿ ಬೇಕು. ಸ್ತ್ರೀ ರೋಗ ತಜ್ಞೆ, ಹೃದಯ ರೋಗ ತಜ್ಞರ ಒಪ್ಪಿಗೆ ಬೇಕು, ಎಲ್ಲಕ್ಕಿಂತ ಮಿಗಿಲಾಗಿ ಆಸ್ಪತ್ರೆಯಲ್ಲಿ ಕಿಡ್ನಿ ಪ್ಯಾನಲ್ ಮುಂದೆ ಹಾಜರಾಗಿ ನಿರ್ಣಯಗಳನ್ನು ಸಮರ್ಥಿಸಿಕೊಳ್ಳಬೇಕು.ಇವಕ್ಕೆಲ್ಲ ಸುಮಾರು ಒಂದು ಲಕ್ಷ ರೂಪಾಯಿಗಳ ಖರ್ಚು ತಗಲುತ್ತದೆ. ಇಂಥ ಕಠಿಣ ನಿಯಮಗಳ ಮೂಲಕ ಕಿಡ್ನಿ ಅಪಹರಣದಂಥ ಅತ್ಯಂತ ಹೇಯವಾದ ಪ್ರಕ್ರಿಯೆಗಳನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಇಂದು ಆರೋಗ್ಯವಂತ ಕಿಡ್ನಿಯೊಂದರ ಬೆಲೆ ಸುಮಾರು ೫೦ ಲಕ್ಷ ರೂಪಾಯಿಗಳು. ಬಡವರಿಗೆ ೧೦ ಸಾವಿರ ರೂಪಾಯಿಗಳನ್ನು ಕೊಟ್ಟು ಲಕ್ಷಾಂತರ ರೂಪಾಯಿಗಳಿಗೆ ಕಿಡ್ನಿಗಳನ್ನು ಮಾರಾಟ ಮಾಡುವ ನೀಚರು ಇಂದಿಗೂ ಇದ್ದಾರೆ. ಜೊತೆಗೆ ಮಕ್ಕಳ ಅಪಹರಣದ ಹಿಂದೆಯೂ ಕಿಡ್ನಿ ವಂಚಕರ ಜಾಲ ಇರುವುದನ್ನು ಪತ್ತೆ ಹಚ್ಚಲಾಗಿದೆ.
ಒಂದು ವರದಿಯ ಪ್ರಕಾರ, ಹೆಂಗಸರ ಒಂದು ಕಿಡ್ನಿ ನಿಧಾನವಾಗಿ ಕಾರಣಾಂತರದಿಂದ ಬಾಡಿ, ಸುರುಟಿ ಹೋಗುವ ಪರಿಸ್ಥಿತಿಯು ದೇಹದಲ್ಲಿ ತಾನೇ ತಾನಾಗಿ ನಿರ್ಮಾಣಗೊಳ್ಳುತ್ತದಂತೆ. ಆಗ ಅದನ್ನು ಬೇರೆ ದೇಹಕ್ಕೆ ಜೋಡಿಸಿದಾಗ ಮತ್ತೊಮ್ಮೆ ಅದು ಸಕ್ರಿಯವಾಗುವುದಂತೆ.ಆಸ್ಪತ್ರೆಯಲ್ಲಿ ನಡೆಸಿದ ಒಂದು ಅತ್ಯಾಧುನಿಕವಾದ ಪರೀಕ್ಷೆಯಲ್ಲಿ ( ಆ ಪರಿಕ್ಷೆಗೆ ೧೩ ಸಾವಿರ ರೂಪಾಯಿಗಳ ಖರ್ಚು ತಗುಲಿತ್ತು) ಶೋಭನಾಳ ಎಡದ ಕಿಡ್ನಿಯು ಕ್ಷೀಣವಾಗಿರುವುದನ್ನು ವೈದ್ಯರು ಇವನಿಗೆ ತೋರಿಸಿ, ಅದನ್ನು ತೆಗೆದು ನಿಮಗೆ ಕಸಿ ಮಾಡಲಾಗುವುದು ಎಂದಿದ್ದರು. ಅತ್ಯುತ್ತಮವಾಗಿ ಕೆಲಸ ಮಾಡುವ ಕಿಡ್ನಿಯನ್ನು ಅವರು ತೆಗೆಯುವುದಿಲ್ಲ. ಇದೊಂದು ಸಮಾಧಾನ ಕೊಡುವ ಹೊಸ ವಿಷಯವಾಗಿತ್ತು ಇವನಿಗೆ.
೨೦೧೨ರ ಜೂನ್ ಒಂದನೇ ತಾರೀಕಿನಂದು ಶಸ್ತ್ರ ಚಿಕಿತ್ಸೆಗೆ ದಿನ ನಿಗದಿಯಾಗಿತ್ತು. ಅಂದರೆ ಮೇ ೩೧ರಂದು ಅಪರಾಹ್ನ ಎರಡು ಗಂಟೆಯ ಒಳಗೆ ಆಸ್ಪತ್ರೆಗೆ ಅವರಿಬ್ಬರೂ ಸೇರಬೇಕಾಗಿತ್ತು. ಅದೇ ಪ್ರಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಮಗ ಒಂದು ವಾರಗಳ ಅವಧಿಗೆ ರಜೆ ಹಾಕಿ ಜೊತೆಗಿರಲು ಸಿದ್ಧನಾಗಿದ್ದ. ಬೆಂಗಳೂರಿನಿಂದ ಡಾ. ಯು.ಆರ್. ಅನಂತಮೂರ್ತಿಯವರು ಫೋನ್ ಮಾಡಿ ನಿಮಗೆ ಶುಭವಾಗಲಿ, ಒಂದು ವೇಳೆ ಕಿಡ್ನಿ ಕಸಿ ವಿಫಲವಾದರೂ ಯೋಚನೆ ಬೇಡ, ಡಯಾಲಿಸಿಸ್ ಇದೆಯಲ್ಲ? ಎಂದ್ದಿದ್ದರಂತೆ.
ಅಮೇರಿಕಾದ ಅಯೋವಾ ವಿಶ್ವವಿದ್ಯಾಲಯದಿಂದ ಡಾ.ಫಿಲಿಪ್, ಹಾರ್ವರ್ಡನಿಂದ ಡಾ. ನಸೀಮ್ ಹೈನ್ಸ್, ವಾಷಿಂಗ್ಟನ್ ನಿಂದ ಮೈಕ್ ಹಲವಾಚ್ಸ್, ಟೆಕ್ಸಾಸ್ ನಿಂದ ಮಾರ್ಥಾ ಸೆಲ್ಬಿ, ಇಂಡಿಯಾನದಿಂದ ರೆಬೆಕಾ, ಇಸ್ರೇಲ್ ನಿಂದ ಶುಲ್ಮನ್, ಟೋಕಿಯೋದಿಂದ ಸುಮಿಯೋ ಮೊರಿಜಿರಿ ಮತ್ತು ಮೀಕೋ ಮಿನಕವ, ಹೀಗೆ ಜಗತ್ತಿನಾದ್ಯಂತದಿಂದ ಶುಭ ಹಾರೈಕೆಗಳು ಬಂದು ತಲುಪಿದವು. ಇವರಿಗೆಲ್ಲ ಸುದ್ದಿ ತಿಳಿದದ್ದು ಹೇಗೆ? ಎಂದು ಇವನೇ ಅಚ್ಚರಿಗೊಡಿದ್ದ.
ಆಯುಷ್ಯ ಮರೆತ ಮಾವ
ಆಸ್ಪತ್ರೆಗೆ ಸೇರುವ ಆದಿನ ಬಂತು.
ಭಾವನೆಗಳೇ ಇಲ್ಲದ ದಿನವದು.
ಅದರೆ!
ಆದರೆ ೩೧ರ ಬೆಳಗ್ಗೆ ೬ ಗಂಟೆಯ ಸುಮಾರಿಗೆ ಇವನ ಮಾವ -ಹೆಂಡತಿಯ ಅಪ್ಪ- ಕಾಸರಗೋಡಿನ ಆಸ್ಪತ್ರೆಯಲ್ಲಿ ತೀರಿಕೊಂಡ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತು.
ಅಪ್ಪನನ್ನು ಪ್ರಾಣಕ್ಕೂ ಮಿಗಿಲಾಗಿ ಪ್ರೀತಿಸುತ್ತಿದ್ದ ಶೋಭನಾಳ ಆಗಿನ ಪರಿಸ್ಥಿತಿ ಹೇಗಿರಬೇಡ? ಅವರು ಅಂತಿಂಥ ಅಪ್ಪ ಅಲ್ಲ. ಅಪರಿಮಿತ ಯಕ್ಷಗಾನ ಪ್ರೇಮಿ, ಇವನೋ ಯಕ್ಷಗಾನದ ಅಸೀಮ ಅಭಿಮಾನಿ. ಹೀಗಾಗಿ ಇವರಿಬ್ಬರು ಎಷ್ಟೋ ಬಾರಿ ಒಟ್ಟಗೇ ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದುಂಟು. ಕಿಡ್ನಿ ಕಸಿಯ ವಿವರ ಕೇಳಿದ ಅವರು ಮಗಳ ಮೇಲೆ ಅಭಿಮಾನ ಪಟ್ಟದ್ದಲ್ಲದೆ, ಆಪರೇಶನ್‌ನ ಯಶಸ್ವಿಗೆ, ದಂಪತಿಗಳ ದೀರ್ಘಾಯುಷ್ಯಕ್ಕೆ ವಿಶೇಷಪೂಜೆಯನ್ನೂ ಮಾಡಿಸುತ್ತಿರುವಾಗ ತಮ್ಮ ಆಯುಷ್ಯದ ಬಗ್ಗೆ ಯೋಚನೆಯನ್ನೇ ಮಾಡಿದ್ದಿರಲಿಲ್ಲ. ಅವರು ಆ ದಿನವೇ ಕಣ್ಮರೆಯಾದರು. ಕಣ್ಣಿಂದ ರಕ್ತ ಒಸರತೊಡಗಿ ದೆಹಲಿಯಿಂದ ಕಾಸರಗೋಡಿನ ವರೆಗೆ ಹರಿಯತೊಡಗಿತು.
ಕಾಸರಗೋಡಿನವರೆಗೆ ಪಯಣಿಸುವಷ್ಟು ಆರೋಗ್ಯ ಇವನಿಗಿರಲಿಲ್ಲ. ಮಗ ಅಮ್ಮನೊಡನೆ ಹೋಗಲು ತಯಾರಾದ.ಆದರೆ ಮುಂಬ್ಯೆ ಮೂಲಕವಾಗಲೀ, ಬೆಂಗಳೂರು ಮೂಲಕವಾಗಲೀ ಕಾಸರಗೋಡು ತಲುಪಲು ಬೇಕಾದ ಅನುಕೂಲಕರ ವಿಮಾನ ದೊರೆಯಲೇ ಇಲ್ಲ. ಒಂದು ವೇಳೆ ದೊರೆತಿದ್ದರೂ ಶೋಭನಾಳನ್ನು ಆ ಸ್ಥಿತಿಯಲ್ಲಿ ಕಳುಹಿಸಿಕೊಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಮಗ ನಮ್ಮ ಸಹಾಯಕ್ಕೆ ನಿಂತ. ಈಗ ಯಾವುದೇ ನಿರ್ಣಯ ತೆಗೆದುಕೊಳ್ಳುವುದು ಬೇಡ, ಸ್ವಲ್ಪ ಹೊತ್ತು ಜೊತೆಗಿರೋಣ ಎಂದು ಹೇಳಿದ ಅವನು ಪರಿಸ್ಥಿಯನ್ನು ಕೈಗೆ ತೆಗೆದುಕೊಂಡ. ಹೊತ್ತೇರುತ್ತಲೇ ಊರಿಗೆ ಫೋನ್ ಮಾಡಿ, ನಾವೀಗ ಬರುವ ಪರಿಸ್ಥಿತಿಯಲ್ಲಿ ಇಲ್ಲ, ನೀವು ಮುಂದುವರಿಸಿ ಎಂದು ಹೇಳಿಬಿಟ್ಟ.
ಇವನು ಶೋಭನಾಗೆ ಅಂಟಿಕೊಂಡು ಮೌನವಾಗಿ ಕೊರಗುತ್ತಿದ್ದ. ಸುಮಾರು ೧೧ ಗಂಟೆಯ ಹೊತ್ತಿಗೆ ಆಸ್ಪತ್ರೆಗೆ ಫೋನ್ ಮಾಡಿ ಶಸ್ತ್ರ ಚಿಕಿತ್ಸೆಯನ್ನು ಮುಂದಕ್ಕೆ ಹಾಕಲು ಯೋಚಿಸುತ್ತಿದ್ದಾಗ ಶೋಭನಾ ಹೇಳಿದ್ದಳು ಹಾಗೆ ಮಾಡಬೇಡಿ.ಮಾಡಿದರೆ ಮತ್ತೆ ನಾವು ಅನೇಕ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ. ಊರಿಗಂತೂ ಹೋಗಲಾಗಲಿಲ್ಲ, ಇದನ್ನಾದರೂ ಮುಗಿಸೋಣ.
ಮುಂದಿನ ನಾಲ್ಕಾರು ಗಂಟೆಗಳ ಕಾಲ ಭಯಾನಕ ಮೌನ.
ಈ ಮೌನದಲ್ಲಿಯೇ ಇವರಿಬ್ಬರೂ ಆಸ್ಪತ್ರೆ ಸೇರಿದರು.ನಗು ನಗುತ್ತಾ ಇದ್ದವರು ಈಗ ಇದ್ದಕ್ಕಿದ್ದಂತೆ ಮೌನಕ್ಕೆ ಶರಣಾದ್ದನ್ನು ಗಮನಿಸಿದ ಡಾ.ಮೋಹಿತ್ ಸಮಾಧಾನ ಪಡಿಸಿ, ಧೈರ್ಯದಿಂದಿರಿ, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗುವುದರಲ್ಲಿ ನನಗೆ ಸಂಶಯವಿಲ್ಲ ಎಂದಿದ್ದರು. ಅವರಿಬ್ಬರೂ ಒಳಗೊಳಗೇ ರೋಧಿಸುತ್ತಿದ್ದರು. ಇವನ ವಿಶೇಷ ಕೋರಿಕೆಯನ್ನು ಮನ್ನಿಸಿದ ಆಸ್ಪತ್ರೆಯ ಅಧಿಕಾರಿಗಳು ಮೇ ೩೧ರ ರಾತ್ರಿ ಅವರಿಬ್ಬರೂ ಒಂದೇ ಕೊಠಡಿಯಲ್ಲಿರಲು ಅವಕಾಶ ಮಾಡಿಕೊಟ್ಟಿದ್ದರಂತೆ.
ಮರುದಿನ ೮ ಗಂಟೆಗೆ ಸರಿಯಾಗಿ ಶೋಭನಾಳನ್ನು ಆಪರೇಶನ್ ಥಿಯೇಟರ್‌ಗೆ ಕರೆದೊಯ್ದರು. ೮.೧೫ಕ್ಕೆ ಇವನನ್ನೂಎಳೆದುಕೊಂಡು ಹೋದರು. ಕಣ್ಣಿಗೆ ಕಾಣುವಷ್ಟು ದೂರದವರೆಗೆ ಗೆಳೆಯ ಕೃಷ್ಣ ಭಟ್ಟರನ್ನು, ಗೆಳತಿ ವಿದ್ಯಾರನ್ನೂ ನೋಡುತ್ತಿದ್ದ. ಅವರು ಕೈಬೀಸಿದಾಗ ಇವನೂ ಮುಗುಳ್ನಕ್ಕಿದ್ದನಂತೆ. ಆಪರೇಶನ್ ಥಿಯೇಟರ್‌ನಲ್ಲಿ ಹೆಂಡತಿಯನ್ನು ಇವನು ಕ್ಷಣ ಮಾತ್ರ ನೋಡಿದ್ದೆ. ಅಷ್ಟರಲ್ಲಿ ಅವರು ಇವನ ಅಂಗಿಯನ್ನು ಕಳಚಿದ್ದರು. ಜೊತೆಗಿದ್ದ ವೈದ್ಯರು ಛಳಿಯಾಗುವುದೇ? ಅಂತ ಕೇಳಿದ್ದಷ್ಟೇ ನೆನಪು.
ಮತ್ತೆ ಕಣ್ಣು ಬಿಟ್ಟಾಗ ಅಪರಾಹ್ನ ೩ ಗಂಟೆ.
ದಾದಿಯರಿಬ್ಬರೂ ಅವನ ಸುತ್ತ ಕುಳಿತಿದ್ದರು.
ಇವನು ಕಣ್ಣು ಬಿಟ್ಟೊಡನೆ ಕೈ ಹಿಡಿದು ಮುಗುಳ್ನಕ್ಕ ಅವರು ಡಾ.ಮೋಹಿತ್ ಮತ್ತು ಸರ್ಜನ್ ಡಾ. ಪಿ.ಬಿ. ಸಿಂಗ್ ಅವರಿಗೆ ಸುದ್ಧಿ ತಲುಪಿಸಿದರು.
ನಾಲ್ಕಾರು ನಿಮಿಷಗಳಲ್ಲಿ ಅವರು ಆತನ ಕಣ್ಣೆದುರು ಹಾಜರು.
ಮಿ. ಬಿಳಿಮಲೆಯವರೇ ಹೇಗಿದ್ದೀರಿ?ಡಾ.ಸಿಂಗ್ ಕೇಳಿದ್ದರು.
ಚೆನ್ನಾಗಿದ್ದೇನೆ ಸರ್, ಆಪರೇಶನ್ ಎಷ್ಟು ಹೊತ್ತಿಗೆ?ಮುಗ್ಧವಾಗಿ ಪ್ರಶ್ನಿಸಿದ್ದ ಇವನು.
ಪಕ್ಕದಲ್ಲಿದ್ದ ಡಾ.ಮೋಹಿತ್ ನಗುತ್ತಾ ಹೇಳಿದ್ದರು, ಆಪರೇಶನ್ ಆಗಿದೆ, ದೇವರ ದಯದಿಂದ ಅದು ಯಾವ ತೊಂದರೆಯೂ ಇಲ್ಲದೆ ಮುಗಿದಿದೆ.ನಿಮ್ಮ ಶ್ರೀಮತಿಯವರೂ ಆರಾಮವಾಗಿದ್ದಾರೆ, ಅಭಿನಂದನೆಗಳು ಎಂದು ಕೈ ಹಿಡಿದು ದಾದಿಯರಿಗೆ ಏನೋ ಸೂಚನೆ ನೀಡಿ ಮತ್ತೆ ಬರುವೆನೆಂದು ಹೇಳಿ ಹೊರಟು ಹೋದರು.
ಇವನು ಅವಕ್ಕಾಗಿದ್ದ.
ಮುಂದಿನ ಕೆಲವು ದಿನಗಳು ಮಹಾ ಅನಿಶ್ಚಿತತೆಯ ದಿನಗಳು.
ಯಾವ ಕ್ಷಣದಲ್ಲೂ, ಯಾವ ದಿನದಲ್ಲೂ ಆತನ ದೇಹ ಆ ಹೊಸ ಕಿಡ್ನಿಯನ್ನು ಒಲ್ಲೆ ಎಂದು ತಿರಸ್ಕರಿಸಬಹುದು.
ಆತ ಯೋಚಿಸುತ್ತಿದ್ದ, ಆಕೆಯೇ ಮನಸಾ ಒಲಿದಿತ್ತ ಕಿಡ್ನಿಯದು, ನನ್ನ ದೇಹ ಯಾಕಾದರೂ ತಿರಸ್ಕರಿಸುತ್ತದೆ
ಅವನ ನಿರೀಕ್ಷೆ ಸುಳ್ಳಾಗಲಿಲ್ಲ.
ಸರ್ಜರಿಯ ಮೂರನೇ ದಿವಸಕ್ಕೆ
ದೇಹದಲ್ಲಿನ ಅನಗತ್ಯ ನೀರೆಲ್ಲ ಆರಿ ಹೋಯಿತು,
ಬೆರಳುಗಳು ಬಾಗತೊಡಗಿದವು.
ಯೂರಿನ್ ಕ್ರಿಯೇಟಿನೈನ್ ೦.೮ ರಲ್ಲಿ ಸ್ಥಗಿತಗೊಂಡಿತು.
ಮುಂದಿನ ಐದೇ ದಿವಸದಲ್ಲಿ ಶೋಭನಾಳನ್ನು ಮನೆಗೆ ಕಳಿಸಿದರು.
ಅವಳು ಅವನಿಗಾಗಿ ಕಾಯತೊಡಗಿದಳು.
ಇವನೋ ೧೨ ದಿವಸಗಳವರೆಗೆ ಆಸ್ಪತ್ರೆಯಲ್ಲಿದ್ದ.
ಅದು ಚಿನ್ನದ ಪಂಜರದ ವಾಸ.
ಮಲೆಯಾಳೀ ದಾದಿಯರ ಅಕ್ಕರೆಯ ಸೇವೆ.
ಅವರು ಬೆಳಗ್ಗೆ ಅವನನ್ನು ಎಬ್ಬಿಸಿ ಪೂರ್ತಿ ಬೆತ್ತಲಾಗಿಸುತ್ತಾರೆ.
ಇಡೀ ದೇಹವನ್ನು ಸ್ಪಂಜಿನಿಂದ ಶುದ್ಧಗೊಳಿಸುತ್ತಾರೆ. ಹೊಸ ಬಟ್ಟೆ ಹಾಕಿಸುತ್ತಾರೆ.
ಅವನೊಮ್ಮೆ ದಾದಿ ಟ್ರೇಸಿಗೆ ಹೇಳಿದ್ದ, ನನ್ನ ಅಮ್ಮನ ಆನಂತರ ಹೀಗೆ ನನ್ನನ್ನು ನೋಡಿದವರು ಮತ್ತು ಸೇವೆ ಮಾಡಿದವರು ನೀವು ಮಾತ್ರ. ನನಗೆ ಮದರ್ ತೆರೆಸಾ ನೆನಪಾಗುತ್ತಿದ್ದಾರೆ
ಟ್ರೇಸಿ ಉತ್ತರಿಸಿದ್ದಳು ಪ್ರತಿ ರೋಗಿಯನ್ನು ನಾವು ಮಗುವಿನ ಹಾಗೆ ನೋಡುತ್ತೇವೆ.
ಬೇರೊಬ್ಬರ ದೇಹವನ್ನು ಇಷ್ಟೊಂದು ಕಾಳಜಿಯಿಂದ ನೋಡುವ ರೀತಿಗೆ ಆತ ಬೆಚ್ಚಿ ಬಿದ್ದಿದ್ದ.
ಮಣಿಪುರದ ದಿಮಿತಾ ದೀದಿ, ನಾಗಲ್ಯಾಂಡಿನ ತಾಯ್ ದೀದಿ, ಕೊಟ್ಟಾಯಂನ ಶನೀಶ್, ದೆಹಲಿಯ ಜಗನ್ನಾಥ್, ಎಷ್ಟೊಂದು ಸೇವೆ ಮಾಡಿದರು?
ಹಣಕ್ಕಾಗಿ ಕೆಲಸ ಮಾಡುವವರಿಗೆ ಇಷ್ಟೊಂದು ನಿಷ್ಠೆ ಬರಲಾರದು.
೧೩ನೇ ದಿನ ಮನೆಗೆ ಅವನನ್ನು ಮನೆಗೆ ಕಳಿಸಲಾಯಿತು. ಡಾ. ಮೋಹಿತ್, ಡಾ.ಪಿ ಬಿ ಸಿಂಗ್, ಡಾ. ಜೆನ್ಸಿ ಮರಿಯಂ, ಡಾ. ಅಂಜುಮ್ ಗುಲಾಟಿ, ಡಾ. ಶಶಿ, ದಾದಿಯರು -ಹೀಗೇ ಎಲ್ಲರೂ ಕೈ ಬೀಸಿ ಅವನನ್ನು ಬೀಳ್ಕೊಟ್ಟರು. ಈ ಕಡೆಯಿಂದ ಮಗ ಅನನ್ಯ, ಗೆಳೆಯ ಕೃಷ್ಣ ಭಟ್, ವಿದ್ಯಾ ಕೋಳ್ಯೂರು ಆತನನ್ನು ಮನೆಗೆ ಕರೆದೊಯ್ಯಲು ಸಿದ್ಧರಾದರು.
ಆಸ್ಪತ್ರೆ ಮೆಟ್ಟಲಿಯಿಳಿತ್ತಲೇ ಏನೋ ಕಳಕೊಂಡ ವಿಚಿತ್ರ ದುಗುಡ!
ಮನೆಗೆ ತಲುಪುತ್ತಲೇ ಅವನಿಗೆ ಮಂಗಳೂರಿನಿಂದ ಶ್ರೀನಿವಾಸ ಕಾರ್ಕಳನಿಂದ ಕರೆ, ಈ ನಡುವೆ ನಮ್ಮ ಕಕ್ಕಿಲ್ಲಾಯರು, ಏಣಗಿ ನಟರಾಜ್ ತೀರಿಕೊಂಡದ್ದು ನಿಮಗೆ ತಿಳಿಯಿತಾ?
ಅವನ ಮನಸ್ಸು ೩೨ ವರ್ಷಗಳ ಹಿಂದಿನ ಕ್ರಾಂತಿಕಾರಿ ದಿನಗಳ ಕಡೆಗೆ ಹೊರಳಿಕೊಂಡಿತು.
ಮತ್ತೆ ಒಂದೆರಡು ದಿನಗಳಲ್ಲೇ ತನ್ನೆಲ್ಲ ಗೆಳೆಯರಿಗೆ ಆತ ಎಸ್.ಎಂ.ಎಸ್. ಕಳಿಸಿದ್ದ.
ಪರಶಿವನಿಗೆ ಮೂರು ಕಣ್ಣು, ನನಗೋ ಮೂರು ಕಿಡ್ನಿ. ನನ್ನ ಪತ್ನಿಯ ಒಂದು ಕಿಡ್ನಿ ನನ್ನಲ್ಲಿದೆಯಾದ್ದರಿಂದ ನಿಜವಾದ ಅರ್ಥದಲ್ಲಿ ನಾನೀಗ ಅರ್ಧನಾರೀಶ್ವರ.ಜೊತೆಗೆ ತ್ರಿ ಮೂತ್ರಪಿಂಡ ಧಾರಿ, ಭಗವಂತನಿಗೂ ಮಿಗಿಲು
------------------------
ಕತೆಯಿಂದ ನಾವು ಕಲಿಯಬೇಕಾದ ನೀತಿ:
ಕಾಯುತಿಹುದು ಸಾವು ಇಂದು ಸಂಜೆಗೆ, ನಾಳೆ ಮುಂಜಾನೆಯೂ ಬಂದೀತು ಅದು ಮೆಲ್ಲಗೆ.
ಇಂದೇ ಕಡೆ ರಾತ್ರಿಯೆಂದು ದೇವರೇ ಹೇಳಿದರೂ, ನೆನೆ ಹಾಕಿಡು ಉದ್ದು ನಾಳೆ ಬೆಳಗ್ಗಿನ ಇಡ್ಳಿಗೆ.
ಈ ಕತೆ ವಾರ್ತಾಭಾರತಿಯ ಹತ್ತನೇ ವರ್ಷದ ವಿಶೇಷಾಂಕದಲ್ಲಿ ಬಂದಿದೆ.
http://10thyearmagazine.vbepaper.com/annual/Home.aspx
ಲೇಖಕ, ಪತ್ರಿಕೆ ಮತ್ತು ಕಥಾ ನಾಯಕರಿಗೆ ವಂದಿಸುತ್ತಾ ಈ ಬರಹವನ್ನು ಕೆಂಪುಕೋಟೆಯ ಓದುಗರಿಗೆ ನೀಡುತ್ತಿದ್ದೇವೆ.