ತುಳು ಭಾಷೆಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಸೇರಿಸುವ ಕುರಿತು ರಾಜಧಾನಿ ದೆಹಲಿಯಲ್ಲಿ ಮುಂದಿನ ಫೆಬ್ರವರಿ ತಿಂಗಳ ೨೪ರಂದು ಆಯೋಜಿಸಲು ಉದ್ದೇಶಿಸಲಾದ ಜಾಗತಿಕ ಮಟ್ಟದ ದೆಹಲಿ ತುಳುಸಿರಿ-೨೦೧೩ರ ಪೂರ್ವಭಾವಿಯಾಗಿ ರಾಜ್ಯಸಭಾ ಸದಸ್ಯ ಶ್ರೀ ಆಸ್ಕರ್ ಫೆರ್ನಾಂಡೀಸ್ ನೇತೃತ್ವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರ ಹಾಗೂ ಸಂಸದರೊಂದಿಗೆ ವಿಶೇಷ ಬೆಳಗ್ಗಿನ ಉಪಾಹಾರ ಮತ್ತು ಸಭೆ ನಡೆಯಿತು. ಈ ಮೂಲಕ ಮುಂದಿನ ಸಮಾವೇಶಕ್ಕೆ ವಿಶೇಷ ಚಾಲನೆ ದೊರಕಿದಂತಾಗಿದೆ. ಈ ಸಂದರ್ಭದಲ್ಲಿ ಸಂಸದರನ್ನು ಉದ್ದೇಶಿಸಿ ಮಾತಾಡಿದ ಶ್ರೀ ಆಸ್ಕರ್ ಫರ್ನಾಂಡಿಸ್ ಅವರು, ತುಳು ಭಾಷೆ ಮತ್ತು ಸಂಸ್ಕೃತಿ ಅತಿ ವಿಶಿಷ್ಟ ಮತ್ತು ಅನನ್ಯ, ತುಳುಜನರ ಆಚರಣೆಗಳು ವಿಶಿಷ್ಟವಾಗಿದ್ದು ಅವುಗಳು ವೈಜ್ಞಾನಿಕ ತಳಹದಿಯ ಮೇಲೆ ರೂಪುಗೊಂಡಿವೆ. ಅದೇರೀತಿ ತುಳುವಿನ ಭಾಷಾ ಸಂಪತ್ತು ಅತ್ಯಂತ ಹೇರಳವಾಗಿದ್ದು ಅದನ್ನು ಸೂಕ್ತ ರೀತಿಯಲ್ಲಿ ಉಳಿಸಿ ಬೆಳೆಸಬೇಕಾದ ಅಗತ್ಯವಿದೆ, ಕಾರಣ ತುಳುವಿಗೆ ಸಂವಿಧಾನದ ಮಾನ್ಯತೆ ಅಗತ್ಯವಾಗಿದ್ದು ಅದು ಸಾಧ್ಯವಾಗಲು ಎಲ್ಲ ಸಂಸದರೂ ಸಹಕರಿಸಬೇಕಾಗಿದೆ. ಎಂದು ಕೋರಿಕೊಂಡರು.
ತುಳುವನ್ನು ಎಂಟನೇ ಪರಿಚ್ಛೇದದಲ್ಲಿ ಸೇರಿಸುವ ಅಗತ್ಯದ ಕುರಿತು ವಿವರ ನೀಡಿದ ವಿದ್ವಾಂಸ ಡಾ.ಪುರುಷೋತ್ತಮ ಬಿಳಿಮಲೆ ಅವರು’ ಭಾರತದ ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಆರಂಭದಲ್ಲಿ ೧೪ ಭಾಷೆಗಳಷ್ಟೇ ಇದ್ದುವು. ಯಾವುದೋ ರಾಜ್ಯದ ಅಧಿಕೃತ ಭಾಷೆಯಾಗದ ಹೊರತು ೮ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸುವಂತಿರಲಿಲ್ಲ. ಆದರೆ ೨೦೦೩ ರಲ್ಲಿ ಸಂವಿಧಾನದಲ್ಲಿ ತಿದ್ದುಪಡಿ ತಂದು ಡೋಗ್ರಿ, ಮೈಥಿಲಿ, ಸಂತಾಲಿ ಮತ್ತು ಬೋಡೋ ಭಾಷೆಗಳನ್ನು ಸೇರಿಸಲಾಯಿತು. ತುಳು ಈ ಭಾಷೆಗಳಷ್ಟೇ ಶ್ರೀಮಂತವಾದುದು, ಮತ್ತು ೫೦ ಲಕ್ಷಕ್ಕೂ ಮಿಕ್ಕು ಜನ ಅದನ್ನು ಆಡುವುದರಿಂದ ಅರ್ಹತೆಯ ದೃಷ್ಟಿಯಿಂದ ಅದರಲ್ಲಿ ಕೊರತೆಯೇನೂ ಇಲ್ಲ. ಜನಪ್ರತಿನಿಧಿಗಳು ಒತ್ತಡ ಹಾಕಿ ಈ ಕೆಲಸ ಆಗುವಂತೆ ಮಾಡಿ ಭಾಷಾ ಸಂರಕ್ಷಣೆಯ ವಿಷಯದಲ್ಲಿ ಇತರರಿಗೆ ಮೇಲ್ಪಂಕ್ತಿಯಾಗಬೇಕು’ ಎಂದರು.
ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣ ಮಾಡಿದ ತುಳುಸಿರಿ ಸಮಾವೇಶದ ಸಂಚಾಲಕ ವಸಂತ ಶೆಟ್ಟಿ ಬೆಳ್ಳಾರೆ ಅವರು ಕಾರ್ಯಕ್ರಮದ ರೂಪುರೇಷೆಯನ್ನು ವಿವರಿಸಿ ಎಲ್ಲಾ ಕನ್ನಡದ ಜನಪ್ರತಿನಿಧಿಗಳು ಈ ಬಾರಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇದದಲ್ಲಿ ಸೇರಿಸುವ ಬಗ್ಗೆ ಸಂಸತ್ತಿನಲ್ಲಿ ಒತ್ತಡ ಹೇರುವಂತೆ ಕರೆ ಇತ್ತರು.
ಸಭೆಯಲ್ಲಿ ಕೇಂದ್ರ ಮಂತ್ರಿಗಳಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಶ್ರೀ ಎಂ. ವೀರಪ್ಪ ಮೊಯಿಲಿ ಸಂಸದರಾದ ಶ್ರೀ ರಮೇಶ ಜಿಗಜಿಣಗಿ, ಶ್ರೀ ಪಿ.ಸಿ.ಗದ್ದಿಗೌಡರ್, ಶ್ರೀ ಬಸವರಾಜ ಸೇಡಂ, ಶ್ರೀ ಜಯಪ್ರಕಾಶ್ ಹೆಗಡೆ, ಶ್ರೀ ಎಚ್.ವಿಶ್ವನಾಥ್, ಶ್ರೀ ಆಸ್ಕರ್ ಫೆರ್ನಾಂಡೀಸ್, ಶ್ರೀ ಜೆ.ರಾಮಕೃಷ್ಣ, ಶ್ರೀ ಶಿವರಾಮೇ ಗೌಡ, ಶ್ರೀ ಅನಿಲ್ ಲಾಡ್, ಶ್ರೀ ಪಿ.ಸಿ.ಮೋಹನ್, ಶ್ರೀ ಶಿವಕುಮಾರ್ ಉದಾಸಿ, ಕರ್ನಾಟಕ ಸರ್ಕಾರದ ವಿಶೇಷ ಸಮನ್ವಯಾಧಿಕಾರಿ ಶ್ರೀ ಬೈಕೆರೆ ನಾಗೇಶ್, ಮಾಜಿ ಸಂಸದ ಶ್ರೀ ಶಿವಣ್ಣ, ಮಾಜಿ ಸಚಿವ ಶ್ರೀ ಎಚ್.ಎಂ.ರೇವಣ್ಣ , ತುಳುಸಿರಿ ಸಮಾವೇಶ ಸಮಿತಿಯ ಅಧ್ಯಕ್ಷ ಶ್ರೀ ಐ.ರಾಮಮೋಹನ್ ರಾವ್ ಹಾಗೂ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ತುಳುನಾಡಿನ ವಿಶಿಷ್ಟ ಗೋಳಿ ಬಜೆ, ನೀರುಳ್ಳಿ ಬಜೆ, ನೀರ್ ದೋಸೆ, ಕಡ್ಲೆ, ಸಜ್ಜಿಗೆ-ಬಜಿಲ್, ಮತ್ತಿತರ ತಿಂಡಿಗಳಿರುವ ಉಪಾಹಾರ ವ್ಯವಸ್ಥೆಯನ್ನು ಮಾಡಿ ತುಳುಸಂಸ್ಕೃತಿಯ ವಿಶಿಷ್ಟತೆಯನ್ನು ಪ್ರತೀತಗೊಳಿಸಲು ಪ್ರಯತ್ನಿಸಲಾಗಿತ್ತು.
ಅವನೀಂದ್ರನಾಥ ರಾವ್
No comments:
Post a Comment