’ಕೋಟೆ ಶೈಲಿ’ ಎಂದೇ ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶಶಿಧರ ಕೋಟೆಯವರ ಸಂಗೀತ ಕಾರ್ಯಕ್ರಮ ಇದೀಗ ದೆಹಲಿ ಕನ್ನಡಿಗರ ಮುಂದೆ ಪ್ರಸ್ತುತಗೊಳ್ಳುತ್ತಿದೆ.
ಹೊಸ ವರ್ಷದ ಆರಂಭ ದಿನವೇ (01.01.2012) ದೆಹಲಿ ಕರ್ನಾಟಕ ಸಂಘದಲ್ಲಿ ಸಂಗೀತ ಧಾರೆ ಹರಿಯಲಿದೆ.
ಸಂಗೀತ ದಿಗ್ಗಜರಾದ ಬಾಲ ಮುರಳೀ ಕೃಷ್ಣ ಹಾಗು ಕೆ.ಜಿ. ಜೇಸುದಾಸ ಇವರಿಂದ ಪ್ರಭಾವಿತರಾದ ಶಶಿಧರ ಕೋಟೆಯವರ ಧ್ವನಿ ಮತ್ತು ರೂಪ ಜೇಸುದಾಸ್‌ರಂತೆ ಇರುವುದು ವಿಶೇಷ. ದಕ್ಷಿಣದ ಭಾರತದ ವಿವಿಧ ಭಾಷೆಗಳಲ್ಲಿ ಸುಗಮ ಸಂಗೀತ ನೀಡಿರುವ ಶಶಿಧರ ಕೋಟೆ ಈ ತಲೆಮಾರಿನ ಕರ್ನಾಟಕದ ಪ್ರಮುಖ ಗಾಯಕರಲ್ಲಿ ಒಬ್ಬರು. ೨೫೦೦ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮವನ್ನು ನೀಡಿರುವ ಶಶಿಧರಕೋಟೆಯವರ ಖ್ಯಾತಿ ಆಂಧ್ರಪ್ರದೇಶ ತಮಿಳುನಾಡು, ಮುಂಬಯಿ, ಕೇರಳಗಳಿಗೆ ವಿಸ್ತರಿಸುವುದು ಅವರ ಪ್ರತಿಭೆ ಮತ್ತು ಜನಪ್ರಿಯತೆಗೆ ಸಾಕ್ಷಿ.
ಸಂಗೀತ ಪ್ರೇಮಿಗಳ ನಾಡಿ ಮಿಡಿತವನ್ನು ಅರಿತು ತಾನು ಹಾಡಲಿರುವ ಗೀತೆಯನ್ನು ಆಯ್ಕೆ ಮಾಡುವ ಶಶಿಧರ ಕೋಟೆ ಹಾಡಲು ತೊಡಗಿದರೆ ಗಾಯನದಲ್ಲಿ ಲೀನವಾಗುತ್ತಾರೆ. ಸನ್ನಿವೇಶಕ್ಕೆ ಅನುಗುಣವಾಗಿ ಅವರು ದಾಸರ ಪದ, ಜನಪದ ಗೀತೆ, ಭಕ್ತಿಗೀತೆ ಮತ್ತು ಚಲನಚಿತ್ರದ ಪ್ರಸಿದ್ಧ ಗೀತೆಗಳನ್ನು ಹಾಡಿ ಕೇಳುಗರನ್ನು ಮೋಡಿ ಮಾಡಬಲ್ಲರು.
ಗಾಯಕನಿಗೆ ಸಂಗೀತದ ರಾಗಗಳಷ್ಟೇ ಅದರ ಸಾಹಿತ್ಯದ ಅರಿವು ಮುಖ್ಯ ಎಂದು ಬಲವಾಗಿ ನಂಬಿರುವ ಶಶಿಧರ ಕೋಟೆಯವರ ಕಾರ್ಯಕ್ರಮಗಳು ಶಾಸ್ತ್ರೀಯ ಹಿನ್ನಲೆಯ ಮಾತ್ರವಲ್ಲ ಎಲ್ಲ ಜನಸಮೂಹದ ಕೇಳುಗರನ್ನು ಆಕರ್ಷಿಸಿದೆ. ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಕೋಟೆಯವರು ಇಂದು ಸಂಪೂರ್ಣವಾಗಿ ಸಂಗೀತಕ್ಕಾಗಿ ತಮ್ಮ ಬದುಕನ್ನು ಅರ್ಪಿಸಿಕೊಂಡಿದ್ದಾರೆ.
ಶಶಿಧರ ಕೋಟೆಯವರು ಈಚೆಗೆ ಯಕ್ಷಗಾನವನ್ನು ಸುಗಮ ಸಂಗೀತ ಶೈಲಿಗೆ ಅಳವಡಿಸಿ ನೀಡಿದ ಧ್ವನಿಮುದ್ರಿತ ಕ್ಯಾಸೆಟ್‌ಗಳು ಅತಿ ಹೆಚ್ಚು ಮಾರಾಟವಾಗಿ ದಾಖಲೆ ನಿರ್ಮಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಮಂತ ಸಾಂಸ್ಕೃತಿಕ ಪರಂಪರೆಯಿಂದ ಪ್ರಭಾವಿತರಾಗಿರುವ ಶಶಿಧರ ಕೋಟೆಯವರ ಸಂಗೀತ ದೆಹಲಿ ಕನ್ನಡಿಗರಿಗೆ ಒಂದು ಹೊಸ ಅನುಭವ ನೀಡಲಿದೆ.
ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಖ್ಯಾತ ಸಹಕಾರಿ ದುರೀಣರಾದ ಕೋಟೆ ವಸಂತಕುಮಾರ್ ಹಾಗೂ ಪಾರ್ವತಿಯವರ ಪುತ್ರ ಶಶಿಧರ ಕೋಟೆ. ಅವರ ಪತ್ನಿ ಸೀತಾ ಕೋಟೆ ಜನಪ್ರಿಯ ಭರತನಾಟ್ಯ ಕಲಾವಿದೆ. ಶಶಿಧರ ಕೋಟೆ ದೂರದರ್ಶನ ಕಲಾವಿದರಾಗಿಯೂ ಹೆಸರು ಗಳಿಸಿದ್ದಾರೆ. ಹಲವು ಧಾರವಾಹಿಗಳಲ್ಲಿ ನಟಿಸಿರುವ ಅವರು ನಿರೂಪಕರಾಗಿಯೂ ಕಾಣಿಸಿಕೊಂಡಿದ್ದಾರೆ. ಸಿರಿಕಂಠದ ಗಾಯಕ, ಸ್ವರ ಮಂದಾರ, ಗಾನ ಗಾರುಡಿಗ ಮೊದಲಾದ ಬಿರುದುಗಳಿಗೆ ಪಾತ್ರರಾಗಿರುವ ಶಶಿಧರ ಕೋಟೆಯವರಿಗೆ ’ಆರ್ಯಭಟ ಶ್ರೇಷ್ಠ ಗಾಯಕ’ ಹಾಗೂ ’ಸಂಗೀತ ರತ್ನ’ ಮೊದಲಾದ ಪ್ರಶಸ್ತಿಗಳು ಲಭಿಸಿವೆ.
ಕನ್ನಡದ ಖ್ಯಾತ ಗಾಯಕನ ಸಂಗೀತ ಸಿಂಚನದೊಂದಿಗೆ ದೆಹಲಿ ಕನ್ನಡಿಗರು ತಮ್ಮ ಹೊಸ ವರ್ಷವನ್ನು ಆಚರಿಸಲಿ ಎಂಬ ಆಶಯ ವಸಂತ ಶೆಟ್ಟಿ ಬೆಳ್ಳಾರೆ ಅವರದ್ದು. ತಮ್ಮ ’ದೆಹಲಿ ಮಿತ್ರ’ ಸಂಘಟನೆಯ ಮೂಲಕ ಈ ಕಾರ್ಯಕ್ರಮವನ್ನು ಶಶಿಧರ ಕೋಟೆಯವರ ತಂದೆ ’ದಿ. ಕೋಟೆ ವಸಂತ ಕುಮಾರ’ರಿಗೆ ಅಭಿಮಾನದಿಂದ ಅರ್ಪಿಸುತ್ತೇನೆ ಎಂದು ವಸಂತ ಶೆಟ್ಟಿಯವರು ತಿಳಿಸಿದ್ದಾರೆ. ಸಾಹಿತಿ ಡಾ. ಪುರುಷೋತ್ತಮ ಬಿಳಿಮಲೆ, ಡಾ. ಬಿ.ಟಿ. ಚಿದಾನಂದ ಮೂರ್ತಿ ಹಾಗೂ ಡಾ. ಎಂ.ಎನ್. ಗೌಡ ಇವರ ಅಭಿನಂದನಾ ಕಾರ್ಯಕ್ರಮವನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ.
ವೈ. ಅವನೀಂದ್ರನಾಥ್ ರಾವ್
No comments:
Post a Comment