Wednesday, May 16, 2012

ದೆಹಲಿಯಲ್ಲೊಂದು ಅಪೂರ್ವ ಸಂಜೆ


ನವದೆಹಲಿಯ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಮೇ ೬ರಂದು ಸಂಗೀತ, ಸಾಹಿತ್ಯ ಮತ್ತು ಅಭಿನಂದನಾ ಕಾರ್ಯಕ್ರಮಗಳ ಅಪೂರ್ವ ಸಂಜೆಯೊಂದನ್ನು ದೆಹಲಿ ಮಿತ್ರ ಸಾಂಸ್ಕೃತಿಕ ಸಂಘಟನೆ ಹಮ್ಮಿಕೊಂಡಿತ್ತು.
ಪುಸ್ತಕ ಬಿಡುಗಡೆ:
ಕಾರ್ಯಕ್ರಮದಲ್ಲಿ ಭಾರತ ರಾಷ್ಟ್ರೀಯ ಪತ್ರಾಗಾರ, ನವದೆಹಲಿಯಲ್ಲಿ ಪತ್ರಾಗಾರ ಅಧಿಕಾರಿಗಳಾದ ಡಾ|| ಜಿ.ಎ. ಬಿರಾದಾರ ಅವರು ಬರೆದ ಕರ್ನಾಟಕ ಭೂಷಣ ಶ್ರೀನಿವಾಸರಾವ ಕೌಜಲಗಿ ಎಂಬ ಕೃತಿಯನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕದ ಮಾಜಿ ಸಚಿವರಾದ ಶ್ರೀ ಎಚ್.ಕೆ. ಪಾಟೀಲ ಅವರು ಬಿಡುಗಡೆಗೊಳಿಸಿದರು.  ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಮೀಟಿ ಅಧ್ಯಕ್ಷರಾಗಿದ್ದ ಶ್ರೀನಿವಾಸರಾವ ಕೌಜಲಗಿಯವರು ಕರ್ನಾಟಕ ಏಕೀಕರಣದ ಶ್ರೇಷ್ಠ ಹೋರಾಟಗಾರರಾಗಿದ್ದರು ಎಂದು ಹೇಳುತ್ತಾ, ಅಂದಿನ ಮುಂಬಯಿ ಕರ್ನಾಟಕ ಪ್ರದೇಶದಲ್ಲಿದ್ದ ಬ್ರಾಹ್ಮಣ-ಬ್ರಾಹ್ಮಣೇತರ ಭಿನ್ನಾಭಿಪ್ರಾಯ ಗಳನ್ನು ನಿವಾರಿಸಿ ಬ್ರಾಹ್ಮಣೇತರ ವರ್ಗದಲ್ಲಿ ಸಮಾಜ ಸುಧಾರಣೆಯ ಮಹತ್ವವನ್ನು ಮನವರಿಕೆ ಮಾಡುತ್ತಾ ಕೌಜಲಗಿ ಅವರಂತಹವರು ಇತಿಹಾಸ ನಿರ್ಮಿಸಿದ್ದನ್ನು ದಾಖಲಿಸಿದ ಅಪೂರ್ವ ಪುಸ್ತಕ ಇದಾಗಿದೆ ಎಂದು ಈ ಕೃತಿಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಇದರ ಪ್ರಕಾಶಕರಾದ ಶ್ರೀ ಗಣೇಶ್ ಅವರನ್ನು ಅಭಿನಂದಿಸಿದರು. ಜೊತೆಗೆ, ಶುದ್ಧ ಉತ್ತರ ಕರ್ನಾಟಕ ಶೈಲಿಯ ಭಾಷಾ ಬಳಕೆ ಈ ಕೃತಿಯ ವಿಶೇಷತೆ ಎಂದು ನುಡಿದರು.
ತಮ್ಮ ಕೃತಿ ಬಿಡುಗಡೆಗೊಂಡ ಸಂತಸವನ್ನು ಹಂಚಿಕೊಳ್ಳುತ್ತಾ ಸಂಶೋಧಕ, ಲೇಖಕ ಡಾ|| ಜಿ.ಎ. ಬಿರಾದಾರ ಅವರು ಮುಖ್ಯವಾಗಿ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ, ವೇದಿಕೆಯಲ್ಲಿದ್ದ ಗಣ್ಯರಿಗೆ, ಪ್ರಕಾಶಕ ಶ್ರೀ ಗಣೇಶ್ ಅವರಿಗೆ ವಂದಿಸಿದರು. ಎರಡು ವರ್ಷಗಳ ಹಿಂದೆ ಇದೇ ವೇದಿಕೆಯಲ್ಲಿ ತಮ್ಮದೇ ಇನ್ನೊಂದು ಪುಸ್ತಕ ಮುಂಬಯಿ ಕರ್ನಾಟಕದಲ್ಲಿ ಸವಿನಯ ಕಾನೂನು ಭಂಗ ಚಳವಳಿಯ ಬಿಡುಗಡೆಗೆ ಕಾರಣರಾದ ದೆಹಲಿ ಮಿತ್ರದ ವಸಂತ ಶೆಟ್ಟಿ ಬೆಳ್ಳಾರೆಯವರಿಗೂ ವಂದಿಸಿದರು.
ಶ್ರೀ ಜಯಪ್ರಕಾಶ್ ಹೆಗ್ಡೆ ಅವರಿಗೆ ಅಭಿನಂದನೆ:
ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ನೂತನವಾಗಿ ಚುನಾಯಿತಗೊಂಡ ಸಂಸದ, ಸನ್ಮಾನ್ಯ ಶ್ರೀ ಜಯಪ್ರಕಾಶ ಹೆಗ್ಡೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹೆಗ್ಡೆ ಅವರು ದೆಹಲಿ ಮಿತ್ರ ಹಮ್ಮಿಕೊಳ್ಳುವ ಎಲ್ಲಾ ಕನ್ನಡಪರ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವ ಭರವಸೆಯಿತ್ತರು. ಜಾನಪದ ವಿದ್ವಾಂಸ, ಶ್ರೀ ಪುರುಷೋತ್ತಮ ಬಿಳಿಮಲೆಯವರೂ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಕೋರಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯಸಭಾ ಸದಸ್ಯರಾದ ಶ್ರೀ ಆಸ್ಕರ್ ಫರ್ನಾಂಡಿಸ್ ಅವರು ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರಾಷ್ಟ್ರದ ರಾಜಧಾನಿಯಲ್ಲಿ ಹಲವಾರು ವರ್ಷಗಳಿಂದ ದೆಹಲಿ ಮಿತ್ರ ಸಂಸ್ಥೆಯು ಇದರ ಸಂಚಾಲಕರಾದ ಶ್ರೀ ವಸಂತ ಶೆಟ್ಟಿ ಬೆಳ್ಳಾರೆಯವರ ನೇತೃತ್ವದಲ್ಲಿ ಅನೇಕ ಅನುಕರಣೀಯ ಸಾಹಿತ್ಯ-ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ ಎನ್ನುತ್ತಾ ಕಾಲಾವಕಾಶ ಒದಗಿದಲ್ಲಿ ಮುಂದೊಂದು ದಿನ ಯಕ್ಷಗಾನ ವೇಷ ಕಟ್ಟುವ ಆಶಯವನ್ನೂ ತೋಡಿಕೊಂಡರು.
ಸಂಗೀತ ಕಾರ್ಯಕ್ರಮ:
ಕನ್ನಡ ನಾಡಿನ ಖ್ಯಾತ ಗಾಯಕಿ ಶ್ರೀಮತಿ ಬಿ.ಕೆ. ಸುಮಿತ್ರ ಅವರಿಂದ ತರಬೇತಿ ಪಡೆದ ದೆಹಲಿ ಕನ್ನಡಿಗರು ಮತ್ತು ದೆಹಲಿ ಕನ್ನಡ ಶಾಲೆಯ ಮಕ್ಕಳು ಸುಮಾರು ಎರಡು ಗಂಟೆಗಳ ಕಾಲ ಸುಶ್ರಾವ್ಯವಾದ ಸಂಗೀತ ಕಾರ್ಯಕ್ರಮ ನೀಡಿ, ಸಭಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಸಭಿಕರ ಮನರಂಜಿಸಿದರು. ನೂರಕ್ಕೂ ಮಿಗಿಲಾದ ಸ್ಥಳೀಯ ಕಲಾವಿದರನ್ನು, ಮಕ್ಕಳನ್ನು ಒಂದೇ ವೇದಿಕೆಯಲ್ಲಿ ಕಲೆಹಾಕಿ ಅದ್ಭುತ ಕಾರ್ಯಕ್ರಮ ನೀಡುವ ಅವಕಾಶ ದೊರೆತದ್ದಕ್ಕೆ ದೆಹಲಿ ಕನ್ನಡಿಗರು ಅಪಾರ ಹರ್ಷ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವನ್ನು ಶ್ರೀ ಎನ್.ಪಿ. ಚಂದ್ರಶೇಖರ ಅವರು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು. ಶ್ರೀ ವೈ.ಅವನಿಂದ್ರನಾಥ ರಾವ್ ಅವರು ವಂದನಾರ್ಪಣೆ ಮಾಡಿದರು.  ಕರ್ನಾಟಕದ ವೈವಿಧ್ಯಮಯ ತಿಂಡಿ-ತಿನಿಸುಗಳ ಭೋಜನದೊಂದಿಗೆ ಅಪೂರ್ವ ಸಂಜೆ ಮುಕ್ತಾಯವಾಯಿತು.

No comments:

Post a Comment