ತುಳುನಾಡಿನಿಂದ ಕಾರಣಾಂತರಗಳಿಂದ ಹೊರಗೆ ಹೋಗಿ ಬದುಕು ಮಾಡುತ್ತಿರುವ ಜನರು ದೊಡ್ಡ ಸಂಖ್ಯೆಯಲ್ಲಿ ಇಂದು ಜಗತ್ತಿನಾದ್ಯಂತ ಕಾಣಸಿಗುತ್ತಾರೆ. ಅದು ಹೋಟೆಲ್ ಉದ್ಯಮವೇ ಇರಬಹುದು ಅಥವಾ ಇನ್ನೇನೋ ಇರಬಹುದು. ಒಮ್ಮೆ ನಾನು ಇಸ್ರೇಲ್ ನ ಹೀಬ್ರೂ ವಿಶ್ವವಿದ್ಯಾಲಯಕ್ಕೆ ಹೋಗುವ ಹಾದಿಯಲ್ಲಿ ಜೋರ್ಡಾನ್ ನ ಇತಿಹಾಸ ಪ್ರಸಿದ್ಧ ಅಮಾನ್ ನಗರದಲ್ಲಿ ಒಂದು ದಿನ ಉಳಕೊಳ್ಳಬೇಕಾಯಿತು. ಕಾರಣ ಅಲ್ಲಿನ ರೋಮನ್ ಆಂಫಿ ಥಿಯೇಟರ್ ಮತ್ತು ಜಗತ್ಪ್ರಸಿದ್ಧ ಪೆಟ್ರಾ ವನ್ನು ನೋಡಲು ನಿರ್ಧರಿಸಿದೆ. ನಾನು ಉಳಕೊಂಡಿದ್ದ ಹೋಟೆಲ್ ನಿಂದ ಟ್ಯಾಕ್ಸಿಯೊಂದನ್ನು ಬುಕ್ ಮಾಡಿದೆ. ನಿಗದಿತ ಸಮಯಕ್ಕೆ ಟ್ಯಾಕ್ಸಿ ಬಂತು. ನಗರ ನೋಡಲು ಅನುಕೂಲ ಅಂತ ಕಾರಿನ ಇದಿರು ಸೀಟಲ್ಲಿ ಕುಳಿತೆ. ಒಂದೆರಡು ನಿಮಿಷದಲ್ಲಿಯೇ ಟ್ಯಾಕ್ಸಿ ಚಾಲಕ ಸಂಕೋಚದಿಂದ ಆಂಗ್ಲ ಭಾಷೆಯಲ್ಲಿ ಕೇಳಿದ- ನೀವು ಕರ್ನಾಟಕದವರೇ ?’. ನಾನು ಅವಕ್ಕಾಗಿ ಹೌದು ಎಂದೆ. ಆತ ಮತ್ತೆ ಕೇಳಿದ-ಕರ್ನಾಟಕದಲ್ಲಿ ಎಲ್ಲಿ ? ನಾನು ದಕ್ಷಿಣ ಕನ್ನಡ ಜಿಲ್ಲೆ ಎಂದೆ. ಆತ ಮತ್ತೆ ಕೇಳಿದ ದಕ್ಷಿಣ ಕನ್ನಡದಲ್ಲಿ ಎಲ್ಲಿ? ನಾನು ಸುಬ್ರಹ್ಮಣ್ಯ ಎಂದೆ. ಕುತೂಹಲ ತಡೆಯಲಾರದೆ ನಾನೂ ಕೇಳಿದೆ- ನೀವು ಎಲ್ಲಿ ? ಆತ ತುಳುವಿನಲ್ಲಿ ಹೇಳತೊಡಗಿದ- - ನನ್ನ ಊರು ಮೂಡಬಿದಿರೆ, ಹೆಸರು ವೆಂಕಪ್ಪ, ಇಲ್ಲಿ ವೆಂಕಿ ಅಂತ ಕರೆಯುತ್ತಾರೆ, ಕಳೆದ ಆರು ವರ್ಷ ಗಳಿಂದ ಇಲ್ಲಿದ್ದೇನೆ, ನಿಮ್ಮ ಕೈಯಲ್ಲಿದ್ದ ಕನ್ನಡ ಪುಸ್ತಕ ನೋಡಿ, ಕರ್ನಾಟಕದವರಿರಬೇಕು ಅಂದುಕೊಂಡೆ’ ವೆಂಕಿಯ ಸಹಾಯದಿಂದ ಅಮಾನ್ ನಗರದ ನನ್ನ ಪ್ರವಾಸ ಎಂದೂ ಮರೆಯದಾದಂತಾಯಿತು.
ಮೊನ್ನೆ ಮಂಗಳೂರಲ್ಲಿ ಪುಂಡರು ಹೆಣ್ಣು ಮಕ್ಕಳ ಮೇಲೆ ಕೈ ಮಾಡಿದ ಮರುದಿನ ಬೆಳಿಗ್ಗೆ ವೆಂಕಿ ಅಮಾನ್ ನಿಂದ ದೂರವಾಣಿಯಲ್ಲಿ ಮಾತಾಡಿದ್ದರು. ’ಇಲ್ಲಿ ಅದು ದೊಡ್ಡ ಸುದ್ದಿ, ನಮಗೆಲ್ಲ ನಾಚಿಕೆಯಾಗುತ್ತಿದೆ. ನಮ್ಮ ಊರು ಯಾಕೆ ಹೀಗಾಗುತ್ತಿದೆ?, ಊರಿಗೆ ಹೋಗಲು ಮನಸ್ಸಾಗುತ್ತಿಲ್ಲ, ಈ ಜೋರ್ಡಾನ್ ಹೇಳಿ ಕೇಳಿ ಮುಸ್ಲಿಂ ದೇಶ, ಆದರೆ ಇಲ್ಲಿ ಇಂಥ ಘಟನೆಗಳು ಯಾವತ್ತೂ ನಡೆದಿಲ್ಲ’ ಅಂತ ತಮ್ಮ ಅಳಲು ತೋಡಿಕೊಂಡರು. ನಾನೂ ಅಂದೆ- ಕರ್ನಾಟಕದಲ್ಲಿ ಬಿ ಜೆ ಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಾನು ಕೂಡಾ ಕರ್ನಾಟಕದವನು ಅಂತ ಯಾರಿಗೂ ಹೇಳುವುದಿಲ್ಲ.
ಇದು ತುಳುನಾಡಿನಿಂದ ಹೊರಗೆ ಹೋಗಿ ಮರ್ಯಾದೆಯಿಂದ ಜಗತ್ತಿನಾದ್ಯಂತ ಕೆಲಸ ಮಾಡುತ್ತಿರುವವರಿಗೆ ಹಿಂದೂ ಜಾಗರಣ ವೇದಿಕೆಯವರು ನೀಡಿದ ಕೊಡುಗೆ. ಪಬ್ ಧಾಳಿಯ ನೋವು ಮುಗಿಯುವ ಮುನ್ನವೇ ಹೀಗಾಗಿದ್ದು, ನಾವೆಲ್ಲ ನಮ್ಮ ಹುಟ್ಟಿದೂರಿನ ಬಗ್ಗೆ ಹೇಸಿಕೆ ಪಟ್ಟುಕೊಳ್ಳುವಂತೆ ಮಾಡಿದೆ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಹಿಂದಿ ಪ್ರಾಧ್ಯಾಪಕರಾಗಿರುವ ಗೆಳೆಯ ಡಾ. ರಾಕೇಶ್ ರಂಜನ್ ಇ-ಮೇಲ್ ಕಳಿಸಿದ್ದರು - ಅಮೇರಿಕಾದಲ್ಲಿ ಇದು ಸುದ್ಧಿಯಾಗಿದೆ, ನೀನೂ ತುಳುವ ಅಲ್ಲವೇ ? ಪ್ರತಿಭಟಿಸಿ ಒಂದು ಪತ್ರವನ್ನಾದರೂ ಬರೆ?’ ನಾನವರಿಗೆ ಬರೆದೆ- ಗೆಳೆಯಾ ಯಾರಿಗೋಸ್ಕರ ಬರೆಯುವುದು? ನಿನ್ನಂತವರಿಗೆ ನಾನು ಏನು ಬರೆಯುತ್ತೇನೆ ಅಂತ ಚೆನ್ನಾಗಿ ಗೊತ್ತು, ನಾವು ಬರೆದರೆ ಓದುವವರು ನಮ್ಮ ಗೆಳೆಯರು. ಅವರೆಲ್ಲ ನಮ್ಮ ಹಾಗೇ ಯೋಚಿಸುವವರಾದ್ದರಿಂದ ಅವರಿಗೆ ಬರೆಹದ ಅಗತ್ಯವಿಲ್ಲ. ಹಿಂದೂ ಜಾಗರಣ ವೇದಿಕೆಯವರು ನಮ್ಮಂತಹವರು ಬರೆದದ್ದನ್ನು ಓದುವುದಿಲ್ಲ, ಓದಿದ್ದರೆ ಹೀಗೆ ಮಾಡುತ್ತಿರಲಿಲ್ಲ, ಪಬ್ ಮೇಲೆ ಧಾಳಿ ನಡೆದಾಗ ’ ಕಡಲ ತಡಿಯ ತಲ್ಲಣ ( ಉಷಾ ಕಟ್ಟೆಮನೆ ಜೊತೆ ಸೇರಿ) ಪುಸ್ತಕ ತಂದೆವು? ಏನು ಪ್ರಯೋಜನವಾಯಿತು? ಬರವಣಿಗೆಯ ಮೇಲೆ ವಿಶ್ವಾಸ ಕಡಿಮೆಯಾಗುತ್ತಿದೆ, ಬಂದೂಕು ಬೇಕೆನಿಸುತ್ತದೆ.
ಹೀಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರಿನ ಪ್ರಸಿದ್ಧಿಗೆ ಇನ್ನಿಲ್ಲದ ಧಕ್ಕೆಯಾಗಿದೆ. ನಾವೆಲ್ಲ ನಮಗೆ ಸಿಕ್ಕಿದ ವೇದಿಕೆಗಳಲ್ಲಿ ತುಳುನಾಡಿನ ಬಗೆಗೆ ಯಾವಾಗಲೂ ಬಹಳ ಅಭಿಮಾನದಿಂದ ಮಾತಾಡುತ್ತೇವೆ. ಕಾರ್ನಾಡ್ ಸದಾಶಿವ ರಾವ್, ಕುದ್ಮಲ್ ರಂಗರಾವ್, ಕಮಲಾದೇವಿ ಚಟ್ಟೋಪಾಧ್ಯಾಯ, ಉಳ್ಳಾಲ ಶ್ರೀನಿವಾಸ ಮಲ್ಯ, ಡಾ. ಶಿವರಾಮ ಕಾರಂತ, ಯಕ್ಷಗಾನ, ಭೂತಾರಾಧನೆ ಮತ್ತಿತರ ವ್ಯಕ್ತಿ ಮತ್ತು ವಿಷಯಗಳ ಬಗೆಗೆ ಮಾತಾಡುವುದೆಂದರೆ ನಮಗೆಲ್ಲ ಇನ್ನಿಲ್ಲದ ಸಂತೋಷ. ಒಂದು ಸಣ್ಣ ಊರಿನ ಅಸಾಮಾನ್ಯ ಸಾಧನೆಗಳ ಬಗ್ಗೆ ಮಾತಾಡುವಾಗ ಜನರೂ ಕುತೂಹಲದಿಂದ ಕೇಳುತ್ತಿದ್ದರು. ಆದರೆ ಈಗ ನಮ್ಮ ಬಾಯಿ ಕಟ್ಟಿದೆ.
ಹೀಗೆ ಮಾಡುವುದರಿಂದ ಹಿಂದೂ ಜಾಗರಣ ವೇದಿಕೆಯರಿಗೆ ಆದ ಲಾಭವಾದರೂ ಏನು ಅಂತ ಅವರ ಪರವಾಗಿಯೂ ಯೋಚಿಸತೊಡಗಿದರೆ ಅದಕ್ಕೂ ಉತ್ತರ ದೊರೆಯುವುದಿಲ್ಲ. ತಾವು ದರೋಡೆ ಮಾಡಿ ತಂದ ಹುಡುಗರ ಮೊಬ್ಯಾಲ್, ಚಿನ್ನದ ಸರ ಇವರಿಗೆ ಎಷ್ಟು ದಿನ ಸಾಕಾದೀತು? ಇವರು ಮಾಡುವ ಆಕ್ರಮಣಗಳು ಬದಲಾಗುತ್ತಿರುವ ಸಮಾಜವನ್ನು ಮತ್ತೆ ಹಿಂದಕ್ಕೆ ಎಂದೆಂದೂ ಕೊಂಡೊಯ್ಯಲಾರವು. ಸ್ವತಹ ವ್ಯಭಿಚಾರಿಗಳೂ, ಕೊಲೆಗಡುಕರೂ, ದರೋಡೆಕಾರರೂ ಆಗಿರುವ ಈ ಮಂದಿಗಳಿಗೆ ಸಮಾಜವನ್ನು ತಮಗೆ ಬೇಕಾದಂತೆ ಬದಲಾಯಿಸುವ ಶಕ್ತಿ ಎಂದೂ ಬಾರದು. ಭಾರತೀಯ ಸಮಾಜ ಇಂಥ ನೀಚರನ್ನು ತಿರಸ್ಕರಿಸಿ ಶತಮಾನಗಳಿಂದ ಬೆಳೆದು ಬಂದಿದೆ, ಮುಂದೆಯೂ ಬೆಳೆಯಲಿದೆ.
ಮೊನ್ನೆ ಮಂಗಳೂರು ಘಟನೆಯಾದ ಆನಂತರ ದೆಹಲಿಯಲ್ಲಿರುವ ತುಳುವರೆಲ್ಲ ಒಂದೆಡೆ ಸೇರಿ ಒಂದು ಮನವಿ ಪತ್ರ ಸಿದ್ಧಪಡಿಸಿ ’ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಿಕೊಡಲು ಒತ್ತಾಯಿಸುತ್ತೇವೆ’ ಅಂತ ಸಹಿ ಹಾಕಿದೆವು. ಆದರೆ ಈ ಪತ್ರವನ್ನು ಯಾರಿಗೆ ಕಳಿಸುವುದು ಅಂತ ಗೊತ್ತಾಗಲಿಲ್ಲ. ಮಂಗಳೂರಿನ ಆಯಕಟ್ಟಿನ ಜಾಗಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮತ್ತು ರಾಜಕಾರಣಿಗಳ ಚರಿತ್ರೆ ನಮಗೆಲ್ಲ ಚೆನ್ನಾಗಿ ಗೊತ್ತಿದೆ. ಅವರಿಗೆ ದೂರು ಕೊಡುವುದೆಂದರೆ ಕಳ್ಳನ ಕೈಗೆ ಬೀಗದ ಕೈ ಕೊಟ್ಟಂತೆ. ಮತ್ತೆ ಸರಕಾರಕ್ಕೆ ದೂರು ಕೊಡೋಣವೇ? ಕರ್ನಾಟಕದ ಈಗಿನ ಸರಕಾರ ಹುಟ್ಟಿದ್ದೇ ರೆಸಾರ್ಟಲ್ಲಿ. ಉತ್ತರ ಕರ್ನಾಟಕ ಪ್ರವಾಹದ ಧಾಳಿಗೆ ಸಿಕ್ಕಾಗ ಇವರಲ್ಲ ಹೈದಾರಾಬಾದಿನ ರೆಸಾರ್ಟಲ್ಲಿ ಕುಳಿತು ರೈತರ ಸಮಸ್ಯೆ ಕುರಿತು ಅಧ್ಯಯನ ಮಾಡುತ್ತಿದ್ದರು ಮತ್ತು ಹಾಗಂತ ಒಬ್ಬ ಮಂತ್ರಿ ಬಹಿರಂಗ ಹೇಳಿಕೆ ಕೊಡುತ್ತಿದ್ದ. ಇವರದೇ ಸರಕಾರದ ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮಾಡುವಾಗಲೂ ಹೆಚ್ಚಿನವರು ಇದ್ದದ್ದು ರೆಸಾರ್ಟಲ್ಲಿ. ’ ಇಲ್ಲಿ ಒಳ್ಳೆಯದಾಗುತ್ತಿದೆ, ಜನರ ಕಿರಿ ಕಿರಿ ಇಲ್ಲ ’ ಅಂತ ಮತ್ತೊಬ್ಬ ಮಂತ್ರಿ ಮಹಾಶಯ ಹೇಳಿಯೂ ಬಿಟ್ಟ.
ಇಂಥ ಭಂಡ ಸರಕಾರಕ್ಕೆ ದೂರು ಕೊಡುವುದಾದರೂ ಹೇಗೆ? ಅಂತ ಯೋಚಿಸಿ ಮನವಿಯನ್ನು ಹಾಗೆಯೇ ತೆಗೆದಿರಿಸಿದೆವು.
ಪುರುಷೋತ್ತಮ ಬಿಳಿಮಲೆ
ನವದೆಹಲಿ
No comments:
Post a Comment