Thursday, August 30, 2012

’ಮಾತು ಮಂತ್ರವಾಗುವವರೆಗೆ’ ’ಮರೆತು ಹೋದ ದೊಂಬರಾಕೆ’

ನಾಟಕೀಯತೆಯೇ ಶಿವಪ್ರಕಾಶ್ ಕವಿತೆಗಳ ಜೀವಾಳ: ರೆಹಮತ್ ತರೀಕೆರೆ
ಶಿವಮೊಗ್ಗ: ಕವಿ ಎಚ್.ಎಸ್.ಶಿವಪ್ರಕಾಶ್‌ರ ಕವಿತೆಗಳು ನಾಟಕೀಯತೆಯಿಂದ ಕೂಡಿವೆ. ನಾಟಕೀಯತೆಯೇ ಅವರ ಕವಿತೆಗಳ ಜೀವಾಳ. ನಾಟಕೀಯ ತಿರುವುಗಳು ಕವಿತೆಗಳ ವಿಶೇಷ ಎಂದು ವಿಮರ್ಶಕ ರೆಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ನಗರದ ಕಮಲಾನೆಹರು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬುಧವಾರ ಸಂಜೆ ಅಹರ್ನಿಶಿ ಪ್ರಕಾಶನದಿಂದ ಏರ್ಪಡಿಸಿದ್ದ ಎಚ್.ಎಸ್.ಶಿವಪ್ರಕಾಶ್ ಅವರ ’ಮಾತು ಮಂತ್ರವಾಗುವವರೆಗೆ’ ಮತ್ತು ’ಮರೆತು ಹೋದ ದೊಂಬರಾಕೆ’ ಕವನ ಸಂಕಲನಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಶಿವಪ್ರಕಾಶ್ ಅವರ ಕಾವ್ಯದಲ್ಲಿ ಒಂದು ರೀತಿಯ ತಲ್ಲಣ, ವಿಹ್ವಲ, ಚಡಪಡಿಕೆ, ವಿಷಾದವಿದೆ. ಇದು ವೈಯಕ್ತಿಕವೋ, ಸಾಮಾಜಿಕವೋ, ರಾಜಕೀಯ ತಲ್ಲಣವೋ ಅರಿವಾಗುವುದಿಲ್ಲ. ಕವಿತೆಗಳ ನಾಯಕರು ಕೂಡ ಈ ತಲ್ಲಣ, ವಿಹ್ವಲತೆ ಅನುಭವಿಸುತ್ತಾರೆ. ಮಾತು ಮಂತ್ರವಾಗುವವರೆಗೆ ಹೆಚ್ಚು ಪ್ರಾರ್ಥನೆಗಳನ್ನು, ಕ್ರಿಯಾ ರೂಪಗಳನ್ನು ಒಳಗೊಂಡಿರುವ ಕವನ ಸಂಕಲನ. ಕುವೆಂಪು, ಬೇಂದ್ರೆ ಕಾವ್ಯದಲ್ಲಿ ಬಿಟ್ಟರೆ ಶಿವಪ್ರಕಾಶ್ ಕಾವ್ಯದಲ್ಲಿ ಇಂತಹ ಕ್ರಿಯಾರೂಪ ಕಾಣಬಹುದು. ಹಾಗೆಯೇ ಅಡಿಗರನ್ನು ಬಿಟ್ಟರೆ ಇಷ್ಟೊಂದು ಪ್ರಾರ್ಥನೆ, ಆವಾಹನೆ ಇರುವುದು ಇವರ ಕವಿತೆಗಳಲ್ಲಿ. ಒಂದು ರೀತಿಯ ಆರ್ತದನಿಯೂ ಇದೆ ಎಂದು ವಿಶ್ಲೇಷಿಸಿದರು.
ಎಚ್.ಎಸ್.ಅನುಪಮಾ, ರೆಹಮತ್ ತರೀಕೆರೆ, ಡಾ.ರಾಜೇಂದ್ರ ಚೆನ್ನಿ,
ಪ್ರೊ.ಎಚ್.ಎಸ್.ಶಿವಪ್ರಕಾಶ್ , ಜಿಂಗೋನಿಯಾ ಜಿಂಗೋನೆ
 

ತನ್ನನ್ನು ತಾನರಿಯುವ ಹಂತದಲ್ಲಿರುವ ಈ ಕವಿತೆಗಳು ಕುದಿತದಲ್ಲಿ ತಿಳಿಯುವಂತಹವು. ಈ ಮಟ್ಟದಲ್ಲಿ ಅವೈದಿಕ, ಅನುಭಾವಿಕ ಕವಿಗಳಿಂದ ಪ್ರೇರಣೆ ಪಡೆದ ಕವಿ ಮತ್ತೊಬ್ಬರಿಲ್ಲ. ಕುವೆಂಪು ಸಾಹಿತ್ಯದಲ್ಲಿ ಶಿವ ಸಂಸ್ಕೃತಿ ಇದೆ. ಹಾಗೆಯೇ ಶಿವಪ್ರಕಾಶ್ ಕಾವ್ಯದಲ್ಲೂ ಶಿವ ಸಂಸ್ಕೃತಿ ಕಾಣಬಹುದು. ಆದರೆ, ಇವು ಹೆಚ್ಚು ಅವೈದಿಕ ಸಂಸ್ಕೃತಿಯವು. ಬೇರೆ ಬೇರೆ ದಾರ್ಶನಿಕ, ಕಾವ್ಯ ಪರಂಪರೆಯಿಂದ ಅನುಸಂಧಾನ ಮಾಡಿ ಶೋಧಿಸುವ ಕಾರ್ಯವನ್ನು ಬೇರೊಬ್ಬರು ಮಾಡಿಲ್ಲ. ಆಧುನಿಕ ವಿಕಾರಗಳಿಗೆ ಇವು ಮದ್ದು ಎಂಬ ಭಾವ ಕೂಡ ಕವಿಗೆ ಇಲ್ಲ ಎಂದರು.
ಕವಿತೆಗಳು ಎಳನೀರಿನಂತೆ ಪಾರದರ್ಶಕವಾಗಿದ್ದರೂ ಅನೇಕ ವರ್ಷಗಳ ಅನುಭವದಿಂದ ಪಾಕಗೊಂಡ ಕವನ ಸಂಕಲನವಿದು. ಚಿಂತನಶೀಲತೆ, ಅಹಂಭಾವಿಕವಾದ ಸಂವೇದನಾಶೀಲತೆ ಇದೆ. ಶ್ರಮ ಸಂಸ್ಕೃತಿಯ ಅರಿವು ಇರುವವರು ಮಾತ್ರ ಇಂತಹ ಆಳವಾದ, ಸಾಮುದಾಯಿಕ ಪ್ರಜ್ಞೆಯಿಂದ ಕವಿತೆ ಬರೆಯಲು ಸಾಧ್ಯ ಎಂದು ಹೇಳಿದರು.
ಸಾಹಿತಿಗಳು ಭಾಷೆ ಬಗ್ಗೆ ತಾಳುತ್ತಿರುವ ಮಡಿವಂತಿಕೆಯಿಂದ ಭಾಷೆ ಕುಬ್ಜವಾಗುವ ಅಪಾಯವಿದೆ. ಅಪೂರ್ವವಾದ ಅನೇಕ ಪದಗಳು ನಶಿಸಬಹುದು. ಆದರೆ, ಶಿವಪ್ರಕಾಶ್ ಅಂತಹ ಮಡಿವಂತಿಕೆ ತೋರಿಲ್ಲ. ನಶಿಸುವ ಹಂತದಲ್ಲಿರುವ ಪದ, ಹಳಗನ್ನಡ ಪದ, ಜಾನಪದ, ಪಾರ್ಸಿ, ಉರ್ದು ಪದಗಳನ್ನೂ ಕಾವ್ಯದಲ್ಲಿ ದುಡಿಸಿಕೊಂಡಿದ್ದಾರೆ. ಇತ್ತೀಚೆಗೆ ಆಳವಾದ, ಗರ್ಭಾವಸ್ಥೆಯಿಂದ ಹುಟ್ಟುವ ಕಾವ್ಯಗಳು ಕಡಿಮೆಯಾಗುತ್ತಿವೆ. ಒಂದು ರೀತಿಯ ಏಕತಾನತೆ ಹುಟ್ಟುತ್ತಿರುವ ಸಂದರ್ಭದಲ್ಲಿ ಎಚ್.ಎಸ್.ಶಿವಪ್ರಕಾಶರ ಕವಿತೆಗಳು ಹಿರಿ-ಕಿರಿಯ ಲೇಖಕರಿಗೆ ಸವಾಲಿನ ರೀತಿಯಲ್ಲಿವೆ ಎಂದು ಬಣ್ಣಿಸಿದರು.
ಸಾಹಿತಿ ಪ್ರೊ.ಎಚ್.ಎಸ್.ಶಿವಪ್ರಕಾಶ್ ಮಾತನಾಡಿ, ಕಾವ್ಯಗಳನ್ನು ಅನುವಾದಿಸುವ ಮೂಲಕ ಸಾಕಷ್ಟು ಕಲಿತಿದ್ದೇನೆ. ದ್ವೈತ, ಅದ್ವೈತ ಯಾವುದೂ ಅಂತಿಮವಲ್ಲ. ಜಗತ್ತಿಗೆ ಅಂತಿಮ ರೂಪ ಇಲ್ಲ. ಅದು ಪರಿವರ್ತನಾಶೀಲವಾದುದು. ಸಿದ್ಧ ಚೌಕಟ್ಟಿಗೆ ಜಗತ್ತನ್ನು ಒಳಪಡಿಸುವುದು ಸರಿಯಲ್ಲ ಎಂದರು.
ತಲ್ಲಣ, ವಿಷಾದದ ಜಿಜ್ಞಾಸೆ!
ಎಚ್.ಎಸ್.ಶಿವಪ್ರಕಾಶ್ ಅವರ ’ಮಾತು ಮಂತ್ರವಾಗುವವರೆಗೆ’ ಕವನ ಸಂಕಲನ ವಿಮರ್ಶೆ ಮಾಡಿದ ವಿಮರ್ಶಕ ರೆಹಮತ್ ತರೀಕೆರೆ, ಶಿವಪ್ರಕಾಶರ ಇಡೀ ಕಾವ್ಯಗಳಲ್ಲಿ ಒಂದು ರೀತಿಯ ತಲ್ಲಣ, ವಿಹ್ವಲ, ವಿಷಾದ, ತಳಮಳ, ಚಡಪಡಿಕೆ ಇದೆ. ತುಂಬಾ ಆರ್ತತೆಯಲ್ಲಿ ಹುಟ್ಟಿದ ಕವಿತೆಗಳೆನಿಸುತ್ತವೆ. ಕವಿತೆಗಳನ್ನು ಓದಿದ ನಂತರವೂ ತಲ್ಲಣ, ವಿಷಾದ ಉಳಿದುಕೊಳ್ಳುತ್ತದೆ. ಅನೇಕ ಸಲ ನಾನು ಗೊಂದಲಕ್ಕೆ ಒಳಗಾಗಿದ್ದೇನೆ. ಅವರ ಒಟ್ಟೂ ಕಾವ್ಯ ಓದಿಕೊಂಡಿದ್ದರೂ ಇನ್ನೂ ಪೂರ್ತಿ ಅರ್ಥ ಆಗಿಲ್ಲ. ಬಹುತೇಕ ಕವಿತೆಗಳು ಉರಿವ ಆತ್ಮದಂತಿವೆ ಎಂದು ವಿಶ್ಲೇಷಿಸಿದರು.
ಲೇಖಕಿ ಎಚ್.ಎಸ್.ಅನುಪಮಾ ಕೂಡ ರೆಹಮತ್ ತರೀಕೆರೆ ಅವರ ಅನಿಸಿಕೆಗೆ ಸಾಥ್ ನೀಡಿ, ಶಿವಪ್ರಕಾಶ್ ಅವರ ಕಾವ್ಯದ ಬಗ್ಗೆ ತಕರಾರು ಎಂಬುದಕ್ಕಿಂತಲೂ ಅನುಮಾನವಿದೆ. ಸಾಧಾರಣವಾಗಿ ಕವಿತೆಗಳು ದುಃಖ, ವಿಷಾದ ದೂರ ಮಾಡುವ ಗುಣ ಹೊಂದಿರುತ್ತವೆ. ಆದರೆ, ಶಿವಪ್ರಕಾಶ್ ಅವರ ಕಾವ್ಯ ಓದಿದ ಮೇಲೂ ಒಂದು ವಿಷಾದ, ದುಃಖ ಉಳಿಯುತ್ತದೆ. ಅಂತರಂಗದ ಚದುರದ ಸಂತೆಯ ವೌನಗಳಿಗೆ ಬಟ್ಟೆ ತೊಡಿಸಿ ಹೊರ ಬಿಟ್ಟಾಗ ಕಾವ್ಯ ಹುಟ್ಟುತ್ತದೆ ಎನಿಸುತ್ತದೆ. ಅಂತಹ ಕಾವ್ಯಗಳು ಶಿವಪ್ರಕಾಶ್ ಅವರದ್ದು ಎಂದರು.
ಆದರೆ, ಅಧ್ಯಕ್ಷೀಯ ಭಾಷಣ ಮಾಡಿದ ಡಾ.ರಾಜೇಂದ್ರ ಚೆನ್ನಿ ಮಾತ್ರ ಈ ಅಭಿಪ್ರಾಯ ಒಪ್ಪಲಿಲ್ಲ. ನಾವು ಹಳೆಯ ಸಿದ್ಧ ಚೌಕಟ್ಟಿಗೆ ಅಂಟಿಕೊಳ್ಳುವುದು ಸರಿಯಲ್ಲ. ಶಿವಪ್ರಕಾಶರ ಆರಂಭಿಕ ಕಾವ್ಯಕ್ಕೂ ಈಗಿನ ಕಾವ್ಯಕ್ಕೂ ಬದಲಾವಣೆ ಇದೆ. ಇಲ್ಲಿನ ಕವಿತೆಗಳಲ್ಲಿ ತಲ್ಲಣವಿಲ್ಲ. ಕವಿತೆಗಳಲ್ಲಿ ವಿಷಾದವಿದೆ ಎಂಬುದನ್ನು ನಾನು ಯಾವುದೇ ವಿಷಾದ ಇಲ್ಲದೆ ನಿರಾಕರಿಸುತ್ತೇನೆ ಎಂದು ಕೃತಿ ವಿಮರ್ಶೆ ಮಾಡಿದ ಇಬ್ಬರಿಗೂ ಟಾಂಗ್ ಕೊಟ್ಟರು.
ತಕರಾರಿನ ಬಗ್ಗೆ ಸ್ಪಷ್ಟನೆ ನೀಡಿದ ಎಚ್.ಎಸ್.ಶಿವಪ್ರಕಾಶ್, ತಕರಾರುಗಳು ಬರದಿದ್ದರೆ ಸಂಸ್ಕೃತಿ ಮುಂದುವರಿಯಲ್ಲ. ನನ್ನ ಮೆಚ್ಚಿನ ಕವಿಗಳಾದ ಕುವೆಂಪು, ಕೆ.ಎಸ್.ನರಸಿಂಹಸ್ವಾಮಿ ಅವರ ಬಗ್ಗೆ ನನಗೆ ತಕರಾರು ಇಲ್ಲದಿದ್ದರೆ ಕವಿತೆ ಬರೆಯುವ ಕುಮ್ಮಕ್ಕು ನನಗೆ ಸಿಕ್ಕುತ್ತಿರಲಿಲ್ಲ. ಇವತ್ತಿನ ಸಮಾಜದಲ್ಲಿ ಯಾವುದನ್ನು ಸಂಭ್ರಮಿಸಬೇಕು ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಗ್ಲೋಬಲೀಕರಣವನ್ನೋ, ಭಾರತ ಒಂದು ಆರ್ಥಿಕ ಶಕ್ತಿ ಎಂಬ ಮಿಥ್ಯೆಯನ್ನೋ, ಸಿದ್ಧಾಂತಗಳನ್ನೋ? ಯಾವುದನ್ನು ಸಂಭ್ರಮಿಸೋಣ?
ಸಂಭ್ರಮಿಸಲು ನನಗೆ ಇಲ್ಲಿ ಯಾವೊಂದು ಕಾರಣವೂ ಸಿಕ್ಕುತ್ತಿಲ್ಲ. ಹಾಗಾಗಿಯೇ ನಾನು ಕವಿತೆಗಳಲ್ಲಿ ವಿಷಾದವನ್ನು ಹೊರಗಿಡುತ್ತಿದ್ದೇನೆ. ಕವಿತೆ ಬರೆಯಲು ನನಗೆ ಬೇರೆ ದಾರಿ ಇಲ್ಲ. ನನ್ನ ವಿಪತ್ತು, ದುಃಖ, ವಿಷಾದವೇ ನನಗೆ ಸಂಭ್ರಮ. ಈಗ ನನಗೆ ಎದುರಾಳಿಗಳಿಲ್ಲ. ಇಡೀ ಜಗತ್ತು ಹಾಳಾಗಿದ್ದೇ ಎದುರಾಳಿ ಇದ್ದಾನೆಂಬ ವಿಭಜನಾತ್ಮಕ ದೃಷ್ಟಿಕೋನದಿಂದ. ಮತ್ತೊಬ್ಬನನ್ನು ತುಳಿದು ಬೆಳೆಯುವ ಧಾವಂತದಿಂದ ಜಗತ್ತು ಹಾಳಾಗುತ್ತಿದೆ. ಇಂತಹ ವಿಷಾದ ನನ್ನನ್ನು ಕಾಡುತ್ತದೆ ಎಂದರು.
ಮರೆತುಹೋದ ದೊಂಬರಾಕೆ ಕೃತಿಯ ಮೂಲ ಲೇಖಕಿ ಇಟಲಿಯ ಜಿಂಗೋನಿಯಾ ಜಿಂಗೋನೆ ಕವಿತೆಗಳನ್ನು ವಾಚಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರೊ.ರಾಜೇಂದ್ರ ಚೆನ್ನಿ, ಲೇಖಕಿ ಎಚ್.ಎಸ್.ಅನುಪಮಾ ಮಾತನಾಡಿದರು. ಪೂಜಾ ಪ್ರಾರ್ಥಿಸಿ, ಅಹರ್ನಿಶಿ ಪ್ರಕಾಶನದ ಅಕ್ಷತಾ ಸ್ವಾಗತಿಸಿದರು. ನಾಗಭೂಷಣ ನಿರೂಪಿಸಿದರು.
ವಿಜಯ ಕರ್ನಾಟಕ

No comments:

Post a Comment