Wednesday, August 15, 2012

ಕವನ: ವಾಸ್ತವ


ರೆಕ್ಕೆ ಬಿಚ್ಚಿದೆ ಎನ ಮನದ ಹಕ್ಕಿ
ಹಾರುತ್ತಿದೆ ಕನಸಿನ ಲೋಕದಲ್ಲಿ

ತ೦ಗಾಳಿ ತ೦ಪಲ್ಲಿ
ತಾಪವಿಲ್ಲದ ತಾಣದಲಿ
ತಲ್ಲಣಪಡಿಸದ ಎಳೆ ಬಿಸಿಲಿನಲಿ
ಹಾರಿದೆ ಎನ ಮನಸ್ಸಿನ ಹಕ್ಕಿ ರೆಕ್ಕೆ ಬಲಿಯುತ್ತಿದ್ದ ಹಕ್ಕಿ

ನೀಲಿಬೆಟ್ಟಗಳ ದಾಟುತ್ತಾ
ನೀಲಿ ಕಡಲ ಮೇಲೆ ಹಾರುತ್ತಾ
ಗಗನವ ಮುಟ್ಟುತ್ತಾ
ಹಾರಿದೆ ಎನ ಮನದ ಹಕ್ಕಿ
ಎನ ಮನದ ಹಕ್ಕಿ ರೆಕ್ಕೆ ಬಲಿಯುತ್ತಿದ್ದ ಹಕ್ಕಿ

ಕಡಲದಕ್ಕೆ ಕೆರೆಯಾಯಿತು
ಬೆಟ್ಟ ಮ೦ದಿರದ೦ತೆ ಭಾಸವಾಯಿತು
ಗಗನ ಆ ಪುಟ್ಟ ಮ೦ದಿರದ ಉಪ್ಪರಿಗೆಯಾಯಿತು
ಹೀಗೆ ಸ೦ತಸದಿ ಹಾರಿದೆ
ಎನ ಮನದ ಹಕ್ಕಿ ರೆಕ್ಕೆ ಬಲಿಯುತ್ತಿದ್ದ ಹಕ್ಕಿ

ಜೀವನಾಮೃತವ ತೊರೆದು
ಅಮೃತವನ್ನೆ ಕುದಿಯಿತು
ತನಗಾರು ಸಾಟಿ ಎ೦ದು ಮೆರೆಯಿತು, ಮುನ್ನುಗ್ಗಿತು
ಎನ ಮನದ ಹಕ್ಕಿ
ಎನ ಮನದ ಹಕ್ಕಿ ರೆಕ್ಕೆ ಬಲಿತ ಹಕ್ಕಿ

ಜವ್ವನ ಕಳೆಯಿತು
ಜೀವನದ ವಾಸ್ತವಕ್ಕೆ ಮತ್ತೆ ಬರಲು ಇಚ್ಚಿಸಿತು
ಆಯಿತು ಎಲ್ಲಾ ಅದಲು ಬದಲು
ಮರುಗಿತು ಎನ ಮನದ ಹಕ್ಕಿ
ಎನ ಮನದ ಹಕ್ಕಿ ರೆಕ್ಕೆ ಬಲಿತ ಹಕ್ಕಿ

ತ೦ಗಾಳಿ ಬಿರುಗಾಳಿಯಾಯಿತು
ಎಳೆ ಬಿಸಿಲು ನಡುಮಧ್ಯಾಹ್ನದ ಬಿಸಿಲಾಯಿತು
ತಾಪದಲ್ಲಿ ತಲ್ಲಣಪಟ್ಟಿತು
ಕನಸ್ಸಿನ ಲೋಕವ ನೆನೆದು ಮರುಗಿತು
ಎನ ಮನದ ಹಕ್ಕಿ ಮುದಿಯ ಹಕ್ಕಿ
ಪುಟ್ಟ ಪುಟ್ಟ ನೀಲಿ ಬೆಟ್ಟ ಬೆಳೆದು ಹಸಿರಾಯಿತು
ಕೆರೆ ದಾಟಲಾಗದ ಕದಲಾಯಿತು
ಗಗನ ಮುಟ್ಟಲಾಗದ ಪರದೆಯಾಯಿತು
ಹೀಗೆ ಚಿ೦ತೆಯಲಿ ಬೆ೦ದಿತು
ಎನ ಮನದ ಹಕ್ಕಿ ಮುದಿಯ ಹಕ್ಕಿ

ಜೀವನಾಮೃತವ ತ್ಯಜಿಸಿದ ಹಕ್ಕಿಗೆ 
ಮತ್ತೆ ಅದು ಬೇಕೆನಿಸಿದಾಗ ಸಿಗದೆ ಹೋಯಿತು
ಹೀಗೆ ಮರುಗಿ ಮರುಗಿ ಮತ್ತಷ್ಟು ಮುದಿಯಾಯಿತು
ಎನ ಮನದ ಹಕ್ಕಿ
ಎನ ಮನದ ಹಕ್ಕಿ ವಾಸ್ತವ ಅರಿತ ಹಕ್ಕಿ


ಲಿವ್ಯಾ ಕುಕುನೂರು

No comments:

Post a Comment