Tuesday, February 8, 2011

ತೆಲುಗಿನ ಎರಡು ಕವನಗಳು ಕನ್ನಡದಲ್ಲಿ

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ವಿಜೇತ ಪ್ರೊ. ಎನ್. ಗೋಪಿ (1948) ತೆಲುಗಿನ ಅತಿ ಮಹತ್ವದ ಹಾಗೂ ಪ್ರಭಾವಶಾಲಿ ಕವಿಗಳಲ್ಲೊಬ್ಬರು. ಕವನ ಸಂಕಲನಗಳೊಂದಿಗೆ ಅವರು ವಿಮರ್ಶೆ, ಪ್ರವಾಸ ಕಥನ, ಸಂಶೋಧನೆ ಮತ್ತು ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ಶ್ರೀ ಪೊಟ್ಟಿ ರಾಮುಲು ತೆಲುಗು ವಿಶ್ವವಿದ್ಯಾಲಯ ಹೈದರಾಬಾದ್, ಕಾಕತೀಯ ವಿಶ್ವವಿದ್ಯಾಲಯ ವಾರಂಗಲ್, ದ್ರಾವಿಡ ವಿಶ್ವವಿದ್ಯಾಲಯ ಕುಪ್ಪಂ ಗಳ ಉಪಕುಲಪತಿಯಾಗಿ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದ ಆರ್ಟ್ ಫ್ಯಾಕಲ್ಟಿಯ ಡೀನ್ ಆಗಿಯೂ ಕಾರ್ಯನಿರ್ವಹಿಸಿರುವರು.
ಪ್ರೊ  ಗೋಪಿಯವರ ಅಕ್ಷರಾಲ್ಲೋ ದಗ್ದಮೈ ... ಕವನ ಸಂಕಲನದ ಕವನಗಳನ್ನು ಕನ್ನಡಕ್ಕೆ ತರುವ ಕಾರ್ಯವನ್ನು ಕೃಷ್ಣಮೂರ್ತಿ ಕಲುಮಂಗಿ ಅವರು ಮಾಡುತ್ತಿದ್ದಾರೆ. ಅನುವಾದಗೊಂಡ ಎರಡು ಕವನಗಳು ಕೆಂಪುಕೋಟೆಯ ಓದುಗರಿಗೆ.

ಸ್ವಂತ

ಚಿಗುರೇ
ನೀ ಕುಡಿಯೊಡೆದರೆ
ಮರವು ನಿನದಾಗುವುದು


ಹೂವೇ
ನೀ ಬಿರಿದಾಗ
ತೋಟವು ನಿನದಾಗುವುದು


ಹನಿಯೇ
ನೀ ಸುರಿದಾಗ
ಮಣ್ಣು ನಿನದಾಗುವುದು


ಎಷ್ಟು ಸಾರಿ ದೃಷ್ಟಿಸಿದರೂ
ಆಗಸವು ಕಿರಿದಾಗದು
ಎಷ್ಟು ಬಾರಿ ಉತ್ತಿದರೂ
ಭೂಮಿಯು ಬರಿದಾಗದು


ಮುಖವೇ
ನೀ ನಕ್ಕಾಗ
ಕಾಂತಿಯು ನಿನದಾಗುವುದು


ಮನುಜನೇ
ನೀ ಕೊಟ್ಟಾಗ
ಶಾಂತಿಯು ನಿನದಾಗುವುದು



ಸೃಷ್ಟಿ

ಬಿಡಿಸಬೇಕು ಚಕ್ಕೆಯಲಿ ಬಂಧಿಯಾಗಿರುವ ಪೆನ್ಸಿಲನು
ಥಳ ಥಳಿಸುವ ಸಾವಿರಾರು ಕಪ್ಪು
ಅಕ್ಷರಗಳನು ಅಡಗಿಸಿಕೊಂಡಿರುವ ಕಡ್ಡಿಯನು
ಮೊನಚುಗೊಳಿಸಿ ಬಿಡಬೇಕು

ಪೆನ್ಸಿಲನು ಹೊರಗೆ ತರ ಬೇಕೆಂದರೆ
ಚಕ್ಕೆಯನು ಗಾಯಗೊಳಿಸಬೇಕು
ಸಿಪ್ಪೆ ಸಿಪ್ಪೆಗಳಾಗಿ ಹೆರೆದು
ಬಾಧೆ ಪಡಿಸಬೇಕು

ಅಥವಾ ಶಾರ್ಪನರ್ ಎಂಬ ಸುರಂಗದೊಳಗೆ
ಚಿತ್ರಹಿಂಸೆಗೀಡು ಮಾಡಬೇಕು
ಮರೆತಿರುವೆಯೇನು?
ಇದಿಷ್ಟು ದಿನ ಪೆನ್ಸಿಲನು
ಹೊಟ್ಟೆಯಲಿಟ್ಟು  ಕಾಪಾಡಿದ್ದು ಚಕ್ಕೆ ತಾನೆ!

ತಪ್ಪದು
ನನಗೆ ಬರೆಯಲು ಪೆನ್ಸಿಲ್ ಬೇಕು
ಅದರ ಎದೆಯೊಳಗಿಂದ ಹೂವುಗಳ ಚೆಲ್ಲಬೇಕು
ಚಕ್ಕೆಯನು ಹಿಂಸಿಸುತಿರುವೆನೆಂದು ಅನಿಸದಿರಿ

ಪೆನ್ಸಿಲೂ ಸವೆದು ಹೋಗುವುದು
ಚಕ್ಕೆಯೂ ನವೆದು ಹೋಗುವುದು

ಎರಡೂ ನಾಮರೂಪ ಕಳೆದು
ಹೊಸ ಸೃಷ್ಟಿಯನು ಬೆಳಗಿಸುವುದು
ರಕ್ತ ಸಿಕ್ತವಾದ ಸೃಜನೆ
ಸೂರ್ಯನಿಗೆ ಕೆಂಪನು ಪ್ರಸಾದಿಸುವುದು.

ಕೆಂಪುಕೋಟೆ

No comments:

Post a Comment