Sunday, February 13, 2011

ರಾಧೆಯ ಸ್ವಗತ

ವ್ಯಾಲೆಂಟೈನ್ಸ್ ದಿನದ ಪ್ರೇಮಿಗಳ ಹಬ್ಬಕ್ಕೆ ಮುನ್ನುಡಿಯಾಗಿ ಈ ದಿನ ಬೆಳಕಿನ ಪಾದ ಕವನ ಸಂಕಲನದಿಂದ ಎರಡು ಕವನಗಳು. ಕೆಂಪುಕೋಟೆಯಲ್ಲಿ  ಅತ್ಯಂತ ಪ್ರೇಮಮಯ ಬರಹಕ್ಕಾಗಿ  ವ್ಯಾಲೆಂಟೈನ್ಸ್ ದಿನಕ್ಕೆ ಕಾಯೋಣ. 












ರಾಧೆಯ ಸ್ವಗತ


ರಾಧೆ ನಾನು
ಕಾಯುತ್ತಿದ್ದೇನೆ
ಯಮುನೆಯ ದಂಡೆಯಲ್ಲಿ
ಕೃಷ್ಣ ಬರುವನೆಂದು


ಮುಸ್ಸಂಜೆಯ ಮಂಜಿಗೆ
ಬಿರಿದ ಮಲ್ಲಿಗೆಯಾಗಿ
ಕೊಳಲಿನ ಇಂಚರದ
ಸವಿಯ ಮೆಲ್ಲಲು


ಅವನ ನೆನಪು
ತುಂಬಿ ಕೊಂಡಿದೆ
ಬಿಗಿದುಕೊಂಡ
ನನ್ನೆದೆಯೊಳಗೆ


ಕಾದಿದ್ದೇನೆ ಅವನಿಗಾಗಿ
ಬೆಣ್ಣೆಯಂತೆ ಕರಗಲು
ಎಲ್ಲಿ ಅಡಗಿದ
ಕಳ್ಳ ಅವನು


ಬಾನಿನಲ್ಲಿ ಬೆಳ್ಳಿ ಚುಕ್ಕಿ
ಕಣ್ಣಿನಲ್ಲಿ ಕಾತರ
ಬಂದೇ ಬರುವನು
ಯಾಕೆ ಆತುರ


ಅಂದಾಗಲೇ ಬಂದನಿಲ್ಲಿ
ಕತ್ತಲೊಳಗಿಂದ
ಕನಸಿನ ಲೋಕದಿಂದ
ನನ್ನ ಶ್ಯಾಮ, ನನ್ನ ಕೃಷ್ಣ.


ಕಾಮ ರತಿ


ನನ್ನ ಬತ್ತಳಿಕೆಯಲ್ಲಿರುವುದು
ಹೂವಿನ ಬಾಣ
ನಾನು ಮನ್ಮಥ, ಕಾಮ
ನೀನು ರತಿ


ನಿನ್ನ ಗರ್ಭದೊಳಗೆ
ನನ್ನ ಹೂವಿನ ಮೊಗ್ಗು
ಅರಳಿ ಬಿರಿಯಲಿ
ಕಾಮರತಿಯ ಸುಖವನ್ನುಂಡು


ನನ್ನೆದೆಯೊಳಗಿರುವುದು
ನೀನೊಬ್ಬಳಿಗೇ ಕಾಯ್ದಿರಿಸಿದ
ಪ್ರೀತಿ, ಪ್ರೇಮ, ಮೋಹ
ಬಯಕೆ, ಕಾಮ


ಎಲ್ಲವನ್ನುಂಡು ತೇಗು ಬಾ
ನನ್ನ ರತಿ
ಬರಿದಾಗದಿರಲಿ ನನ್ನ
ಹೂಬಾಣದ ಬತ್ತಳಿಕೆ.

ಕೆಂಪುಕೋಟೆ

No comments:

Post a Comment