Saturday, January 29, 2011

ದೆಹಲಿಯೆಂಬ ನಗರ ಮತ್ತು ಯಮುನೆ

ರೇಣುಕಾ ನಿಡಗುಂದಿ

ದೆಹಲಿಯೆಂಬ ಮಹಾನಗರ. ಅದರೊಡನೆ ಹರಿಯುವ ಯಮುನಾ ನದಿ. 
ದೆಹಲಿಯ ಕವಯತ್ರಿ ರೇಣುಕಾ ನಿಡಗುಂದಿಯವರಿಗೆ ಕಾವ್ಯಲೋಕವನ್ನೇ ತೆರೆದು ಕೊಟ್ಟಿದೆ.
ಕನ್ನಡದ ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ ತಮ್ಮ ಕವನಗಳ ಮೂಲಕ ಪರಿಚಿತ
ರೇಣುಕಾ ಅವರ ಮೊದಲ ಸಂಕಲನ ಕಣ್ಣ ಕಣಿವೆ (2008).
ಕೆಂಪುಕೋಟೆ ಓದುಗರಿಗೆ ಈ ವಾರಾಂತ್ಯಕ್ಕೊಂದು ದೆಹಲಿಯದೇ ಕವನ.

ಈ ನಗರದ ತುಂಬ..
ಹಳೇ ಪಾಳುಬಿದ್ದ ಗುಮ್ಮಟಗಳು
ಮಂಕುಹಿಡಿದ ಮೀನಾರುಗಳು
ಮುರುಕು ಗೋಡೆಗಳ
ಒಡಕು ಬಿರುಕುಗಳಲ್ಲಿ
ಬಿಳಿ ನವಿಲಿನ ವೈಯ್ಯಾರ
ಜಾಲಿ ಪೊದೆಗೆ ಸಿಕ್ಕುಹಾಕಿಕೊಂಡಿದೆ.

ಸಾವಿರ ರಂಗಿನ ಕಾಮನಬಿಲ್ಲು
ಹಾಳು ಗೋಡೆಯ ಮೇಲೆ ಚಿತ್ರ ಬಿಡಿಸಿದೆ.
ಮಸಣದ ಕರಕು ವಾಸನೆ ಹಿಡಿದ
ತಲೆಹಿಡುಕರ ತಾಣ ಈ ಕೆಂಪುಕಲ್ಲಿನ ಗುಡಾಣ
ಮಹಾನಗರ ದೆಹಲಿ

ಕಲ್ಲು ಗೋಡೆಗಳ ಒಳನಾಡಿಗಳು
ಹೊಸೆದು - ಮಸೆದು ಜೀರ್ಣಿಸಿಕೊಂಡ
ಇತಿಹಾಸವೀಗ ಮರುಗುತ್ತಿದೆ
ಇಂದು
ಅಂದು
ಮೂಲೆ ಮೂಲೆಗೂ ಹಾಸಿ ಹೊದೆದ
ಅಮೃತಶಿಲೆಯ ಕುಸುರಿನಲ್ಲಿ
ಮೊಗಲ್ ಸಾಮ್ರಾಜ್ಯದ ಅಟಾಟೋಪ
ಗೋರಿಗಳ ಸುತ್ತ ಮೆಹಂದಿ ಚಿಗುರು
ನಡುಬಿಸಿಲಿಗೇರಿದ ಕಡುಗೆಂಪು ರಂಗು !

ತಣ್ಣಗೆ ಮುಲುಕಾಡುವ
ಕಲುಷಿತ ಯಮುನೆ
ಶೋಭಿತಳು ಪರಮ ಪೂಜಿತಳು
ಎಂದೋ,
ಇಂದು
ಕೊಳೆತು ನಾರುವ ನೀರಿನಲ್ಲಿ
ಹೂತ ವಸಂತಗಳು
ಹಸಿರು ಪಾಚಿಗಟ್ಟಿದ ನಡುಗಡ್ಡೆಗಳು
ಹರಿವೇ ಇಲ್ಲದ ಯಮುನೆಯಲ್ಲಿ ತುಂಡು ಚಂದ್ರ.

ಊರ ತುಂಬ ಮೊಂಡು ಹಿಡಿದ ಗಟಾರಗಳು
ಕೊಳಕು ನಾಲಾಗಳು
ಝುಗ್ಗಿ ಜೋಪಡಿಗಳು
ಕಮಲದ  ಬೇರಿನ ತರಕಾರಿ
ಪಾತಾಳಗಡ ಹಾಕಿ ಜಾಲಾಡುವ
ಮೀನುಗಾರರ ಹಿಂಡು
ಹೊಟ್ಟೆ ಪಾತಾಳ
ಬೆನ್ನು ತಾಮ್ರ
ಕಣ್ಣು ಕ್ಷಿತಿಜ
ಇಂಡಿಯಾ ಗೇಟ್
ದೇಹ ನೆಲ ಕಚ್ಚಿದ ದೋಣಿ
ಬದುಕು ಗಾಳ ಹಾಕುತ್ತಲೇ ಇದೆ
ಮೀನು ಹುಡುಕುತ್ತಲೇ ಇದೆ.
ನಿತ್ಯ ಬದುಕು ಗೋಲಿ ಗುಂಡಿನಂತೆ
ಉರುಳಾಡುತ್ತಿದೆ
ನಗರದ ತುಂಬ ಭೀತಿ
ಹಬೆಯಾಡುತ್ತಿದೆ !!

ಅದೇ
ಗಂಗೇಚ , ಯಮುನೇಚ ?.ಶ್ಲೋಕ
ಬಚ್ಚಲು ಮನೆಯಲ್ಲಿ
ಬೆಳಗಿನ ಸೂರ‍್ಯನ ಕೆಂಪು ಓಕುಳಿ
ತಾಯಿ ಯಮುನೆಗೆ ನಿತ್ಯದಾರತಿ !


ರೇಣುಕಾ ನಿಡಗುಂದಿ
ಕೆಂಪುಕೋಟೆ

1 comment:

  1. ಈ ಕವನದಲ್ಲಿ ಇಂದಿನ ದೆಹಲಿಯ ಚಿತ್ರಣ ಕಣ್ಣಿಗೆ ಕಟ್ಟುವಂತೆ ಪದಗಳಲ್ಲಿ ಮೂಡಿದೆ. ಬಹು ದಿನಗಳ ನಂತರ ಒಂದು ಉತ್ತಮ ಕವನ ಓದಿದಂತಾಯಿತು.

    ReplyDelete