Thursday, January 20, 2011

ಕೆಂಪು ಕೋಟೆಯ ಕಿಟಿಕಿಯಿಂದ


ಅಂತರ್ಜಾಲದಲ್ಲೊಂದು ಕೆಂಪುಕೋಟೆಯನ್ನು ಕಟ್ಟುವ ಕನಸು ಕಂಡಾಗ, ಆ ಕನಸುಗಳಿಗೆ ಆಕಾರ ಕೊಡಲು ಹುಮ್ಮಸ್ಸು ನೀಡಿದವರು ಡಾ. ಪುರುಷೋತ್ತಮ ಬಿಳಿಮಲೆ. ಈ ವಿಶಾಲ ಸಾಗರದಲ್ಲಿ ಮುತ್ತುಗಳನ್ನು ಹೆಕ್ಕಲು ಹುರಿದುಂಬಿಸಿದ ಡಾ. ಬಿಳಿಮಲೆಯವರು ಬರೆದ ಆತ್ಮೀಯ ಬರಹ  ಕೆಂಪುಕೋಟೆಯ ಓದುಗರಿಗೆ.  
ಡಾ.ಪುರುಷೋತ್ತಮ ಬಿಳಿಮಲೆ

ಶಹಾಜಹಾನನಿಗೆ ಯಮುನಾ ನದಿಯೆಂದರೆ ಎಲ್ಲವೂ.
ಆಗ್ರಾದಲ್ಲಿ ನಿಧಾನವಾಗಿ ಹರಿಯುವ ಯಮುನೆಯ ಸುಂದರ  ಬಳುಕಿನ ಆಯಕಟ್ಟಿನ ಜಾಗದಲ್ಲಿ ಆತ  ತನ್ನ ಪ್ರಿಯತಮೆಯ ನೆನಪುಗಳನ್ನು ತಾಜಮಹಾಲಾಗಿಸಿದ. 1638ರಲ್ಲಿ ಆತ ತನ್ನ ರಾಜಧಾನಿಯನ್ನು ದೆಹಲಿಗೆ ವರ್ಗಾಯಿಸಿ, ಮತೊಮ್ಮೆ ಯಮುನೆಯ ಬಲದಂಡೆಯಲ್ಲಿ ಕೆಂಪುಕೋಟೆ ಕಟ್ಟಿದ.
ಒಂಬತ್ತು ವರುಷಗಳ ಸತತ ಪ್ರಯತ್ನದ ಆನಂತರ 14 ಹೆಬ್ಬಾಗಿಲುಗಳುಳ್ಳ ಸುಂದರ ಕೋಟೆ ದೆಹಲಿಯಲ್ಲಿ ತಲೆ ಎತ್ತಿ ಆಗ್ರಾವನ್ನು ಅಣಕಿಸತೊಡಗಿತು.
ಈಗ ಈ ಕೋಟೆಯ ತುಂಬ ನಡೆದಾಡಿದರೆ ಇತಿಹಾಸ, ವರ್ತಮಾನ, ಭವಿಷ್ಯತ್ತುಗಳೆಲ್ಲಾ ಒಂದರೊಡನೊಂದು ಬೆರೆತು ಇವಾವೂ ಅಲ್ಲದ ಬೇರೆಯದೇ ಆದ ಭ್ರಾಮಕ ಲೋಕವೊಂದು ಮೌನವಾಗಿ ರೂಪುದಳೆಯುತ್ತದೆ.
ಕೋಟೆಯ ಕೆಂಪು ಕಲ್ಲುಗಳೆಲ್ಲಾ ಬೆಳದಿಂಗಳು ಚೆಲ್ಲಿದಂತಿರುವ ಚಂದ್ರಕಾಂತ ಶಿಲೆಯೊಳಗೆ ಕರಗತೊಡಗಿದಾಗ ನಮ್ಮ ವಾಸ್ತವಗಳೆಲ್ಲ ಕನಸಿನ ದೋಣಿಯನೇರಿ ಯಮುನೆಯಲ್ಲಿ ತೇಲತೊಡಗುತ್ತವೆ. ಕೆಂಪುಕೋಟೆಯ ತುಂಬ ಅರಸನ ಬಯಕೆಗಳ ಪ್ರತಿಮೆಗಳು.
ಕೋಟೆಯೊಳಗೆ ನೂಬತ ಖಾನ (ಡೊಳ್ಳು ಮನೆ)ವಿದ್ದು ಅದು ಹೊರಡಿಸುವ ನಾದತರಂಗಗಳಿಗೆ ದೆಹಲಿಯ ಮೈ ನವಿರೇಳುತ್ತದೆ.
ದಿವಾನ-ಇ-ಆಮ್(ಸಾರ್ವಜನಿಕ ಸಭಾಂಗಣ)ನಲ್ಲಿ ಸೇರಿದ ಜನ ಮೆಲ್ಲಗೆ ಪಿಸುಗುಡುತ್ತಾರೆ.
ಕೆಂಪುಕೋಟೆ
ಅದರ ಸುತ್ತ ಹಬ್ಬಿದ ಕಮಾನುಗಳಲ್ಲಿ ಕಾಮನಬಿಲ್ಲಿನ ಏಳು ಬಣ್ಣಗಳು ಪ್ರತಿಫಲಿಸುತ್ತವೆ. ರಂಗಮಹಲಿನಲ್ಲಿ ಸದಾ ಹರಿಯುವ ನೀರಿನ ಜುಳುಜಳು ನಿನಾದ. ತನ್ನ ನಡಿಗೆಗೆ ತಾನೇ ಬೇಸತ್ತ ಸಲಿಲ ಮಂದಗತಿ ತ್ಯಜಿಸಿ ಥಟ್ಟನೆ ಕಾರಂಜಿಯಾಗಿ ಚಿಮ್ಮುವ ಉತ್ಸಾಹ.
ಈ ನಡುವೆ ಜನರೆಲ್ಲಿ? ನಾವೆಲ್ಲಿ? ಕೋಟೆಯ ತುಂಬಾ ಕಂಡರೂ ಕಾಣದಂತಿರುವ ಅಡಗುತಾಣಗಳು. ಅವು ಜನಸಂದಣಿಯಿಂದ ಬೇಸತ್ತವರ ಮನ ಮನೆಗಳು. ಜೊತೆಗೆ ಚಿಕ್ಕೆ ತುಂಬಿದ ಆಕಾಶ ನೋಡುತ್ತಾ ತಣ್ಣಗೆ ನಿದ್ರಿಸಬಹುದಾದ ಶಯನ ಗೃಹಗಳು.
ಕೆಂಪು ಕೋಟೆಯ ತುಂಬಾ ಅರಸನ ಕನಸುಗಳು. ಈಗ ಶಹಾಜಹಾನ ಇಲ್ಲಿಲ್ಲ. ನಾವೇ ಆತನ ಕನಸುಗಳ ವಾರೀಸುದಾರರು.
ಅವನ ಹಾಗೇ ನಾವೂ ಒಂದೂರಿನಿಂದ ಇನ್ನೊಂದೂರಿಗೆ ಬಂದಿದ್ದೇವೆ. ದೆಹಲಿ ತುಂಬಾ ಹಲವು ಬಣ್ಣದ ಕೋಟೆ ಕಟ್ಟಿಕೊಂಡಿದ್ದೇವೆ. ಕಲುಷಿತ ಯಮುನೆಯ ತಟದಲಿ ಬಣ್ಣಗಳೇ ಕಾಣದ ಕಾಮನ ಬಿಲ್ಲಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ.
ಈ ಅಂತರ್ಜಾಲದ ತುಂಬಾ ಕೆಂಪು ಕೋಟೆಯ ಪ್ರತಿಮೆಗಳು.
ಅನಿಯತಾಕಾರದ ಆಕೃತಿಗಳು, ಅಡಗುತಾಣಗಳು, ಮನದ ಮನೆಗಳು.
ಹೆಕ್ಕೋಣ ಮುತ್ತು.
ಉಳಿಯಲಿ ಸಾಗರ.

No comments:

Post a Comment