Saturday, January 22, 2011

ಪೀಳಿಗೆಗಳ ಎಲ್ಲೆ ಮೀರಿ ಅಂತರ್ಜಾಲದತ್ತ ಸೆಳೆತ


ಹರಿಪ್ರಸಾದ್ ನಾಡಿಗ್ 

ವಿಕಿಪೀಡಿಯಾ ಡಾಟ್ ಕಾಮ್ ಅಂತರ್ಜಾಲದಲ್ಲಿರುವ ಒಂದು ಮುಕ್ತ ವಿಶ್ವಕೋಶ. ತನ್ನ ಹತ್ತನೇ ವಾರ್ಷಿಕೋತ್ಸವವನ್ನು ಜನವರಿ ಹತ್ತರಂದು ವಿಶ್ವದೆಲ್ಲೆಡೆ ಆಚರಿಸಲಾಯಿತು. ವಿಕಿಪೀಡಿಯಾ ಇಂದು 262 ಭಾಷೆಗಳಲ್ಲಿ ಲಭ್ಯ.
ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ದೆಹಲಿ ಪರ್ಯಟನೆಯಲ್ಲಿರುವಾಗ ಅದರ ಭಾರತೀಯ ವ್ಯವಸ್ಥಾಪಕ ಸದಸ್ಯರಾಗಿರುವ ಕನ್ನಡಿಗ ಹರಿಪ್ರಸಾದ್ ನಾಡಿಗ್ ಅವರ ಜೊತೆ ಒಂದು ಭೇಟಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ  ಕನ್ನಡವನ್ನು ವಿಕಿಪೀಡಿಯದಲ್ಲಿ ಹೇಗೆ ಅಳವಡಿಸುವುದು ಎಂಬ  ಸಂವಾದ ನಡೆಯಿತು. ವಿಕೀಪೀಡಿಯಾವನ್ನು ಕನ್ನಡ ಭಾಷೆಯಲ್ಲಿ ಆರಂಭಿಸಿದ ಹಿನ್ನಲೆ,ಬೆಳವಣಿಗೆಯ ಕುರಿತು ನಾಡಿಗ್ ಅವರು ವಿವರ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವೈ. ಅವನೀಂದ್ರನಾಥ್ ರಾವ್ ಅವರ ಪ್ರಕಾರ ಕನ್ನಡ ಮುಕ್ತ ವಿಶ್ವಕೋಶದ ಅಭಿವೃದ್ದಿಗೆ ನಾಡಿನ ಹಿರಿಯ ಭಾಷಾಶಾಸ್ತ್ರಜ್ಞರ ಪಾಲ್ಗೊಳ್ಳುವಿಕೆ ಇದ್ದರೆ ಬಹಳ ಅನುಕೂಲವಾಗಬಹುದಂತೆ.
ಕನ್ನಡವನ್ನು ವಿಶ್ವವ್ಯಾಪಿಗೊಳಿಸುವಲ್ಲಿ ಹಾಗೂ ತಂತ್ರಜ್ಞಾನದ ಬಳಕೆಯಿಂದ ಭಾಷೆಯನ್ನು ಜೀವಂತವಾಗಿಡಲು ಅವರು ಪಡುವ ಪ್ರಯತ್ನಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.  ಹರಿಪ್ರಸಾದ್ ನಾಡಿಗ್ ಅವರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಯುವ ಕನ್ನಡಿಗರು ಹೆಚ್ಚು ಉತ್ಸುಕತೆಯಿಂದ ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿದ ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರನ್ನು"ಐ ವಾಂಟ್ ಟು ಲರ್ನ್ ಕನ್ನಡ, ಈಸ್ ದೇರ್ ಎನಿ ಆಪ್ಲಿಕೇಷನ್ ಇನ್ ಇಂಟರ್ನೆಟ್?” ಎಂದು ಒಬ್ಬಳು ಹುಡುಗಿ ಕೇಳಿದ ಪ್ರಶ್ನೆ ಮಂತ್ರಮುಗ್ಧಗೊಳಿಸಿತು ಎನ್ನುತ್ತಾರೆ. ಅಂದು ಅಕೆಯ ಆ ಪ್ರಶ್ನೆಗೆ ದೊರೆತ ಉತ್ತರಕಿಂತಲೂ ಅವರ ಮನಸಲ್ಲಿ ಅದುವರೆಗೆ ಅಚ್ಚಾಗಿದ್ದ ಹೊರನಾಡ ಕನ್ನಡ ಸಂಘ ಸಂಸ್ಥೆಗಳಲ್ಲಿ ನಡೆಯುವ ಸಂವಾದ ಕಾರ್ಯಕ್ರಮಗಳು ಹೀಗೆಯೇ ಇರುತ್ತದೆ ಎಂಬ ಭಾವನೆ ಒಡೆದು ಚೂರು ಚೂರಾಗಿ ಹೊಸ ವಿಚಾರವೊಂದು ಮನವಿಡೀ ಸುಳಿದಾಡ್ಡಿತ್ತು ಎನ್ನುತ್ತಾರೆ ಅವರು. ದೆಹಲಿಯ ಕನ್ನಡ ಕಾರ್ಯಕ್ರಮಗಳಲ್ಲಿ ವಿರಳವಾಗಿ ಮತ್ತು ಕಡಿಮೆ ಆಸಕ್ತಿಯಿಂದ ಭಾಗವಹಿಸುತ್ತಿದ್ದ ಯುವಕರು ಅಂದು ಬಹಳ ತನ್ಮಯತೆಯಿಂದ ಕುಳಿತಿದ್ದರು.
ಪ್ರಕಾಶ್ ಶೆಟ್ಟಿ ಅವರ ಪ್ರಕಾರ  ತಮ್ಮನ್ನು ತಾವು ಆಧುನಿಕತೆಯೊಂದಿಗೆ ಮಿಳಿಸಿಕೊಂಡು ಅತಿ ವೇಗದಿಂದ ಬೆಳೆಯುತ್ತಿರುವ ಈ ಯುವ ಮನಸುಗಳಿಗೆ ಕನ್ನಡದ ಹೆಚ್ಚಿನೆಲ್ಲ ಕಾರ್ಯಕ್ರಮಗಳಲ್ಲಿ ಬಹು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದ ಹಳೆಯ ತಲೆಗಳೊಂದಿಗೆ ಬೆರೆಯುವುದೆಂದರೆ ಅದೇಕೋ ಸರಿ ಬರುತ್ತಿರಲಿಲ್ಲ. ಆದರೆ ಅಂದು ನಡೆದ ಕಾರ್ಯಕ್ರಮದ ಸೆಳೆತವೇ ಹಾಗಿತ್ತು. ಒಂದು ಚಿಕ್ಕ ಮಗು ಇನ್ನೊಂದು ಮಗುವಿನತ್ತಲೇ ಆಕರ್ಷಿತವಾಗುತ್ತದೆ. ಒಬ್ಬ ನಡು ವಯಸ್ಕ ಆತನ ವಯಸ್ಸಿನವನ ಜತೆಯೇ ಮಾತನಾಡಲು ಬಯಸುತ್ತಾನೆ. ಒಬ್ಬರು ಹಿರಿಯರು ಅವರ ಸಮಪ್ರಾಯರಾದವರನ್ನೇ ತಮ್ಮ ಅನುಭವವನ್ನು ಹಂಚಿಕೊಳ್ಳಲು ಆರಿಸಿಕೊಳ್ಳುತ್ತಾರೆ. ಅಂದು ಆದದ್ದೂ ಅದೆ. ತಮ್ಮದೇ ವಯೋಮಾನದವರಾದ ೨೮ರ ಹರೆಯದ ನಾಡಿಗ್ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಾರೆಂದರೆ ಅಂದಿನ ಯುವ ಪೀಳಿಗೆಯೇ ಅಲ್ಲಿರುವುದು ಗ್ಯಾರಂಟಿ ಎನ್ನುವುದು ನನ್ನ ಊಹೆಯಾಗಿತ್ತು ಹಾಗೂ ಅದು ಸಾಕಾರವೂಗೊಂಡಿತ್ತು ಎನ್ನುತ್ತಾರೆ ಪ್ರಕಾಶ್ ಶೆಟ್ಟಿ.
ವಿಕಿಪೀಡಿಯಾ ಲೊಗೋ
ಅಲ್ಲಿ ಇನ್ನೊಂದು ವಿಶೇಷವೂ ನಡೆದಿತ್ತು. ಸಾಮಾನ್ಯವಾಗಿ ಹಿರಿಯರು ಆಧುನಿಕ ತಂತ್ರಜ್ಞಾನವನ್ನು ಅರಿತಿರುವುದಿಲ್ಲ ‘ಡ್ಯೂಡ್... ದೇ ಆರ್ ಇಲ್ಲಿಟರೇಟ್ ಇನ್ ದೀಸ್ ಥಿಂಗ್ಸ್ ಮ್ಯಾನ್’ ಅಂದುಕೊಳ್ಳುವ ಈ ಹುಡುಗರು ಅಲ್ಲಿ, ಐಟಿ ಕ್ಷೇತ್ರದಲ್ಲಿರುವ ಹಿರಿಯರ ಆಳವಾದ ಜ್ಞಾನವನ್ನೂ ಸಾಕ್ಷಾತ್ ಕಂಡು, ಹೌದು ನಾವು ಇವರೊಂದಿಗೆ ಬೆರೆತು ತಮ್ಮ ಅಲ್ಪ ಜ್ಞಾನವನ್ನು ಬೆಳೆಸಬಹುದಲ್ವೇ? ಎನ್ನುವ ಅಭಿಪ್ರಾಯಕ್ಕೆ ಬರಲು ಪ್ರೇರೇಪಿಸಿದ ಕಾರಣಕ್ಕೂ  ಪ್ರಕಾಶ್ ಅವರಿಗೆ ಈ ಕಾರ್ಯಕ್ರಮ ಮುಖ್ಯವಾಯಿತು.
ಸಾಮಾನ್ಯವಾಗಿ ಸನ್ಮಾನ ಕಾರ್ಯಕ್ರಮ, ಸಾಹಿತ್ಯ ವಿಮರ್ಶೆ, ರಾಜಕೀಯ ಮುಂತಾದ ನಿರಾಸಕ್ತ ಕಾರ್ಯಕ್ರಮಗಳಿಗೆ ಆಕರ್ಷಿತರಾಗದ ಯುವ ಜನತೆಯನ್ನು ಸೆಳೆಯಲು ಅವರದೇ ಪ್ರಪಂಚದ ಇಂತಹ ಆಧುನಿಕ ಕಾರ್ಯಕ್ರಮಗಳು “ಮಮ್ಮಿ ದ್ಯಾಟ್ಸ್ ಆಲ್ ನಾಟ್ ಫಾರ್ ಅಸ್” ಅಥವಾ ‘ಐ ಡೋಂಟ್ ಲೈಕ್ ದ್ಯಾಟ್ ಆಂಟೀಸ್ ಪ್ರೊಗ್ರಾಂ’ ಅನ್ನುವ ಮಕ್ಕಳನ್ನೂ ಆಕರ್ಷಿಸಬಹುದು ಎನ್ನುವುದು ಪ್ರಕಾಶ್ ಶೆಟ್ಟಿ ಅವರ ಅಭಿಮತ.
ದೆಹಲಿ ಕರ್ನಾಟಕ ಸಂಘದ ನೂತನ ಅಧ್ಯಕ್ಷ ಡಾ. ವೆಂಕಟಾಚಲ ಹೆಗ್ಡೆ ಅವರು ಈ ನಿಟ್ಟಿನಲ್ಲಿ ಭರವಸೆಯ ಮಾತನ್ನು ಆಡಿದ್ದಾರೆ.
ಸಂವಾದದಲ್ಲಿ ಭಾಗವಹಿಸಿದ ಮೋಹೇರ್ ಶೆಟ್ಟಿ ಅವರು ಈ ಕಾರ್ಯಕ್ರಮವನ್ನು ಶ್ಲಾಘಿಸುತ್ತಾ ವಿಕಿಪೀಡಿಯಾ ಮೂಲಕ ನಮ್ಮ ಮಾತೃ ಭಾಷೆಯನ್ನು ವಿಶ್ವವ್ಯಾಪಿ ಗೊಳಿಸುವುದರೊಂದಿಗೆ ವಿಶ್ವಜ್ಞಾನವನ್ನು ನಮ್ಮ ಭಾಷೆಯಲ್ಲಿಯೇ ಅರಿಯುವುದು ಮನಸ್ಸಿಗೆ ಬಹಳ ಮುದ ನೀಡುವ ವಿಚಾರ ಎಂದರು. ಕನ್ನಡ ಓದಲು ಬರೆಯಲು ಬಾರದ ಹೊರನಾಡಲ್ಲಿ ಹುಟ್ಟಿದ ಕನ್ನಡದ ಹೊಸ ಪೀಳಿಗೆಗೆ ಕನ್ನಡ ಕಲಿಸಿ ಅಂತರ್ಜಾಲದಂತಹ ಆಧುನಿಕ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಬೆಳವಣಿಗೆ ಸಾಧ್ಯ ಎಂದು ಡಾ. ಪುರುಷೋತ್ತಮ ಬಿಳಿಮಲೆ ನುಡಿದರು. ವಿಕಿಪೀಡಿಯಾದ ಹತ್ತನೇ ವಾರ್ಷಿಕೋತ್ಸವ ದೆಹಲಿಯ ಕನ್ನಡದ ಹಳೆಯ ಮತ್ತು ಹೊಸ ಪೀಳಿಗೆಗಳನ್ನು ಒಂದೇ ವೇದಿಕೆಗೆ ಕರೆ ತರುವಲ್ಲಿ ಯಶಸ್ವಿಯಾಯಿತು.
ಕೆಂಪುಕೋಟೆ.

1 comment:

  1. ಕನ್ನಡ ವಿಕಿಪಿಡಿಯಾದ ಮೂಲಕ ಅಂತರ್ಜಾಲದಲ್ಲಿ ಕನ್ನಡವನ್ನು ಸಮೃದ್ಧ ಗೊಳಿಸಿದ ಕೀರ್ತಿ ನಾಡಿಗರದು. ಸಂಪದ ಬಳಗದ ಸಂಪದ ಡಾಟ್ ನೆಟ್, ಕೃಷಿ ಸಂಪದ, ಆರೋಗ್ಯ ಸಂಪದ, ಇವೆಲ್ಲ ಕನ್ನಡ ಅನುಭವವನ್ನು ಅಂತರ್ಜಾಲದಲ್ಲಿ ಇನ್ನಷ್ಟು ಗಾಢ ಗೊಳಿಸುವ ಕೆಲಸಗಳು. ನಾಡಿಗರು ಇನ್ನೂ ಏನೇನು ಹೊರ ತರುತ್ತಾರೆ ಎನ್ನುವುದನ್ನು ಬೆರಗಿನಿಂದ ಕಾಯುತ್ತಿರುವಲ್ಲಿ ನಾನು ಒಬ್ಬ.

    ಗುರು ಬಾಳಿಗಾ, ಮಂಗಳೂರು

    ReplyDelete