Tuesday, February 1, 2011

ದೆಹಲಿಗೆ ವಿಜಯ ಮರ್ಚಂಟ್ ಟ್ರೋಫಿ - ಕೋಚ್ ಎಂ. ಶಿವರಾಮ ರೈ ಕೊಡುಗೆ


ಡಿಡಿಸಿಎ (Delhi & District Cricket Association) ಹದಿನಾರರ ಕೆಳಗಿನ ವಯಸ್ಸಿನ ಕ್ರಿಕೆಟ್ ತಂಡವು  (U16) ಪ್ರತಿಷ್ಟಿತ ವಿಜಯ್ ಮರ್ಚಂಟ್ ಟ್ರಾಫಿಯನ್ನು ಗೆದ್ದಿದೆ. ದೆಹಲಿಯು ಅಂತಿಮ ಆಟದಲ್ಲಿ ಮಹಾರಾಷ್ಟ್ರದ ಎದುರು ಮೊದಲ ಇನ್ನಿಂಗ್ಸ್ ಲೀಡ್ ನಲ್ಲಿ ಗೆಲುವು ಸಾಧಿಸಿತು. ಕೇರಳದ ಪೆರಿಂತಲ್‍ಮನ್ನ ಕ್ರಿಕೆಟ್ ಸ್ಟೇಡಿಯಂ‍ನಲ್ಲಿ ನಡೆದ ಈ ಪಂದ್ಯಾವಳಿಯ ಫೈನಲ್‍ಗೆ ಬರುವ ಮುನ್ನ ದೆಹಲಿ ತಂಡವು ನಾಕೌಟ್ ಮಟ್ಟದಲ್ಲಿ ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ್ ಹಾಗೂ ಹರ್ಯಾನ ತಂಡಗಳನ್ನು ಸೋಲಿಸಿತ್ತು. ನಂತರ ಕ್ವಾರ್ಟರ್ ಫೈನಲ್‍ನಲ್ಲಿ ಜಾರ್ಖಂಡ್ ಹಾಗೂ ಸೆಮಿ ಫೈನಲ್‍ನಲ್ಲಿ ಉತ್ತರ ಪ್ರದೇಶ ತಂಡವನ್ನು ಸೋಲಿಸಿತ್ತು. ದೆಹಲಿ ತಂಡದ ಮಿಡ್ಲ್ ಆರ್ಡರ್ ಬ್ಯಾಟುಗಾರ ಹಾಗೂ ಆಫ್ ಸ್ಪಿನ್ನರ್ ಪ್ರಶಾಂತ್ ಭಂಡಾರಿ ಏಳು ಮ್ಯಾಚ್‍ಗಳಲ್ಲಿ 810 ರನ್‍ಗಳನ್ನು ಪಡೆದನಲ್ಲದೇ 23 ವಿಕೆಟ್‍ಗಳನ್ನು ಕೂಡ ಪಡೆದಿರುವನು. 
ದೆಹಲಿ ತಂಡದ ಈ ಅಮೋಘ ವಿಜಯದ ಹಿಂದೆ ಕನ್ನಡಿಗ ಕ್ರಿಕೆಟ್ ಕೋಚ್ ಎಂ. ಶಿವರಾಮ ರೈ ಅವರ ಕೊಡುಗೆ ಅಪಾರವಿದೆ. 
ಎಂ. ಶಿವರಾಮ ರೈ
ಒಂದಲ್ಲವೊಂದು ಕ್ರಿಕೆಟ್ ಮೈದಾನದಲ್ಲಿ ಸದಾ ತೊಡಗಿಕೊಂಡಿರುವ ಶಿವರಾಮ ರೈ ಅವರು ಕೆಂಪುಕೋಟೆಯ ಓದುಗರೊಂದಿಗೆ ತಮ್ಮ ಸಂತಸ ಹಂಚಲು ಒಪ್ಪಿದರು.

ತಮ್ಮ ತರಬೇತಿಯ ವಿಧಾನವನ್ನು ವಿವರಿಸುತ್ತಾ ಕ್ರಿಕೆಟ್ ಆಡಲು ತೊಡಗುವ ಮಕ್ಕಳು ಆರಂಭದಲ್ಲಿ ಲಘು ಓವರುಗಳ ಕ್ರಿಕೆಟ್‍ಗೆ ಮೊರೆ ಹೋಗುತ್ತಾರೆ ಎಂದು ರೈ ಅವರು ಎನ್ನುತ್ತಾರೆ. ಅಂದರೆ ಅವರು  25-30 ಓವರುಗಳನ್ನಷ್ಟೇ ಆಡುತ್ತಾರೆ. ಅಂತಹವರನ್ನು ಈ ಮೂರು ದಿನದ ಆಟಕ್ಕೆ ತಯಾರು ಮಾಡಬೇಕಾದರೆ ಒಂದು ಇನ್ನಿಂಗ್ಸ್ ನಲ್ಲಿ ನೂರಕ್ಕಿಂತಲೂ ಹೆಚ್ಚು ಓವರ್ ಆಡಲು ತಯಾರಿಸ ಬೇಕಾಗುತ್ತದೆ. ಬೌಲರ್ ಗಳನ್ನು ಒನ್ ಸೈಡ್ ಅಟ್ಯಾಕ್‍ಗೆ ತಯಾರು ಮಾಡಬೇಕಾಗುತ್ತದೆ. ಫೀಲ್ಡರ್ ಗಳನ್ನು ಕ್ಲೋಸಿಂಗ್ ಕ್ಯಾಚಿಂಗ್‍ಗಾಗಿ ಸುಧಾರಿಸಬೇಕಾಗುತ್ತದೆ. ದೀರ್ಘ ಇನ್ನಿಂಗ್ಸ್ ಗಳನ್ನು ಆಡಲು ಬ್ಯಾಟುಗಾರರನ್ನು ತಯಾರಿಸಿ ವಿರಾಮದ ವೇಳೆಯಲ್ಲಿ ಅವರ ನಡತೆ ಮತ್ತು ಮಾನಸಿಕ ಸ್ಥೈರ್ಯವನ್ನು ಗಮನಿಸಬೇಕಾಗುತ್ತದೆ ಎಂದು ರೈ ಅವರು ವಿವರಿಸುತ್ತಾರೆ. ಅಂತೆಯೇ ಊಟದ ಹಾಗೂ ಚಹಾ ವಿರಾಮಗಳನ್ನು ಉತ್ತಮವಾಗಿ ಉಪಯೋಗಿಸುವಲ್ಲಿಯೂ ಕೋಚ್ ಸಹಕಾರಿಯಾಗುತ್ತಾನೆ ಎನ್ನುತ್ತಾರೆ ಅವರು. ಉದಾಹರಣೆಗೆ ಊಟಕ್ಕೆ 40 ನಿಮಿಷಗಳ ವಿರಾಮವಿದ್ದರೆ 25 ನಿಮಿಷದೊಳಗೆ ಊಟ ಮುಗಿಸಿ ಉಳಿದ 15  ನಿಮಿಷಗಳನ್ನು ಆಟದ ಕುರಿತು ಚರ್ಚಿಸಲು ಉಪಯೋಗಿಸುತ್ತೇವೆ ಎಂದು ಅವರು ಹೇಳುತ್ತಾರೆ.
ಆಟಗಾರರನ್ನು ಪಳಗಿಸುವುದರ ಜತೆಗೆ ಆಟದ ಪಿಚ್‍ಅನ್ನು ಅರ್ಥೈಸುವುದು, ಗ್ರೌಂಡ್ ಕಂಡೀಷನ್, ಹವಾಮಾನದ ಪರಿಸ್ಥಿತಿಯನ್ನು ಪರಿಗಣಿಸಿ ಆಟದ ತಂತ್ರಗಾರಿಕೆಯನ್ನು ರೂಪಿಸಿ ಯಾವ ಆಟಗಾರರನ್ನು ಯಾವಾಗ, ಹೇಗೆ ಉಪಯೋಗಿಸಬೇಕು ಎಂಬುದು ಒಬ್ಬ ಒಳ್ಳೆಯ ಕೋಚ್‍ನ ಗುಣವೆನ್ನುತ್ತಾರೆ ಶಿವರಾಮ ರೈ. ಸಮಯದ ಪರಿಪಾಲನೆ, ಆಟದ ಮೈದಾನದಾಚೆಗಿನ ವರ್ತನೆ, ಡ್ರೆಸ್ ಕೋಡ್, ಆಹಾರದ ಕ್ರಮಗಳು, ರೂಮ್ ಗಳಲ್ಲಿ ಯಾರ ಜತೆ ಯಾರು ಇರುತ್ತಾರೆ ಎಂಬ ಅಂಶಗಳನ್ನೂ ಕೋಚ್ ಗಮನಿಸಬೇಕು ಎನ್ನುತ್ತಾರೆ ಅವರು.
ಎಂ. ಶಿವರಾಮ ರೈ
ದೆಹಲಿಯ ಆರ್.ಕೆ.ಪುರಂನ ಪ್ರತಿಷ್ಟಿತ ದಿಲ್ಲಿ ಪಬ್ಲಿಕ್ ಸ್ಕೂಲ್  ನಲ್ಲಿ ದೈಹಿಕ ಶಿಕ್ಷಕರಾಗಿರುವ ರೈ ಅವರು ತನ್ನ ಶಿಕ್ಷಕ ವೃತ್ತಿಯ ಕೌಶಲ್ಯಗಳು ಹದಿ ಹರೆಯದ ಹುಡುಗರಿಗೆ ತರಬೇತಿ ನೀಡಲು ಸಹಕಾರಿಯಾಗುತ್ತವೆ ಎನ್ನುತ್ತಾರೆ. ಈ ಹುಡುಗರ ಜತೆ ತಾಳ್ಮೆ ಕಳೆದುಕೊಳ್ಳದೆ ಅವರನ್ನು ಆಗಾಗ ಹುರಿದುಂಬಿಸುತ್ತಿರಬೇಕು ಎನ್ನುತ್ತಾರೆ. ಕೇರಳದಲ್ಲಿ ವಿಜಯ್ ಮರ್ಚಂಟ್ ಟ್ರೋಫಿಗಾಗಿ ಫೈನಲ್‍ನಲ್ಲಿ ಆಡುತ್ತಿದ್ದಾಗ ಆಟದ ಮೂರನೇ ದಿನದ ಘಟನೆಯೊಂದನ್ನು ನೆನಪಿಸುತ್ತಾ ರೈ ಅವರು ಹೇಳುತ್ತಾರೆ: ದಿನದ ಆರಂಭದಲ್ಲಿ ನಮ್ಮ ಹುಡುಗರು ಎರಡು ವಿಕೆಟ್‍ಗಳನ್ನು ಪಡೆದರು. ಆದರೆ ಸ್ವಲ್ಪ ಸಮಯವಾದಂತೆ ಅವರು ನಾಲ್ಕೈದು ಕ್ಯಾಚ್‍ಗಳನ್ನು ಬಿಟ್ಟರು. ಹುಡುಗರ ತಂಡ ಬಹಳಷ್ಟು ಮಾನಸಿಕ ಒತ್ತಡಕ್ಕೆ ಬಿದ್ದಿತು. ಊಟದ ವಿರಾಮವಾದಾಗ ಕೋಚ್ ರೈ ಅವರು ಹುಡುಗರನ್ನು ಕರೆದು ಹೇಳಿದರು: ನೀವು ಬಿಟ್ಟ ಕ್ಯಾಚ್‍ಗಳನ್ನು ಮರೆತು ಬಿಡಿ. ದಿನದ ಆರಂಭದಲ್ಲಿ ಬೀಳಿಸಿದ ಎರಡು ವಿಕೆಟ್‍ಗಳನ್ನು ನೆನಪಿಸುತ್ತಾ ನಿಮ್ಮ ಆಟ ಮತ್ತೆ ಅಲ್ಲಿಂದಲೇ ಆರಂಭವಾಗಿದೆ ಎನ್ನುತ್ತಾ ಆಟವನ್ನು ಮುಂದುವರಿಸಿರಿ ಎಂದು. ಊಟದ ನಂತರ ಹುಡುಗರು ಅತ್ಯಂತ ಗುಣಾತ್ಮಕವಾಗಿ ಆಡಿ ಎದುರಾಳಿಗಳನ್ನು ಸೋಲಿಸುವಲ್ಲಿ ಯಶಸ್ವಿಯಾದರು ಎನ್ನುತ್ತಾರೆ ರೈ ಅವರು.
ಶಿವರಾಮ ರೈ ಅವರು 1987-88 ರಲ್ಲಿ ಸರ್ವೀಸಸ್ ರಣಜೀ ಪಂದ್ಯದಲ್ಲಿ ಆಡಿದ ಕ್ರಿಕೆಟ್‍ಪಟು. 1988-89 ರಲ್ಲಿ ನೇತಾಜಿ ಸುಭಾಷ್ ನ್ಯಾಷನಲ್ ಇನ್ಸ್ಟಿ ಟ್ಯೂಟ್ ಆಫ್ ಸ್ಪೋರ್ಟ್ಸ್, ವೆಸ್ಟರ್ನ್ ಸೆಂಟರ್, ಗಾಂಧಿನಗರ್ (ಗುಜರಾತ್)ನಿಂದ ಎ ಗ್ರೇಡ್‍ನಲ್ಲಿ ಎನ್.ಐ.ಎಸ್. ಡಿಪ್ಲೋಮಾ ಪಡೆದಿರುವರು ಹಾಗೂ ಬಿ.ಸಿ.ಸಿ.ಐ. ಲೆವೆಲ್  'ಎ' ಕೋಚ್ ಕೂಡಾ ಆಗಿರುವರು.   ಅವರ ತಂದೆ ಯಕ್ಷಗಾನದ ಪ್ರಸಿದ್ದ ಚೆಂಡೆವಾದಕ ದಿ. ದೇರಣ್ಣ ರೈ. ತಂದೆಯವರು ಚರ್ಮದ ಚೆಂಡೆ ಹಾಗೂ ಮರದ ಕೋಲಿನಿಂದ ಆಡಿದರೆ ತಾನು ಚರ್ಮದ ಚೆಂಡು ಮತ್ತು ಮರದ ಬ್ಯಾಟ್ ಹಾಗೂ ವಿಕೆಟ್‍ಗಳ ಮೂಲಕ ಆಡುತ್ತಿದ್ದೇನೆ ಎನ್ನುತ್ತಾರೆ ಶಿವರಾಮ ರೈ.ಕಾಸರಗೋಡಿನ ಕುಂಬಳೆಯ ಮೂಲದ ಈ ಕನ್ನಡಿಗ ಕ್ರಿಕೆಟ್‍ಗೆ ತನ್ನದೇ ಆದ ರೀತಿಯಲ್ಲಿ ಹೊಸ ಆಟಗಾರರನ್ನು ತಯಾರಿಸುವಲ್ಲಿ ಕೊಡುಗೆಯನ್ನು ನೀಡಿದ್ದಾರೆ. ಗೌತಮ್ ಗಂಭೀರ್, ಅಮಿತ್ ಮಿಶ್ರಾ, ತೇಜಸ್ವೀ ಯಾದವ್ (ಲಾಲೂ ಮಗ) ಶಿವರಾಮ ರೈ ಅವರ ಗರಡಿಯಲ್ಲಿ ಪಳಗಿದ ಕೆಲವು ಆಟಗಾರರು. ಇವರು ತರಬೇತಿಗೊಳಿಸಿದ ಹುಡುಗನೊಬ್ಬ ಮುಂದೊಂದು ದಿನ ಮಹಾನ್ ಕ್ರಿಕೆಟಿಗನಾಗ ಬಹುದೆಂಬ ಭರವಸೆ ಇವರಿಗಿದೆ.
ಕೆಂಪುಕೋಟೆ

3 comments:

  1. ದೆಹಲಿಗೆ ವಿಜಯ್ ಮರ್ಚಂಟ್ ಟ್ರಾಫೀ ತಂದುಕೊಟ್ಟ ಶಿವರಾಮ್ ರೈ ಹಾಗೂ ಅವರ ತಂಡಕ್ಕೆ ಹಾರ್ದಿಕ ಅಭಿನಂದನೆಗಳು. ಇವರು ತರಬೇತಿಗೊಳಿಸಿದ ಹುಡುಗನೊಬ್ಬ ಮುಂದೊಂದು ದಿನ ಮಹಾನ್ ಕ್ರಿಕೆಟಿಗನಾಗುವುದಾದರೆ, ಅದು ಕನ್ನಡಿಗನಾಗಿರಲೆಂದು ಆಶಿಸುತ್ತೇನೆ. ಶಿವರಾಮ್ ರೈ ಅವರ ಪಳಗಿದ ಪ್ರಶಿಕ್ಷಣ ನಮ್ಮ ದೆಹಲಿ ಕನ್ನಡ ಶಾಲೆ ಮತ್ತು ಕನ್ನಡಿಗರ ಮಕ್ಕಳಿಗೂ ಲಭಿಸಲಿ ಎಂದು ಹಾರೈಸುತ್ತೇನೆ.

    ReplyDelete
  2. Hearty congratulations to Shri Shivaram Rai. Wishing him to reach manymore heights and wishing all the best to all those boys being trained by Shri Rai.

    KM Kalumangi

    ReplyDelete