Saturday, February 12, 2011

ಪ್ರೇಮಿಗಳ ಹಬ್ಬಕ್ಕೊಂದು ಹಿಂದಿ ಜಾನಪದ ಪ್ರೇಮ ಕತೆ


ಹಿಂದಿಯ ಮೊದಲ ಕವಿ ಎಂದು ಗುರುತಿಸಿಕೊಂಡ ಚಂದ ಬರ್ದಾಯಿಯ ಕೃತಿ ಪೃಥ್ವಿರಾಜ್ ರಾಸೊ ಸುಮಾರು ಹತ್ತು ಸಾವಿರ ಛಂದಗಳ ಲಾವಣಿ ಕಾವ್ಯ. ಹನ್ನೆರಡನೇ ಶತಮಾನದಲ್ಲಿ ಚಂದ ಬರ್ದಾಯಿಯು ಪೃಥ್ವಿರಾಜ್ ಚೌಹಾಣನ ಆಸ್ಥಾನ ಕವಿಯಾಗಿದ್ದನು. ಪೃಥ್ವಿರಾಜ್ ರಾಸೋದ ಒಂದು ಭಾಗ ಮಹೋಬ ಖಾಂಡ. ಇದರಲ್ಲಿ ಮಧ್ಯಭಾರತವನ್ನು ಹತ್ತನೇ ಶತಮಾನದಿಂದ ಹನ್ನೆರಡನೇ ಶತಮಾನದ ವರೆಗೆ ಆಳಿದ ಚಂಡೇಲಾ ವಂಶದ ಸ್ಥಾಪಕ ರಾಜನ ಕಥೆಯನ್ನು ಒಂದು ಜಾನಪದ ಕಾವ್ಯವಾಗಿ ಹೇಳಲಾಗಿದೆ. ಒಂದು ದಂತಕತೆ ಎಂದೆನಿಸುವ ಚಂಡೇಲಾ ರಾಜವಂಶದ ಸ್ಥಾಪಕ ಚಂದ್ರವರ್ಮನ್‌ನ ಹುಟ್ಟಿನ ಕುರಿತಾದ ಕತೆಯು ತುಂಬಾ ರೋಚಕವಾಗಿದೆ. ಈಗಾಗಲೇ ಬಾನಾಡಿ ಬ್ಲಾಗ್ ನಲ್ಲಿ ಪ್ರಕಟಗೊಂಡ ಈ ಕತೆ ಪ್ರೇಮಿಗಳ ಹಬ್ಬದ ಸಂದರ್ಭದಲ್ಲಿ ಕೆಂಪುಕೋಟೆ ಓದುಗರಿಗೆ.

ಉತ್ತರಭಾರತವನ್ನು ಆಳುತ್ತಿದ್ದ ಗಹಿರಾವಾರ ವಂಶದ ರಾಜ ಇಂದ್ರಜಿತ್ ಗಹಿರಾವಾರನ ರಾಜಮನೆತನದ ಬ್ರಾಹ್ಮಣ ಪುರೋಹಿತ ಹೇಮರಾಜ. ಕಾಶೀ ಪಟ್ಟಣದಲ್ಲಿದ್ದ ಹೇಮರಾಜ ಅತ್ಯಂತ ಸ್ನೇಹಶೀಲನಾಗಿದ್ದ. ತನಗೆ ಮಗಳೊಬ್ಬಳು ಹುಟ್ಟಿದಾಗ ಅವಳಿಗೆ ಹೇಮಾವತಿ ಎಂದು ಹೆಸರಿಟ್ಟ. ಅವಳು ರೂಪದಲ್ಲಿ ಅತ್ಯಂತ ಸುರಸುಂದರಿಯಾಗಿದ್ದಳು. ಅಂತೆಯೇ ಗುಣದಲ್ಲಿಯೂ ಆಕೆ ಶೀಲ ಶೋಭಿತೆಯಾಗಿದ್ದಳು. ದುರ್ದೈವದಿಂದ ಅವಳಿಗೆ ಇಂದ್ರನ ಶಾಪವೆರಗಿತು. ಹದಿನಾರನೇ ವಯಸ್ಸಿಗೆ ಅವಳು ವಿಧವೆಯಾದಳು.
ಖಜುರಾಹೋ
ಅದೊಂದು ಗ್ರೀಷ್ಮ ಕಾಲದ ದಿನ. ಸೆಖೆಯಿಂದ ಬಸವಳಿದ ಹೇಮಾವತಿಯು ತಣ್ಣನೆಯ ನೀರಿನಲ್ಲಿ ಮೀಯಲೆಂದು ಹೊರಗೆ ಹೋದಳು. ಕುಮುದ ಪುಷ್ಪಗಳ ಸಖ ಚಂದ್ರದೇವ ಆಗಸದಲ್ಲಿ ಬೆಳಗುತ್ತಿದ್ದ. ಕೆಳಗೆ ಅತಿಲೋಕ ಸುಂದರಿಯಾದ ಹೇಮಾವತಿಯು ಸ್ವಚ್ಚಂದ ನೀರಿನಲ್ಲಿ ತನ್ನ ತನುವಿನ ಬೇಗೆಯನ್ನು ತಣಿಸುತ್ತಾ ಮೀಯುತ್ತಿದ್ದಳು. ನೀರಿನಿಂದ ತೋಯುತ್ತಿದ್ದ ಹದಿಹರೆಯದ ಅತಿ ಸುಂದರಿ ಹೆಣ್ಣೊಬ್ಬಳನ್ನು ಕಂಡ ಚಂದ್ರದೇವನ ಚಿತ್ತ ಚಂಚಲಗೊಂಡಿತು. ಭೂಮಿ ಮೇಲಿನ ಈ ನೋಟವನ್ನು ಕಂಡು ಆತ ಉಲ್ಲಸಿತನಾದ. ಚಂದ್ರದೇವ ಧರೆಗಿಳಿದು ಬಂದ. ಸುರ ಸುಂದರಿ ಹೇಮಾವತಿಯನ್ನು ಅಪ್ಪಿಕೊಂಡ. ಚಂದ್ರದೇವನು ಆ ರಾತ್ರಿಯಿಡೀ ಹೇಮಾವತಿಯೊಂದಿಗೆ ಕಳೆದ. ತನ್ನನ್ನು ಸಂಪೂರ್ಣ ಅರ್ಪಿಸಿಕೊಂಡ ಹೇಮಾವತಿಗೆ ಆತ ಯಾರೆಂದು ಗೊತ್ತಿರಲಿಲ್ಲ. ತನ್ನ ಕೆಲಸ ಮುಗಿಸುತ್ತಲೇ ಚಂದ್ರದೇವನು ಸ್ವಸ್ಥಾನ ಸೇರಲು ಹೊರಡಲನುವಾದ. ಹೊರಗಿನ ಸೆಖೆಯ ಬೇಗೆಯನ್ನು ಕಳೆಯಲೆಂದು ಮೀಯಲು ಬಂದ ಹೇಮಾವತಿಯ ಒಳಗಿನ ದಾಹವು ತಣಿದಿತ್ತು. ಜತೆಗೆ ಕ್ಷಣವೊಂದರಲ್ಲಿ ನಡೆದ ಲೋಪದ ಅರಿವೂ ಉಂಟಾಯಿತು. ಚಂದ್ರದೇವನ ಹಿಂದೆ ಓಡುತ್ತಾ ಹೇಮಾವತಿಯು ಅವನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಳು. ನನ್ನನ್ನು ಭೋಗಿಸಿ ಕಳಂಕಗೊಳಿಸಿದ ಏ ಪುರುಷನೇ ನಿನಗೆ ನನ್ನ ಶಾಪವಿದೆ ಎಂದು ಬೆದರಿಸಿದಳು.
ಖಜುರಾಹೋ
ಹೊರಡುತ್ತಿದ್ದ ಚಂದ್ರದೇವ ಹಿಂದೆ ತಿರುಗಿ ಎಲೇ ಮದನಾಂಗಿ, ನಮ್ಮ ಪಾಪಕ್ಕೆ ನೀನು ನನಗೆ ಶಾಪ ನೀಡಬೇಡ. ನಿನ್ನೊಡಲಲ್ಲಿ ಒಬ್ಬ ರಾಜನಾಗುವ ಪುತ್ರನನ್ನು ಪಡೆಯುವ ಸಂಭ್ರಮವನ್ನು ಅನುಭವಿಸು. ಆಚರಿಸು. ನಿನ್ನೊಡಲಲ್ಲಿ ಹುಟ್ಟುವ ಮಗು ರಾಜನಾಗುವನಲ್ಲದೇ ಅನೇಕ ದೇಶಗಳನ್ನು ಜಯಿಸಿ ಸಾವಿರ ದಿಕ್ಕುಗಳಲ್ಲಿ ತನ್ನ ಹೆಸರನ್ನು ಮೆರೆಸುತ್ತಾನೆ ಎಂದ. ಬುದ್ಧಿವಂತೆಯಾಗಿದ್ದ ಹೇಮಾವತಿ ಚಂದ್ರದೇವನಿಗೆ ಶಾಪ ಕೊಡುವ ವಿಚಾರವನ್ನು ಬಿಟ್ಟು ಬಿಟ್ಟಳು. ಆದರೆ ಸಮಾಜದಲ್ಲಿ ತಾನೊಬ್ಬ ಕಳಂಕಿತೆ ಎಂದು ದೂಷಣೆಗೆ ಒಳಗಾಗುವ ಭೀತಿಯಿಂದ ಕರುಬಿದಳು. ಏ ಚಂದ್ರದೇವ, ನೀನು ಏನೇ ಹೇಳಿದರೂ ನನ್ನ ಕಳಂಕವನ್ನು ಹೇಗೆ ತೊಳೆಯಲಿ? ನನ್ನ ಶರೀರದಲ್ಲಿ ಯೌವನ ತುಂಬಿ ತುಳುಕುತ್ತಿರುವುದು ನಿಜವಿರಬಹುದು. ಅದು ಸೌಂದರ್ಯದಿಂದ ಬಳುಕುತ್ತಿರುವುದು ನಿಜವಿರಬಹುದು. ಆದರೆ ಈ ದೇಹಕ್ಕೆ ದೊರೆಯಿಲ್ಲದ, ಗಂಡ ಸತ್ತ ವಿಧವೆ ನಾನು ಎಂದು ಚಂದ್ರದೇವನಲ್ಲಿ ಮೊರೆಯಿಟ್ಟಳು.
ಹದಿಹರೆಯದ ಮೊಹಕ ವಿಧವೆ ಹೇಮಾವತಿಯಲ್ಲಿ ಗರ್ಭಾಂಕುರಗೊಳಿಸಿದ ಚಂದ್ರದೇವ ಧೈರ್ಯದ ಮಾತುಗಳನ್ನಾಡಿದ. ಚೆಲುವೆಯೇ ಬೆದರಬೇಡ ನೀನು. ಕರ್ಣಾವತಿ ನದಿತೀರದಲ್ಲಿ ನಿನಗೊಬ್ಬ ವೀರ ಸುಕುಮಾರನು ಜನಿಸುವನು. ನಂತರ ನೀನು ಖಜ್ಜುಪುರಕ್ಕೆ ಹೋಗು. ಅಲ್ಲಿ ಅವನೊಂದಿಗೆ ದಾನಧರ್ಮ, ಯಜ್ಞಯಾಗಾದಿಗಳನ್ನು ನಡೆಸು. ಆ ವೀರಪುತ್ರನು ತನ್ನ ಚದುರಂಗ ಬಲದಿಂದ ಎಲ್ಲಾ ರಾಜರುಗಳನ್ನು ಸೋಲಿಸಿ ಮಹೋಬಾದ ರಾಜ್ಯಭಾರವನ್ನು ಮಾಡುವನು. ಕಬ್ಬಿಣವನ್ನು ಚಿನ್ನಗೊಳಿಸುವ ಪರಶುಮಣಿಯು ಅವನಿಗೆ ದೊರೆಯುವುದು. ಅವನು ಅನೇಕ ದೇವಾಲಯಗಳನ್ನು ಕಟ್ಟುವನು. ಸರೋವರ, ಕೆರೆಗಳನ್ನು ನಿರ್ಮಿಸುವನು. ಪವಿತ್ರವಾದ ಕಾಲಿಂಜರಿನಲ್ಲಿ ಒಂದು ಕೋಟೆಯನ್ನು ಕಟ್ಟಿಸುವನು ಎಂದು ಚಂದ್ರದೇವನು ಭವಿಷ್ಯವಾಣಿಯನ್ನು ನುಡಿದನು.
ಖಜುರಾಹೋ
ಹೇಮಾವತಿಗೆ ಚಂದ್ರದೇವನ ಈ ಮಾತುಗಳಿಂದ ಸಮಾಧಾನವಾಗುವುದಿಲ್ಲ. ತಾನು ಅಂಟಿಸಿಕೊಂಡ ಈ ಕಳಂಕದಿಂದ ನಾನು ನನ್ನ ಸಮಾಜದಿಂದ ದೂಷಣೆಗೆ ಒಳಗಾಗುವುದು ಮಾತ್ರವಲ್ಲ, ಈ ಪಾಪ ನನ್ನನ್ನು ಮುಂದಿನ ಜನ್ಮದಲ್ಲೂ ಕಾಡಬಹುದು. ನನಗೆ ಹುಟ್ಟಲಿರುವ ಮಗುವನ್ನೇನೋ ನೀನು ಭುವನಪುತ್ರನನ್ನಾಗಿಸುವೆ. ಆದರೆ ನಾನು ಅವಮಾನದ ನರಕಯಾತನೆಯಲ್ಲಿ ನರಳಬೇಕಲ್ಲವೇ ಎಂದು ಚಂದ್ರದೇವನಲ್ಲಿ ಗೋಳಿಡುತ್ತಾಳೆ.
ಆಗ ಚಂದ್ರದೇವನು ಅವಳಿಗೆ ಕೆಲವು ಪ್ರಾಯಶ್ಚಿತ ಕರ್ಮಕಾರ್ಯಗಳನ್ನು ತಿಳಿಸಿದ. ನಿನ್ನ ಉದರದಲ್ಲಿ ಜನಿಸುವ ಆ ವೀರಪುತ್ರನು ತನ್ನ ಷೋಡಸ ಪ್ರಾಯದಲ್ಲಿ ಭಾಂಡ್ಯಯಜ್ಞವನ್ನು ಮಾಡುತ್ತಾನೆ. ಆಗ ನಿನ್ನ ಎಲ್ಲಾ ಪಾತಕಗಳೂ ಹರಿದು ಹೋಗುತ್ತವೆ ಎಂದ. ಎಲೇ ಸುಮನೋಹರಿ ಸುಂದರಿ ಹೇಮಾವತಿ, ನೀನಿನ್ನು ಯಾವುದಕ್ಕೂ ಅಳುಕಬೇಕಾಗಿಲ್ಲ. ನಿನ್ನ ಪುತ್ರ ಉನ್ನತ ಗುಣಗಳ ಕ್ಷತ್ರಿಯ ರಾಜನಾಗಿ ಮೆರೆಯುತ್ತಾನೆ ಎಂದು ಹೇಳಿ ಚಂದ್ರದೇವನು ಅಲ್ಲಿಂದ ಮರೆಯಾಗುತ್ತಾನೆ.  ವಿಧವೆಯೊಬ್ಬಳು ಗರ್ಭವತಿಯಾಗಿ ಸಮಾಜದಲ್ಲಿ ಬದುಕುವುದು ಅಸಹಜ ಎಂದು ಅರಿತು ಹೇಮಾವತಿಯು ಕಾಲಿಂಜರಿಗೆ ಬರುತ್ತಾಳೆ. ತೀರ್ಥಸ್ನಾನ ಮಾಡುತ್ತಾ ನಾಲ್ಕು ತಿಂಗಳುಗಳನ್ನು ಅಲ್ಲಿಯೇ ಕಳೆಯುತ್ತಾಳೆ. ಕಾಲಿಂಜಾರಿನಿಂದ ಆಕೆ ಒಂದು ಗ್ರಾಮಕ್ಕೆ ಬರುತ್ತಾಳೆ. ಅಲ್ಲಿಯ ಗ್ರಾಮ ಮುಖ್ಯಸ್ಥನ ಮನೆಯಲ್ಲಿದ್ದು ತನ್ನ ಮಗುವಿಗೆ ಜನ್ಮ ನೀಡುತ್ತಾಳೆ.
ವೈಶಾಖಮಾಸದ ಏಕಾದಶಿಯ ಸೋಮವಾರದಂದು ಜನಿಸಿದ ಆ ಸುಂದರ ಮಗು ಇನ್ನೊಂದು ಚಂದ್ರನಂತೆ ಶೋಭಿಸುತ್ತಿತ್ತು. ಮಗುವಿಗೆ ಚಂದ್ರವರ್ಮನ್ ಎಂದು ಹೆಸರಿಡಲಾಯಿತು. ದೇವಲೋಕದಲ್ಲಿ ಸುರತಿಯರು ಮಂಗಳಗಾನ ಹಾಡಿದರು. ಚಂದ್ರದೇವನೂ ತನ್ನ ಪುತ್ರನನ್ನು ನೋಡಲು ಬಂದ. ಹೇಮಾವತಿಗೆ ಹುಟ್ಟಿದ ಮಗನ ಭವಿಷ್ಯವಾಣಿಯನ್ನು ಮತ್ತೊಮ್ಮೆ ಪಠಿಸಿದ. ತನ್ನ ಪುತ್ರನು ಸ್ಥಾಪಿಸುವ ರಾಜವಂಶವು ವರ್ಮನ್ ಎಂಬ ಉಪನಾಮವನ್ನು ಎಲ್ಲಿಯವರೆಗೆ ಉಳಿಸಿಕೊಳ್ಳುತ್ತಾರೊ ಅಲ್ಲಿಯವರೆಗೆ ಅವನ ರಾಜವಂಶವೇ ರಾಜ್ಯಭಾರಮಾಡುವುದು ಎಂದು ಚಂದ್ರದೇವನು ಮತ್ತೊಂದು ವರವನ್ನು ನೀಡಿದ. ಚಂದ್ರದೇವನು ಮಹೋತ್ಸವವನ್ನೇ ಆಚರಿಸಿದ. ಸುರಗುರು ಬೃಹಸ್ಪತಿಯೇ ಮಗುವಿನ ಜನ್ಮ ಕುಂಡಲಿಯನ್ನು ಬರೆದ.
ಚಂದ್ರವರ್ಮನ್ ಹದಿನಾರರ ಹರೆಯಕ್ಕೆ ಬರುವ ಮೊದಲೇ ಅನೇಕ ಶಕ್ತಿಶಾಲಿ ಹಾಗು ಧೈರ್ಯದ ಕಾರ್ಯಗಳನ್ನು ಮಾಡಿ ತೋರಿಸಿದ. ಹುಲಿಯನ್ನು ಸಣ್ಣ ಕಲ್ಲಿನ ತುಂಡಿನಿಂದಲೇ ಕೊಂದ. ಬಲಿಷ್ಟ ಸಿಂಹವನ್ನು ಸಣ್ಣ ಚೂರಿಯಿಂದ ಮಣಿಸಿದ. ತನ್ನ ಮಗನ ಅದ್ಭುತ ಸಾಧನೆಗಳನ್ನು ನೋಡಿ ಹೇಮಾವತಿ ಆನಂದ ತುಂದಿಲಿತಳಾಗಿ ಚಂದ್ರನ ಕುರಿತಾದ ಮಂತ್ರ ಪಠಣೆಗಳನ್ನು ಮಾಡಲು ಆರಂಭಿಸಿದಳು. ಹದಿನಾರರ ಪ್ರಾಯ ತುಂಬುತ್ತಲೇ ಚಂದ್ರದೇವನು ಚಂದ್ರವರ್ಮನ್‌ಗಾಗಿ ಪರಶುಮಣಿಯನ್ನು ತಂದುಕೊಟ್ಟ. ಚಂದ್ರವರ್ಮನ್‌ನನ್ನು ಈ ಮಾನವಲೋಕದ ರಾಜಾಧಿರಾಜ ನೀನು ಎಂದು ಹರಸಿದ. ಚಂದ್ರವರ್ಮನ್‌ನ ಪಟ್ಟಾಭಿಷೇಕಕ್ಕೆ ದೇವಲೋಕದ ದೇವತೆಗಳೆಲ್ಲಾ ಧರೆಗಿಳಿದು ಬಂದರು. ಬೃಹಸ್ಪತಿ, ಕುಬೇರಾದಿಯಾಗಿ ಎಲ್ಲ ದೇವಗಣಗಳು ಖಜ್ಜುಪುರಕ್ಕೆ ಬಂದರು.
ಐದು ಪ್ರಹಾರಗಳನ್ನೊಳಗೊಂಡ ಎರಡು ಜನಪದಗಳ ರಾಜನಾಗಿದ್ದ ಚಂದ್ರವರ್ಮನ್ ಮೂರು ಸಾವಿರ ಸೈನಿಕರೊಂದಿಗೆ ರಾಜ್ಯ ವಿಸ್ತರಣೆಗಾಗಿ ದಂಡಿಗೆ ಹೊರಟನು. ಈ ಚಂಡೇಲಾ ರಾಜನ ಸಾಧನೆಗಳನ್ನು ಕೇಳಿದ ಕಾಶಿಯ ಗಹಿರಾವಾರನು ತನ್ನ ರಾಜ್ಯವನ್ನು ಚಂದ್ರವರ್ಮನ್‌ಗೆ ಬಿಟ್ಟು ಕೊಟ್ಟು ಓಡಿ ಹೋದನು.
ಖಜುರಾಹೋ
ಚಂದ್ರವರ್ಮನ್ ಕಾಲಿಂಜಾರಿನಿಂದ ಪತ್ನಿ ಸಮೇತ ಖಜ್ಜುಪುರಕ್ಕೆ ಬಂದು ತನ್ನ ತಾಯಿ ಹೇಮಾವತಿಯ ಕಾಲ ಬಳಿ ಕುಳಿತ. ತಾಯಿಯು ತಾನು ಪಟ್ಟ ಬವಣೆಯನ್ನು ಮತ್ತು ಕಳಂಕಿತಗೊಂಡ ವಿಚಾರವನ್ನು ಮಗನಿಗೆ ವಿವರಿಸಿದಳು. ಚಂದ್ರದೇವನು ತಿಳಿಸಿದಂತೆ ಭಾಂಡ್ಯಯಜ್ಞವನ್ನು ನಡೆಸಲು ಕೇಳಿಕೊಂಡಳು. ಖಜ್ಜುಪುರದಲ್ಲಿ ಸುಂದರವಾದ ಕೆರೆ ಹಾಗೂ ತೋಟಗಳನ್ನು ನಿರ್ಮಿಸಿ ಅಲ್ಲಿ ಎಂಬತ್ತೈದು ದೇವಾಲಯಗಳನ್ನು ಕಟ್ಟಲು ಹೇಮಾವತಿಯು ತನ್ನ ಪುತ್ರ ಚಂದ್ರವರ್ಮನ್‌ನನ್ನು ಕೇಳಿಕೊಂಡಳು.
ವೀರಪುತ್ರ ಚಂದ್ರವರ್ಮನ್ ತನ್ನ ತಾಯಿಯ ಅಭಿಲಾಶೆಗಳನ್ನೆಲ್ಲಾ ಪೂರೈಸಲು ಯಜ್ಞವನ್ನು ಮಾಡಿದನು. ದೇವಾಲಯಗಳನ್ನು ನಿರ್ಮಿಸಲು ದೇವಲೋಕದಿಂದ ವಿಶ್ವಕರ್ಮನನ್ನೇ ಒಲಿಸಿ ತರಿಸಿದ. ವಿಶ್ವಕರ್ಮನು ನಾಲ್ಕೇ ಗಂಟೆಗಳಲ್ಲಿ ಎಂಬತ್ತೈದು ದೇವಾಲಯಗಳನ್ನು ನಿರ್ಮಿಸಿದ. ಯಜ್ಞಯಾಗಾದಿಗಳ ನಂತರ ಹೇಮಾವತಿಯ ಎಲ್ಲಾ ಪಾತಕಗಳು ಕಳೆದವು. ಪಾಪಮುಕ್ತೆಯಾದ ಹೇಮಾವತಿ ನೇರವಾಗಿ ಸ್ವರ್ಗಲೋಕವನ್ನು ಸೇರುವಳು. ಮಂಗಳ ಕಾರ್ಯಗಳೆಲ್ಲಾ ಮುಗಿದ ನಂತರ ಚಂದ್ರವರ್ಮನ್ ಮಹೋಬದಲ್ಲಿ ಹೊಸ ರಾಜಧಾನಿಯನ್ನು ನಿರ್ಮಿಸಲು ತೊಡಗುತ್ತಾನೆ.

No comments:

Post a Comment