Thursday, February 17, 2011

ಸೂರಜ್ ಕುಂಡ್ ಮೇಳದಲ್ಲಿ ನಮ್ಮೂರಿನ ಹುಲಿವೇಷ ತಂಡ

ನೋಯ್ಡಾದ ಕನ್ನಡ ಯುವಕರು ಹರ್ಯಾನದ ಸೂರಜ್‍ಕುಂಡ್ ಮೇಳ ನೋಡಲು ಹೋಗಿ ಅಲ್ಲಿ ತಮ್ಮೂರಿನ ಹುಲಿ ವೇಷ ಕಂಡು ಅವರ ಜತೆ ಕುಣಿದದ್ದೇ ಕುಣಿದದ್ದು. ಮೆಲ್ ಕ ಮೀಯಾರ್ ಅವರು ಕೆಂಪುಕೋಟೆಯ ಓದುಗರಿಗೆ ಮೇಳದ ಚಿತ್ರಣವನ್ನು ನೀಡುತ್ತಿದ್ದಾರೆ.

ಭಾನುವಾರ ಅಂದ್ರೆ ಸುಮ್ನೆ ಮನೇಲಿ ಕೂತು ಕೊಳ್ಳೊಕ್ಕಾಗುತ್ತಾ? ಹೀಗಂತ ಯೋಚಿಸುವಾಗ ನಮಗೆ ಹೊಳೆದದ್ದು ಸೂರಜ್ ಕುಂಡ್ ಮೇಳ. ಇಷ್ಟಾದ ಮೇಲೆ ಹಿಂದೆ ಮುಂದೆ ನೋಡೋಕೆ ನಾವೇನು ಸಣ್ಣ ಮಕ್ಕಳೇನು? ಅಂದ ಹಾಗೆ ಹೊರಟಿತು ನೋಡಿ ಪ್ರಕಾಶ್ ಶೆಟ್ರು, ರಾಕೇಶ, ಮಂಜುನಾಥ ಮತ್ತು ನನ್ನ ಸವಾರಿ. ಕಳೆದ 13ರಂದು ಸೂರಜ್ ಕುಂಡ್ ಗೆ ತಲುಪುವಾಗ ಮಧ್ಯಾಹ್ನದ ಮೂರು ಗಂಟೆ. ಸಂಜೆ ಆರು ಗಂಟೆಗೆ ಮೇಳ ಮುಗಿಯುತ್ತದೆ. ಇದರ ನಡುವೆ ನಡುವೆ ಸಿಗುವ ಮೂರು ಗಂಟೆಯಲ್ಲಿ ನಾವು ನೋಡುವುದಾದರೂ ಏನು ಅಂತ ನಮ್ಮೊಳಗೆ ಯಾರೋ ಗೊಣಗಿದ. ಆದರೆ ಮೇಳದ ಆನಂದ ಸವಿಯಲು ಮೂರು ಗಂಟೆ ಸಾಲದು ಅಂತ ಹೇಳಿದವರಾರು? ಅದು ಸಹ ತೆಳ್ಳಗಿನ-ಬೆಳ್ಳಗಿನ ಲಲನೆಯರು ನಮ್ಮ ಹಿಂದೆ-ಮುಂದೆ ಸುಳಿದಾಡುವಾಗ!
ತುಘಲಕಬಾದ್ ಮೆಟ್ರೊ ನಿಲ್ದಾಣ ಇಳಿದು ಒಂದಷ್ಟು ಮುಂದೆ ಸಾಗುವಾಗಲೇ ಒಂದಷ್ಟು ಬಸವಳಿದಿದ್ದ ನಮ್ಮ ಮಂಜುನಾಥ ಆಗಲೇ ಎರಡು ಲೀಟರ್ ಗಾತ್ರದ ಒಂದು ಫ್ಯಾಂಟಾ ಬಾಟಲಿ ಮತ್ತು ಒಂದು 'ಲೇಸ್' ಪ್ಯಾಕೆಟ್ ತನ್ನ ಕೈಯಲ್ಲೆತ್ತಿ ಕೊಂಡ. ದೆಹಲಿ ಗಡಿಯನ್ನು ದಾಟುವಾಗ ನಮ್ಮ ಕಣ್ಣಿಗೆ ಬಿದ್ದದ್ದು ಸುರಾ ಅಂಗಡಿಗಳು. ಅದ್ಯಾರೋ `ಹರ್ಯಾಣದಲ್ಲಿ ಸುರಾ ಬೆಲೆ ದೆಹಲಿಗಿಂತಲೂ ಕಡಿಮೆಯಂತೆ' ಅಂತ ಹೇಳಿದ್ದು ನನಗೆ ನೆನಪಿಗೆ ಬಿತ್ತು. ಸರಿ, ಇದನ್ನೊಮ್ಮೆ ನೋಡಿಯೇ ಬಿಡಬೇಕು ಅಂತ ನಾನು ಈ ಅಂಗಡಿಯತ್ತ ಧಾವಿಸಿದೆ. ಅಂದ ಹಾಗೆ ವಿಷಯ ಹೌದು. ನನ್ನ ಬ್ರಾಂಡ್ ನ ಬಾಟಲಿಯಲ್ಲಿ ಒಟ್ಟು ಎಪ್ಪತ್ತು ರೂಪಾಯಿ ವ್ಯತ್ಯಾಸವಿತ್ತು.
ಇನ್ನು ಮೇಳದ ಬಳಿ ತಲುಪುತ್ತಿದ್ದಂತೆಯೇ ರಾಕೇಶನ ಬ್ಯಾಗಿನಲ್ಲಿದ್ದ ನಿಕೊನ್ ಡಿ-3000 ಕ್ಯಾಮರಾ ಹೊರಬಂದಿತ್ತು. ಶತ್ರು ಎದುರು ಬಂದಾಗ ಸೈನಿಕನು ತನ್ನ ಬಂದೂಕನ್ನು ಸಜ್ಜುಗೊಳಿಸುವಂತೆ ನಮ್ಮ ಶೆಟ್ರು ಕ್ಯಾಮರಾವನ್ನು ಸಜ್ಜುಗೊಳಿಸುತ್ತಿದ್ದರು. ಅಷ್ಟರಲ್ಲಿ ರಾಕೇಶನಿಗೆ ಇಲ್ಲಿನ ಸಂಸ್ಕೃತಿ, ಸೌಂದರ್ಯ, ಲಲನೆಯರ ನೋಟ- ಹೀಗೆ ಎಲ್ಲವನ್ನೂ ಸೆರೆಹಿಡಿಯುವ ತವಕ. ಆಗಲೇ ಶೆಟ್ರು ಒಂದು ಡೈಲಾಗ್ ಹೇಳಿಬಿಟ್ಟರು. ``ಇಲ್ಲಿ ನೋಡುವುದಕ್ಕೆ ಬಹಳಷ್ಟು ಇದೆ. ಈಗಲೇ ಫೋಟೊ ತೆಗೆಯಲು ಅವಸರ ಮಾಡಿದರೆ ಕ್ಯಾಮರಾದ ಮೆಮೊರಿ ಕಾರ್ಡ್ ನಲ್ಲಿ ಸ್ಥಳ ಸಾಕಾಗದು''.

ಸರಿ, ಶೆಟ್ರ ಸಲಹೆಗೆ ತಲೆ ಅಲ್ಲಾಡಿಸಿ ಮೇಳದ ಒಳಗೆ ಹೊಕ್ಕಿತು ನಮ್ಮ ಸವಾರಿ. ಇಲ್ಲಿ ಯಾವುದು ನೋಡುವುದು ಯಾವುದು ಬಿಡುವುದು ಹೇಳಿ? ಎಷ್ಟು ಸುತ್ತು ಹಾಕಿದರೂ ಮೇಳ ಮುಗಿಯದು. ಈ ಬಾರಿ ಮೇಳಕ್ಕೆ ಆರಿಸಿದ ರಾಜ್ಯ- ಆಂಧ್ರ ಪ್ರದೇಶ. ಎಲ್ಲಿ ನೋಡಿದರೂ ಆಂಧ್ರದವರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಲೇ ಇತ್ತು. ಒಂದು ಕಡೆ ನಾನು ಮತ್ತು ಶೆಟ್ರು ಆಂಧ್ರದವರ ತಾಳಕ್ಕೆ ಕುಣಿದದ್ದೂ ಬಂತು. ಇಷ್ಟರಲ್ಲಿ ನಮಗೊಂದು ಅಚ್ಚರಿ ಕಾದಿತ್ತು. ನವರಾತ್ರಿ ವೇಳೆ ನಮ್ಮ ಕುಡ್ಲದಲ್ಲಿ ಕಾಣಸಿಗುವ `ಪಿಲಿ ವೇಷ' (ಹುಲಿ ವೇಷ) ಇಲ್ಲಿ ಶಿವರಾತ್ರಿಗೆ ಮೊದಲೇ ಕಾಣಸಿಕ್ಕಿತ್ತು. ಐದಾರು ಹುಲಿಗಳು ವೇದಿಕೆ ಮೇಲೆ ಕುಣಿಯುತ್ತಲೇ ಇದ್ದವು. 'ಡಂಗ್ ಡಕ್ ರ್... ಡಂಗ್ ಡಕ್ ರ್...' ಅನ್ನೋ ಬಡಿತಕ್ಕೆ ನಮ್ಮ ಕಾಲು ಸಹ ನಲಿಯಲು ಆರಂಭಿಸಿತು. ಫೋಟೋ ತೆಗೆಯುವ ಜವಾಬ್ದಾರಿಯನ್ನು ರಾಕೇಶನಿಗೆ ವಹಿಸಿ ನಾನು ಮತ್ತು ಶೆಟ್ರು ಈ ಹುಲಿಗಳ ಜೊತೆ ಸೇರಿಕೊಂಡೇ ಬಿಟ್ಟೆವು. 'ಡಂಗ್ ಡಕ್ ರ್... ಡಂಗ್ ಡಕ್ ರ್...' ಅನ್ನುವಾಗ ಸ್ವಯಂಚಾಲಿತವಾಗಿ ನಮ್ಮ ಕಾಲು-ಕೈ ಎರಡೂ ನರ್ತಿಸಲು ಆರಂಭಿಸಿದವು. ಈ ಹುಲಿಗಳು ಚಕ್ರಾಸನದಲ್ಲಿ ನೆಲದ ಮೇಲಿಟ್ಟ ನೋಟುಗಳನ್ನು ಒಮ್ಮೆ ಬಾಯಿಯಿಂದ ತೆಗೆದರೆ, ಇನ್ನೊಮ್ಮೆ ಕಣ್ಣಿನ ರೆಪ್ಪೆಯಿಂದ ತೆಗೆದು ನೋಡುಗರಲ್ಲಿ ರೋಮಾಂಚನ ಮೂಡಿಸಿದವು. ಹುಲಿ ವೇಷಧಾರಿಗಳ ದೇಹದಲ್ಲಿ ಬರೆದ ಬರಹದಿಂದಾಗಿ ಇವರು ಕೇರಳದವರೆಂದು ನಮಗೆ ಸ್ಪಷ್ಟವಾಗಿತ್ತು. ಅಷ್ಟರಲ್ಲಿ ನಾವು ಸಹ ಇವರ ಜೊತೆ ಅರೆ-ಬರೆ ಮಲಯಾಳಂನಲ್ಲಿ ಮಾತನಾಡಲು ಆರಂಭಿಸಿದೆವು. ಆಗಲೇ ನಮಗೆ ಅಚ್ಚರಿ ಮೂಡಿದ್ದು. ಇವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ನಮ್ಮ ನೆರೆಯ ಕಾಸರಗೋಡು ಜಿಲ್ಲೆಯವರು. ಅಂದರೆ, ನಮ್ಮ ಗಡಿ ಜಿಲ್ಲೆಯವರು! ಮತ್ತೆ ಶುರುವಾಯಿತು ನೋಡಿ ತುಳು ಭಾಷೆಯಲ್ಲಿ ನಮ್ಮ ಮಾತುಕತೆ. `ಇರೆನ ಪುದರ್ ಎಂಚಿನ?' `ಇರೆನ ಊರು ಓಲ್?'- ಹೀಗೆ ನಮ್ಮ ಪ್ರಶ್ನೆಗಳ ಸುರಿಮಳೆ ಮುಂದುವರಿಯಿತು.
ನಮ್ಮ ಊರಿನ `ಪಿಲಿ'ಗಳೇ ದೊರಕಿದ್ದಾರೆ ಅಂತ ಈ ಪಿಲಿ ವೇಷಧಾರಿಗಳಿಗೂ ಭಾರೀ ಖುಶಿ. ಈ ಪಿಲಿ ವೇಷಧಾರಿಗಳ ನಾಯಕ ಮಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದವರು. (ಕ್ಷಮಿಸಿ, ಇವರ ಹೆಸರು ಕೇಳಲು ಮರೆತುಬಿಟ್ಟೆ) ಆ ಸಂದರ್ಭದಲ್ಲಿ ಅತ್ತಾವರದ ಮರಿನಂಜಪ್ಪ ಅವರ ಬಳಿ ಇವರು ತರಬೇತಿ ಪಡೆದರು. ನಂತರ ಕಾಸರಗೋಡಿಗೆ ಹೋಗಿ ತನ್ನದೇ ತಂಡ ಕಟ್ಟಿ ಅವರಿಗೆ ತರಬೇತಿ ನೀಡಿದವರು. ಇವರಲ್ಲಿ ಒಬ್ಬರು ವಿಟ್ಲ ಬಳಿಯ ಮಂಚಿಯವರು. ಇನ್ನೊಬ್ಬರು ಬಾಯಾರಿನವರು. ಹೀಗೆ ಎಲ್ಲರೂ ತಮ್ಮ ತಮ್ಮ ಪರಿಚಯ ಮಾಡುತ್ತಲೇ ಹೋದರು. ಕಳೆದ ಬಾರಿ ಅಕ್ಟೋಬರ್ ನಲ್ಲಿ ದೆಹಲಿಯಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟ ನಡೆದ ಸಂದರ್ಭದಲ್ಲಿ ಇದೇ ಪಿಲಿಗಳನ್ನು ದೇಶದ ರಾಜಧಾನಿಗೆ ಕರೆಯಲಾಗಿತ್ತು. ಇಷ್ಟೆಲ್ಲಾ ಮಾತನಾಡುವಷ್ಟರಲ್ಲಿ ಇವರ ಅಭಿಮಾನಿಗಳ ದಂಡು ಇವರನ್ನು ಮುತ್ತಲು ಆರಂಭಿಸಿತು. ಮಹಿಳೆಯರು, ಮಕ್ಕಳು, ಹಿರಿಯರು ಹೀಗೆ ಎಲ್ಲರೂ ಇವರ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಹಾತೊರೆಯುತ್ತಿದ್ದರು. ಇಷ್ಟರಲ್ಲಿ ನಮ್ಮ ಮೊಬೈಲ್ ಫೋನ್ ನಲ್ಲಿ (ಕೈಗೆ ಗಡಿಯಾರ ಕಟ್ಟುವ ಕಾಲ ಎಂದೋ ಕಳೆದುಹೋಗಿದೆ) ಐದೂವರೆ ಹೊಡೆದಿತ್ತು. ಇನ್ನೊಂದೆಡೆ ಹೊಟ್ಟೆ ಚುರುಗುಟ್ಟಲು ಆರಂಭಿಸಿತು. ಮೇಳದ ಊಟ-ತಿಂಡಿ ಸ್ಟಾಲ್ ಗೆ ಹೋದರೆ ನಮಗೆ ರುಚಿಸುವ ಯಾವುದೇ ಆಹಾರ ಅಲ್ಲಿ ಲಭ್ಯವಿಲ್ಲ. ದಾರಿಯಲ್ಲಿ ನಡೆದು ಬರುವಾಗ ಮೇಳದ ಹೊರಗಡೆ ಮಾಂಸಾಹಾರಿ ಢಾಬಾ ಒಂದನ್ನು ನೋಡಿದ ನೆನಪು ನಮಗೆ ಬಂತು. ಇನ್ನೊಂದೆಡೆ ಭಾನುವಾರ ಬೇರೆ. ಸ್ವಲ್ಪ ಚಿಕನ್-ಮಟನ್ ತಿನ್ನದಿದ್ದರೆ ಹೇಗಾದೀತು? ಮತ್ತೆ ನಾವು ಹಿಂದೆ-ಮುಂದೆ ನೋಡಲಿಲ್ಲ. ನಮ್ಮ ಊರಿನ ಪಿಲಿಗಳಿಗೆ ಬಾಯ್ ಹೇಳಿ, ಒಂದಷ್ಟು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ನಾವು ವಿರಮಿಸಿದ್ದು ಈ ಢಾಬಾದಲ್ಲಿಯೇ.
ಕೆಂಪುಕೋಟೆ


2 comments: